ಆಧುನಿಕ ತತ್ವಶಾಸ್ತ್ರದ ಸರಳ ನಿರೂಪಣೆ
‘ಬೇಕನ್‌ನಿಂದ ಮಾರ್ಕ್ಸ್‌ನವರೆಗೆ’ ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರ ಬರಹವನ್ನು ನಗರಗೆರೆ ರಮೇಶ್ ಕನ್ನಡಕ್ಕಿಳಿಸಿದ್ದಾರೆ. ನವಕರ್ನಾಟಕ ಪ್ರಕಾಶನದ ಲೋಕ ತತ್ವಶಾಸ್ತ್ರ ಪ್ರವೇಶಿಕೆ ಮಾಲಿಕೆಯ 5ನೆ ಕೃತಿಯಿದು. ತತ್ವಶಾಸ್ತ್ರವೆಂದರೆ ಯಾರೋ ವಿದ್ವಾಂಸರು ಮಾತ್ರ ತಮ್ಮ ತಮ್ಮಲ್ಲೇ ಚರ್ಚಿಸಿಕೊಳ್ಳುವ ನಿಗೂಢ ಮತ್ತು ಕಠಿಣವಾದ ಶಿಸ್ತು ಎಂಬ ಐತಿಹ್ಯವನ್ನು ದೂರ ಮಾಡಿ ಜನಸಾಮಾನ್ಯರಿಗೆ ವಿವಿಧ ತತ್ವಶಾಸ್ತ್ರಗಳ ಸಾರವನ್ನು ಸರಳವಾಗಿ ನಿರೂಪಿಸುವ ಉದ್ದೇಶವನ್ನು ಈ ಮಾಲಿಕೆ ಹೊಂದಿದೆ. ಜನರ ತಾತ್ವಿಕ ಅಗತ್ಯಗಳನ್ನು ಕೇಂದ್ರೀಕರಿಸಿ ಪರಿಣತ ಮತ್ತು ವಿಮರ್ಶಾತ್ಮಕ ದೃಷ್ಟಿಯಿಂದ ಯಾವುದು ಮುನ್ನಡೆಗೆ ಸಹಕಾರಿ ಮತ್ತು ಯಾವುದು ಅವಘಡಗಳಿಗೆ ಕಾರಣ ಎಂಬುದನ್ನು ಸ್ವಯಂ ಕಂಡುಕೊಳ್ಳಲು ಮಾಲಿಕೆಯ ಸಂಪುಟಗಳು ಒಂದು ಕೈ ಪಿಡಿಯಾಗಬಹುದು. ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಯುರೋಪಿನ ಪ್ರಮುಖ ತತ್ವಶಾಸ್ತ್ರ ಚಿಂತನೆಗಳನ್ನು ಸಾರವತ್ತಾಗಿ ಮತ್ತು ಸರಳವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಮೊದಲ ಅಧ್ಯಾಯ ಆ ಕಾಲ ಘಟ್ಟದ ಸರಳ ಪರಿಚಯವನ್ನು ಕೊಡುತ್ತದೆ. ಮಧ್ಯಯುಗದ ಕಾಲಘಟ್ಟದಲ್ಲಿ ತತ್ವಶಾಸ್ತ್ರ ಮತ್ತು ಪುರೋಹಿತ ಶಾಹಿಗಳ ನಡುವಿನ ತಿಕ್ಕಾಟವನ್ನು ಈ ಅಧ್ಯಾಯ ಹೇಳುತ್ತದೆ. ಹಲವು ತತ್ವಶಾಸ್ತ್ರಜ್ಞರು ಕ್ರೂರ ಶಿಕ್ಷೆಗಳಿಗೂ ಎದೆಯೊಡ್ಡಬೇಕಾಯಿತು. ಚರ್ಚುಗಳು, ರಾಜರ ನಡುವೆ ತತ್ವಶಾಸ್ತ್ರ ಒಂದು ಬಂಡಾಯವೇ ಆಗಿತ್ತು. ಚರ್ಚುಗಳ ಅಧಿಕಾರ ಕುಂಠಿತಗೊಂಡಂತೆ ತತ್ವಶಾಸ್ತ್ರ ಮತ್ತು ಅದರ ಜೊತೆಗೇ ವಿಜ್ಞಾನ ಮುನ್ನೆಲೆಗೆ ಬರತೊಡಗಿತು. ಆಧುನಿಕ ವಿಜ್ಞಾನದ ಪ್ರವಾದಿಗಳು ಎಂದೇ ಕರೆಯಲ್ಪಡುವ ಫ್ರಾನ್ಸಿಸ್ ಬೇಕನ್, ರೇನೆ ಡೆಕಾರ್ಟ್ 16-17ನೆ ಶತಮಾನದ ಪ್ರಮುಖ ತತ್ವಶಾಸ್ತ್ರಜ್ಞರು. ಈ ಅಧ್ಯಾಯದಲ್ಲಿ ಈ ಕುರಿತಂತೆ ಸಣ್ಣ ಪರಿಚಯವನ್ನು ಲೇಖಕರು ನೀಡುತ್ತಾರೆ. ಹಾಗೆಯೇ ವಿಜ್ಞಾನ ಯುಗದ ತತ್ವಶಾಸ್ತ್ರವೆಂದು ವಿಂಗಡಿಸುತ್ತಾ, ಹೇಗೆ ಅದು ಇತರ ತತ್ವಶಾಸ್ತ್ರಗಳಿಗಿಂತ ಭಿನ್ನ ಎನ್ನುವುದನ್ನು ನಿರೂಪಿಸುತ್ತಾರೆ. ಫ್ರಾನ್ಸಿಸ್ ಬೇಕನ್, ಡೆಕಾರ್ಟ್, ಸ್ಪಿನೋಜಾ, ಲೈಬ್ನಿಜ್, ಲಾಕ್, ಬಾರ್ಕ್ಲಿ, ಹ್ಯೂಮ್, ಕಾಂಟ್, ಹೆಗೆಲ್‌ರಿಂದ ಮಾರ್ಕ್ಸ್‌ನ ವರೆಗೂ ಈ ಕೃತಿಯಲ್ಲಿ ಅವರ ಬದುಕು ಮತ್ತು ಚಿಂತನೆಗಳನ್ನು ಇಲ್ಲಿ ನೀಡಲಾಗಿದೆ. ಹಾಗೆಯೇ ಫ್ರಾನ್ಸಿನ ಮೇಲೆ ಇವರು ಬೀರಿದ ಪರಿಣಾಮಗಳನ್ನೂ ಚರ್ಚಿಸಲಾಗಿದೆ. 140 ಪುಟಗಳ ಈ ಕೃತಿ ಮುಖಬೆಲೆ 100 ರೂಪಾಯಿ.