ದಲಿತರ ಪಾಲಿನ ವಿಮೋಚನೆಯ ಹಾದಿ....

Update: 2017-07-31 18:16 GMT

‘‘ನಾನು ಹಿಂದೂ ಆಗಿ ಸಾಯಲಾರೆ...’’ ಇದು ಡಾ. ಬಿ. ಆರ್. ಅಂಬೇಡ್ಕರ್ ಅವರು ಉದ್ಘೋಷವಾಗಿತ್ತು. ಇಂದಿಗೂ ಈ ಉದ್ಘೋಷ ಬೇರೆ ಬೇರೆ ರೀತಿಯಲ್ಲಿ ಸಮಾಜದೊಳಗೆ ಅನುರಣನಗೊಳ್ಳುತ್ತಲೇ ಇದೆ. ಇದೊಂದು ಬಿಡುಗಡೆಯ ಕೂಗಾಗಿತ್ತು. ಸ್ವಾತಂತ್ರದ ಕಲ್ಪನೆ ದಲಿತರ ಪಾಲಿಗೆ ಹೇಗೆ ಇತರರಿಗಿಂತ ಭಿನ್ನವಾಗಿತ್ತು ಎನ್ನುವುದನ್ನು ಅಂಬೇಡ್ಕರರ ಈ ಘೋಷಣೆಯೇ ಹೇಳುತ್ತದೆ. ಬ್ರಿಟಿಷರು ಅಥವಾ ಮೊಘಲರು ಈ ದೇಶಕ್ಕೆ ಕಾಲಿಟ್ಟಿರುವುದರಿಂದ ದಲಿತರು ಗುಲಾಮರಾಗಿ ರುವುದು ಅಲ್ಲ. ಅವರೆಲ್ಲರೂ ಆಗಮಿಸುವುದಕ್ಕೆ ಮೊದಲೇ ದಲಿತರು ತಮ್ಮದೇ ನೆಲದಲ್ಲಿ ಅತ್ಯಂತು ಕೀಳು ಬದುಕನ್ನು ಕಳೆಯುತ್ತಿದ್ದರು. ಆದುದರಿಂದಲೇ, ಬ್ರಿಟಿಷರು ಈ ದೇಶದಿಂದ ತೊರೆಯುವುದು ದಲಿತರು ಗುಲಾಮತನದಿಂದ ಬಿಡುಗಡೆ ಯಾಗುವುದಕ್ಕೆ ಪರಿಹಾರವಾಗಿರಲಿಲ್ಲ. ಆದುದರಿಂದಲೇ, ಬ್ರಿಟಿಷರು ಭಾರತವನ್ನು ತೊರೆ ದರೂ, ದಲಿತರು ಮತ್ತು ಕೆಳಸ್ತರದ ಶೂದ್ರರ ಬದುಕಿನಲ್ಲಿ ವಿಶೇಷ ಬದಲಾವಣೆಯಾಗಲಿಲ್ಲ. ಈ ದೇಶದಲ್ಲಿ ಪ್ರಜಾಸತ್ತೆ ಸ್ಥಾಪನೆಯಾಯಿತಾದರೂ, ದಲಿತರು ಮತ್ತು ಬ್ರಾಹ್ಮಣರು ಅಥವಾ ಮೇಲ್ವರ್ಗದ ಶೂದ್ರರು ಸಮನಾಗುವುದಕ್ಕೆ ಸಾಧ್ಯವಾಗಲಿಲ್ಲ. ಇಂತಹ ಹೊತ್ತಿನಲ್ಲೇ, ‘ಹಿಂದೂ ಆಗಿ ಸಾಯಲಾರೆ’ ಎಂದು ಅಂಬೇಡ್ಕರ್ ಘೋಷಿಸಿದ್ದು. ಅಂದರೆ, ಹಿಂದೂ ಧರ್ಮದಿಂದ ಬಿಡುಗಡೆಯೇ, ದಲಿತರ ಪಾಲಿಗೆ ಸ್ವಾತಂತ್ರದ ಕಡೆಗಿನ ಹೆದ್ದಾರಿ ಎನ್ನುವುದನ್ನು ಅಂಬೇಡ್ಕರ್ ಭಾವಿಸಿದ್ದರು ಮತ್ತು ಹಿಂದೂ ಧರ್ಮದಿಂದ ಬಿಡುಗಡೆಗೊಂಡು, ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.

  ಈ ಘೋಷಣೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸದಾಶಿವ ಮರ್ಜಿ ಅವರು, ದಲಿತರು ಮತ್ತು ಶೋಷಿತರ ವರ್ತಮಾನದ ಸವಾಲುಗಳನ್ನು ಚರ್ಚಿಸಿದ್ದಾರೆ. ಇತ್ತೀಚೆಗೆ ಸಂಘಪರಿವಾರವು ‘ಘರ್ ವಾಪಸಿ’ ಕಾರ್ಯಕ್ರಮವನ್ನು ಆರಂಭಿಸಿದ್ದು, ಅದರ ಹಿಂದಿರುವ ರಾಜಕೀಯವನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಬೇರೆ ಧರ್ಮಗಳಿಗೆ ಹೊಸ ಅಸ್ಮಿತೆ ಅರಸಿ ಹೋಗಿರುವ ಅಸ್ಪಶ್ಯರನ್ನು ಪುನಃ ಹಿಂದೂ ಧರ್ಮಕ್ಕೆ ಮರಳಿ ಕರೆ ತರುವುದು ಘರ್ ವಾಪಸಿ ಕಾರ್ಯಕ್ರಮ. ಅಂದರೆ ಅದೇ ಅಸ್ಪೃಶ್ಯ ಜಾತಿಗೆ ಮರಳುವುದು ಎಂದರ್ಥ. ಗ್ರಾಮದ ಬಾವಿ, ಕೆರೆ-ಕುಂಟೆ, ಸಾರ್ವಜನಿಕ ಸ್ಥಳಗಳಲ್ಲಿ ಭೇದ ಭಾವಕ್ಕೊಳಗಾಗುವುದಕ್ಕಾಗಿಯೇ ಘರ್‌ವಾಪಸಿ ಎಂದಾದರೆ, ಅದರ ಹಿಂದೆ ಒಂದು ಕುತಂತ್ರವಿದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಇದೇ ಸಂದರ್ಭದಲ್ಲಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಐತಿಹಾಸಿಕ ಹಿನ್ನೆಲೆ ಮತ್ತು ಆವಶ್ಯಕತೆಯನ್ನು ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಅಂಬೇಡ್ಕರ್ ಈ ಕುರಿತಂತೆ ತಳೆದಿರುವ ನಿಲುವುಗಳನ್ನು ಕೃತಿಯಲ್ಲಿ ತಿಳಿಸುತ್ತಾ, ಹಿಂದೂ ಧರ್ಮ ಪರಿತ್ಯಜಿಸುವ ಅಂಬೇಡ್ಕರ್ ಐತಿಹಾಸಿಕ ನಿರ್ಣಯದ ಹಿನ್ನೆಲೆ, ಮುನ್ನೆಲೆಗಳ ಬಗ್ಗೆ ಕೃತಿಯಲ್ಲಿ ಬರೆದಿದ್ದಾರೆ. ಬುದ್ಧನೆಡೆಗೆ ಅಂತಿಮ ಪಯಣವೇ ದಲಿತರ ಪಾಲಿಗಿರುವ ವಿಮೋಚನೆಯ ಹಾದಿ ಎನ್ನುವುದನ್ನು ಅವರು ಕೃತಿಯಲ್ಲಿ ಗುರುತಿಸುತ್ತಾರೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 60 ರೂ. ಆಸಕ್ತರು 94802 0286844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News