ಮೂರು ಲ.ರೂ.ಬೆಲೆಯ ಚಹಾ ಸೇವನೆಯೊಂದಿಗೆ ನೀತಾ ಅಂಬಾನಿಯ ದಿನಚರಿ ಆರಂಭವಾಗುತ್ತದಂತೆ.....ಹೌದೇ?

Update: 2017-08-07 09:53 GMT

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ಮುಕೇಶ್ ಅಂಬಾನಿ ಅವರು ತನ್ನ ಶ್ರೀಮಂತಿಕೆ ಮತ್ತು ವ್ಯವಹಾರ ಕ್ಷೇತ್ರದಲ್ಲಿ ತನ್ನ ಚಾಣಾಕ್ಷ ನಡೆಗಳಿಗಾಗಿ ಹೆಸರಾಗಿದ್ದಾರೆ. ಅಂಬಾನಿಗಳು ತಮ್ಮನ್ನು ತಾವು ಪರಿಚಯಿಸಿಕೊಳ್ಳಬೇಕಾಗಿಲ್ಲ. ಅವರ ಬಗ್ಗೆ ಮಾತನಾಡಲು ಅವರ ಹೆಸರು ಮತ್ತು ಜೀವನ ಶೈಲಿಯೇ ಸಾಕು.

 ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ತನ್ನ ಅಂತಸ್ತು ಮತ್ತು ಹೆಸರಿನಿಂದಲೇ ಪ್ರಸಿದ್ಧರಾಗಿದ್ದಾರೆ. ಅವರು ಐಪಿಎಲ್‌ನ ‘ಮುಂಬೈ ಇಂಡಿಯನ್ಸ್ ’ಕ್ರಿಕೆಟ್ ತಂಡದ ಒಡತಿಯೂ ಹೌದು.

ನೀತಾ ಅಂಬಾನಿಯ ದೈನಂದಿನ ಖರ್ಚುಗಳ ಬಗ್ಗೆ ತಿಳಿದರೆ ಅವರ ಜೀವನ ಶೈಲಿ ನಮ್ಮಂಥವರಿಗೆ ಖಂಡಿತ ಅಚ್ಚರಿಯ ಜೊತೆಗೆ ಇಂತಹ ವೈಭೋಗದಿಂದ ವಂಚಿತರಾಗಿ ರುವುದಕ್ಕೆ ಹೊಟ್ಟೆಕಿಚ್ಚೂ ಉಂಟಾಗುವುದು ಖಚಿತ.  ಅವರ ಒಂದು ದಿನದ ಖರ್ಚಿನಷ್ಟು ಮೊತ್ತವನ್ನು ಉಳಿತಾಯ ಮಾಡಲು ಸಾಮಾನ್ಯ ವ್ಯಕ್ತಿಯೋರ್ವ ತನ್ನ ಜೀವಮಾನವಿಡೀ ಹೆಣಗಬೇಕಾಗುತ್ತದೆ. ಕೈಯಲ್ಲಿ ಮೂರೂವರೆ ಕೋಟಿ ರೂ.ಮೌಲ್ಯ ದ ಮೊಬೈಲ್ ಫೋನ್‌ನಿಂದ ಹಿಡಿದು ಪ್ರತಿನಿತ್ಯ ಹೊಸ ಪಾದರಕ್ಷೆಗಳ ಬಳಕೆ....ಅಷ್ಟೇ ಏಕೆ, ಮೂರು ಲಕ್ಷ ರೂ.ಬೆಲೆಯ ಚಹಾದವರೆಗಿನ ಈ ವಿವರಗಳು ಅವರ ವೈಭವೋಪೇತ ಜೀವನ ಶೈಲಿಯನ್ನು ಹೇಳುತ್ತವೆ.

 ಬೆಳಿಗ್ಗೆಯ ಚಹಾ.....ನೀತಾ ಅಂಬಾನಿ ತನ್ನ ಬೆಳಗಿನ ಚಹಾದ ಸರಂಜಾಮುಗಳಲ್ಲಿ ವಿಶ್ವದ ಪ್ರಸಿದ್ಧ ಬ್ರಾಂಡ್ ಆಗಿರುವ ‘ನೋರಿಟೆಕ್’ ಅನ್ನು ಬಳಸುತ್ತಾರೆ. ಇದು ಜಪಾನಿನಿಂದ ಆಮದಾಗಿದ್ದು, ಈ ಕ್ರಾಕರಿ ಸೆಟ್‌ಗೇ ಮೂರು ಲಕ್ಷ ರೂ.ಬೆಲೆಯಿದೆ. ಇದು ಇಷ್ಟೇಕೆ ದುಬಾರಿ ಗೊತ್ತೇ? ಇವು ಚಿನ್ನದ ಅಂಚು ಹೊಂದಿದ್ದು, ಇಂತಹ 50 ಸೆಟ್‌ಗಳಿಗೆ ಅಂದಾಜು ಒಂದೂವರೆ ಕೋಟಿ ರೂ.ಗಳಾಗುತ್ತವೆ!

  ನೀತಾ ಅಂಬಾನಿ ವಿಶ್ವದ ಅತ್ಯಂತ ದುಬಾರಿ ಬ್ಯಾಗ್‌ಗಳನ್ನು ಹೊಂದಿದ್ದಾರೆ. ಗೋಯರ್ಡ್, ಸ್ನೆಲ್ ಮತ್ತು ಜಿಮ್ಮಿ ಚೂದಂತಹ ವಿಶ್ವದ ಅತ್ಯುನ್ನತ ಡಿಸೈನರ್‌ಗಳು ಮತ್ತು ಬ್ರಾಂಡ್‌ಗಳ ಸಂಪೂರ್ಣ ವಿಶೇಷ ಆವೃತಿಗಳು ಇವುಗಳಲ್ಲಿವೆ ಮತ್ತು ಇವುಗಳ ಬೆಲೆ ಆರಂಭವಾಗುವುದೇ 30-40 ಲಕ್ಷ ರೂ.ಗಳಿಂದ. ನಮ್ಮಲ್ಲಿ ಎಷ್ಟು ಜನರಿಗೆ ನಮ್ಮ ಜೀವಿತಾವಧಿಯಲ್ಲಿ ಇಂತಹ ಬ್ಯಾಗ್‌ಗಳನ್ನು ಖರೀದಿಸುವುದು ಹೋಗಲಿ...ಕಣ್ಣಿನಿಂದ ನೋಡಲಾದರೂ ಸಾಧ್ಯವಿದೆ?

ನೀತಾ ಅಂಬಾನಿಯವರ ಮೊಬೈಲ್ ಫೋನ್ ವಿಶ್ವದ ಅತ್ಯಂತ ದುಬಾರಿ ಫೋನ್ ಗಳಲ್ಲೊಂದಾಗಿದೆ. ಸದ್ಯ ಅವರ ಬಳಿಯಿರುವ ಫಾಲ್ಕನ್ ಸೂಪರ್‌ನೋವಾ ಐಫೋನ್‌ನ ಮೌಲ್ಯ 48.5 ಮಿಲಿಯನ್ ಡಾಲರ್‌ಗಳು ಅಂದರೆ ಸುಮಾರು 315 ಕೋ.ರೂ.ಗಳಾಗಿವೆ. ಈ ಫೋನ್‌ನ ಹೊರಮೈಯನ್ನು 24 ಕ್ಯಾರೆಟ್ ಚಿನ್ನ ಮತ್ತು ಪಿಂಕ್ ಗೋಲ್ಡ್‌ನಿಂದ ಮಾಡಲಾಗಿದೆ. ಹೀಗಾಗಿಯೇ ಈ ಫೋನ್ ಇಷ್ಟೊಂದು ದುಬಾರಿಯಾಗಿದೆ. ಬಿದ್ದರೆ ಫೋನ್ ಒಡೆಯದಿರಲು ಕಂಪನಿಯು ಅದಕ್ಕೆ ಪ್ಲಾಟಿನಮ್ ಲೇಪನವನ್ನೂ ನೀಡಿದೆ!

 ನೀತಾ ಅಂಬಾನಿಯವರಿಗೆ ಬ್ರಾಂಡೆಡ್ ಮತ್ತು ದುಬಾರಿ ವಾಚ್‌ಗಳೆಂದರೆ ಇಷ್ಟ. ಅವರ ವಾಚ್‌ಗಳ ಸಂಗ್ರಹದಲ್ಲಿ ಬಲ್ಗರಿ, ಕಾರ್ಟಿಯರ್, ರಾಡೋ, ಗುಕ್ಸಿ, ಕಲ್ವಿನ್ ಕ್ಲೀನ್ ಮತ್ತು ಫಾಸಿಲ್‌ನಂತಹ ವಿಖ್ಯಾತ ಬ್ರಾಂಡ್‌ಗಳು ಸೇರಿವೆ. ಅವರ ಬಳಿಯಿರುವ ಪ್ರತಿಯೊಂದೂ ವಾಚ್‌ನ ಮೌಲ್ಯ ಸುಮಾರು ಒಂದು ಲಕ್ಷ ರೂ.ಗಳಾಗುತ್ತವೆ.

ಕೊನೆಯ ವಿಷಯ. ಆದರೆ ಸಣ್ಣದಲ್ಲ. ಅತ್ಯಾಧುನಿಕ ಶೈಲಿಗಳ ಪಾದರಕ್ಷೆಗಳನ್ನು ಬಯಸುವ ಅವರ ಬಳಿ ಪಾಡ್ರೋ, ಗಾರ್ಸಿಯಾ, ಜಿಮ್ಮಿ ಶೂ, ಪಿಮೋಧಾ, ಮರ್ಲಿನ್ ನಂತಹ ಪ್ರಸಿದ್ಧ ಬ್ರಾಂಡ್‌ಗಳ ಪಾದರಕ್ಷೆಗಳಿವೆ. ಒಂದು ಜೋಡಿ ಇಂತಹ ಪಾದರಕ್ಷೆಗಳ ಬೆಲೆ ಲಕ್ಷದ ಲೆಕ್ಕದಲ್ಲಿದೆ. ವಿಶೇಷವೆಂದರೆ ನೀತಾ ಅಂಬಾನಿ ಒಂದು ಬಾರಿ ಬಳಸಿದ ಪಾದರಕ್ಷೆಗಳನ್ನು ಮತ್ತೊಮ್ಮೆ ಧರಿಸುವುದಿಲ್ಲ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News