ಅಹ್ಮದ್ ಪಟೇಲ್ ತೇರಾ ಕ್ಯಾ ಹೋಗಾ!

Update: 2017-07-22 18:44 GMT

ಅಹ್ಮದ್ ಪಟೇಲ್ ತೇರಾ ಕ್ಯಾ ಹೋಗಾ!

ರಾಮ್‌ನಾಥ್ ಕೋವಿಂದ್ ದೇಶದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಇದರಿಂದ ತಲೆ ಕೆಡಿಸಿಕೊಂಡಿರುವವರು ಕಾಂಗ್ರೆಸ್‌ನ ಅಹ್ಮದ್ ಪಟೇಲ್. ಅವರ ಚಿಂತೆ ಗುಜರಾತ್‌ನ ಶಾಸಕರ ಮತಚಲಾವಣೆ ಬಗ್ಗೆ. ಬಹಳಷ್ಟು ಮಂದಿ ಎನ್‌ಡಿಎ ಪರವಾಗಿ ಮತ ಚಲಾಯಿಸುತ್ತಾರೆ ಎಂಬ ಗುಮಾನಿ ಅವರಲ್ಲಿತ್ತು. ಗುಜರಾತ್‌ನಿಂದ ರಾಜ್ಯಸಭೆ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಇದೇ ಕ್ರಾಸ್‌ವೋಟಿಂಗ್ ಟ್ರೆಂಡ್ ಮುಂದುವರಿದರೆ, ಕಾಂಗ್ರೆಸ್‌ನಲ್ಲಿ ಕನಿಷ್ಠ ಸೋನಿಯಾಗಾಂಧಿ ದೃಷ್ಟಿಯಲ್ಲಾದರೂ, ರಾಹುಲ್ ನಂತರ ಎರಡನೆ ಸ್ಥಾನದಲ್ಲಿರುವ ಅಹ್ಮದ್ ಪಟೇಲ್ ಅವರ ರಾಜ್ಯಸಭಾ ಸ್ಥಾನಕ್ಕೇ ಕುತ್ತುಬರಲಿದೆ. ರಾಜ್ಯದಲ್ಲಿ ಶಂಕರ್‌ಸಿನ್ಹ ವಘೇಲಾ ಈಗಾಗಲೇ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಪಟೇಲ್ ಕುರ್ಚಿ ಉಳಿಸಿಕೊಳ್ಳುವುದು ದೊಡ್ಡ ಸವಾಲು. ಹಲವು ಮಂದಿ ಕಾಂಗ್ರೆಸಿಗರಿಗೆ ಅಹ್ಮದ್ ಪಟೇಲ್ ಬಗ್ಗೆ ಹೊಟ್ಟೆಕಿಚ್ಚು ಇರುವುದು ಅವರು ಜನಪಥ್ ರಸ್ತೆಯ 10ನೆ ಸಂಖ್ಯೆ ನಿವಾಸಕ್ಕೆ ನಿಕಟರಾಗಿದ್ದಾರೆ ಎಂಬ ಕಾರಣಕ್ಕೆ. ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೂ ಆಶ್ಚರ್ಯವಿಲ್ಲ. ಆದರೆ ಚತುರ ರಾಜಕಾರಣಿಯಾಗಿರುವ ಪಟೇಲ್, ತಮ್ಮ ಕೈ ಮೇಲಾಗುವ ಕಸರತ್ತು ನಡೆಸಿಯೇ ನಡೆಸುತ್ತಾರೆ ಎಂಬ ಭಾವನೆ ಕೆಲವರಲ್ಲಿದೆ. ಏನಾಗುತ್ತದೆ? ಕಾದುನೋಡಿ.


ಅನ್ಸಾರಿ ಕಟ್ಟಕಡೆಯ ಉದಾರವಾದಿ?

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೋಪಾಲಕೃಷ್ಣ ಗಾಂಧಿ ಹಾಗೂ ವೆಂಕಯ್ಯ ನಾಯ್ಡು ನಡುವಿನ ಹಣಾಹಣಿಗೆ ಮುನ್ನವೇ ಕೆಲ ಸ್ಮರಣೀಯ ಬದಲಾವಣೆಗಳು ಗೋಚರವಾಗುತ್ತಿವೆ. ಪ್ರಸ್ತುತ ಇರುವ ಉಪರಾಷ್ಟ್ರಪತಿಗಳ ಅಧಿಕಾರಾವಧಿ ಮುಗಿದ ದಿನ ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿ ವಿಲೀನವಾಗಿ ಒಂದಾಗುತ್ತದೆ. 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಸಭೆ ಟಿವಿ ತೀರಾ ಉದಾರ ಹಾಗೂ ಸ್ವತಂತ್ರ ಎಂಬ ಆರೋಪ ಕೇಳಿಬರುತ್ತಲೇ ಇತ್ತು. ಆದರೆ ಯಾವುದೇ ಮಧ್ಯಪ್ರವೇಶಕ್ಕೆ ಉಪರಾಷ್ಟ್ರಪತಿ ಕಚೇರಿ ತಡೆ ಒಡ್ಡುತ್ತಾ ಬಂದಿದೆ. ವಿದೇಶಾಂಗ ವ್ಯವಹಾರ, ಆರ್ಥಿಕ ಹಾಗೂ ರಾಜಕೀಯ ಘಟನಾವಳಿಗಳ ಬಗೆಗಿನ ವಸ್ತುನಿಷ್ಠ ಚರ್ಚೆಯನ್ನು ಮುಕ್ತ ವಾತಾವರಣದಲ್ಲಿ ನಡೆಸುತ್ತಾ ಬಂದ ಹೆಗ್ಗಳಿಕೆಯೂ ರಾಜ್ಯಸಭಾ ಟಿವಿಯದ್ದು. ವಿದೇಶಿ ಸೇವಾ ಅಧಿಕಾರಿಯಾಗಿದ್ದ ಅನ್ಸಾರಿ, ರಾಜ್ಯಸಭಾ ಟಿವಿಯ ವ್ಯವಹಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಆದರೆ ನಿಷ್ಪಕ್ಷಪಾತ ಸುದ್ದಿ ವಾಹಿನಿ ಅವರ ಅಧಿಕಾರಾವಧಿಯೊಂದಿಗೇ ಕೊನೆಗೊಳ್ಳುತ್ತಿದೆ. ಹಲವು ಮಂದಿ ರಾಜ್ಯಸಭಾ ಉದ್ಯೋಗಿಗಳು ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ಎಲ್ಲರೂ ಅನ್ಸಾರಿ ಬಗ್ಗೆ ಭಾರೀ ಗೌರವ ಹೊಂದಿದ್ದಾರೆ.


ನ್ಹಾ ಈಗ ಮುದಿ ಸಿಂಹ

ಬಿಜೆಪಿಯ ಮುತ್ಸದ್ದಿಗಳೆನಿಸಿಕೊಂಡ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಮಾರ್ಗದರ್ಶಕ ಮಂಡಳಿಯ ಇತರರು ಹೊಗಳುಭಟರ ಮಧ್ಯದಲ್ಲಿದ್ದರೂ ಒಬ್ಬಂಟಿಗಳಾಗಿದ್ದಾರೆ. ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರೇ, ತಂದೆಯ ಕೃತಿ ಬಿಡುಗಡೆ ಸಮಾರಂಭಕ್ಕೆ ಪ್ರಜ್ಞಾಪೂರ್ವಕವಾಗಿ ಗೈರುಹಾಜರಾಗಿದ್ದರು. ವೇದಿಕೆಯಲ್ಲಿದ್ದ ಗಣ್ಯರನ್ನು ನೋಡಿದರೇ, ಸಿನ್ಹಾ ಈಗ ಬಿಜೆಪಿಯಲ್ಲಿ ಎಷ್ಟು ಮೂಲೆಗುಂಪಾಗಿದ್ದಾರೆ ಎನ್ನುವುದು ವೇದ್ಯವಾಗುತ್ತಿತ್ತು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಇಬ್ಬರು ವೇದಿಕೆಯಲ್ಲಿದ್ದರು. ಅವರೆಂದರೆ ಮಾಜಿ ಸಚಿವ ಜೈರಾಂ ರಮೇಶ್ ಹಾಗೂ ಯೋಜನಾ ಆಯೋಗದ ಮಾಜಿ ಅಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ. ಇವರ ಜತೆಗೆ ಸಂಯುಕ್ತ ಜನತಾದಳದ ಪವನ್ ವರ್ಮಾ ಕೂಡಾ ವೇದಿಕೆ ಹಂಚಿಕೊಂಡಿದ್ದರು. ಪ್ರಸ್ತುತ ಸರಕಾರದ ಆರ್ಥಿಕ ನೀತಿಗಳನ್ನು ಸಿನ್ಹಾ ಕಟುವಾಗಿ ಟೀಕಿಸುವ ಕಾರಣದಿಂದ ಬಹುಶಃ ಯಾರೂ ಸಮಾರಂಭದತ್ತ ಮುಖ ಮಾಡಲಿಲ್ಲ.


ಜಮ್ಮು- ಕಾಶ್ಮೀರ ರಾಜ್ಯಪಾಲರಾಗಿ ಮಹರ್ಷಿ?

ಕಳೆದ ಬಾರಿ ಕೇಂದ್ರ ಹಣಕಾಸು ಕಾರ್ಯದರ್ಶಿಗಳಾಗಿದ್ದ ರಾಜೀವ್ ಮಹರ್ಷಿ, ಇನ್ನೇನು ನಿವೃತ್ತರಾಗಬೇಕು ಎನ್ನುವಷ್ಟರಲ್ಲಿ ಎರಡು ವರ್ಷ ಅವರ ಸೇವೆ ವಿಸ್ತರಿಸಲಾಯಿತು. ಆದರೆ ಕೇಂದ್ರ ಗೃಹ ಕಾರ್ಯದರ್ಶಿಗಳಾಗಿ ಅವರನ್ನು ಮುಂದುವರಿಸಲಾಯಿತು. ಮುಂದಿನ ತಿಂಗಳು ಸೇವೆಯಿಂದ ನಿವೃತ್ತರಾಗಲಿರುವ ಮಹರ್ಷಿ ಅದೃಷ್ಟ ಮತ್ತೆ ಖುಲಾಯಿಸುತ್ತದೆ ಎಂಬ ನಂಬಿಕೆ ಹಲವರದ್ದು. ಬಹುಶಃ ಈ ಬಾರಿ ಆಡಳಿತಾಧಿಕಾರಿ ಹುದ್ದೆ ಗಳಿಸುವ ಸೂಚನೆ ಕಾಣಿಸುತ್ತಿದೆ. ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ ಅವರ ಸ್ಥಾನಕ್ಕೆ ಮಹರ್ಷಿ ನೇಮಕಗೊಳ್ಳುವ ಎಲ್ಲ ಸೂಚನೆಗಳಿವೆ. ಆದಾಗ್ಯೂ ಮಹರ್ಷಿ ಅವರ ನೇಮಕಾತಿಯನ್ನು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಮಹರ್ಷಿಯವರನ್ನು ರಾಜಸ್ಥಾನದಿಂದ ಕರೆತಂದು ಕೇಂದ್ರ ಸೇವೆಗೆ ನಿಯೋಜಿಸಿಕೊಂಡ ಮೋದಿ, ಮುಫ್ತಿ ವಾದವನ್ನು ಒಪ್ಪದೆ, ಮಹರ್ಷಿಯವರನ್ನು ರಾಜ್ಯಪಾಲರಾಗಿ ನೇಮಿಸುವ ಸಾಧ್ಯತೆ ಇದೆ. ಈ ಮಧ್ಯೆ ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ವೋಹ್ರಾ, ದಿಲ್ಲಿಯಲ್ಲಿ ಕಾಲ ಕಳೆಯಲು ಬಯಸಿದ್ದಾರೆ ಎಂದು ತಿಳಿದುಬಂದಿದೆ. ಮಹರ್ಷಿಯವರು ಆಂತರಿಕ ಭದ್ರತೆ ಮತ್ತು ರಾಷ್ಟ್ರೀಯ ವಿದ್ಯಮಾನಗಳನ್ನು ನಿರ್ವಹಿಸುವ ಅಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜಮ್ಮು ಕಾಶ್ಮೀರಕ್ಕಿಂತ ಸವಾಲಿನದ್ದು ಮತ್ತೇನಿದೆ?


ಗ್ರೆಸ್ ವಕ್ತಾರರ ಜಂಬೋಜೆಟ್!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಮಾಧ್ಯಮ ವಿಭಾಗದ ಮಾಧ್ಯಮ ಸಮನ್ವಯಕಾರರನ್ನು ಬದಲಿಸಿದ ಬಳಿಕ ವಿರೋಧ ಪಕ್ಷ ನಿದ್ದೆಗೆಡಿಸಿಕೊಂಡಿರುವುದು ವೇದ್ಯವಾಗುತ್ತದೆ. ಪಕ್ಷದ ಎರಡು ಡಜನ್‌ಗಿಂತಲೂ ಹೆಚ್ಚು ಮಂದಿ ವಕ್ತಾರರು, ಪತ್ರಿಕಾಗೋಷ್ಠಿ ನಡೆಸಲು ಮತ್ತು ಟಿವಿ ಸುದ್ದಿವಾಹಿನಿಯಲ್ಲಿ ಕಾಣಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ. ಇದು ಸಾಲದೆಂಬಂತೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ಪರವಾಗಿ ಎಂಟು ಮಂದಿ ಹಿರಿಯ ಮುತ್ಸದ್ದಿಗಳ ತಂಡ, ಸಂವಹನ ತಂತ್ರಗಾರಿಕೆ ತಂಡದಲ್ಲಿದ್ದಾರೆ. ಇವರಲ್ಲಿ ಮಣಿಶಂಕರ ಅಯ್ಯರ್, ಜೈರಾಂ ರಮೇಶ್ ಹಾಗೂ ಆನಂದ್ ಶರ್ಮಾ ಸೇರಿದ್ದಾರೆ. ಕಾಂಗ್ರೆಸ್ ಲೋಕಸಭೆಯಲ್ಲಿ ಹೊಂದಿರುವ ಸ್ಥಾನಗಳ ಸಂಖ್ಯೆಗಿಂತ ಹೆಚ್ಚು ಮಂದಿ ವಕ್ತಾರರು ಆ ಪಕ್ಷದಲ್ಲಿದ್ದಾರೆ ಎಂಬ ಹಾಸ್ಯ ಚಟಾಕಿ ವ್ಯಾಪಕವಾಗಿ ಕೇಳಿಬರುತ್ತಿದೆ. ವ್ಯಾಪಕ ಗುಂಪುಗಾರಿಕೆ ಹಾಗೂ ಒಬ್ಬರ ನೇತೃತ್ವ ಪಕ್ಷಕ್ಕೆ ದುಬಾರಿಯಾಗುತ್ತದೆ ಎಂಬ ಭೀತಿ ಹಲವರಲ್ಲಿದೆ. ಇದರ ಅಪವಾದ ಮತ್ತೆ ರಾಹುಲ್‌ಗೇ ತಟ್ಟುತ್ತದೆ. ಹಿಂದಿನಂತೆ ಅವರು ಏನಾಗುತ್ತದೆಯೋ ಆಗಲಿ ಎಂಬಂತೆ ಪಕ್ಷದ ಮತ್ತಷ್ಟು ಕುಸಿತವನ್ನು ನೋಡುತ್ತಾ ಕೈಕಟ್ಟಿ ಕುಳಿತುಕೊಳ್ಳಬಹುದು!.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News