ನೀಲಿ ಮಳೆಯಾಗಿ ಸುರಿದ ಅಂಬೇಡ್ಕರ್....

Update: 2017-08-09 18:35 GMT

...ಭಾವಗೀತೆಯ ಸೆಲೆಯೇ ಬತ್ತಿದ ಕಾಲದಲ್ಲಿ ಅಂಬೇಡ್ಕರ್ ಕನ್ನಡ ಕವಿಗಳ ಎದೆಗಳಲ್ಲಿ ಭಾವ ಗೀತೆಯನ್ನುಕ್ಕಿಸುತ್ತಾರೆ, ಚರಿತ್ರೆಯನ್ನು ವಿಮರ್ಶಾತ್ಮಕವಾಗಿ ನೋಡಲೇಬೇಕಾದ ತುರ್ತನ್ನು ಕವಿಗಳೊಳಗೆ ಪ್ರಚೋದಿಸುತ್ತಾರೆ. ಕಳೆದ ನಲವತ್ತು ವರ್ಷಗಳಲ್ಲಿ ಕನ್ನಡ ಕಾವ್ಯ ಬಾಬಾ ಸಾಹೇಬರಿಗೆ ಸ್ಪಂದಿಸಿದಾಗ ಹುಟ್ಟಿದ ಇಲ್ಲಿನ ಅನೇಕ ಗ್ರಹಿಕೆಗಳು ಅನನ್ಯವಾಗಿವೆ...’’ ಎಂದು ‘ಅರಿವೇ ಅಂಬೇಡ್ಕರ್’ ಕೃತಿಯ ಕುರಿತಂತೆ ಖ್ಯಾತ ವಿಮರ್ಶಕ ನಟರಾಜ ಹುಳಿಯಾರ್ ಬರೆಯುತ್ತಾರೆ. ಹಂದಲಗೆರೆ ಗಿರೀಶ್ ಅವರು ಸಂಪಾದಿಸಿರುವ ಈ ಕೃತಿ, ಎರಡು ತಲೆಮಾರಿನ ಕವಿಗಳು ಅಂಬೇಡ್ಕರ್‌ನ್ನು ಗ್ರಹಿಸಿದ ರೀತಿಯನ್ನು ತೆರೆದಿಡುತ್ತದೆ. ಈ ದೇಶದಲ್ಲಿ ಕವಿಗಳ ಪಾಲಿಗೆ ಹಲವು ವ್ಯಕ್ತ್ತಿತ್ವಗಳು ವಸ್ತುವಾಗಿವೆ. ಅವುಗಳಲ್ಲಿ ಮುಖ್ಯವಾದುದು ಒಂದು ಬುದ್ಧ, ಇನ್ನೊಂದು ಗಾಂಧಿ, ಮಗದೊಂದು ಅಂಬೇಡ್ಕರ್. ಹಾಗೆಯೇ ಇನ್ನಷ್ಟು ನಾಯಕರನ್ನು ಕೇಂದ್ರವಾಗಿಟ್ಟು ಕವಿಗಳು ಕವಿತೆಗಳನ್ನು ಬರೆದಿದ್ದಾರಾದರೂ, ಅದು ತೀರಾ ವೈಯಕ್ತಿಕ ನೆಲೆಯಲ್ಲಾಗಿದೆ. ಬುದ್ಧ, ಗಾಂಧಿ, ಅಂಬೇಡ್ಕರ್ ಈ ದೇಶವನ್ನು ಬೇರೆ ಬೇರೆ ನೆಲೆಗಳಲ್ಲಿ ರೂಪಿಸಿದವರು. ಇವರ ಕುರಿತಂತೆ ಕವಿತೆಗಳನ್ನು ಬರೆಯುವುದೆಂದರೆ ವರ್ತ ಮಾನದ ಬೆಳವಣಿಗೆಗಳಿಗೆ ಕವಿ ನೀಡುವ ಪ್ರತಿಕ್ರಿಯೆಯೂ ಹೌದು. ಆದುದರಿಂದಲೇ ಅಂಬೇಡ್ಕರ್ ಕುರಿತಂತೆ ಬರೆದ ಕವಿತೆಗಳು ಕೇವಲ ವ್ಯಕ್ತಿ ಆರಾಧನೆಯಾಗಿ ಉಳಿಯದೆ, ಅದರಾಚೆಗಿನ ಸಾಮಾಜಿಕ, ರಾಜಕೀಯ ಪ್ರತಿಕ್ರಿಯೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಕೃತಿಯಲ್ಲಿ ಸುಮಾರು 125 ಅಂಬೇಡ್ಕರ್ ಕುರಿತ ಕವಿತೆಗಳಿವೆ. ಚಂದ್ರಶೇಖರ ಕಂಬಾರ, ಎನ್. ಕೆ. ಹನುಮಂತಯ್ಯ, ಸಿದ್ದಲಿಂಗಯ್ಯ, ಗೋಪಾಲಕೃಷ್ಣ ಅಡಿಗ, ಕುಂ. ವೀರಭದ್ರಪ್ಪ, ಬಿ.ಟಿ. ಲಲಿತಾ ನಾಯಕ್, ಬೊಳುವಾರು ಮಹಮದ್ ಕುಂಞಿ, ಹಾರೋಹಳ್ಳಿ ರವೀಂದ್ರ, ಚಕ್ರವರ್ತಿ ಚಂದ್ರಚೂನ್... ಹೀಗೆ ಹಿರಿ-ಕಿರಿಯ ನೋಟದಲ್ಲಿ ಅಂಬೇಡ್ಕರ್ ಅವರ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಅಂಬೇಡ್ಕರ್ ಕುರಿತಂತೆ ಬರೆಯುವುದೆಂದರೆ ಈ ದೇಶದ ಜಾತಿ ವ್ಯವಸ್ಥೆ, ಅಸಮಾನತೆಯ ವಿರುದ್ಧ ಬರೆಯುವುದಾಗಿದೆ. ಇಲ್ಲಿರುವ ಹೆಚ್ಚಿನ ಕವಿಗಳು ನವೋದಯದ ಆಚೆಗಿನ ಬಂಡಾಯದ ಕಿಡಿಯನ್ನು ತನ್ನೊಳಗಿಟ್ಟುಕೊಂಡವರು.

‘ಹೂವಿನ ಹಾಗೆಯೆ ಬೇರಿಗು ಬೇರೆಯ

ನಿಜವಿದೆ ಎಂದವರು

ರಸಸಿದ್ದಿಯ ನಾಗಾರ್ಜುನ ಮರೆತಾ

ಬೇರನು ಕಂಡವರು...’ ಇದು ಅಂಬೇಡ್ಕರ್‌ರನ್ನು ಬಣ್ಣಿಸುವ ಕಂಬಾರರ ಪರಿಯಾದರೆ, ನವ್ಯದ ಪ್ರಕಾರದಲ್ಲಿ ಗೋಪಾಲ ಕೃಷ್ಣ ಅಡಿಗರು ‘‘...ನಿಮ್ಮನ್ನೆ ಕಲ್ಲಾಗಿ ಮಾಡಿ ವಿಗ್ರಹ ಕೆತ್ತಿ ಗುಡಿಕಟ್ಟಿ/ ಬುದ್ಧ ನನ್ನೆಂತೋ ಗಾಂಧಿ ಯನ್ನೆಂತೋ ಅಂತೆಯೇ/ ಒಳಗಿಟ್ಟು ಮುಗಿಸುತ್ತಾರೆ ಕತ್ತಲಲ್ಲಿ...’’ ಎಂದು ಆತಂಕ ಪಡುತ್ತಾರೆ. ಬಂಡಾಯದ ಕಾಲದಲ್ಲಿ ಚಂಪಾ ಅವರು ಬರೆದ ‘‘ತೊಳಲಾಡುವ ನೆರಳ ಬಸಿರೊಳಗಿಂದ/ ಬಲಭೀಮ ಅಂಬೆಗಾಲಿಟ್ಟು ಹೊರಬರುವಾಗ/ ಒಮ್ಮಾಮ್ಮೆ ಬೋಧಿವೃಕ್ಷಕ್ಕೆ ಬುದ್ಧನನ್ನು ನೇತಾಡಿಸಿದ/ ಈ ದೇಶದ ನೆನ್ನೆಗಳ ನೆನಪಾಗುತ್ತದೆ...’’ ಪಡುವ ಆತಂಕ ಅಡಿಗರಿಗಿಂತ ತುಸು ಭಿನ್ನವಾದುದು. ಕೆಲವು ತರುಣರ ಕವಿತೆಗಳು ಅಂಬೇಡ್ಕರ್ ಆರಾಧನೆಗೆ ಮೀಸಲಾಗಿದ್ದರೆ, ಹೆಚ್ಚಿನ ಕವಿತೆಗಳೂ ಸಾಮಾಜಿಕ ಜಾಗೃತಿಯ ಹಿನ್ನೆಲೆಯಲ್ಲಿ ರೂಪುಗೊಂಡವುಗಳು. ಇಲ್ಲಿರುವ ಕವಿತೆಗಳು ಅಂಬೇಡ್ಕರ್ ಅವರನ್ನು ಬಹುನೆಲೆಗಳಲ್ಲಿ ಶೋಧಿಸಿವೆ. ದಲಿತ ಪ್ರಜ್ಞೆ ಜಾಗೃತಗೊಂಡಿರುವ ಈ ದಿನಗಳಲ್ಲಿ ‘ಅರಿವೇ ಅಂಬೇಡ್ಕರ್’ ಸಂಕಲನ ಒಂದು ಒಳ್ಳೆಯ ಪ್ರಯತ್ನವಾಗಿದೆ. ಅವಿರತ ಪುಸ್ತಕ ಹೊರತಂದಿರುವ ಈ ಕೃತಿಯ ಮುಖಬೆಲೆ 200ರೂ. ಆಸಕ್ತರು 94499 35103 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News