ನವೆಂಬರ್ ನಲ್ಲಿ ಗ್ಯಾಸ್ ಬೆಲೆಯಿಂದ ಕ್ರೆಡಿಟ್ ಕಾರ್ಡ್‌ವರೆಗೆ ನಿಯಮಗಳಲ್ಲಿ ಬದಲಾವಣೆ !

Update: 2024-10-30 14:03 GMT

ಸಾಂದರ್ಭಿಕ ಚಿತ್ರ | freepik.com

ಈ ನವೆಂಬರ್ ತಿಂಗಳು ಹಲವಾರು ಬಗೆಯ ಹಣಕಾಸು ಮತ್ತು ಬ್ಯಾಂಕ್ ಸಂಬಂಧಿತ ಕಾರಣಗಳಿಗಾಗಿ ವಿಶೇಷವಾಗಿದೆ. ಈ ತಿಂಗಳಲ್ಲಿ ಹಲವು ಪ್ರಮುಖ ಆರ್ಥಿಕ ಬದಲಾವಣೆಗಳು ಆಗಲಿವೆ.

LPG ಗ್ಯಾಸ್ ಬೆಲೆಯಿಂದ ಹಿಡಿದು ಕ್ರೆಡಿಟ್ ಕಾರ್ಡ್‌, ಮ್ಯೂಚುವಲ್ ಫಂಡ್ ನಿಯಮಗಳವರೆಗೆ ಹಲವು ಬದಲಾವಣೆಗಳು ಆಗಲಿವೆ. ನವೆಂಬರ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕುಗಳಿಗೆ ರಜೆ ಇದೆ ಎಂದು ತಿಳಿದರಂತೂ ನೀವು ಬೆರಗಾಗಿಬಿಡಬಹುದು.

►ನವೆಂಬರ್‌ ನಲ್ಲಿ 6 ಪ್ರಮುಖ ಬದಲಾವಣೆಗಳು ಆಗಲಿವೆ:

1. ನವೆಂಬರ್ 1 ರಿಂದ ಮ್ಯೂಚುವಲ್ ಫಂಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ:

ನವೆಂಬರ್ 1 ರಿಂದ ಮ್ಯೂಚುವಲ್ ಫಂಡ್ ವಲಯದ ವಹಿವಾಟಿನ ಮೇಲೆ ನಿಯಂತ್ರಣವಿಡಲು ಸೆಬಿ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.

ಹೊಸ ನಿಯಮಗಳ ಪ್ರಕಾರ, ಆಸ್ತಿ ನಿರ್ವಹಣಾ ಕಂಪನಿಗಳು ಅಂದರೆ AMC ಗಳು ನಿರ್ವಹಿಸುವ ನಿಧಿಯಲ್ಲಿ ನಾಮಿನಿಗಳು ಮತ್ತು ಅವರ ನಿಕಟ ಸಂಬಂಧಿಗಳು ಮಾಡುವ 15 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟುಗಳನ್ನು ಅನುಪಾಲನಾ ಅಧಿಕಾರಿಗಳು ಬಹಿರಂಗಪಡಿಸಬೇಕು. ಈ ಕ್ರಮ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

2. SBI ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ:

ನವೆಂಬರ್ 1 ರಿಂದ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗಸಂಸ್ಥೆಯಾದ SBI ಕಾರ್ಡ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಯುಟಿಲಿಟಿ ಬಿಲ್ ಪಾವತಿಗಳು ಮತ್ತು ಹಣಕಾಸು ಶುಲ್ಕಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಬದಲಾವಣೆಗಳನ್ನು ಜಾರಿಗೊಳಿಸುತ್ತಿದೆ.

ಅನ್ ಸೆಕ್ಯೂರ್ಡ್ SBI ಕ್ರೆಡಿಟ್ ಕಾರ್ಡ್‌ಗಳಿಗೆ, ಹಣಕಾಸು ಶುಲ್ಕ ತಿಂಗಳಿಗೆ ಶೇ.3.75 ಹೆಚ್ಚಲಿದೆ. ಇದಲ್ಲದೆ ವಿದ್ಯುತ್, ನೀರು, ಎಲ್‌ಪಿಜಿ ಮತ್ತು ಇತರ ಯುಟಿಲಿಟಿ ಸೇವೆಗಳಿಗೆ 50,000 ರೂ.ಗಿಂತ ಹೆಚ್ಚಿನ ಪಾವತಿಗಳಿಗಾಗಿ ಹೆಚ್ಚುವರಿ ಶೇ.1ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.

3. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ:

ಐಸಿಐಸಿಐ ಬ್ಯಾಂಕ್ ತನ್ನ ಶುಲ್ಕಗಳಲ್ಲಿ ಬದಲಾವಣೆ ತರುತ್ತಿದೆ. ಹಲವಾರು ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ನಲ್ಲಿ ಕಡಿತ ಮಾಡುತ್ತಿದೆ. ವಿಮೆ ಮತ್ತು ದಿನಸಿ ಖರೀದಿಗಳು, ವಿಮಾನ ನಿಲ್ದಾಣದ ಲಾಂಜ್ ಪ್ರವೇಶ, ಇಂಧನ ಸರ್ಚಾರ್ಜ್ ಮನ್ನಾ ಮತ್ತು ವಿಳಂಬ ಪಾವತಿ ಶುಲ್ಕಗಳಂತಹ ಸೇವೆಗಳ ಮೇಲೆ ಈ ಬದಲಾವಣೆ ಪರಿಣಾಮ ಬೀರಲಿದೆ. ಹೊಸ ದರಗಳು ನವೆಂಬರ್ 15ರಿಂದ ಜಾರಿಗೆ ಬರುತ್ತವೆ ಮತ್ತು ವಿವಿಧ ಕ್ರೆಡಿಟ್ ಕಾರ್ಡ್‌ಗಳಿಗೆ ಅನ್ವಯಿಸುತ್ತವೆ.

4. ಯುಪಿಐ ಲೈಟ್ ಬ್ಯಾಲೆನ್ಸ್ ರೀಲೋಡ್ ಹೊಸ ನಿಯಮ:

ಯುಪಿಐ ಲೈಟ್ ಆಟೋ ಟಾಪ್ ಅಪ್ ಫೀಚರ್ ನವೆಂಬರ್ 1 ರಿಂದ ಬರಲಿದೆ. ಯುಪಿಐ ಲೈಟ್ ಇದು ವಾಲೆಟ್ ಆಗಿದ್ದು, ಯುಪಿಐ ಪಿನ್ ಬಳಸದೆಯೇ ಸಣ್ಣ ಮೌಲ್ಯದ ವಹಿವಾಟುಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಪ್ರಸ್ತುತ, ಯುಪಿಐ ಲೈಟ್ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ ತಮ್ಮ ವ್ಯಾಲೆಟ್ ಬ್ಯಾಲೆನ್ಸ್ ಅನ್ನು ಮ್ಯಾನುವಲ್ ಆಗಿ ಮರುಲೋಡ್ ಮಾಡಬೇಕಿತ್ತು.

ಆದರೆ, ಹೊಸ ಆಟೋ ಟಾಪ್ ಅಪ್ ಫೀಚರ್ ನಲ್ಲಿ ಮ್ಯಾನುವಲ್ ಆಗಿ ವ್ಯಾಲೆಟ್ ಮರುಲೋಡ್ ಮಾಡುವ ಅಗತ್ಯ ಇರುವುದಿಲ್ಲ.

5. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ದರದಲ್ಲಿ ಬದಲಾವಣೆ:

ನವೆಂಬರ್ 1 ರಂದು ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಪರಿಷ್ಕೃತ ದರಗಳನ್ನು ಘೋಷಿಸಲಿವೆ. ಕೆಲ ಸಮಯದಿಂದ ಸ್ಥಿರವಾಗಿದ್ದ 14 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. 19 ಕೆಜಿ ಇರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಜುಲೈನಿಂದ ಸತತ ಏರಿಕೆ ಕಂಡಿದೆ.

ಅಕ್ಟೋಬರ್ 1 ರ ಹೊತ್ತಿಗೆ ದೆಹಲಿಯಲ್ಲಿ ರೂ 48.50 ರಷ್ಟು ಏರಿಕೆಯಾಗಿದೆ. ಟರ್ಬೈನ್ ಇಂಧನ (ATF) ಬೆಲೆಗಳು ಕುಸಿತ ಕಂಡಿವೆ, ಈ ವರ್ಷ ಮತ್ತಷ್ಟು ಕಡಿತದ ನಿರೀಕ್ಷೆಗಳೊಂದಿಗೆ, ಹೆಚ್ಚುವರಿಯಾಗಿ, CNG ಮತ್ತು PNG ಬೆಲೆಗಳಲ್ಲಿ ಗಮನಾರ್ಹ ಬದಲಾವಣೆ ನಿರೀಕ್ಷಿಸಬಹುದು ಎನ್ನಲಾಗಿದೆ.

6. TRAI ನ ಹೊಸ ನಿಯಮಗಳು:

ಇನ್ನೊಂದು ಮಹತ್ವದ ಬದಲಾವಣೆ ಟೆಲಿಕಾಂ ವಲಯಕ್ಕೆ ಸಂಬಂಧಿಸಿದ್ದಾಗಿದೆ. ಜಿಯೋ ಮತ್ತು ಏರ್‌ಟೆಲ್ ಸೇರಿದಂತೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಸಂದೇಶ ಪತ್ತೆಹಚ್ಚುವಿಕೆ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಆದೇಶಿಸಿದೆ.

ಈ ಬದಲಾವಣೆ ನವೆಂಬರ್ 1ರಿಂದ ಬರಲಿದೆ. ಇದರ ಅನ್ವಯ, ಟೆಲಿಕಾಂ ಕಂಪನಿಗಳು SIM ಬಳಕೆದಾರರನ್ನು ತಲುಪುವ ಮೊದಲೇ ಸ್ಪ್ಯಾಮ್ ಸಂದೇಶಗಳನ್ನು ಪತ್ತೆಹಚ್ಚುವ ಮತ್ತು ಫಿಲ್ಟರ್ ಮಾಡುವ ಮೂಲಕ ಸ್ಪ್ಯಾಮ್ ಸಂಖ್ಯೆಗಳನ್ನು ನಿರ್ಬಂಧಿಸಲಿವೆ. ಅಲ್ಲದೆ ಸ್ಪ್ಯಾಮ್ ನಂಬರ್ ಗಳನ್ನು ಬ್ಲಾಕ್ ಮಾಡುತ್ತವೆ.

►ನವೆಂಬರ್ ತಿಂಗಳಲ್ಲಿ 13 ದಿನ ಬ್ಯಾಂಕ್ ಗಳಿಗೆ ರಜೆ:

ನವೆಂಬರ್‌ ನಲ್ಲಿ ಹಬ್ಬಗಳು, ಸಾರ್ವಜನಿಕ ರಜಾದಿನಗಳು ಮತ್ತು ವಿಧಾನಸಭಾ ಚುನಾವಣೆಗಳ ಕಾರಣ

ವಿವಿಧ ಪ್ರದೇಶಗಳಲ್ಲಿನ ಬ್ಯಾಂಕುಗಳು ಒಟ್ಟು 13 ದಿನ ಮುಚ್ಚಿರುತ್ತವೆ. ಈ ಅವಧಿಯಲ್ಲಿ ಅಗತ್ಯ ಕಾರ್ಯಗಳಿಗಾಗಿ ಆನ್‌ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ.

►ನವೆಂಬರ್‌ ತಿಂಗಳಲ್ಲಿನ ಬ್ಯಾಂಕ್ ರಜಾ ದಿನಗಳ ಪಟ್ಟಿ ಹೀಗಿದೆ:

ನವೆಂಬರ್ 1 - ದೀಪಾವಳಿ ಅಮವಾಸ್ಯೆ / ಕನ್ನಡ ರಾಜ್ಯೋತ್ಸವ

ನವೆಂಬರ್ 2 - ದೀಪಾವಳಿ (ಬಲಿ ಪಾಡ್ಯಮಿ)

ನವೆಂಬರ್ 3 - ರವಿವಾರ

ನವೆಂಬರ್ 7 - ಛತ್

ನವೆಂಬರ್ 8 - ಛತ್

ನವೆಂಬರ್ 9 - ಎರಡನೇ ಶನಿವಾರ

ನವೆಂಬರ್ 10 - ರವಿವಾರ

ನವೆಂಬರ್ 12 - ಎಗಾಸ್-ಬಗ್ವಾಲ್

ನವೆಂಬರ್ 15 - ಗುರುನಾನಕ್ ಜಯಂತಿ

ನವೆಂಬರ್ 17 - ರವಿವಾರ

ನವೆಂಬರ್ 18 - ಕನಕದಾಸ ಜಯಂತಿ

ನವೆಂಬರ್ 23 - ಸೆಂಗ್ ಕುಟ್ಸ್ನೆಮ್, ನಾಲ್ಕನೇ ಶನಿವಾರ

ನವೆಂಬರ್ 24 - ರವಿವಾರ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News