ಬಾಲ್ಯದಲ್ಲಿ ಬೇರ್ಪಟ್ಟಿದ್ದ ಒಡಹುಟ್ಟಿದವರು ಮತ್ತೆ ಸೇರಿದಾಗ...

Update: 2017-08-01 18:44 GMT

ಶಮೀರಾ ಶಾರ್ಜಾ ವಿಮಾನ ನಿಲ್ದಾಣದಲ್ಲಿ ತನ್ನ ತಮ್ಮ ಹನಿ ನಾದೆರ್ ಮೆರ್ಗಾನಿ ಅಲಿ(21)ಯನ್ನು ಭೇಟಿಯಾದಾಗ ಕಣ್ಣೀರ ಕಡಲಾಗಿದ್ದಳು. 17 ವರ್ಷಗಳ ಹಿಂದೆ ತನ್ನಿಂದ ಪ್ರತ್ಯೇಕಗೊಂಡಿದ್ದ ತಮ್ಮ ಕಣ್ಣೆದುರಿಗೆ ಪ್ರತ್ಯಕ್ಷಗೊಂಡಾಗ ಆಕೆಯ ಒಳಗಣ್ಣುಗಳೆದುರು ನಾಲ್ಕು ವರ್ಷ ಪ್ರಾಯದ ಅದೇ ಪುಟ್ಟ ಹನಿಯಿದ್ದ. ಈಗ ತನ್ನ ಮುಂದೆ ನಿಂತಿದ್ದ ಯುವಕನನ್ನು ಕಂಡಾಗ ಇದು ನಿಜವೋ ಅಥವಾ ಕನಸೋ ಎನ್ನುವುದು ಅವಳಿಗೆ ಅರ್ಥವಾಗಿರಲಿಲ್ಲ. ಹೌದು, ಅದು ಥೇಟ್ ಬಾಲಿವುಡ್ ಚಿತ್ರದ ದೃಶ್ಯದಂತಿತ್ತು.

ಕೇರಳದ ಕೊಝಿಕ್ಕೋಡ್ ಮೂಲದ ಶಮೀರಾ ಯುಎಇಯ ಕರಾಮಾದಲ್ಲಿಯ ಸ್ಟೇಷನರಿ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದಾಳೆ. ಆಕೆಯ ತಂದೆ ಸುಡಾನ್ ನಿವಾಸಿಯಾಗಿರುವುದರಿಂದ ಅಲ್ಲಿಯ ಪಾಸ್‌ಪೋರ್ಟ್ ಹೊಂದಿದ್ದಾನೆ. ‘‘ನಮ್ಮ ತಂದೆ ಓದಲೆಂದು ಕೇರಳಕ್ಕೆ ಬಂದವರು ನಮ್ಮ ತಾಯಿ ನೂರ್‌ಜಹಾನ್‌ಳನ್ನು ಪ್ರೀತಿಸಿ ಮದುವೆಯಾಗಿದ್ದರು. ತಂದೆ-ತಾಯಿಗೆ ನಾವು ಮೂವರು ಪುತ್ರಿಯರ ಬಳಿಕ ಹನಿ ಜನಿಸಿದ್ದ. ಆತನಿಗೆ ನಾಲ್ಕು ವರ್ಷವಾಗಿದ್ದಾಗ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಮ್ಮ ತಂದೆ ನಮ್ಮನ್ನೆಲ್ಲ ಕೇರಳದಲ್ಲಿಯೇ ಬಿಟ್ಟು ಹನಿಯನ್ನು ಕರೆದುಕೊಂಡು ಸುಡಾನಿಗೆ ಮರಳಿದ್ದರು. ಅವರನ್ನು ಸಂಪರ್ಕಿಸಲು ನಾವು ಬಹಳಷ್ಟು ಪ್ರಯತ್ನಿಸಿದ್ದೆವಾದರೂ ಸಾಧ್ಯವಾಗಿರಲಿಲ್ಲ. ನಮಗೆ ಶಿಕ್ಷಣ ಕೊಡಿಸಲು ನಮ್ಮ ತಾಯಿ ತುಂಬ ಕಷ್ಟಪಟ್ಟಿದ್ದಾರೆ. ಈ ಎಲ್ಲ ವರ್ಷಗಳಲ್ಲಿ ನಮ್ಮ ಸೋದರನನ್ನು ಕಳೆದುಕೊಂಡ ನೋವು ನಮ್ಮನ್ನೆಲ್ಲ ಕಾಡುತ್ತಿತ್ತು. ಇಂದು ಆತ ನನ್ನೊಂದಿಗಿದ್ದಾನೆ, ನನ್ನ ಆನಂದವನ್ನು ಬಣ್ಣಿಸಲು ನನ್ನ ಬಳಿ ಶಬ್ದಗಳೇ ಇಲ್ಲ’’ ಎಂದು ಸಂತಸಭರಿತ ಅಳುವಿನ ನಡುವೆಯೇ ಶಮೀರಾ ಉಸುರಿದಳು.

ಹನಿಯ ಪಾಲಿಗೆ ಆತ ತನ್ನ ತಂದೆಯೊಂದಿಗೆ ಕಳೆದಿದ್ದ ಆ 17 ವರ್ಷ ದುಸ್ವಪ್ನವಾಗಿತ್ತು. ಸುಡಾನ್‌ಗೆ ಮರಳಿದ ತಕ್ಷಣ ತಂದೆ ಇನ್ನೊಂದು ಮದುವೆ ಮಾಡಿಕೊಂಡಿದ್ದ. ಆತ ಹಾಗೂ ಮಲತಾಯಿ ಸೇರಿಕೊಂಡು ಹನಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರು. ತನ್ನ ತಾಯಿ ಮತ್ತು ಸೋದರಿಯರನ್ನು ಭೇಟಿಯಾಗಲು ಹನಿ ಸದಾ ಹಂಬಲಿಸುತ್ತಿದ್ದ. ಆದರೆ ತಂದೆ ಅದಕ್ಕೆ ಅವಕಾಶವನ್ನೇ ನೀಡಿರಲಿಲ್ಲ.

ಕೇರಳದಲ್ಲಿಯ ತನ್ನ ಬಾಲ್ಯದ ದಿನಗಳನ್ನು ಹನಿ ಸಂಪೂರ್ಣವಾಗಿ ಮರೆತಿರಲಿಲ್ಲ. ಅಲ್ಲಿಂದ ಕೊನೆಯ ಪ್ರಯಾಣ ಆತನಿಗೆ ಇನ್ನೂ ನೆನಪಿದೆ. ‘‘ನಡಿ,ನಾವು ಸುಡಾನಿಗೆ ಹೋಗೋಣ’’ ಎಂದು ತಂದೆ ಹೇಳಿದ್ದು, ತಾವು ಕೇರಳದಲ್ಲಿ ರೈಲೊಂದನ್ನು ಹತ್ತಿದ್ದು ಇವೆಲ್ಲವೂ ಆತನಿಗೆ ನೆನಪಿದೆ. ಸುಡಾನಿನಲ್ಲಿದ್ದಷ್ಟು ಸಮಯವೂ ‘‘ನಿನ್ನ ತಾಯಿ ಒಳ್ಳೆಯವಳಲ್ಲ’’ ಎಂದು ತಂದೆ ಹೇಳುತ್ತಿದ್ದ. ಆದರೆ ಹನಿ ಮಾತ್ರ ಅದನ್ನೆಂದೂ ನಂಬಿರಲಿಲ್ಲ. ಕೊನೆಗೂ ಸಾಮಾಜಿಕ ಮಾಧ್ಯಮದ ಮೂಲಕ ಅಕ್ಕ-ತಮ್ಮ ಒಂದಾಗಿದ್ದಾರೆ. ಅದೊಂದು ದಿನ ತನ್ನ ಜನನ ಪ್ರಮಾಣಪತ್ರ ಮತ್ತು ತಾಯಿಯ ಫೋಟೊ ಹನಿಯ ಕೈಗೆ ಹತ್ತಿತ್ತು. ಸುಡಾನಿನಲ್ಲಿರುವ ಫಾರೂಕ್ ಎಂಬ ಮಲಯಾಳಿಯ ನೆರವಿನಿಂದ ಆತ ತನ್ನ ಎಲ್ಲ ದಾಖಲೆಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ.

ಹನಿ ತನ್ನ ತಾಯಿಗಾಗಿ ಹುಡುಕಾಡುತ್ತಿರುವ ಸುದ್ದಿ ಅಬುಧಾಬಿಯಲ್ಲಿರುವ ಸಂಬಂಧಿ ರಹೀಂ ಮೂಲಕ ಶಮೀರಾಳ ಕುಟುಂಬಕ್ಕೆ ಗೊತ್ತಾಗಿತ್ತು. ಶಮೀರಾ ಶೀಘ್ರವೇ ಹನಿಯನ್ನು ಸಂಪರ್ಕಿಸಲು ಯಶಸ್ವಿಯಾಗಿದ್ದಳಾದರೂ ತಾವಿಬ್ಬರೂ ಪರಸ್ಪರ ಭೇಟಿಯಾಗುವುದು ಹೇಗೆ ಎನ್ನುವುದು ಅವರಿಗೆ ಗೊತ್ತಾಗಿರಲಿಲ್ಲ.

ಹನಿ ತನ್ನ ತಾಯಿ ಮತ್ತು ಸೋದರಿಯರನ್ನು ಭೇಟಿಯಾಗಲು ತಂದೆ ಬಿಡುವುದಿಲ್ಲ ಎನ್ನುವುದು ಶಮೀರಾಗೆ ಗೊತ್ತಿತ್ತು. ಹೀಗಾಗಿ ಆತನಿಗಾಗಿ ದುಬೈಗೆ ವಿಸಿಟಿಂಗ್ ವೀಸಾ ಪಡೆಯಲು ಯಶಸ್ವಿಯಾಗಿದ್ದ ಆಕೆ ವಿಮಾನದ ಟಕೆಟ್‌ನ್ನೂ ವ್ಯವಸ್ಥೆ ಮಾಡಿದ್ದಳು. ಹನಿಯನ್ನು ವಾಪಸ್ ಪಡೆಯಲು ದುಡ್ಡಿಗಾಗಿ ಆಕೆಯ ತಾಯಿ ಮತ್ತು ಸೋದರಿಯರು ತಮ್ಮ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರು.

ನೂರ್‌ಜಹಾನ್‌ಳನ್ನು ಹನಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಪರಸ್ಪರ ‘ಹಲೋ’ ಹೇಳಿದ ಬಳಿಕ ಇಬ್ಬರೂ ಬಿಕ್ಕಿಬಿಕ್ಕಿ ಅಳತೊಡಗಿದ್ದರು. ಹನಿಗೆ ಸುಡಾನಿ ಭಾಷೆ ಮಾತ್ರ ಗೊತ್ತಿದ್ದರೆ ತಾಯಿಗೆ ಮಲಯಾಳಂ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ತಾಯಿಯ ಮಾತುಗಳು ಹನಿಗೆ ಅರ್ಥವಾಗಿರದಿದ್ದರೂ ಅವರ ಹೃದಯಗಳು ಪರಸ್ಪರ ಮಾತನಾಡಿ ಕೊಂಡಿದ್ದವು.

ಹನಿ ಸುಡಾನಿ ಪ್ರಜೆಯಾಗಿರುವುದರಿಂದ ಆತನನ್ನು ಭಾರತಕ್ಕೆ ಕರೆದೊಯ್ಯುವುದು ಸುಲಭವಲ್ಲ. ಹೀಗಾಗಿ ಶಮೀರಾ ಆತನಿಗೆ ರೆಸಿಡೆನ್ಸ್ ವೀಸಾ ಪಡೆಯಲು ದುಬೈನಲ್ಲಿ ಅವನಿಗೆ ಸೂಕ್ತವಾದ ಕೆಲಸವೊಂದನ್ನು ಹುಡುಕುತ್ತಿದ್ದಾಳೆ. ಅಷ್ಟಾದರೆ ಹನಿ ತನ್ನ ತಾಯಿ ಮತ್ತು ಸೋದರಿಯರನ್ನು ಸೇರಲು ಭಾರತಕ್ಕೆ ತೆರಳಬಹುದಾಗಿದೆ. ಹನಿಗೆ ಭಾರತೀಯ ಪಾಸ್‌ಪೋರ್ಟ್ ಪಡೆಯಲು ಆವಶ್ಯಕತೆಗಳೇನು ಎಂದು ತಿಳಿದುಕೊಳ್ಳಲು ಶಮೀರಾ ಈಗಾಗಲೇ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾಳೆ.

‘‘ನಾವು ಇಷ್ಟೆಲ್ಲ ವರ್ಷ ಕಳೆದುಕೊಂಡಿದ್ದ ಸಂತಸವನ್ನು ಮರಳಿ ಪಡೆಯಲು ನಾನು ಪ್ರಯತ್ನಿಸುತ್ತಿದ್ದೇನೆ. ನನ್ನ ಪುಟ್ಟ ತಮ್ಮನನ್ನು ಸಾಧ್ಯವಿದ್ದಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಆತ ಬಯಸಿದ ಆಹಾರ, ಬಟ್ಟೆ ಇತ್ಯಾದಿ ಎಲ್ಲನ್ನೂ ಒದಗಿಸಲು ನಾವು ಬಯಸಿದ್ದೇವೆ’’ ಎಂದು ಶಮೀರಾ ಹೇಳಿದಳು.

Writer - ಎನ್.ಕೆ.

contributor

Editor - ಎನ್.ಕೆ.

contributor

Similar News

ಜಗದಗಲ
ಜಗ ದಗಲ