ವಾಟ್ಸ್‌ಆ್ಯಪ್ ಎಂಬ ವಿಸ್ಮಯದ ಕುರಿತ ಅಂಕಿಅಂಶಗಳು
ಪ್ರತಿದಿನ ವಿಶ್ವಾದ್ಯಂತ ಒಂದು ಬಿಲಿಯನ್ ಜನರು ಆ್ಯಪನ್ನು ಬಳಸುತ್ತಿರುವುದಾಗಿ ಫೇಸ್ಬುಕ್ ಮಾಲಕತ್ವದಲ್ಲಿರುವ ವಾಟ್ಸ್ ಆ್ಯಪ್ ಘೋಷಿಸಿದೆ. ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ಹುಟ್ಟುಹಾಕಿದ್ದ ವಾಟ್ಸ್ ಆ್ಯಪನ್ನು 2014ರಲ್ಲಿ 22 ಬಿಲಿಯನ್ ಡಾಲರ್ ಗಳಿಗೆ ಫೇಸ್ಬುಕ್ ತನ್ನದಾಗಿಸಿತ್ತು.
ಕಳೆದ ವರ್ಷ ತಿಂಗಳೊಂದರಲ್ಲಿ ಜಗತ್ತಿನಾದ್ಯಂತ ಒಂದು ಬಿಲಿಯನ್ ಜನರು ಆ್ಯಪ್ ಉಪಯೋಗಿಸುತ್ತಾರೆ ಎಂದು ವಾಟ್ಸ್ ಆ್ಯಪ್ ಘೋಷಿಸಿತ್ತು. ಆದರೆ ಇದೀಗ ಪ್ರತಿದಿನ ಒಂದು ಬಿಲಿಯನ್ ಜನರು ವಾಟ್ಸ್ ಆ್ಯಪ್ ಉಪಯೋಗಿಸುತ್ತಾರಂತೆ!.
ಫೋಟೊ ಹಾಗೂ ವಿಡಿಯೋಗಳು ಹಾಗೂ ಸಂದೇಶಗಳನ್ನು ಕಳುಹಿಸುವುದಕ್ಕಾಗಿ ಸೀಮಿತವಾಗಿದ್ದ ವಾಟ್ಸ್ ಆ್ಯಪ್ ನಂತರದ ದಿನಗಳಲ್ಲಿ ವಾಯ್ಸ್ ಕಾಲ್, ವಿಡಿಯೋ ಕಾಲ್, ಸ್ಟೇಟಸ್ ಅಪ್ ಡೇಟ್ ನಂತಹ ಫೀಚರ್ ಗಳನ್ನು ಆರಂಭಿಸಿತು.
1 ಬಿಲಿಯನ್ ಜನರು ಪ್ರತಿದಿನ ವಾಟ್ಸ್ ಆ್ಯಪನ್ನು ಉಪಯೋಗಿಸುತ್ತಿದ್ದರೆ, ತಿಂಗಳಿಗೆ 1.3 ಬಿಲಿಯನ್ ಆ್ಯಕ್ಟಿವ್ ಬಳಕೆದಾರರಿದ್ದಾರೆ. ಪ್ರತಿದಿನ 55 ಬಿಲಿಯನ್ ಸಂದೇಶಗಳು ಕಳುಹಿಸಲ್ಪಡುತ್ತದೆ ಹಾಗೂ 4.5 ಬಿಲಿಯನ್ ಫೋಟೊಗಳು ಶೇರ್ ಆಗುತ್ತದೆ. ವಾಟ್ಸ್ ಆ್ಯಪನ್ನು 60 ಭಾಷೆಗಳಲ್ಲಿ ಬಳಸಬಹುದಾಗಿದ್ದು, 1 ಬಿಲಿಯನ್ ವಿಡಿಯೋಗಳು ಪ್ರತಿದಿನ ಇದರಲ್ಲಿ ಶೇರ್ ಆಗುತ್ತದೆ ಎಂದು ಸಂಸ್ಥೆ ಹೇಳಿದೆ.