ಕತ್ತಲ ನಕ್ಷತ್ರಗಳ ಬೆಳಕಿನಲ್ಲಿ.....

Update: 2017-08-01 18:42 GMT

ರೋಹಿತ್ ವೇಮುಲಾ ತೆಗೆದುಕೊಂಡ ಆತ್ಮಹತ್ಯೆ ನಿರ್ಧಾರ ಪ್ರಶ್ನಾರ್ಹವಾದುದು ನಿಜ. ಆದರೆ ಆತನನ್ನು ಆತ್ಮಹತ್ಯೆಯ ಕಡೆಗೆ ದೂಡಿದ ಕಠೋರ ವ್ಯವಸ್ಥೆಯ ವಿರುದ್ಧ ಚರ್ಚೆಗಳು ಶುರುವಾದುದೇ ಆತನ ಆತ್ಮಹತ್ಯೆಯ ಬಳಿಕ. ವೇಮುಲಾರನ್ನು ಬಲಿತೆಗೆದುಕೊಳ್ಳಲು ರಾಜಕೀಯ ಮತ್ತು ಜಾತೀಯ ವ್ಯವಸ್ಥೆ ಎಷ್ಟು ಕಾರಣವೋ, ಆತನ ಹೋರಾಟದ ಜೊತೆ ನಿಲ್ಲದ ಪ್ರಗತಿ ಪರ ಸಂಘಟನೆಗಳೂ ಅಷ್ಟೇ ಕಾರಣ. ಬಹುಶಃ ವೇಮುಲಾ ಆತ್ಮಹತ್ಯೆ, ಇವೆರಡರ ವಿರುದ್ಧವೂ ಆಗಿತ್ತು. ಈ ಕಾರಣದಿಂದಲೇ, ವೇಮುಲಾ ಸಾವು ದೇಶಾದ್ಯಂತ ಯುವ ಸಮೂಹವೊಂದನ್ನು ತಟ್ಟಿ ಎಚ್ಚರಿಸಿತು. ಆತನ ಸಾವಿನ ವಿರುದ್ಧ ಒಂದಾದ ಹೋರಾಟ, ನಿಧಾನಕ್ಕೆ ವಿಸ್ತಾರಗೊಳ್ಳತೊಡಗಿತು. ಬರೀ ಹೈದರಾಬಾದ್ ವಿವಿಗೆ ಅಷ್ಟೇ ಸೀಮಿತವಾಗದೆ, ಅದು ಜೆಎನ್‌ಯುನಲ್ಲಿ ಕನ್ಹಯ್ಯನಂತಹ ಯುವ ನಾಯಕನ ಮೂಲಕ ವೇಮುಲಾ ಮರು ಹುಟ್ಟು ಪಡೆದರು. ಗುಜರಾತ್‌ನಲ್ಲಿ ಜಿಗ್ನೇಶ್ ರೂಪದಲ್ಲಿ ಮಾತನಾಡತೊಡಗಿರು. ಉತ್ತರ ಪ್ರದೇಶ, ಕರ್ನಾಟಕ ಹೀಗೆ...ದೇಶದ ವಿವಿಧೆಡೆಗಳಲ್ಲಿ ವಿವಿಧ ನಾಯಕರ ಮೂಲಕ ವೇಮುಲಾ ಮಾತನಾಡ ತೊಡಗಿದರು. ಆತನ ಮೂಲಕ ಈ ದೇಶದ ಜಾತೀಯತೆ ಮತ್ತೆ ಚರ್ಚೆಗೆ ಒಳಗಾಯಿತು. ‘ಕತ್ತಲ ನಕ್ಷತ್ರ’ ಕೃತಿ ವಿರಸಂ ಸಂಪಾದಿಸಿರುವ ರೋಹಿತ್ ವೇಮುಲಾ ಕುರಿತ ಬರಹಗಳ ಸಂಗ್ರಹವಾಗಿದೆ. ಬಿ. ಸುಜ್ಞಾನ ಮೂರ್ತಿಯವರು ಕನ್ನಡಕ್ಕಿಳಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು 44 ಲೇಖನಗಳಿವೆ. ವಿವಿಧ ಲೇಖಕರು, ಚಿಂತಕರು, ಸಾಹಿತಿಗಳು ಇದನ್ನು ಬರೆದಿದ್ದಾರೆ. ವೇಮುಲಾ ಅವರನ್ನು ನೆಪವಾಗಿಟ್ಟುಕೊಂಡು ಈ ದೇಶದ ಜಾತೀಯತೆ, ಅಸ್ಪಶ್ಯತೆಗಳನ್ನು ಚರ್ಚಿಸಿದ್ದಾರೆ. ಹೇಗೆ ವೈಚಾರಿಕತೆಯನ್ನು ಅಸಹಾಯಕವಾಗಿಸಿ ಆತ್ಮಹತ್ಯೆಗೆ ದೂಡಲಾಗುತ್ತಿದೆ ಎನ್ನುವ ಸತ್ಯವನ್ನು ಲೇಖಕರು ತೆರೆದಿಟ್ಟಿದ್ದಾರೆ. ರೋಹಿತ್ ಆತ್ಮಹತ್ಯೆಯನ್ನು ವಿವಿಧ ನೆಲೆಗಳಲ್ಲಿ ಇಲ್ಲಿ ಚರ್ಚಿಸಲಾಗಿದೆ. ಆಲೋಚನೆಗಳ ಮೇಲೆ ಭೌತಿಕ ದಾಳಿ ಎಂದು ಆತ್ಮಹತ್ಯೆಯನ್ನು ಇಲ್ಲಿ ಕರೆಯಲಾಗಿದೆ. ಮತ್ತೊಂದು ಲೇಖನದಲ್ಲಿ ಸೆಂಟ್ರಲ್ ಯುನಿವರ್ಸಿಟಿಯ ಆತ್ಮಹತ್ಯೆಗಳ ಸರಣಿಗಳನ್ನು ಚರ್ಚಿಸಲಾಗಿದೆ. ರೋಹಿತ್ ಆತ್ಮಹತ್ಯೆಯ ಮೂರು ಹಂತಗಳನ್ನು ಗುರುತಿಸಿ ಡಿ. ಉದಯಭಾನು ಬರೆದಿದ್ದಾರೆ. ರೋಹಿತ್ ಆತ್ಮಹತ್ಯೆಯ ಹಿಂದಿರುವ ಮನು ವಾರಸುದಾರರ ಬಗ್ಗೆ ಕೆ. ಜಗನ್ ಬೆಳಕು ಚೆಲ್ಲಿದ್ದಾರೆ. ಕ್ಯಾಂಪಸ್ಸಿನೊಳಗಿನ ಜಾತಿ ರಾಜಕೀಯವನ್ನು ಕೂರ್ಮನಾಥ್ ಅವರು ವಿವರಿಸಿದ್ದಾರೆ. ವಿಶ್ವವಿದ್ಯಾನಿಲಯದೊಳಗಿನ ರಾಜಕೀಯಗಳ ಕುರಿತಂತೆ ಕಾಶೀಂ ಅವರು ಬರೆದಿದ್ದಾರೆ. ದೇಶದ್ರೋಹಿ ಪರವಾಗಿ ಲೇಖನದಲ್ಲಿ ಪಿ. ವರಲಕ್ಷ್ಮೀ ಹೇಗೆ ದೇಶದ್ರೋಹಿ ಪದವನ್ನು ಹೋರಾಟಗಾರರ ವಿರುದ್ಧ ಬಳಸಲು ವ್ಯವಸ್ಥೆ ಸಂಚು ಹೂಡಿದೆ ಎನ್ನುವುದನ್ನು ತಿಳಿಸಿದ್ದಾರೆ. ‘ಮುಝಪ್ಫರ್ ನಗರ್ ಬಾಕೀ ಹೈ’ ರೋಹಿತ್ ವೇಮುಲಾ ಸಾವಿನ ಹಿಂದಿರುವ ಕೋಮು ಶಕ್ತಿಗಳನ್ನು ವರವರರಾವ್‌ಲೇಖನ ಬಯಲಿಗೆಳೆಯುತ್ತದೆ. ಆತ್ಮಹತ್ಯಾಲಯವಾಗುತ್ತಿರುವ ವಿಶ್ವವಿದ್ಯಾನಿಲಯಗಳ ಕುರಿತಂತೆಯೂ ಅವರು ಮಹತ್ವದ ಲೇಖನವನ್ನು ಬರೆದಿದ್ದಾರೆ. ರೋಹಿತ್‌ನ ಜಾತಿಯನ್ನು ಗುರುತಿಸುವ ಸಂದರ್ಭದಲ್ಲಿ ನಡೆದಿರುವ ರಾಜಕೀಯವನ್ನು ವಾಣಿ ಅವರು ಗುರುತಿಸಿದ್ದಾರೆ. ಅಂತಿಮವಾಗಿ, ರೋಹಿತ್‌ವೇಮುಲಾರಂತಹ ‘ದೇಶದ್ರೋಹಿ’ಗಳು ಈ ದೇಶದಲ್ಲಿ ಹೆಚ್ಚಲಿ ಎಂದು ಕೃತಿ ಆಗ್ರಹಿಸುತ್ತದೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 9480286844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News