ವಾಸ್ತವ ಮಾದರಿಯ ಮಕ್ಕಳ ಕತೆಗಳು

Update: 2017-07-24 18:38 GMT

ಸಾಧಾರಣವಾಗಿ ಸಾಹಿತ್ಯ ಕ್ಷೇತ್ರದ ಬೇರೆ ಬೇರೆ ವಿಭಾಗಗಳಲ್ಲಿ ಪ್ರಯೋಗಗಳು ನಡೆದಿವೆಯಾದರು, ಮಕ್ಕಳ ಕತೆಯ ವಿಭಾಗದಲ್ಲಿ ಮಾತ್ರ ಹೊಸ ಹೊಸ ಪ್ರಯೋಗಗಳು ನಡೆದಿರುವುದು ಅಪರೂಪ. ವರ್ತಮಾನದಲ್ಲಿ ಮಕ್ಕಳು ಆಧುನಿಕತೆ ಅತಿ ವೇಗವಾಗಿ ತೆರೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗಾಗಿ ಕತೆ ಹೆಣೆಯುವವರು ಇನ್ನೂ 80ರ ದಶಕದಲ್ಲೇ ಇದ್ದಾರೆ. ಇದು ಮಕ್ಕಳ ಕತೆಗಾರರು ಮತ್ತು ಓದುಗ ಮಕ್ಕಳ ನಡುವೆ ಅಂತರಗಳನ್ನು ಬೆಳೆಸುತ್ತಿವೆ. ಇಂದು ಏಳನೆ ವಯಸ್ಸಿನಲ್ಲೇ ಮಕ್ಕಳು ಕಂಪ್ಯೂಟರ್, ಮೊಬೈಲ್ ಜಗತ್ತಿನಲ್ಲಿ ಕಳೆದುಹೋಗುತ್ತಿದ್ದಾರೆ. ಅವರನ್ನು ಅಲ್ಲಿಂದ ಎಳೆದು, ಪುಸ್ತಕದ ಕಡೆಗೆ ಒಯ್ಯಬೇಕಾದರೆ ಅವರನ್ನು ತಟ್ಟುವ, ಅವರ ಮನಸ್ಥಿತಿಗೆ ದಕ್ಕುವ ಕತೆಗಳನ್ನು ಹೆಣೆಯಬೇಕಾಗಿದೆ. ಮಕ್ಕಳನ್ನು ಸುತ್ತುವರಿದಿರುವ ಆಧುನಿಕ ತಂತ್ರಜ್ಞಾನಗಳನ್ನು ವಸ್ತುವಾಗಿಟ್ಟು ಹೊಸ ಹೊಸ ಪ್ರಯೋಗಗಳು ಬರಬೇಕಾಗಿದೆ. ಆದರೆ ಮಕ್ಕಳ ಬರಹಗಾರರ ಕೊರತೆಯೇ ಧಾರಾಳವಾಗಿರುವಾಗ ಹೊಸ ಪ್ರಯೋಗಗಳನ್ನು ನಿರೀಕ್ಷಿಸುವುದು ದುಬಾರಿಯೇ ಸರಿ.
 ‘ಸಾಧನೆ’ ಗಣೇಶ ಪಿ. ನಾಡೋರ ಅವರು ಬರೆದಿರುವ ಮಕ್ಕಳ ಕಥೆಗಳ ಗುಚ್ಛ. ಮಾಮೂಲಿ ಕಥಾ ನಿರೂಪಣೆಗಿಂತ ಇದು ಒಂದಿಷ್ಟು ವಿಭಿನ್ನವಾಗಿದೆ. ವಾಸ್ತವ ಮಾದರಿಯ ಈ ಕಥಾಗುಚ್ಛ ಏಳು ಕಥೆಗಳನ್ನು ಹೊಂದಿದೆ. ಬೆಳೆಯುತ್ತಿರುವ ಓದನ್ನು ರೂಢಿಸಿಕೊಂಡ, ಹದಿಹರೆಯಕ್ಕೆ ಕಾಲಿಡುತ್ತಿರುವ ಸುತ್ತಲಿನ ವಾತಾವರಣವನ್ನು ಕುತೂಹಲದಿಂದ ವೀಕ್ಷಿಸುತ್ತ ಒಳಗೊಳಗೇ ಲೆಕ್ಕ ಹಾಕತೊಡಗುವ ವಯಸ್ಸಿನ ಮಕ್ಕಳನ್ನು ಉದ್ದೇಶಿಸಿ ಬರೆದ ಕತೆಗಳು ಇವು. ಮಕ್ಕಳ ಮನಸಿನ ಚಂಚಲತೆ, ಲೋಕ ಕುತೂಹಲ, ಭಾವನೆ, ಬಯಕೆಗಳು, ನೋವು ನಲಿವುಗಳು, ಹಿರಿಯರ ನಡೆ-ನುಡಿಗಳು, ಅವರಲ್ಲಿ ತಲುಪುವಂತಹ ಸರಳ ಹಾಗೂ ಕುತೂಹಲಕಾರಿ ಶೈಲಿಯಲ್ಲಿ ಮೂಡಿ ಬಂದಿದೆ. ಮಕ್ಕಳೇ ಕತೆ ಹೇಳುವ ರೀತಿಯಲ್ಲಿ ನಿರೂಪಣೆ ವಸ್ತುವನ್ನು ಮಕ್ಕಳಿಗೆ ಇನ್ನಷ್ಟು ಹತ್ತಿರವಾಗಿಸಬಹುದು. ಮನೆಗೆಲಸ ಮಾಡುತ್ತಲೇ ಓದಿಕೊಂಡು ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಶಕುಂತಲಳ ಸಾಧನೆಯ ರಹಸ್ಯ, ವಿದಾಯ ಹೇಳಿದ ಅಜ್ಜನ ಪ್ರೀತಿಗಾಗಿ ಗೋಗರೆವ ತನ್ಮಯಿಯ ಮಿಡಿತ, ಮನಸ್ಸನ್ನು ಕಲಕುವ ಕಾಳುವಿನ ಅಂತ್ಯ, ಪುಟ್ಟ ಅಕ್ಕ ತಂಗಿ ಒಡನಾಟದ ಆಟ...ಹೀಗೆ ಬೇರೆ ಬೇರೆ ವಿಷಯ ವೈವಿಧ್ಯಗಳನ್ನು ಇಲ್ಲಿನ ಕತೆಗಳು ಹೊಂದಿವೆ. ಮಕ್ಕಳಲ್ಲಿ ಮಾನವೀಯ ಸಂದೇಶವನ್ನು ಬಿತ್ತುವ ಕೆಲಸವನ್ನೂ ಸದ್ದಿಲ್ಲದೆ ಕತೆಗಳು ಮಾಡುತ್ತವೆ.
ನವ ಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 75 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News