ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ

Update: 2017-07-29 13:15 GMT

ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ

ಆದರೆ ಆತ್ಮ ಶಾಂತಿಗಲ್ಲ
ಅನ್ನ ಕೊಡುವ ರೈತನ ಕಷ್ಟವೂ ರಾಜಕೀಯ ದಾಳವಿಲ್ಲಿ
ಬಂಡಿ ಹೊಡಿಯುವವನ ಮಾತಿಗಿಲ್ಲ ಬೆಲೆ ಇಲ್ಲಿ
ಸುಪ್ಪತ್ತಿಗೆಯ ಸುಖ ಮಾಡುವವರಿಗೆ ಕೋಟಿ ಲೂಟಿ
ಚಿಲ್ಲರೆ ನೂರು ಸಾವಿರ ಪರಿಹಾರ ಕೇಳುವವರಿಗೆ ಲಾಠಿ

ಕೊಳ್ಳೆಹೊಡೆದು ದೇಶವನು ಕಡೆಯಾಗಿ ಕಂಡು
ಓಡಿ ಹೋದವರಿಗಿಲ್ಲ ಅಂಜಿಕೆ
ಬತ್ತಿದ ಭೂಮಿಯ ತಾಯಿಯೆಂದು ನಂಬಿ

ದಿನದೂಡುವವನಿಗೆ ಗತಿಯಿಲ್ಲ ಗಂಜಿಗೆ ಹುಸಿ ದೇಶಭಕ್ತಿ ನುಡಿವವನಿಗೆ ಹಾರ ತುರಾಯಿಯ ಸನ್ಮಾನ
ದುಡಿದು ದೇಶಕಟ್ಟುವವನಿಗೆ ದಿನವೂ ಅವಮಾನ
ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ
ಆದರೆ ಆತ್ಮ ಶಾಂತಿಗಲ್ಲ

ದೇಶ ನ್ಯಾಯದ ಬಗೆಗೆ ಮಾತಾಡಿದರೆ ಕೊಲ್ಲುವರಿಲ್ಲಿ.
ರೈತರ ಸಮಸ್ಯೆಗೆ ಪರಿಹಾರಗಳು ಗೌಣವಿಲ್ಲಿ
ಹಸಿರು ಬೆಳೆದು ಹಸಿದು ಸತ್ತ ರೈತನ ಚಿತೆಗೆ ಕೊಡಲು ಕಾಸಿಲ್ಲ
ಕೇಸರಿ ದ್ವೇಷ ಧ್ವಜ ಹೊದ್ದು ಸತ್ತರೆ ಲಕ್ಷ ಹಣಕ್ಕೆ ಕೊರತೆಯಿಲ್ಲ
ಅದಕ್ಕೆ ಹೇಳುತ್ತಿರುವುದು
ಹೊದಿಸಬೇಕಿದೆ ಸತ್ತ ರೈತನ ಮೇಲೊಂದು ಕೇಸರಿ ಧ್ವಜ
ಆದರೆ ಆತ್ಮ ಶಾಂತಿಗಲ್ಲ.
 

Writer - ಮಂಜುನಾಥ ಹಲಸಹಳ್ಳಿ

contributor

Editor - ಮಂಜುನಾಥ ಹಲಸಹಳ್ಳಿ

contributor

Similar News