ಬಿಡುಗಡೆಯಾಯಿತು ಪುಷ್ಪಕ್ಕನ ಪುಸ್ತಕ‌

Update: 2017-08-16 09:06 GMT

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಕ್ಕ ಪುಷ್ಪಾ ನಾಗತಿಹಳ್ಳಿಯವರ ಮೂರನೆಯ ಪುಸ್ತಕ 'ಕಾದಿರುವಳು' ಲೋಕಾರ್ಪಣೆಯಾಯಿತು.

'ನನ್ನ ಎರಡು ಪುಸ್ತಕಗಳನ್ನು ಪ್ರಕಟಿಸಿ‌ ಪ್ರೋತ್ಸಾಹಿಸಿ 'ಕವಯತ್ರಿ' ಎಂದು ಕರೆಯುತ್ತಿದ್ದ ತಮ್ಮನೇ ನನಗೆ ಹೀಗೆ ಮತ್ತೊಂದು‌ ಪುಸ್ತಕ ಬರೆಯಲು ಸ್ಫೂರ್ತಿಯಾಗಿದ್ದಾನೆ' ಎಂದರು ಪುಷ್ಪಾ ನಾಗತಿಹಳ್ಳಿ. ಪುಸ್ತಕ ಮತ್ತು ಸಾಹಿತಿಯ ಬಗ್ಗೆ ಮಾತನಾಡಿದ ಪತ್ರಕರ್ತ, ಕಾದಂಬರಿಕಾರ ಜೋಗಿಯವರು ಸಮಕಾಲೀನ‌ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಈ‌ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಕಾರಂತ, ಲಂಕೇಶರಂಥ ಮಹಾನ್ ಪ್ರತಿಭೆಗಳು ಅವರ ಬರಹಗಳಿಂದ ನಮಗೆ ಹತ್ತಿರವಾಗಬಹುದು. ಆದರೆ ಹಾಗಂತ ಅವರ ಚಿಂತನೆಗಳನ್ನು ನಾವು ನಮ್ಮದೇ ಧೋರಣೆಯಲ್ಲಿ ಇರಬೇಕೆಂದು ಬಯಸುವುದು ಸರಿಯಲ್ಲ ಎಂದರು.

ಅದಕ್ಕೆ ಉದಾಹರಣೆಯಾಗಿ ಮೋಹನ್ ಆಳ್ವರ ವಿದ್ಯಾಸಂಸ್ಥೆಯ ಪರವಾಗಿ ನಿಂತುಕೊಂಡ ಸಾಹಿತಿ ವೈದೇಹಿಯನ್ನು ವಿರೋಧಿಸುತ್ತಿರುವವರ ಕುರಿತೂ ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ ಪ್ರೊಫೆಸರ್ ಕಮಲಾ ಹಂಪನಾ, ಕಾದಂಬರಿಯ ಒಳ ಹೂರಣಗಳನ್ನು ಬಿಚ್ಚಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ "ನನ್ನದೇ ಸಹೋದರಿಯಾದರೂ ನನ್ನ ಹಾಗೆಯೇ ಬರೆಯಬೇಕೆಂಬ ಚೌಕಟ್ಟಿಲ್ಲದೆ, ಪುಷ್ಪಕ್ಕ ಅವಳದೇ ರೀತಿಯಲ್ಲಿ ಬರೆದಿದ್ದಾಳೆ. ಅದುವೇ ಪುಸ್ತಕದ ವಿಶೇಷತೆಯೂ ಹೌದು. ಅವಳ ಪುಸ್ತಕವನ್ನು ನಾನೇ ಪ್ರಕಟಿಸುವುದಕ್ಕಿಂತಲೂ, ರವೀಂದ್ರನಾಥ ಸಿರಿವರ ತಮ್ಮ ‌ಪ್ರಕಾಶನದ ಮೂಲಕ ‌ಹೊರಗೆ ತರುತ್ತಿರುವುದು ಮತ್ತೊಂದು ಖುಷಿಯ ವಿಚಾರ" ಎಂದರು.

ಪುಷ್ಪಾ ನಾಗತಿಹಳ್ಳಿಯವರು ಮೊದಲ ‌ಪುಸ್ತಕವನ್ನು ತಮ್ಮ ತಾಯಿಗೆ ನೀಡುವ ಮೂಲಕ‌ ಲೋಕಾರ್ಪಣೆ ಮಾಡಿದರು.

ಪ್ರಮಾಣ ಪತ್ರ ವಿತರಣೆ

ಸಮಾರಂಭ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂಜೆ  ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಹಲವು ಕಾರಣಗಳಿಂದ ವಿಶಿಷ್ಟವಾದುದಾಗಿತ್ತು. ಮೂರು ದಶಕದ ಹಿಂದೆ ಅವರು ಒಂದು ಪುಸ್ತಕ ಬಿಡುಗಡೆಯೊಂದಿಗೆ ಶೋಭಾರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದಕ್ಕೆ ವೇದಿಕೆಯಾಗಿದ್ದ 'ಅಭಿವ್ಯಕ್ತಿ' ಸಾಂಸ್ಕೃತಿಕ ಸಂಘದ 32ನೆಯ ವಾರ್ಷಿಕೋತ್ಸವವೂ ಹೌದು. ಇದೇ ಸಂದರ್ಭದಲ್ಲಿ ಅವರು ಇತ್ತೀಚೆಗಷ್ಟೇ ತಮ್ಮ ಟೆಂಟ್ ಸಿನಿಮಾ ಶಾಲೆಯ ಮೂಲಕ‌ ನಡೆಸಿದ್ದ 'ಸಿನಿಮಾ ಸೃಷ್ಟಿಯ ಸಮಗ್ರ ತರಬೇತಿ' ಕಾರ್ಯಾಗಾರದಲ್ಲಿ‌ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಚಿತ್ರ ನಟಿ ಸುಮನ್ ನಗರ್ಕರ್ ಪ್ರಮಾಣ ಪತ್ರಗಳನ್ನು ವಿತರಿಸಿ, ಶುಭ ಹಾರೈಸಿದರು. ಹೆಣ್ಣುಮಕ್ಕಳು ಕೂಡ ಇಂಥ ಕಾರ್ಯಾಗಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಾಗಲೆಂದು ಅಭಿಪ್ರಾಯ ಪಟ್ಟರು. ಶಂಕರ್ ನಾಗ್ ನಿಂದ ರಕ್ಷಿತ್ ಶೆಟ್ಟಿಯ ವರೆಗೆ ತಮ್ಮದೇ ಆದ ತಂಡಕಟ್ಟಿಕೊಂಡು ಚಿತ್ರ ಮಾಡುವವರಿಗೆ ಸದಾ ಹೊಸತನದ ಪ್ರಯೋಗಗಳನ್ನು ಮಾಡಲು ಹೆಚ್ಚು ಅವಕಾಶವಿರುತ್ತದೆ ಎಂದು ಜೋಗಿಯವರು ಕಿವಿಮಾತು ಹೇಳಿದರು.

ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಇಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಲಾವಿದರಾದ ರಘು ಸಮರ್ಥ, ನಿರ್ದೇಶಕ ಮಂಜು ಸ್ವರಾಜ್, ಚಲನಚಿತ್ರ ಅಕಾಡೆಮಿಯ ಶಿವರಾಮ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News