ಸರಳ ಕೃಷಿ ವಿಜ್ಞಾನ ಮಾಹಿತಿ

Update: 2017-07-23 18:45 GMT

ಇಂದು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೇರಿದಂತೆ ಬೇರೆ ಬೇರೆ ತಂತ್ರಜ್ಞಾನಗಳನ್ನು ಸರಳವಾಗಿ ಕಲಿಸುವ, ಆಸಕ್ತಿ ಹುಟ್ಟಿಸುವ ಪ್ರಯತ್ನ ವ್ಯಾಪಕವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕೃತಿಗಳೂ ಹೊರ ಬರುತ್ತಿವೆ. ಆದರೆ ಬದುಕಿನೊಂದಿಗೆ ಅವಿನಾಭಾವವಾಗಿ ಬೆಸೆದಿರುವ ಕೃಷಿಯ ಕುರಿತಂತೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುವ ಪ್ರಯತ್ನ ತೀರಾ ಕಡಿಮೆ ನಡೆದಿದೆ. ಕೃಷಿಯ ಕುರಿತಂತೆ ಇರುವ ಅಸಡ್ಡೆ, ಕೀಳರಿಮೆಯೂ ಇದಕ್ಕೆ ಕಾರಣವಾಗಿರಬಹುದು. ಕೃಷಿಕ ಕುಟುಂಬದಿಂದ ಬಂದವರೂ, ಕೃಷಿಯಿಂದ ಹೊರಬರುವ ಬಗ್ಗೆ ಯೋಚಿಸುತ್ತಾರೆಯೇ ಹೊರತು, ಅದನ್ನೊಂದು ಕುತೂಹಲಕಾರಿ ವಿಜ್ಞಾನವಾಗಿ ಗ್ರಹಿಸಿ, ಅದನ್ನು ಬೆಳೆಸುವ ಕುರಿತಂತೆ ವಿದ್ಯಾವಂತರು ಯೋಚಿಸುತ್ತಿಲ್ಲ. ಕೃಷಿಯೂ ಒಂದು ವಿಜ್ಞಾನ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ, ಆ ಕ್ಷೇತ್ರದ ಕುರಿತಂತೆ ಅವರಲ್ಲಿ ಕುತೂಹಲ ಹುಟ್ಟಿಸಿದ್ದೇ ಆದರೆ, ಕೃಷಿ ಕ್ಷೇತ್ರ ಇನ್ನಷ್ಟು ಆಧುನಿಕವಾಗಿ ಬೆಳೆಯಬಹುದು. ಬರೇ ಕಂಪ್ಯೂಟರ್ ಹಿಂದೆ ಬಿದ್ದಿರುವ ಯುವಕರ ಚಿಂತನೆಯಲ್ಲೂ ಮಹತ್ತರ ಬದಲಾವಣೆಗಳಾಗಬಹುದು. ಈ ಹಿನ್ನೆಲೆಯಲ್ಲಿ ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ, ‘ಕೃಷಿ ವಿಜ್ಞಾನ’ ಒಂದು ಒಳ್ಳೆಯ ಪ್ರಯೋಗವಾಗಿದೆ. ಡಾ. ಜಿ. ಕೆ. ವೀರೇಶ್, ಅಡ್ಡೂರು ಕೃಷ್ಣರಾವ್ ಅವರು ಜಂಟಿಯಾಗಿ ರಚಿಸಿರುವ ಈ ಕೃತಿ, ಕೃಷಿಯ ಕುರಿತಂತೆ ಯುವ ಸಮುದಾಯದಲ್ಲಿ ಜ್ಞಾನದ ಬೀಜವನ್ನು ಬಿತ್ತುತ್ತದೆ.
ಭಾರತಕ್ಕೂ ಕೃಷಿಗೂ ಇರುವ ಅನ್ಯೋನ್ಯ ಸಂಬಂಧವನ್ನು ಆರಂಭದ ಎರಡು ಅಧ್ಯಾಯಗಳು ಚರ್ಚಿಸುತ್ತವೆ. ಭಾರತದಲ್ಲಿ ಕೃಷಿಯ ಆರಂಭ ಮತ್ತು ಭಾರತದ ಕೃಷಿಯ ಕಾಲಘಟ್ಟವನ್ನು ಈ ಅಧ್ಯಾಯಗಳು ಚರ್ಚಿಸುತ್ತವೆ. ವೇದಕಾಲದ ಕೃಷಿ, ಮಧ್ಯಕಾಲೀನ ಕೃಷಿ, ಬ್ರಿಟಿಷರ ಕಾಲದ ಕೃಷಿ ಮತ್ತು ಆಧುನಿಕ ಕೃಷಿಯ ಕುರಿತಂತೆ ಇಲ್ಲಿ ಚರ್ಚಿಸಲಾಗಿದೆ. ಮೂರನೆ ಅಧ್ಯಾಯದಲ್ಲಿ ಕರ್ನಾಟಕದಲ್ಲಿ ಕೃಷಿ ಬೆಳೆದು ಬಂದ ಹಾದಿಯನ್ನು ಗುರುತಿಸಲಾಗಿದೆ. ಹಾಗೆಯೇ ಕೃಷಿಯಲ್ಲಿ ನಡೆದ ಸಂಶೋಧನೆ ಮತ್ತು ಕೃಷಿ ಕ್ಷೇತ್ರಕ್ಕೆ ಕೆಲವು ಮಹನೀಯರು ನೀಡಿದ ಕೊಡುಗೆಗಳನ್ನು ದಾಖಲಿಸಲಾಗಿದೆ. ಬಳಿಕ ಮಣ್ಣು, ಗೊಬ್ಬರ, ನೀರು, ಎರೆಗೊಬ್ಬರ, ಜೈವಿಕ ಗೊಬ್ಬರ, ಬೀಜ ವಿಜ್ಞಾನ ಮೊದಲಾದ ವಿಷಯಗಳ ಕುರಿತಂತೆ ಮಾಹಿತಿಗಳನ್ನು ನೀಡಲಾಗಿದೆ. ಅರಣ್ಯ ಕೃಷಿ, ಜೇನು ಕೃಷಿ ಸಾಗಣೆ, ಹೈನುಗಾರಿಕೆ, ಒಳನಾಡು ಮೀನುಗಾರಿಕೆಯನ್ನೂ ಇಲ್ಲಿ ಚರ್ಚಿಸಲಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೂ ಹಿರಿಯರಿಗೂ ಬೇಕಾದ ಅತ್ಯುತ್ತಮ ಅಗತ್ಯ ಮಾಹಿತಿಗಳು ಈ ಕೃತಿಯಲ್ಲಿವೆ. ಒಟ್ಟು ಪುಟಗಳು 120 ರೂ. ಕೃತಿಯ ಮುಖಬೆಲೆ 75 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News