'ಅಯೋಗ್ಯ'ನ ಅಸಲಿಯತ್ತು!

Update: 2017-08-05 14:33 GMT

ಮೊದಲ ನೋಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರನ್ನೇ ಹೋಲುವ ಮಹೇಶ್ ಹೆಚ್ಚು ಕಡಿಮೆ ಅದೇ ದಾರಿಯಲ್ಲೇ ಬಂದವರು. ದಶಕದಿಂದ ಯೋಗರಾಜ್ ಭಟ್ಟರ ಗರಡಿಯಲ್ಲಿರುವ ಇವರು ಇದೀಗ ನಿರ್ದೇಶನ ಕ್ಷೇತ್ರಕ್ಕೆ ಧುಮುಕುವ ಮೂಲಕ‌,  'ನಾಯಕನಾಗುತ್ತಾರೆಂದು' ನಿರೀಕ್ಷಿಸಿದವರಿಗೆ ಅಚ್ಚರಿ ನೀಡಿದ್ದಾರೆ.

ಅಭಿನಯ ಚತುರ ನೀನಾಸಂ ಸತೀಶ್ ನಾಯಕರಾಗಿರುವ ಚಿತ್ರಕ್ಕೆ ಇಂಥದೊಂದು ಹೆಸರು ಅಗತ್ಯವೇನಿದೆ? ಉಪಶೀರ್ಷಿಕೆಯನ್ನೂ ಸೇರಿಸಿದಾಗ 'ಅಯೋಗ್ಯ ಗ್ರಾಮಪಂಚಾಯತ್ ಸದಸ್ಯ' ಎಂದು ಓದುವಂತಿದ್ದು, ಇದು ಬೇಕೆಂದೇ ವಿವಾದವನ್ನು ಸೃಷ್ಟಿಸುವ ಪ್ರಯತ್ನವಲ್ಲವೇ ಎಂಬ ಪ್ರಶ್ನೆ ಮಾಧ್ಯಮದ ಮಂದಿಯಿಂದ ಎದುರಾಯಿತು. ಅದಕ್ಕೆ ಸಮರ್ಥವಾದ ಉತ್ತರ ನೀಡುವ ಪ್ರಯತ್ನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು ನವ ನಿರ್ದೇಶಕ ಮಹೇಶ್.

ಇದು ಭಟ್ಟರ ಬೈಗುಳ!

ಮಹೇಶ್ ಮಾತನಾಡುತ್ತಾ, "ಯೋಗರಾಜ ಭಟ್ಟರು ಯಾವಾಗಲೂ ನನ್ನನ್ನು 'ಅಯೋಗ್ಯ..' , 'ಅಯೋಗ್ಯನ್ನು ತಂದು..' ಎಂದು ಬೈಯ್ಯುತ್ತಿದ್ದರು. ಅದು ಕೋಪವಿರಲಿ, ಪ್ರೀತಿಯಿರಲಿ ಈ ಮಾತು ಸದಾ ಹೇಳುತ್ತಿದ್ದರು. ಕೊನೆಗೆ ಅದನ್ನೇ ನನ್ನ ಮೊದಲ ಚಿತ್ರದ ಶೀರ್ಷಿಕೆಯಾಗಿಯೂ ಇರಿಸಿದ್ದೇನೆ. ಅದರ ಹೊರತು ಯಾವುದೇ ಗ್ರಾಮ ಪಂಚಾಯತಿ ಸದಸ್ಯರನ್ನು ಅವಮಾನಿಸುವ ಪ್ರಯತ್ನ ಇದಲ್ಲ. ಟಾಯ್ಲೆಟ್ ಸಮಸ್ಯೆಯ ಹಗರಣದ  ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿದೆ. ಮಾತ್ರವಲ್ಲ, ಚಿತ್ರದ ನಾಯಕನೇ ಶೀರ್ಷಿಕೆಯ ಪಾತ್ರ ನಿರ್ವಹಿಸುತ್ತಿರುವ ಕಾರಣ, ಅದು ಎಷ್ಟೇ ನೆಗೆಟಿವ್ ಇದ್ದರೂ ಕೊನೆಗೆ ಪಾಸಿಟಿವ್ ನಲ್ಲೇ ಸಮಾಪ್ತಿಯಾಗುವ ಭರವಸೆ ಇರಿಸಿಕೊಳ್ಳಬಹುದು" ಎಂದರು.

'ನಿಜಕ್ಕೂ ನಾನು ಅಯೋಗ್ಯನೇ' ಎಂದ ನೀನಾಸಂ ಸತೀಶ್!

ಪ್ರತಿಯೊಬ್ಬನೊಳಗೂ ಒಬ್ಬ ಅಯೋಗ್ಯ ಇರ್ತಾನೆ. ಹಾಗಾಗಿ ಇದು ನಾನು ಇಷ್ಟಪಡುವ ಶೀರ್ಷಿಕೆ. ನಾನು ಕೂಡ ತುಂಬಾ ಒಳ್ಳೆಯವನೇನಲ್ಲ. ಅದೇ ರೀತಿ ಚಿತ್ರದ ಪಾತ್ರವೂ ಕೂಡ. ಎಲ್ಲಕ್ಕಿಂತ ನನಗೆ ಚಿತ್ರದ ಕತೆ ಮುಖ್ಯವಾಗುತ್ತದೆ. ಅದು ನನಗಷ್ಟೇ ಅಲ್ಲ, ಚಿತ್ರದ ಪ್ರಧಾನ ಪಾತ್ರಧಾರಿಗಳಿಗೆಲ್ಲ ಇಷ್ಟವಾಗಿದೆ.

ನಿರ್ದೇಶಕನ ಯೋಗ್ಯತೆ ಬಗ್ಗೆ

ನವ ನಿರ್ದೇಶಕ ಮಹೇಶ್ ತಮಗೆ ಇದುವರೆಗೆ ಗುರು ಸಮಾನರಾಗಿ ಕಲಿಕೆಯ ಅವಕಾಶ ನೀಡಿದ ಎಸ್ ನಾರಾಯಣ್, ಡಿ. ರಾಜೇಂದ್ರಬಾಬು, ಚಿ. ಗುರುದತ್ ಮತ್ತು ಯೋಗರಾಜ್ ಭಟ್ ರನ್ನು ಸದಾ ಸ್ಮರಿಸುವುದಾಗಿ ಹೇಳಿದರು. ಆಗ ಮಾತನಾಡಿದ ನೀನಾಸಂ ಸತೀಶ್ " ಮಹೇಶ್ ನಾನು ಕಂಡ ಹುಡುಗ. ಆತನನ್ನು ಮೇಲ್ನೋಟದಿಂದ ಗಮನಿಸಿ ಗುಣಮಟ್ಟವನ್ನು ಅಳೆಯಬಾರದು. ಯಾಕೆಂದರೆ ಭಾಷೆಯ ಬಗ್ಗೆ ಮಾತನಾಡುವುದಾದರೆ ನಾನೇ‌ನೂ ಇಂಗ್ಲಿಷ್ ಕಲಿತವನಲ್ಲ, ಅದೇ ರೀತಿ ಕನ್ನಡದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾಗಿ ಗುರುತಿಸಲ್ಪಡುವ ಪ್ರೇಮ್ ಅಕಾರ ,ಶಕಾರ ಸರಿಯಾಗಿ ಉಚ್ಛರಿಸಲಾರರು. ಆದರೆ ಅವರ ಪ್ರತಿಭೆ ಚಿತ್ರದ ಮೂಲಕ ಹೊರಹೊಮ್ಮಿದೆ. ಅದೇ ರೀತಿ ಮಹೇಶನ ಯೋಗ್ಯತೆಯೂ ದೊಡ್ಡ ಮಟ್ಟದಲ್ಲಿದೆ ಎಂಬ ಭರವಸೆಯ ಮಾತುಗಳನ್ನು ಸತೀಶ್ ನುಡಿದರು.

ತಮ್ಮ ಮೊದಲ ಚಿತ್ರಕ್ಕೆ ನಾಯಕನಾಗಲು ಒಪ್ಪಿದ ಸತೀಶ್ ಈ ಚಿತ್ರಕ್ಕೆ ಹೃದಯವಾದರೆ, ಚಿತ್ರದ ಇಬ್ಬರು ನಿರ್ಮಾಪಕರಾದ ಸುರೇಶ್ ಮತ್ತು ಎಸ್ ಕೆ ಮೋಹನ್ ಎರಡು ಕಣ್ಣುಗಳಂತೆ ಬಂದು ದಾರಿ ತೋರಿದ್ದಾರೆಂದು ಮಹೇಶ್ ಸ್ಮರಿಸಿದರು. ತಾನು ನಿರ್ದೇಶಿಸುತ್ತಿರುವ ವಿಚಾರ ತಿಳಿದು ಅರ್ಧ
ರೆಮ್ಯುನರೇಶನ್ ಗೆ 5ಹಾಡು ನೀಡಿದ ವಿ ಹರಿಕೃಷ್ಣ, ಛಾಯಾಗ್ರಹಕ ಪ್ರೀತಮ್ ತೆಗ್ಗಿನ ಮನೆ, 
ಸಂಕಲನ ‌ಸುರೇಶ್ ಮತ್ತು   ಹಾಡುಗಳನ್ನು ರಚಿಸಿರುವ ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಗೆ ಕೃತಜ್ಞತೆ ಹೇಳಲು ಮಹೇಶ್ ಮರೆಯಲಿಲ್ಲ. ರವಿಶಂಕರ್, ಚಿಕ್ಕಣ್ಣ, ರಂಗಾಯಣ ರಘು, ಸಾಧು ಕೋಕಿಲ, ಸರಿತ, ತಬಲಾ ನಾಣಿ, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್ .. ಹೀಗೆ ಜನಪ್ರಿಯ ತಾರೆಯರ ದಂಡೇ ಚಿತ್ರದಲ್ಲಿರುವುದು ವಿಶೇಷ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News