ಆ ರೈತ ಬಂಡಾಯಕ್ಕೀಗ 37 ವರ್ಷಗಳು..!

Update: 2017-07-25 19:01 GMT

ದೇಶದಲ್ಲಿಯೇ ಮೊದಲ ಬಾರಿಗೆ ಜನಪ್ರತಿನಿಧಿಗಳ ಸರಕಾರದ ವಿರುದ್ಧ ರೈತರು ನಡೆಸಿದ ರೈತ ಬಂಡಾಯಕ್ಕೆ ಇದೀಗ 37 ವರ್ಷಗಳು ತುಂಬಿವೆ. ಇದೀಗ ಮಲಪ್ರಭಾ ತೀರದ ಪ್ರದೇಶದ ಜನರು ಕುಡಿಯುವ ನೀರಿಗಾಗಿ ನಡೆಸುತ್ತಿರುವ ನಿರಂತರ ಹೋರಾಟ ಎರಡು ವರ್ಷ ಪೂರೈಸಿ, ಮೂರನೆ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ವೇಳೆ ಹಿಂದಿನ ಬಂಡಾಯ ನೆನೆಯದೇ ಇರಲಾಗದು. ಆ ರೈತ ಚಳವಳಿಯು ಸರಕಾರವನ್ನೇ ಉರುಳಿಸಿತು ಎಂಬುದು ಇದೀಗ ಇತಿಹಾಸ.

ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರಕಾರ, ಮಲಪ್ರಭಾ ನೀರಾವರಿ ಯೋಜನೆಯಿಂದ ನೀರು ಪಡೆಯುವ ರೈತರಿಗೆ ಬೆಟರ್ ಮೆಂಟ್ ಲೆವಿ(ಲೇವಿ ಆಫ್ ಬೆಟರ್ ಮೆಂಟ್ ಕಾಂಟ್ರಿಬ್ಯೂಷನ್ ಆ್ಯಂಡ್ ವಾಟರ್ ರೇಟ್ ಕಾಯ್ದೆ- 75ರ ಪ್ರಕಾರ) 1976-77ರಿಂದ ತೆರಿಗೆ ವಿಧಿಸಿತ್ತು.
1974ರಲ್ಲಿ ಮಾಡಿದ ತಿದ್ದುಪಡಿಯಂತೆ ರೈತರು ಪ್ರತೀ ಎಕರೆಗೆ ಗರಿಷ್ಠ 1,500 ರೂ.ವರೆಗೆ ತೆರಿಗೆ ನೀಡಬೇಕಿತ್ತು. ಜಲಾಶಯಗಳಿಂದ ಶಾಶ್ವತ ನೀರಾವರಿ ಯೋಜನೆ ಪಡೆಯುವ ರೈತರಿಗೆ ಇದು ಕಡ್ಡಾಯವಾಗಿತ್ತು. ಗದಗ ಜಿಲ್ಲೆಯ ನರಗುಂದ, ಬೆಳಗಾವಿ ಜಿಲ್ಲೆಯ ರಾಮದುರ್ಗ, ಸವದತ್ತಿ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕುಗಳನ್ನು ಸಂಪೂರ್ಣ ನೀರಾವರಿ ಪ್ರದೇಶ ಎಂದು ಘೋಷಿಸಲಾಗಿತ್ತು.
ಆದರೆ, ನರಗುಂದ ಭಾಗದಲ್ಲಿ ಬಹುತೇಕ ಜಮೀನಿಗೆ ನೀರೇ ಬರುತ್ತಿರಲಿಲ್ಲ. ಒಂದು ಜಮೀನಿನಲ್ಲಿ ನೀರಾವರಿ ಭಾಗ ಎಷ್ಟೇ ಇರಲಿ, ಆ ಇಡೀ ಜಮೀನಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಜತೆಗೆ ಸರಕಾರ ರೈತರಿಗೆ ವಿರುದ್ಧವಾಗಿ ನೀರಾವರಿ ಹಾಗೂ ಕಂದಾಯ ಕರವನ್ನು ದ್ವಿಗುಣಗೊಳಿಸಿ ಕಡ್ಡಾಯಗೊಳಿಸಿತ್ತು. ಇದು ರೈತರಿಗೆ ಅತಿರೇಕ ಅನ್ನಿಸಿತು.
ಬೆಟರ್‌ಮೆಂಟ್ ಲೆವಿಯ ಕಾಯ್ದೆ ರದ್ದುಗೊಳಿಸುವಂತೆ ರೈತರು ಸರಕಾರದ ವಿರುದ್ಧ ಹೋರಾಟ ಆರಂಭಿಸಿದರು. ಹಲವು ಬಾರಿ ಮನವಿ ಕೂಡ ಸಲ್ಲಿಸಿದರು. ಆದರೆ ಸರಕಾರ ಇದಕ್ಕೆ ಸೊಪ್ಪುಹಾಕದಿದ್ದಾಗ ರೈತರು ದಂಗೆ ಎದ್ದರು.
1980 ರ ಜುಲೈ 21ರಂದು ರೈತರು ನರಗುಂದದ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿದರು. ರೈತರು ನಡೆಸಿದ ಹೋರಾಟ ಹಿಂಸಾರೂಪ ತಾಳಿತು. ಈ ಸಂದರ್ಭದಲ್ಲಿ ರೈತರನ್ನು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಅಂದು ಪಿಎಸ್ಸೈ ಸಿಕಂದರ್ ಪಟೇಲ್ ಹಾರಿಸಿದ ಗುಂಡಿಗೆ ಹೋರಾಟನಿರತ ನರಗುಂದ ತಾಲೂಕಿನ ಚಿಕ್ಕ ನರಗುಂದದ ರೈತ ವೀರಪ್ಪಕಡ್ಲಿಕೊಪ್ಪ ಹಾಗೂ ನವಲಗುಂದ ತಾಲೂಕಿನ ಅಳಗವಾಡಿಯ ಬಸಪ್ಪಲಕ್ಕುಂಡಿ ಬಲಿಯಾಗಿದ್ದರು.
ರೈತರು ಸಾವನ್ನಪ್ಪಿದ ಕ್ಷಣಮಾತ್ರದಲ್ಲಿ ರೊಚ್ಚಿಗೆದ್ದ ರೈತರ ಆಕ್ರೋಶಕ್ಕೆ ಗುಂಡು ಹಾರಿಸಿದ ಪಿಎಸ್ಸೈ ಪಟೇಲ ಕೂಡ ಜೀವ ಕಳೆದುಕೊಂಡರು. ಅಂದು ತಹಶೀಲ್ದಾರರಾಗಿದ್ದ ಎಫ್.ಎಫ್. ವರೂರ ಕೂಡ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಡಿವೈಎಸ್ಪಿ ಆಗಿದ್ದ ಪ್ರವೀಣಕುಮಾರ ಕೂಡ ಏಟು ತಿಂದಿದ್ದರು. ತಹಶೀಲ್ದಾರ್ ಕಚೇರಿ ಬೆಂಕಿಗಾಹುತಿಯಾಗಿ, ಅದರಲ್ಲಿದ್ದ ಎಲ್ಲ ಕಡತ ಗಳೂ ಭಸ್ಮವಾದವು. ಇನ್ನಿಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಕೂಡ ಬಲಿಯಾದರು.
 ಆದರೆ ಆ ಚಳವಳಿ ಅಂದು ರಾಜ್ಯದಲ್ಲಿದ್ದ ಆರ್. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನೇ ಉರುಳಿಸಿತು ಅನ್ನೋದು ಇದೀಗ ಇತಿಹಾಸ. ಇಂತಹ ಇತಿಹಾಸ ಹೊಂದಿರುವ ನರಗುಂದ ರೈತ ಬಂಡಾಯವು ಜಗತ್ತಿನಲ್ಲಿಯೇ ಜನಪ್ರತಿನಿಧಿ ಸರಕಾರದ ವಿರುದ್ಧ ಪ್ರಥಮವಾಗಿ ಮೊಳಗಿದ ರೈತ ಬಂಡಾಯವೂ ಹೌದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  ಈ ಬಂಡಾಯದ ಕಹಳೆಗೆ ಜುಲೈ 21 ರಂದು 37 ವರ್ಷಗಳು ಪೂರ್ಣಗೊಂಡಿವೆ. ನರಗುಂದ ರೈತ ಬಂಡಾಯದ ಹೆಸರಿನಲ್ಲಿ ರಾಜ್ಯದಲ್ಲಿ ಹೊಸ ಹೊಸ ರಾಜಕೀಯ ಪಕ್ಷಗಳು ಉದಯವಾದವು. ಆ ಮೂಲಕ ಹಲವಾರು ಮುಖಂಡರು ರಾಜಕೀಯ ನೆಲೆ ಕಂಡುಕೊಂಡು ರಾಜ್ಯ ಹಾಗೂ ಕೇಂದ್ರ ನಾಯಕರಾದರು. ಈ ಪೈಕಿ ಇದೀಗ ನರಗುಂದ ಶಾಸಕರಾಗಿರುವ ಮಾಜಿ ಸಚಿವ ಬಿ.ಆರ್. ಯಾವಗಲ್ ಅವರು ಕೂಡ ಒಬ್ಬರಾಗಿದ್ದಾರೆ.
ಈ ರೈತ ಚಳವಳಿಗೆ ಗುಂಡೂರಾವ್ ಸರಕಾರ ಬಲಿಯಾಗಿದ್ದು, ರಾಜಕಾರಣಿಗಳಿಗೆ ಪಾಠವೂ ಆಯಿತು. ಕರ ಕಡ್ಡಾಯ ರದ್ದಾಯಿತು. ಆದರೆ ಉಳಿದ ಸಮಸ್ಯೆಗಳಿಗೆ ಇದುವರೆಗೂ ಸ್ಪಂದನೆ ಸಿಗದಿರುವುದು ವಿಪರ್ಯಾಸ. 1980ರಲ್ಲಿ ನಡೆದ ನರಗುಂದ-ನವಲಗುಂದ ರೈತರ ಚಳವಳಿ ರೈತ ವಲಯ ಹಾಗೂ ರಾಜಕೀಯ ವಲಯದಲ್ಲಿ ಕ್ರಾಂತಿಕಾರಕ ಪ್ರಭಾವ ಬೀರಿತು. ರೈತ ಸಂಘದ ಪುನಶ್ಚೇತನಕ್ಕೆ ವೇದಿಕೆ ಒದಗಿಸಿತು. ರಾಜ್ಯದ ಗದಗ-ಬೆಟಗೇರಿ, ದಾವಣಗೆರೆ, ಚಿತ್ರದುರ್ಗ, ಅಂಕೋಲಾ, ಕುಮಟಾ, ಶಿವಮೊಗ್ಗ, ಮಂಡ್ಯ, ಘಟಪ್ರಭಾ ಹಾಗೂ ತುಂಗಭದ್ರಾ ಪ್ರದೇಶದ ರೈತರ ಮೇಲೆ ಪ್ರಭಾವ ಬೀರಿ ಬಂದ್ ನಡೆದವು.

Writer - ಫಾರೂಕ್ ಮಕಾನದಾರ

contributor

Editor - ಫಾರೂಕ್ ಮಕಾನದಾರ

contributor

Similar News

ಜಗದಗಲ
ಜಗ ದಗಲ