'ಗೋದ್ರಾ'ದಲ್ಲಿ ನೀನಾಸಂ ಸತೀಶ್
ನೀನಾಸಂ ಸತೀಶ್ ಯಾಕೆ ಗೋದ್ರಾಗೆ ಹೋದರು ಎಂದು ಯೋಚಿಸಬೇಡಿ. ಇದು ಅವರು ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು.
ಪೃಥ್ವಿ, ಸವಾರಿ ಮೊದಲಾದ ಚಿತ್ರಗಳಲ್ಲಿ ನಿರ್ದೇಶಕ ಜೇಕಬ್ ವರ್ಗೀಸ್ ಗೆ ಜೊತೆಯಾಗಿ ಕೆಲಸ ಮಾಡಿದ್ದ ಕೆಎಸ್ ನಂದೀಶ್ ಪ್ರಥಮ ಬಾರಿಗೆ ಗೋದ್ರಾ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಜೇಕಬ್ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಕತೆಯಲ್ಲಿನ ವಿಭಿನ್ನತೆಯನ್ನು ಅರ್ಥಮಾಡಿಕೊಂಡ ಸತೀಶ್, ಮತ್ತೊಮ್ಮೆ ಹೊಸ ನಿರ್ದೇಶಕರ ಬೆಂಬಲಕ್ಕೆ ನಿಂತಿದ್ದಾರೆ. ಮಾತ್ರವಲ್ಲ, ಚಿತ್ರದ ಪಾತ್ರಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿರುವ ದಾಡಿ ಬಿಟ್ಟಿರುವ ಸತೀಶ್ ಇತ್ತೀಚೆಗೆ ಅದೇ ಮುಖದೊಂದಿಗೆ ಕಾಣಿಸುತ್ತಿದ್ದರು. ಇದು ಕ್ಲೈಮ್ಯಾಕ್ಸ್ ನ ಗೆಟಪ್ ಆಗಿದ್ದು, ಚಿತ್ರದ ಆರಂಭದಲ್ಲಿ ಇಪ್ಪತ್ತನಾಲ್ಕರ ಹರೆಯದ ಹುಡುಗನ ಗೆಟಪ್ ಇರುವುದರಿಂದ ಅದಕ್ಕಾಗಿ ಮೈ ತೂಕ ಇಳಿಸಿಕೊಳ್ಳಲಿರುವುದಾಗಿ ಸತೀಶ್ ಹೇಳಿದರು.
ಚಿತ್ರದಲ್ಲಿ ಸತೀಶ್ ಕರಾವಳಿಯ ಹುಡುಗನಾಗಿ ಕಾಣಿಸಿಕೊಳ್ಳುತ್ತಾರಾದರೂ ಬೆಂಗಳೂರು ಕನ್ನಡವನ್ನೇ ಮಾತನಾಡುತ್ತಾರಂತೆ. ಕುಕ್ಕೆ ಸುಬ್ರಹ್ಮಣ್ಯದಿಂದ ಆರಂಭಗೊಳ್ಳುವ ಕಥಾ ಪ್ರಯಾಣ ಹೈದರಾಬಾದ್ ನಿಂದ ಛತ್ತೀಸ್ ಗಡದ ವರೆಗೂ ಮುಂದುವರಿಯುವುದಂತೆ. ಅಂದಹಾಗೆ ಗೋದ್ರಾ ಹೆಸರು ನೆನಪಿಸುವ ಗುಜರಾತ್ ಹತ್ಯಾಕಾಂಡಕ್ಕೂ ಇದಕ್ಕೂ ಯಾವುದೇ ಸಂಬಂಧಗಳಿಲ್ಲ. ಇಲ್ಲಿ ಯಾವುದೇ ರಕ್ತಪಾತಗಳಿಲ್ಲ. ಆದರೆ ಪೊಲಿಟಿಕಲ್ ಡ್ರಾಮ ಇದೆ. ಒಟ್ಟು ಕತೆ ಗೋದ್ರಾ ಘಟನೆಯ ಫೀಲ್ ನೀಡಿದರೆ ಅಚ್ಚರಿಯಿಲ್ಲ ಎಂದರು ಸತೀಶ್.
ಚಿತ್ರಕ್ಕೆ ಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಕೆಎಸ್ ನಂದೀಶ್ ಮಾತನಾಡಿ, "ನಾನು ಜೇಕಬ್ ಅವರ ಜೊತೆಗೆ ಹತ್ತು ವರ್ಷ ಜೊತೆಗೂಡಿ ಕೆಲಸ ಮಾಡಿದ್ದೇನೆ. ಗೋದ್ರಾ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಪತ್ರಿಕೋದ್ಯಮದ ವಿದ್ಯಾರ್ಥಿಗಳು. ಇದೊಂದು ಕಮರ್ಷಿಯಲ್ ಎಕ್ಸೆಪೆರಿಮೆಂಟಲ್ ಕತೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದು, ಛಾಯಾಗ್ರಾಹಕರಾಗಿ ಜೆಬೆಜ್ ಗಣೇಶ್ ಇದ್ದಾರೆ. ಉಳಿದ ತಂತ್ರಜ್ಞರು ಮತ್ತು ಕಲಾವಿದರನ್ನು ಇನ್ನು ಫೈನಲ್ ಮಾಡಿಲ್ಲ. ನೀನಾಸಂನಿಂದ ಹೊಸಬರನ್ನು ಬಳಸಿಕೊಳ್ಳುತ್ತಿದ್ದೇವೆ" ಎಂದರು.
ಛಾಯಾಗ್ರಾಹಕ ಗಣೇಶ್, ಇದು ನನ್ನ ಎರಡನೇ ಚಿತ್ರ. ಮೂರು ಕಾಲಘಟ್ಟದಲ್ಲಿ ಕತೆಯ ಪ್ರಯಣವಾಗುತ್ತದೆ. ಆ ಮೂರು ಸನ್ನಿವೇಶಗಳನ್ನು ಮೂರು ಟೋನ್ ನಲ್ಲಿ ತೋರಿಸಲಾಗುವುದು ಎಂದರು. ಚಿತ್ರದ ಪೋಸ್ಟರ್ ನಲ್ಲಿ ಬಳಸಿಕೊಂಡ ಚಿತ್ರದಿಂದ ಹಿಡಿದು ಕತೆಯ ಎಳೆಯವರೆಗೆ ಬಹಳಷ್ಟು ಕುತೂಹಲ ಮೂಡಿಸಿದ್ದು ನಿರೀಕ್ಷೆ ಸೃಷ್ಟಿಸಿದೆ.
ಉತ್ತರಹಳ್ಳಿ ಕೆಂಗೇರಿ ರಸ್ತೆ ನಡುವೆ ಕಾಣಿಸಿಕೊಳ್ಳುವ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಡಾ. ಶಿವರಾಜ್ ಕುಮಾರ್ ಪಾಲ್ಗೊಂಡು ಶುಭಕೋರಿದರು. ಇದೇ ತಿಂಗಳ 25ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ.