ಶಾಲೆ ಮತ್ತು ದೂರುಗಳು

Update: 2017-07-22 18:50 GMT

ಭಾಗ 2

ಪೋಷಕರು ಮಕ್ಕಳನ್ನು ಸರಿಯಾದ ಸಮಯಕ್ಕೆ, ಸೂಕ್ತವಾಗಿ ಸಿದ್ಧ ಮಾಡು ವಂತಹ ಸೌಲ್ಯವನ್ನು ಹೊಂದಿರದೇ ಹೋದರೆ, ಹೊಸ ಪುಸ್ತಕವನ್ನು ಕೊಡಿಸದೇ ಹೋದರೆ, ಮನೆಯಲ್ಲಿಯೇ ಮಕ್ಕಳ ಉಡುಪಿನ ಸ್ಥಿತಿಯನ್ನು ಗಮನಿಸದೇ ಹೋದರೆ, ಶಾಲೆಯ ಶುಲ್ಕವನ್ನು ಕಟ್ಟಿರದೇ ಹೋದರೆ ಮಕ್ಕಳು ಹೇಗೆ ಹೊಣೆಗಾರರಾಗುತ್ತಾರೆ? ಪೋಷಕರ ಅಸಡ್ಡೆಯೋ, ಅನನುಕೂಲವೋ, ಅವ್ಯವಸ್ಥೆಯೋ; ಹೀಗೆ ಯಾವುದೋ ಒಂದರಿಂದ ಮಕ್ಕಳು ಶಾಲೆಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದೇ ಹೋದರೆ ಮಕ್ಕಳಿಗೆ ಶಿಕ್ಷೆಯೇ? ಇದು ನಮ್ಮ ಭಾರತದ ಬಹುತೇಕ ಸಾಧಾರಣ ಶಾಲೆಗಳಲ್ಲಿ ನಿತ್ಯವೂ ಕಾಣುವಂತಹ ದುರಂತ.

ಶಿಕ್ಷಕರ ಅಥವಾ ಶಾಲೆಯ ಆಡಳಿತ ಮಂಡಳಿಯ ಬಹು ಕೆಟ್ಟ ಧೋರಣೆ ಯೆಂದರೆ ಎಲ್ಲದಕ್ಕೂ ಮಕ್ಕಳನ್ನೇ ಗುರಿ ಮಾಡುವುದು. ಮಕ್ಕಳನ್ನೇ ಶಿಕ್ಷಿಸು ವುದು. ಯಾವ ಚಟುವಟಿಕೆಗಳಲ್ಲಿ ಮಕ್ಕಳು ನೇರವಾಗಿ ಭಾಗಿಯಾಗುವರು, ಯಾವ ವಿಷಯಗಳು ಪೋಷಕರ ಧೋರಣೆ ಮತ್ತು ನಿಲುವುಗಳು ಮಕ್ಕಳ ಚಟುವಟಿಕೆಯಲ್ಲಿ ಭಾಗಿಯಾಗುವವು ಎಂದು ಕೂಡ ವಿವೇಚನೆ ಇಲ್ಲದೇ ಹೋದರೆ ಶಾಲೆಗಳನ್ನು ನಡೆಸುವುದೇ ವ್ಯರ್ಥ.

ಶಾಯಲ್ಲಿ ಮಕ್ಕಳನ್ನು ದಂಡಿಸುವ ವಿಚಾರಗಳು:

    1.ಶಾಲೆಗೆ ಮಗುವು ತಡವಾಗಿ ಬಂದರೆ

    2.ತೊಟ್ಟಿರುವ ಸಮವಸ್ತ್ರ, ಟೈ, ಬೆಲ್ಟು, ಶೂ ಮತ್ತು ಕಾಲುಚೀಲಗಳು ಕೊಳಕಾಗಿದ್ದರೆ

    3.ಉಗುರು ತುಂಡರಿಸಿರದಿದ್ದರೆ

    4.ತಲೆಗೂದಲನ್ನು ಸರಿಯಾಗಿ ಬಾಚಿರದಿದ್ದರೆ ಅಥವಾ ಹೇರ್ ಕಟ್ ಮಾಡಿಸಿರದಿದ್ದರೆ

    5.ಪುಸ್ತಕಗಳನ್ನು ಹರಿದುಕೊಂಡಿದ್ದರೆ

    6.ಹೊಸ ಪುಸ್ತಕವನ್ನು ತಂದಿರದಿದ್ದರೆ

    7.ಶಾಲಾ ಶುಲ್ಕವನ್ನು ಕಟ್ಟಿರದಿದ್ದರೆ

    8.ಹೋಂ ವರ್ಕ್ ಮಾಡಿರದಿದ್ದರೆ

    9.ಹಸ್ತಾಕ್ಷರ ದುಂಡಾಗಿರದಿದ್ದರೆ

    10.ಎಷ್ಟು ಹೇಳಿಕೊಟ್ಟರೂ ಬರದಿದ್ದರೆ

    11.ಮಗ್ಗಿ ಅಥವಾ ಪದ್ಯ ಒಪ್ಪಿಸದಿದ್ದರೆ

    12.ಶಾಲೆಯಲ್ಲಿ ಮಾಧ್ಯಮದ ಭಾಷೆಯಾದ ಇಂಗ್ಲಿಷನ್ನು ಮಾತಾಡದೇ ಪ್ರಾದೇಶಿಕ ಭಾಷೆಯಲ್ಲಿ ಮಾತಾಡಿದರೆ

    13.ಶಾಲೆಯಲ್ಲಿ ಗಟ್ಟಿ ದನಿಯಲ್ಲಿ ಮಾತಾಡಿದರೆ ಅಥವಾ ಗಲಾಟೆ ಮಾಡಿದರೆ

    14.ಬೇರೊಂದು ಮಗುವಿನೊಂದಿಗೆ ಜಗಳವಾಡಿದರೆ ಅಥವಾ ಹೊಡೆದರೆ

ಹೀಗೆ ಹತ್ತು ಹಲವು ಕಾರಣಗಳಿಗೆ ಮಕ್ಕಳು ಶಿಕ್ಷೆಗೆ ಗುರಿಯಾಗುತ್ತಾರೆ.

ಈ ಮೇಲಿನ ಪಟ್ಟಿಯಲ್ಲಿ ಒಂದರಿಂದ ಎಂಟರವರೆಗೆ ಇರುವಂತಹ ಅಂಶಗಳಿಗೆಲ್ಲಾ ಪೋಷಕರೇ ಹೊಣೆಗಾರರು. ಇನ್ನು ಉಳಿದವು ಶಾಲೆಯ ವಾತಾವರಣ ಮತ್ತು ಶಿಕ್ಷಕರು ಹೊಣೆಗಾರರು. ಪೋಷಕರು ಮಕ್ಕಳನ್ನು ಸರಿಯಾದ ಸಮಯಕ್ಕೆ, ಸೂಕ್ತವಾಗಿ ಸಿದ್ಧ ಮಾಡುವಂತಹ ಸೌಲ್ಯವನ್ನು ಹೊಂದಿರದೇ ಹೋದರೆ, ಹೊಸ ಪುಸ್ತಕವನ್ನು ಕೊಡಿಸದೇ ಹೋದರೆ, ಮನೆಯಲ್ಲಿಯೇ ಮಕ್ಕಳ ಉಡುಪಿನ ಸ್ಥಿತಿಯನ್ನು ಗಮನಿಸದೇ ಹೋದರೆ, ಶಾಲೆಯ ಶುಲ್ಕವನ್ನು ಕಟ್ಟಿರದೇ ಹೋದರೆ ಮಕ್ಕಳು ಹೇಗೆ ಹೊಣೆಗಾರರಾಗುತ್ತಾರೆ? ಪೋಷಕರ ಅಸಡ್ಡೆಯೋ, ಅನಾನುಕೂಲವೋ, ಅವ್ಯವಸ್ಥೆಯೋ; ಹೀಗೆ ಯಾವುದೋ ಒಂದರಿಂದ ಮಕ್ಕಳು ಶಾಲೆಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದೇ ಹೋದರೆ ಮಕ್ಕಳಿಗೆ ಶಿಕ್ಷೆಯೇ? ಇದು ನಮ್ಮ ಭಾರತದ ಬಹುತೇಕ ಸಾಧಾರಣ ಶಾಲೆಗಳಲ್ಲಿ ನಿತ್ಯವೂ ಕಾಣುವಂತಹ ದುರಂತ.

ಮನೆಯಲ್ಲಿ ಪೋಷಕರು ಅವರನ್ನು ಶಾಲೆಗೆ ಮತ್ತು ಕಲಿಕೆಗೆ ಸಿದ್ಧ ಮಾಡದಿದ್ದರೂ, ಶಾಲೆಯಲ್ಲಿ ಶಿಕ್ಷಕರು ಸರಿಯಾದ ಕ್ರಮದಲ್ಲಿ ಕಲಿಸದೇ ಇದ್ದು ಮಕ್ಕಳು ಕಲಿಕೆಯಲ್ಲಿ ಮುಂದುವರಿಯದಿದ್ದರೂ ಶಿಕ್ಷೆ ಮಾತ್ರ ಮಕ್ಕಳಿಗೆ. ನೋಡಿ, ಮಕ್ಕಳು ಅದೆಂತಹ ಅಸಹಾಯಕ ಮತ್ತು ದಯನೀಯ ಸ್ಥಿತಿಯಲ್ಲಿ ಇದ್ದಾರೆ.

ಮಕ್ಕಳು ಶಾಲೆಯಲ್ಲಿ ಸರಿಯಾಗಿ ಕಲಿಯದಿದ್ದರೆ, ಓದದಿದ್ದರೆ, ಬರೆಯದಿದ್ದರೆ, ಅವರೇ ನಿರೀಕ್ಷಿಸುವಂತೆ ಹೆಚ್ಚಿನ ಅಂಕಗಳನ್ನು ಪಡೆಯದಿದ್ದರೆ ಅದು ಶಾಲೆಯ ವ್ಯವಸ್ಥೆ ಮತ್ತು ಶಿಕ್ಷಕರ ಅಸಮರ್ಥತೆಯೇ ಕಾರಣ. ಆದರೆ ದೂರು ಮತ್ತು ದಂಡನೆ ಮಾತ್ರ ಮಕ್ಕಳಿಗೆ.

ಹಾಗಾದರೆ ಏನು ಮಾಡಬೇಕು? ಮಗುವಿನ ಪರ್ಸನಲ್ ಹೈಜಿನ್ ಅಥವಾ ಶುದ್ಧತೆ ಮತ್ತು ಅಚ್ಚುಕಟ್ಟುತನದಲ್ಲಿ ಏನೇ ನ್ಯೂನತೆಗಳನ್ನು ಶಾಲೆಯು ಕಂಡರೆ ಪೋಷಕರಿಗೆ ಪತ್ರವನ್ನು ಕಳುಹಿಸಬೇಕು. ಅವರನ್ನು ಕಂಡು ಮಾತಾಡಬೇಕು. ಪುನರಾವರ್ತಿತವಾಗಿ ಪೋಷಕರನ್ನು ಪತ್ರಗಳ ಮೂಲಕ ಅಥವಾ ಸಂದೇಶಗಳ ಮೂಲಕ ಎಚ್ಚರಿಸುತ್ತಲೇ ಇರಬೇಕು. ಹಾಗೆಯೇ ಪೋಷಕರು ಶಾಲೆಯಲ್ಲಿ ಅಥವಾ ಶಿಕ್ಷಕರು ನೀಡುವ ತರಬೇತಿ ಅಥವಾ ಬೋಧನಾ ಕ್ರಮದಲ್ಲಿ ಏನೇ ಸಮಸ್ಯೆ ಕಂಡರೂ ಮಕ್ಕಳ ಮುಂದೆ ಚರ್ಚಿಸದೇ ಶಾಲೆಗೆ ಮತ್ತು ಶಿಕ್ಷಕರಿಗೆ ಪತ್ರವನ್ನು ಕಳುಹಿಸಬೇಕು. ಇದು ಬಿಡದೇ ಆಗಬೇಕು. ಅವರಿಂದ ಮಾರುತ್ತರ ಬರುವವರೆಗೂ ಬಿಡಬಾರದು.

ಮಗುವಿನ ಸಮಗ್ರ ಅಭಿವೃದ್ಧಿಗೆ ಮತ್ತು ವಿಕಾಸಕ್ಕೆ ಇಬ್ಬರೂ ಪರಸ್ಪರ ಪೂರಕವಾಗಿ ಕೆಲಸ ಮಾಡಲೇ ಬೇಕು. ಒಂದು ಮಗುವಿನ ಕುರಿತಾದ ವಿಚಾರ ವಿನಿಮಯ ಶಾಲೆಯಲ್ಲಂತೂ ಎಲ್ಲಾ ಮಕ್ಕಳ ವಿಚಾರಕ್ಕೆ ಎಚ್ಚೆತ್ತುಕೊಳ್ಳುವಂತಾಗುತ್ತದೆ.

ಪೋಷಕರ ನಡವಳಿಕೆ ಮತ್ತು ನಿಲುವುಗಳನ್ನು ಶಿಕ್ಷಕರು ಮಗುವಿನ ಮೂಲಕ ಗಮನಿಸುತ್ತಿದ್ದರೆ, ಶಿಕ್ಷಕರ ಕಾರ್ಯ ವೈಖರಿ ಮತ್ತು ಶಿಕ್ಷಣ ಪದ್ಧತಿಯನ್ನು ಪೋಷಕರು ಕೂಡ ತಮ್ಮ ಮಗುವಿನ ಮೂಲಕ ಗಮನಿಸುತ್ತಿರಬೇಕು. ಇದು ಪರಸ್ಪರ ಪ್ರೇರಕವಾಗಿರುವ ಚಟುವಟಿಕೆಯಾಗಿದ್ದು ಮಗುವಿನ ವಿಷಯದಲ್ಲಿ ವಿಕಾಸಪರವಾಗಿರುತ್ತದೆ.

ಆದರೆ ಶಿಕ್ಷಕರು ಮಗುವಿನ ಮುಂದೆ ಪೋಷಕರನ್ನು ನಿಂದಿಸುವು ದಾಗಲಿ, ಪೋಷಕರು ತಮ್ಮ ಮಗುವಿನ ಮುಂದೆ ಶಿಕ್ಷಕರನ್ನು ಅವಹೇಳನ ಮಾಡುವುದಾಗಲಿ ಎಂದಿಗೂ ಮಾಡಬಾರದು. ತೀರಾ ಅನಿವಾರ್ಯವೆಂದರೆ ನೇರಾನೇರಾ ಮಾತಾಡಬಹುದೇ ಹೊರತು ಮಕ್ಕಳ ಮುಂದೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ನಕಾರಾತ್ಮಕವಾಗಿ ವ್ಯಕ್ತಪಡಿಸಬಾರದು.

ಹಾಗಾಗಿಯೇ ಗೌರವಪೂರ್ವಕವಾಗಿ ಪತ್ರಗಳನ್ನು ಕಳುಹಿಸುವುದು. ಈ ಪತ್ರವೂ ಕೂಡ ಅಧಿಕಾರಯುತವಾಗಿ ಅಥವಾ ನಿಂದನಾತ್ಮಕವಾಗಿ ಇರಬಾರದು. ಈ ಸೂಕ್ಷ್ಮತೆಯನ್ನು ಖಂಡಿತವಾಗಿ ಹೊಂದಿರಬೇಕು.

ಶಾಲೆಯ ಮತ್ತು ಪೋಷಕರ ನಡುವಿನ ಸಂಬಂಧದ ವೃದ್ಧಿಗಾಗಿ ಮತ್ತು ಶಾಲೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವು ದಕ್ಕಾಗಿ ಶಿಕ್ಷಕ ಮತ್ತು ಪೋಷಕರ ಸಭೆಗಳನ್ನು ಕರೆಯುವ ವ್ಯವಸ್ಥೆ ಹಲವು ಶಾಲೆಗಳಲ್ಲಿವೆ. ಶಾಲೆಯ ದೋಷಗಳನ್ನು ಪೋಷಕರು ಆಡಳಿತ ಮಂಡಳಿಗೆ ತಿಳಿಸಲು ಹಲವು ಕಾರಣದಿಂದ ಹಿಂಜರಿ ಯುವರು.

1. ತಮ್ಮ ಮಕ್ಕಳ ಮೇಲೆ ಕಣ್ಣಿಡುವರು, ಮಲತಾಯಿ ಧೋರಣೆ ತೋರುವರೆಂದು

2. ಇದು ಎಲ್ಲಾ ಶಾಲೆಗಳಲ್ಲೂ ಸಾಮಾನ್ಯ ಎಂಬ ಧೋರಣೆ

3. ನಮಗಿಂತ ಚೆನ್ನಾಗಿ ಶಾಲೆಯವರಿಗೆ ಆಡಳಿತ ನಡೆಸುವುದು ಗೊತ್ತು ಎಂದು

4. ನಾವು ಏನು ಹೇಳಿದರೂ ಶಾಲೆಯವರು ತಮ್ಮನ್ನೇ ಸಮರ್ಥಿಸಿ ಕೊಂಡು ಮಾತಾಡುವರು, ಇನ್ನುಏನು ಹೇಳಿ ಪ್ರಯೋಜನ ಎಂದು

   

5. ಶಾಲೆಗೆ ಹೋಗುವಷ್ಟು ಪುರುಸುತ್ತು ಇಲ್ಲ ಎಂದು6. ಶಾಲೆಗೆ ಸರಿಯಾಗಿ ಶುಲ್ಕ ಕಟ್ಟಿಲ್ಲ ಅಥವಾ ಇನ್ನಾವುದಾದರೂ ತಮ್ಮ ಕಡೆಯ ಸಮಸ್ಯೆಯನ್ನು ಶಾಲೆಯವರು ಗುರಿ ಮಾಡುವರೆಂದು

ತಮ್ಮದು ಯಾವುದೇ ಸಮಸ್ಯೆ ಇದ್ದರೂ ಪೋಷಕರು ಅದನ್ನು ಕುರಿತು ಶಾಲೆಯ ಆಡಳಿತ ಮಂಡಳಿಯೊಡನೆ ಪ್ರತ್ಯೇಕವಾಗಿ ಮಾತಾಡಬೇಕೇ ಹೊರತು, ಅದರ ಕಾರಣದಿಂದ ಮಕ್ಕಳ ಕಲಿಕೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ನೀವು ಇಂದು ಕಟ್ಟಿಲ್ಲದ ಶಾಲಾ ಶುಲ್ಕವನ್ನು ನಾಳೆ ಅಥವಾ ಶಾಲೆ ಬಿಡುವಾಗಲಾದರೂ ಕಟ್ಟಬಹುದು. ಆದರೆ ಮಗುವಿನ ವಿಷಯದಲ್ಲಿ ಉಂಟಾಗುವ ವಿಷಯವನ್ನು ಸರಿಪಡಿಸಲಾಗದು.

ಶಾಲೆಗಳು ಮಾನವ ಹಕ್ಕು ಮತ್ತು ಮಕ್ಕಳ ಹಕ್ಕು ಉಲ್ಲಂಘನೆ ಮಾಡುವಂತಹ ವಿಚಾರಗಳು:

ಬಾಯ್ಮುಚ್ಚು: ಮನೆಯಲ್ಲಾಗಲಿ ಅಥವಾ ಶಾಲೆಯಲ್ಲಾಗಲಿ ಮಗುವಿಗೆ ಯಾವುದೇ ಕಾರಣದಿಂದ ಬಾಯ್ಮುಚ್ಚು ಎಂದು ಮಗುವಿನ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ದಬ್ಬಾಳಿಕೆಯೇ ಸರಿ. ಮಗುವಿಗೆ ತಾನು ಹೇಳಲೇಬೇಕಾದ್ದನ್ನು ಹೇಳಲು ಬಿಡಬೇಕು. ಹಾಗೂ ಅದಕ್ಕೆ ಸಮರ್ಪಕವಾಗಿ ಉತ್ತರವನ್ನು ನೀಡ ಬೇಕು. ಬಾಯ್ಮುಚ್ಚಿಕೊಂಡು ಹೇಳಿದಷ್ಟು ಕೇಳು ಎಂದು ಹೇಳುವುದು ಹಾಗೆ ನಡೆಸಿಕೊಳ್ಳುವುದು ಗುಲಾಮಗಿರಿಯ ಸಂಕೇತ. ಮಕ್ಕಳನ್ನು ಗುಲಾಮಗಿರಿಗೆ ಒಗ್ಗಿಕೊಳ್ಳುವಂತಹ ಶಿಕ್ಷಣವನ್ನು ಶಾಲೆಯೂ ಕೊಡಬಾರದು ಮತ್ತು ಮನೆಯಲ್ಲಿಯೂ ಅಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಾರದು. ಎಷ್ಟು ಸಲ ಹೇಳೋದು ನಿನಗೆ?: ಎಷ್ಟು ಸಲ ಹೇಳಿದರೂ ನಿನಗೆ ಅರ್ಥ ವಾಗಲ್ಲ, ದಡ್ಡ ಅಥವಾ ಮಂಕುದಿಣ್ಣೆ ಎನ್ನುವ ಪೋಷಕರಾಗಲಿ, ಶಿಕ್ಷಕರಾಗಲಿ ಒಂದು ಗಮನಿಸಬೇಕಾಗಿರುವುದೇನೆಂದರೆ, ಒಂದು ವಿಷಯ ಮಗುವಿಗೆ ಒಂದು ರೀತಿಯಲ್ಲಿ ಅರ್ಥವಾಗಲಿಲ್ಲ ಎಂದರೆ ಮತ್ತೊಂದು ರೀತಿಯಲ್ಲಿ ಹೇಳಬೇಕು. ತಮಗೆ ಆ ವಿಷಯವನ್ನು ಮಗುವಿಗೆ ಅರ್ಥವಾಗುವ ರೀತಿಯಲ್ಲಿ ಹೇಳುವ ಕಲೆಯು ತಮಗಿಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ಸಲ ಹೇಳಿದರೂ ಮಗುವಿಗೆ ಅರ್ಥವಾಗುತ್ತಿಲ್ಲ ಎಂದರೆ ನಿಮ್ಮ ಹೇಳುವ ವಿಧಾನ ಸರಿ ಇಲ್ಲವೆಂದು ಅರ್ಥ ಮಾಡಿಕೊಂಡು ಮತ್ತೊಂದು ವಿಧಾನದಲ್ಲಿ ಹೇಳಬೇಕು. ಮಗುವಿಗೆ ಅರ್ಥವಾಗದೇ ಇರುವ ವಿಧಾನದಲ್ಲೇ ಹೇಳುತ್ತಲೇ ಇರುವುದು ಶಿಕ್ಷಕರ ಮತ್ತು ಪೋಷಕರ ಸಮಸ್ಯೆ ಎಂದೇ ಅರ್ಥ.

ಕೇನ್ ಆ್ಯಂಡ್ ಟ್ರೈನ್: ನಾನೊಂದು ಶಾಲೆಗೆ ಹೋದೆ. ಆ ಶಾಲೆಯಲ್ಲಿ ಕ್ರೀಡಾ ಮತ್ತು ವ್ಯಾಯಾಮದ ಶಿಕ್ಷಕ ಸದಾ ಕೋಲನ್ನು ಹಿಡಿದುಕೊಂಡೇ ಓಡಾಡುತ್ತಿರುತ್ತಾರೆ. ಅವರೇ ಶಾಲೆಯಲ್ಲಿ ಶಿಸ್ತನ್ನು ನೋಡಿಕೊಳ್ಳುವವರಂತೆ. ಆದರೆ ಆ ರೀತಿ ಕೋಲನ್ನು ಹಿಡಿದುಕೊಂಡು ಓಡಾಡಿಕೊಂಡು, ಕೋಲಿನಲ್ಲಿ ಬೆದರಿಸಿಕೊಂಡು ಇರುವುದೇ ಶಿಸ್ತಿನ ಉಲ್ಲಂಘನೆ ಎಂದು ಅವರಿಗೆ ತಿಳಿಯದೇ ಇರುವುದು ಸೋಜಿಗವೇ ಸರಿ. ಕೋಲಿನಿಂದ ಆ ಸಮಯಕ್ಕೆ ಮಕ್ಕಳನ್ನು ಸುಮ್ಮನಿರಿಸಬಹುದೇ ಹೊರತು ಅವರನ್ನು ಯಾವ ರೀತಿಯಲ್ಲಿಯೂ ನಿಜವಾದ ತರಬೇತಿ ನೀಡಲು ಸಾಧ್ಯವಿಲ್ಲ. ಶಾಲೆಗಳು ಶಿಸ್ತನ್ನು ಕಾಪಾಡಲು ವಿವೇಚನಾಹೀನ ಕ್ರಮಗಳನ್ನು ಕೈಗೊಳ್ಳುವುದು:

ಶ್ರೀಮಂತ ಮತ್ತು ಸಮಾಜದ ಉನ್ನತ ಸ್ಥಾನದ ಮಕ್ಕಳು ಹೋಗುವಂತಹ ಶಾಲೆಗಳಲ್ಲಿ ಬಡಿಗೆಯ ಶಿಕ್ಷೆ ಅಥವಾ ನಿಂದನೆಗಳು ಇರುವುದಿಲ್ಲ. ಅಲ್ಲಿನ ಶಿಕ್ಷಕರನ್ನು ಕಟ್ಟುನಿಟ್ಟಾಗಿ ಇವುಗಳ ಬಗ್ಗೆ ಎಚ್ಚರದಿಂದ ಇರಿಸುತ್ತಾರೆ. ಮಗುವಿಗೆ ಷಟಪ್ ಅಥವಾ ಗೆಟೌಟ್ ಎನ್ನುವುದೇ ಇರುವುದಿಲ್ಲ ಎಂದ ಮೇಲೆ ಇನ್ನು ಕೋಲಿನಿಂದ ಹೊಡೆಯುವುದು ಬಹಳ ದೂರವೇ ಉಳಿಯುತ್ತದೆ. ಅಲ್ಲಿ ಮಕ್ಕಳನ್ನು ಬಹಳ ಸೂಕ್ಷ್ಮವಾಗಿ ನೋಡಿಕೊಳ್ಳುತ್ತಾರೆ. ಪೋಷಕರು ತಕ್ಷಣವೇ ಸ್ಪಂದಿಸುತ್ತಾರೆ. ಮಗುವು ಕೊಡುವ ದೂರನ್ನು ಕೂಡಲೇ ಹೊತ್ತು ಶಾಲೆಯ ವ್ಯವಸ್ಥಾಪಕ ಮಂಡಲಿಗೆ ಪೋಷಕರು ಬರುತ್ತಾರೆ. ಸಣ್ಣ ಸಣ್ಣದಾದ ವಿಷಯಗಳನ್ನೂ ತುಂಬಾ ಗಂಭೀರವಾಗಿ ಪರಿಗಣಿಸುವ ಪೋಷಕರ ವರ್ಗ ಅಲ್ಲಿರುತ್ತದೆ. ಆದರೆ ಮಧ್ಯಮವರ್ಗದ, ಅಥವಾ ಮಧ್ಯಮವರ್ಗಕ್ಕಿಂತ ಕೆಳಗಿರುವ ಶಾಲೆಗಳಲ್ಲಿ ಬೈಗುಳವೂ, ದಂಡನೆಯೂ, ನಿಂದನೆಯೂ ತೀರಾ ಸಾಮಾನ್ಯವಾಗಿಯೇ ಇರುತ್ತದೆ. ಅಲ್ಲಿ ಪೋಷಕರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಮಕ್ಕಳು ಶಾಲೆಯ ಸುಪರ್ದಿಗೆ ಬಂದ ಕೂಡಲೇ ಶಿಕ್ಷಕರೇ ಪಾಳೇಗಾರರು, ದಂಡಾಧಿಕಾರಿಗಳು, ಇನ್ನೂ ಕೆಲವು ಶಿಕ್ಷಕರು ರೌಡಿಗಳೇ ಸರಿ.

   1.ಒಂದು ಮಗುವು ಮಾತಾಡಿದರೆ ಎಲ್ಲರಿಗೂ ಹೊಡೆಯುತ್ತೇನೆಂದು ಹೆದರಿಸುವುದು ಮತ್ತು ಹಾಗೆಯೇ ಮಾಸ್ ಪನಿಶ್‌ಮೆಂಟ್ ಕೊಡುವುದು. ಈ ಸಾಮೂಹಿಕ ಶಿಕ್ಷೆಯ ಉದ್ದೇಶವೇ ಅರ್ಥವಾ ಗುವುದಿಲ್ಲ! ಯಾರು ಮಾತಾಡಿದರು, ಯಾರು ಗಲಾಟೆ ಮಾಡಿದರು, ಯಾಕೆ ಮಾಡಿದರು ಎಂದು ಕೂಡ ನೋಡದೇ ಗಲಾಟೆ ಕೇಳಿದ ಕೂಡಲೇ ಎಲ್ಲರನ್ನೂ ಎಬ್ಬಿಸಿ ಕೋಲಿನಿಂದ ಹೊಡೆಯುವುದು. ಮಕ್ಕಳು ಸಾಮಾನ್ಯವಾಗಿ ಗಲಾಟೆ ಮಾಡುವುದು ಏಕೆಂದರೆ ತರಗತಿಯಲ್ಲಿ ಯಾರೂ ಇಲ್ಲದಿದ್ದಾಗ. ಯಾರೂ ಶಿಕ್ಷಕರು ಇಲ್ಲದಿರುವುದು ಮಕ್ಕಳ ಸಮಸ್ಯೆಯಲ್ಲವಲ್ಲ! ಅವರನ್ನು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸದೇ ಹೋಗುವುದು ಅಥವಾ ಅವರನ್ನು ಗಮನಿಸಲಾಗದೇ ಶಿಕ್ಷಕರು ಬೇರೊಂದು ಕೆಲಸದ ಮೇಲೆ ಮಗ್ನರಾಗುವುದಕ್ಕೆ ಮಕ್ಕಳು ಹೊಣೆಯೇ?

   2.ಯಾರಿಗೆ ಅಗತ್ಯವಿದೆ ಅಥವಾ ಇಲ್ಲ ಎಂದು ನೋಡದೇ ಎಲ್ಲರಿಗೂ ಹತ್ತತ್ತು ಸಲ, ಇಪ್ಪತ್ತು ಸಲ ಯಾವುದನ್ನೋ ಬರೆಯಿರಿ ಎಂದು ಹೇಳಿ, ಬರೆಯದಿದ್ದರೆ ಶಿಕ್ಷೆ ವಿಧಿಸುವುದು. ತಮಗೆ ಗೊತ್ತಿದ್ದರೂ ಸುಖಾಸುಮ್ಮನೆ ಬರೆದುಕೊಂಡು ಕುಳಿತುಕೊಳ್ಳುವುದು ಮಕ್ಕಳಿಗೆ ವಿಷಯದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.

  3.ಪ್ರಿನ್ಸಿಪಾಲ್ ಬರ್ತಿದ್ದಾರೆ, ಇನ್ನಾರೋ ಆಡಳಿತ ಮಂಡಳಿಯವರು ಬರುತ್ತಾ ಇದ್ದಾರೆ ಎಂದು ಎಂದೂ ಇಲ್ಲದ ಘನತೆ, ಶಿಸ್ತು, ವೌನದಿಂದ ಕುಳಿತುಕೊಳ್ಳುವಂತೆ ಮಕ್ಕಳನ್ನು ಒತ್ತಾಯಿಸುವುದು. 4.ಮಗುವು ಪುಸ್ತಕ ತಂದಿರದಿದ್ದರೆ ಅಥವಾ ಪಕ್ಕದವರೊಡನೆ ಮಾತಾಡಿಕೊಂಡು ಗಲಾಟೆ ಮಾಡುತ್ತಿದ್ದ, ತೀಟೆ ಮಾಡುತ್ತಿದ್ದ ಎಂದು ತರಗತಿಯಿಂದ ಹೊರಗೆ ನಿಲ್ಲಿಸುವುದು. ಹೊರಗೆ ಮಗುವನ್ನು ಕಳುಹಿಸುವುದರಿಂದ ಕಲಿಕೆಯ ಉದ್ದೇಶ ಹೇಗೆ ನೆರವೇರುವುದು? ಮಕ್ಕಳು ಅದನ್ನು ನಿಜವಾಗಿ ಮಜಾ ಮಾಡ್ತಾರೆ.

   5.ನಿಮ್ಮಪ್ಪ ಅಮ್ಮ ಇದನ್ನೇನಾ ಹೇಳಿಕೊಟ್ಟಿರೋದು ಎಂದು ನಿಂದಿಸುವುದು. ಇದಂತೂ ಅತ್ಯಂತ ಅವಮಾನಕರವಾದ ಹೇಳಿಕೆ. ವಿವಿಧ ನೆಲೆಗಳಿಂದ ಬಂದಿರುವಂತಹ ಮಕ್ಕಳು ಅಲ್ಲಿ ಸೇರಿ ರುವುದು. ಯಾವುದೋ ಶಿಕ್ಷಕರ ವೈಯಕ್ತಿಕ ದೃಷ್ಟಿ, ಧೋರಣೆಗಳ ಪ್ರಕಾರ ತಂದೆ ತಾಯಿಯರನ್ನು ಮಕ್ಕಳ ಎದುರು ನಿಂದಿಸುವುದು ಅಪರಾಧ.

   6.ಗಲೀಜು ಮಾಡಿದರೆ ಅಥವಾ ಗಲಾಟೆ ಮಾಡಿದರೆ ಇಂತಿಷ್ಟು ಹಣ ಎಂದು ದಂಡ ವಿಧಿಸುವುದು. ಇದರಿಂದ ಮಕ್ಕಳು ತಾನು ಮಾಡಿರುವ ತಪ್ಪಿಗೆ ಹಣ ಕೊಡಿ ಎಂದು ಮನೆಯಲ್ಲಿ ಕೇಳಲಾಗುವುದಿಲ್ಲ. ಆದರೆ ಕೊಡಬೇಕಾದ ಒತ್ತಡ ಶಾಲೆಯಲ್ಲಿದ್ದಾಗ ಅವರು ಮನೆಯಲ್ಲಿ ಕಳ್ಳತನ ಮಾಡುತ್ತಾರೆ.

   7.ಹುಚ್ಚುಹುಚ್ಚಾಗಿ ಅಧಿಕ ಪ್ರಸಂಗದ ಮಾತುಗಳನ್ನು ಆಡುವ ಶಿಕ್ಷಕರು ತಮ್ಮ ವೃತ್ತಿಯ ಘನತೆಯನ್ನೇ ಮಕ್ಕಳ ಎದುರು ಕಳೆದುಕೊಳ್ಳುತ್ತಾರೆ. ಓರ್ವ ಶಿಕ್ಷಕ ಮಕ್ಕಳಿಗೆ ಹೀಗೆ ಬೈಯುತ್ತಿದ್ದರು, ನೀವು ಹೀಗೆ ಗಲಾಟೆ ಮಾಡ್ತಿದ್ದರೆ, ನಾಲಿಗೆ ಕಟ್ ಮಾಡ್ತೀನಿ, ಕಾಲು ಮುರಿದು ಕೈಗೆ ಕೊಡ್ತೀನಿ. ಹೇಳಿದ ಮಾತು ಕೇಳದೇ ಹೋದರೆ ಕೈ ಕಾಲುಗಳನ್ನು ಕಟ್ಟಿ ಈಚೆಗೆ ಬಿಸಾಡುತ್ತೇನೆ. ಮರಕ್ಕೆ ನೇತು ಹಾಕುತ್ತೇನೆ. ಸ್ಕೂಲಿನಲ್ಲೇ ಬಂಧಿಸುತ್ತೇನೆ. ಮನೆಗೆ ಹೋಗಲೇ ಬಿಡುವುದಿಲ್ಲ. ಈ ಬಗೆಯ ಮಾತುಗಳನ್ನು ಕೇಳುತ್ತಿದ್ದ ಹೈಸ್ಕೂಲ್ ಮಕ್ಕಳು ನನ್ನೊಡನೆ ನಗೆಯಾಡಿಕೊಂಡರು, ಯಾವತ್ತೂ ಹೀಗೆಲ್ಲಾ ಮಾಡೇ ಇಲ್ಲ ಸುಮ್ಮನೆ ಹೆದರಿಸುತ್ತಾ ಇರ್ತಾರೆ. ಮಾಡಿದರೆ ಸುಮ್ಮನೆ ಬಿಡ್ತಾರಾ? ಪೋಲಿಸ್ ಕಂಪ್ಲೇಂಟ್ ಕೊಡ್ತೀವಿ. ಮೀಡಿಯಾದವರನ್ನೆಲ್ಲಾ ಕರಿಸ್ತೀವಿ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News