ಚೌಕಟ್ಟುಗಳು ಮೀರಿ ಸಾಹಿತ್ಯ ಸ್ವೀಕರಿಸಬೇಕು: ಡಾ.ಬಸವರಾಜ ಕಲ್ಗುಡಿ

Update: 2017-08-06 11:45 GMT

ಬೆಂಗಳೂರು, ಆ. 6: ಶ್ರೇಷ್ಟ-ಕನಿಷ್ಟ ಎಂಬ ಚೌಕಟ್ಟುಗಳ ಪರಿಕಲ್ಪನೆಯನ್ನು ಮೀರಿ ಸಾಹಿತ್ಯವನ್ನು ಸ್ವೀಕರಿಸಬೇಕು ಎಂದು ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ‘ಅನುಪಮಾ ಪ್ರಶಸ್ತಿ-2017’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವರು ಮಾತ್ರ ಶ್ರೇಷ್ಟ ಲೇಖಕರು, ಬರಹಗಾರರು ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಓದುಗರು ಮಾತ್ರ ಯಾವುದನ್ನೂ ಭೇದ-ಭಾವ ಮಾಡದೇ ಎಲ್ಲವನ್ನೂ ಸ್ವೀಕರಿಸಬೇಕೆಂದರು.

 ಹೆಣ್ಣು ಮನೆಯಿಂದ ಹೊರ ಬಂದ ನಂತರ ಎದುರಾಗುವ ಸಂಕಟಗಳನ್ನು, ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅವಮಾನ, ಸಂವೇದನೆಯನ್ನು ಸೂಕ್ಷ್ಮವಾಗಿ ಸರಳವಾಗಿ ಲೇಖಕಿ ತ್ರಿವೇಣಿ ಕಟ್ಟಿಕೊಟ್ಟಿದ್ದರು. ಅವರ ನಂತರ ಹೆಣ್ಣಿನ ನೋವು- ನಲಿವುಗಳನ್ನು ವೈದ್ಯೆಯಾಗಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ಅನುಪಮಾ ನೀಡಿದ್ದಾರೆ. ಈಗ ಅದೇ ಹಾದಿಯನ್ನು ಗಿರಿಜಮ್ಮ ಮುಂದುವರಿಸಿದ್ದಾರೆಂದು ಬಣ್ಣಿಸಿದರು.

70-80ರ ದಶಕದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದರು. ಇಂತಹ ಸಂದರ್ಭದಲ್ಲಿ ಡಾ.ಅನುಪಮಾ ತಮ್ಮ ಬರಹದ ಮೂಲಕ ದಾಂಪತ್ಯ, ಪ್ರೀತಿಯ ಪರಿಕಲ್ಪನೆ ಹುಟ್ಟಿ ಹಾಕಿದರು. ಅಲ್ಲದೆ, ಪ್ರೀತಿಯ, ಆತ್ಮೀಯತೆ ಸಂವೇದನೆ ಹಾಗೂ ಅದರಲ್ಲಿನ ಮಾನವೀಯ ವೌಲ್ಯಗಳನ್ನು ಸಾಮಾನ್ಯರಿಗೂ ಅರ್ಥ ಮಾಡಿಸಿದರು. ಇಂತಹ ಪರಿಕಲ್ಪನೆ ಮರು ಸೃಷ್ಟಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅನುಪಮಾ ಅವರು ತಮ್ಮ ಬರಹದ ಮೂಲಕ ವಾಸ್ತವ ಮತ್ತು ಕಾಲ್ಪನಿಕ ಸಂಬಂಧ ನಂಟನ್ನು ಕೊಟ್ಟಿದ್ದು, ಅದನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಗಿರಿಜಮ್ಮ ಅವರು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಮನುಷ್ಯರಿಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅಗತ್ಯವಾದ ಸಂದೇಶವನ್ನು ಅತ್ಯಂತ ಸರಳವಾದ ಕನ್ನಡದಲ್ಲಿ ಅನುಪಮಾ ಮತ್ತು ಗಿರಿಜಮ್ಮ ನೀಡಿದ್ದಾರೆ ಎಂದು ಅವರು ತಿಳಿಸಿದರು.

ವೈಜ್ಞಾನಿಕತೆ ಹಾಗೂ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಅನುಪಮಾ ಮತ್ತು ಗಿರಿಜಮ್ಮ ಅವರ ಸೇವೆ ಅಪಾರವಾದುದು. ಪುರುಷ ಪ್ರಧಾನ ಸಮಾಜದಲ್ಲಿ ಗಂಡು-ಹೆಣ್ಣು ಬೇರೆ ಅಲ್ಲ ಎಂಬ ಪ್ರೀತಿ, ಸ್ನೇಹ, ಮಾನವೀಯ ವೌಲ್ಯಗಳು ಮುಖ್ಯ ಎಂಬ ಸಂದೇಶ ಸಾರುವ ಬರಹಗಳನ್ನು ಡಾ.ಗಿರಿಜಮ್ಮ ಸಮಾಜಕ್ಕೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನುಪಮಾ ಪ್ರಶಸ್ತಿ ಪಡೆಯಲು ಅವರು ಸೂಕ್ತರಾದವರು ಎಂದು ಬಣ್ಣಿಸಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಗಿರಿಜಮ್ಮ ಅವರು ಇದುವರೆಗೂ ಹೂ ಬನ, ಮರೀಚಿಕೆ, ಸಂಜೆಮಲ್ಲಿಗೆ, ಅಂಕುರ ಸೇರಿದಂತೆ 20 ಕ್ಕೂ ಅಧಿಕ ಕಾದಂಬರಿಗಳು, ಹೂಬಳ್ಳಿಗೆಲ್ಲ ಆಸರೆ, ಸ್ಪರ್ಶ, ಬಿರುಕು, ಮಂದಾರ ಸೇರಿದಂತೆ ಹಲವಾರು ಪ್ರಸಿದ್ಧ ಕಥಾ ಸಂಕಲನಗಳು, ಏಡ್ಸ್ ಕುರಿತ ಬಾನುಲಿ ನಾಟಕ, ಆಂದೋಲನ, ಮಹಿಳಾ ಸಮಸ್ಯೆ ಕುರಿತ ಮಹಿಳೆ ನಾಟಕಗಳನ್ನು ಹಾಗೂ ಪ್ರಸವ, ಬಂಜೆತನ, ನಿಮ್ಮ ಮಗು, ಮಕ್ಕಳ ಮಾನಸಲೋಕ, ಶವ ಹೇಳುವ ಸಾಕ್ಷಿ ಸೇರಿದಂತೆ ಹಲವಾರು ಕೃತಿಗಳನ್ನು, ಕಾದಂಬರಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಉಪಸ್ಥಿತರಿದ್ದರು. ಈ ವೇಳೆ ವೈದ್ಯೆ ಡಾ.ಎಚ್.ಗಿರಿಜಮ್ಮ ಅವರಿಗೆ ಅನುಪಮಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

‘ಎಂಭತ್ತರ ದಶಕದಲ್ಲಿ ಬೆಂಗಳೂರಿಗೆ ಬಂದಾಗ ನಾನು ಬರೆಯುತ್ತಿದ್ದ ಕಥೆ, ಲೇಖನಗಳನ್ನು ಪ್ರಕಟಿಸಿ, ಪ್ರೋತ್ಸಾಹ ನೀಡುವ ಮೂಲಕ ಬೆಂಗಳೂರಿನ ಪತ್ರಿಕೆಗಳು, ಆಕಾಶವಾಣಿ ಹಾಗೂ ಇಲ್ಲಿನ ಪತ್ರಕರ್ತರು ನನ್ನ ಬೆಳವಣಿಗೆ ಕಾರಣಕರ್ತರಾಗಿದ್ದಾರೆ’

-ಡಾ.ಎಚ್.ಗಿರಿಜಮ್ಮ ಅನುಪಮಾ ಪ್ರಶಸ್ತಿ ಪುರಸ್ಕೃತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News