ಸ್ತ್ರೀ ಪ್ರಧಾನ ಹಿಂದಿ ಕತೆಗಳು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹಮ್ಮಿಕೊಂಡ ಹಿಂದಿ ಲೇಖಕಿಯರ ಸಣ್ಣ ಕತೆಗಳ ಅನುವಾದ ಕಮ್ಮಟದಲ್ಲಿ ಹೊರಬಂದ ಅನುವಾದಿತ ಕತೆಗಳ ಸಂಕಲನವೇ ‘ಯುಗದ ಹೆಜ್ಜೆ’. ಡಾ. ಎಂ. ಎಸ್. ವೀರಘಂಟಿ ಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಸುಭದ್ರಾ ಕುಮಾರಿ ಚೌಹಾಣ, ಶಿವಾನಿ, ಕೃಷ್ಣಾ ಸೋಬತಿ, ಮನ್ನೂ ಭಂಡಾರಿ, ಮಾಲತಿ ಜೋಶಿ, ಮಂಜುಲ್ ಭಗತ್, ಮೃದುಲಾ ಗರ್ಗ್, ನಾಶಿರಾ ಶರ್ಮಾ, ಮಮತಾ ಕಾಲಿಯಾ, ಸೂರ್ಯಬಾಲಾ, ಚಿತ್ರಾ ಮುದ್ಗಲ್ ಮೊದಲಾದ ಪ್ರಮುಖ ಕತೆಗಾರ್ತಿಯರ ಕತೆಗಳನ್ನು ಕನ್ನಡಕ್ಕಿಳಿಸಿದ್ದಾರೆ. ಹಿರಿ-ಕಿರಿಯರ ಕತೆಗಳು ಇಲ್ಲಿ ಸಮಾಗಮಗೊಂಡಿವೆ. ಇಲ್ಲಿರುವ ಕತೆಗಾರರಲ್ಲಿ ವಿಭಿನ್ನ ವಯೋಮಾನದ ಲೇಖಕಿಯರಿರುವುದರಿಂದ ಅವರ ಕಥೆಗಳ ಸ್ವರೂಪ, ಅದರ ಹಿಂದಿರುವ ಸೈದ್ಧಾಂತಿಕ ನಿಲುವುಗಳು, ನಿರೂಪಣೆಯ ಶೈಲಿ, ಆಯ್ದುಕೊಳ್ಳುವ ವಸ್ತುವಿನ ಸಂದರ್ಭ, ಸನ್ನಿವೇಶಗಳ ಮೂಲಕ ಅವರ ದೃಷ್ಟಿ ಧೋರಣೆಗಳು ಇತ್ಯಾದಿಗಳನ್ನು ಏಕಕಾಲದಲ್ಲಿ ಗ್ರಹಿಸಲು ಓದುಗರಿಗೆ ಅನುಕೂಲವಾಗುತ್ತದೆ. ಇಲ್ಲಿರುವ ಎಲ್ಲ ಕತೆಗಾರರು ಮಹಿಳೆಯರೇ ಆಗಿರುವುದರಿಂದ, ಹೆಚ್ಚಿನವುಗಳು ಸ್ತ್ರೀ ಕೇಂದ್ರಿತವಾಗಿ ಇವೆ. ಹಿರಿಯ ಲೇಖಕಿ ಸುಭದ್ರಾ ಕುಮಾರಿ ಅವರ ಕತೆ ‘ಗೌರಿ’ ಹೆಣ್ಣಿನ ಬದುಕಿನಲ್ಲಿ ವಿವಾಹ ವಹಿಸುವ ಪಾತ್ರ, ಅದಕ್ಕಾಗಿ ಅವಳು ಎದುರಿಸಬೇಕಾದ ಸಂಘರ್ಷಗಳನ್ನು ಹೇಳುತ್ತದೆ. ಶಿವಾನಿಯವರ ‘ಭೂಮಿಸುತೆ’ ಕತೆ ಬ್ರಿಗೇಡಿಯರ್ ಬಾಲಕೃಷ್ಣರಾವ್ ದಂಪತಿಗೆ ದೊರೆತ ಅನಾಥ ಹೆಣ್ಣು ಮಗುವಿನ ಸುತ್ತ ಸುತ್ತಿಕೊಂಡಿದೆ. ಕೃಷ್ಣಾ ಅವರ ‘ಬದಲಾದ ನಾಣ್ಯ’ ಭಾರತ ಇಬ್ಭಾಗವಾದಾಗ ಎದುರಾದ ರಾಜಕೀಯ ಸ್ಥಿತ್ಯಂತರಗಳಿಗೆ ಸಂಬಂಧಿಸಿದ್ದು. ಇದು ಹೆಣ್ಣು ಮತ್ತು ಭೂಮಿಯನ್ನು ಸಮೀಕರಿಸಿ ಹೆಣೆದಿರುವ ಕತೆ. ಮನ್ನೂ ಭಂಡಾರಿಯವರ ‘ನಶೆ’ ಕತೆಯಲ್ಲಿ ಕುಡುಕ ಗಂಡಂದಿರ ದೌರ್ಜನ್ಯ ದಬ್ಬಾಳಿಕೆಯಡಿ ಹೆಣ್ಣು ನಲುಗುವ ಚಿತ್ರಣವಿದೆ. ಸಾಂಪ್ರಾದಾಯಿಕ ಹೆಣ್ಣಿನ ಸಹನೆ, ತಾಳ್ಮೆ ಮತ್ತು ಗಂಡನ ಕುರಿತಂತೆ ಅವಳ ಕ್ಷಮೆಯನ್ನು ಈ ಕತೆ ಎತ್ತಿ ಹಿಡಿಯುತ್ತದೆ. ಮಾಲತಿ ಜೋಶಿಯವರ ‘ಪ್ರಶ್ನೆಗಳ ಸುಳಿಯಲ್ಲಿ’ ಕತೆ ತನ್ನ ಹಳೆಯ ಪ್ರಿಯಕರನನ್ನು ಹುಡುಕಿಕೊಂಡು ಹೋಗುವ ಹೆಣ್ಣೊಬ್ಬಳ ಕತೆ. ಆದರೆ ವಾಸ್ತವ, ಕಲ್ಪನೆಗಿಂತ ಭೀಕರವಾದುದು ಎನ್ನುವುದನ್ನು ಆಕೆ ಅರ್ಥ ಮಾಡಿಕೊಳ್ಳುತ್ತಾಳೆ. ಮಂಜುಲ್ ಭಗತ್ ಅವರ ‘ಕಸದ ರಾಶಿಯಲ್ಲೊಂದು ಮನೆ’ ವ್ಯವಸ್ಥೆಯ ವಿರುದ್ಧ ಮುದುಕನೊಬ್ಬನ ಪ್ರತಿಭಟನೆಯನ್ನು ಹೇಳುತ್ತದೆ. ಮೃದುಲಾ ಗರ್ಗ್ ಅವರ ‘ಮೂರು ಕಿಲೋ ಕೂಸು’ ಕತೆಯಲ್ಲಿ, ಸ್ತ್ರೀಯರ ಬಗೆಗಿನ ಸಾಮಾಜಿಕ ಧೋರಣೆಗಳನ್ನು ಕೌಟುಂಬಿಕ ನೆಲೆಯಲ್ಲಿಯೇ ನಿರೂಪಿಸುತ್ತಾರೆ. ವ್ಯಂಗ್ಯ ಈ ಕತೆಯ ಪ್ರಧಾನ ಗುಣ. ಇಲ್ಲಿರುವ ಬಹುತೇಕ ಕತೆಗಳು, ಭಾರತದ ಹೆಣ್ಣು ಸಾಗಿ ಬಂದ ಹಾದಿಯನ್ನು ತೆರೆದಿಡುತ್ತದೆ. ಮಹಿಳಾ ಸಾಹಿತ್ಯದ ಬೆಳವಣಿಗೆಯ ಜೊತೆಗೆ ಸ್ತ್ರೀವಾದ ಹೇಗೆ ಹಿಂದಿ ಸಾಹಿತ್ಯದಲ್ಲಿ ಕತೆಗಾರರಿಂದ ಕತೆಗಾರರಿಗೆ ಭಿನ್ನವಾಗಿ ವಿಸ್ತಾರಗೊಳ್ಳುತ್ತಾ ಹೋಯಿತು ಎನ್ನುವುದನ್ನು ತಿಳಿಸಿಕೊಡುತ್ತದೆ.ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂ.