ವಧು ಪ್ರಿಯಾಮಣಿಯ ಮನವಿ!

Update: 2017-08-16 18:23 GMT

ಪ್ರಿಯಾಮಣಿ ಪ್ರೇಮದಲ್ಲಿ ಬಿದ್ದಿರೋ ವಿಚಾರ ಹಳೆಯದು. ಆದರೆ ಅವರು ಮುಂದಿನವಾರವೇ ವಿವಾಹವಾಗುತ್ತಿರುವ ಸುದ್ದಿ ಹೊಸದು. ಸಾಮಾನ್ಯವಾಗಿ ತಾರಾ ವಿವಾಹವೆಂದರೆ ಕನ್ನಡದ ಎಲ್ಲ ವಾರ್ತಾ ವಾಹಿನಿಗಳು ಅಲ್ಲೇ ಬೀಡು ಬಿಡುವುದನ್ನು ಕಂಡಿರುತ್ತೇವೆ. ಆದರೆ ಪ್ರಿಯಾಮಣಿಗೆ ಇದು ಇಷ್ಟವಿಲ್ಲವಂತೆ. ಅದಕ್ಕಾಗಿ ಅವರು ಮಾಧ್ಯಮಗಳತ್ತ ಒಂದು ‌ಮನವಿ ಪತ್ರ ಕಳಿಸಿದ್ದಾರೆ. ಅದು ಹೀಗಿದೆ.

ನಾನು ಮತ್ತು ಮುಸ್ತಫಾ ಇದೇ ತಿಂಗಳ 23ರಂದು ತೀರ ಖಾಸಗಿಯಾಗಿ ವಿವಾಹಿತರಾಗುತ್ತಿರುವ ವಿಚಾರವನ್ನು ತಮಗೆ ತಿಳಿಸುವಲ್ಲಿ ಸಂತೋಷ ಪಡುತ್ತೇನೆ. ನಮ್ಮ ಖಾಸಗಿತನವನ್ನು ತಾವು ಗೌರವಿಸುವಲ್ಲಿ ನೀವು ಕೂಡ ಸಹಕರಿಸುತ್ತೀರೆಂದು ನಾನು ನಿರೀಕ್ಷಿಸುತ್ತೇನೆ. ಒಮ್ಮೆ ಈ ವಿವಾಹ ಸಮಾರಂಭ ಪೂರ್ತಿಯಾದೊಡನೆ ನಾವಿಬ್ಬರೂ ನಮ್ಮ ಮದುವೆಯ ಛಾಯಾಚಿತ್ರಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇವೆ. ನಮ್ಮ ಬದುಕಿನ ಹೊಸ ಅಧ್ಯಾಯದಲ್ಲಿ  ನಿಮ್ಮ ಶುಭ ಹಾರೈಕೆಯನ್ನ ನಿರೀಕ್ಷಿಸುತ್ತಾ ವಂದನೆಗಳೊಂದಿಗೆ
ನಿಮ್ಮ ವಿಶ್ವಾಸಾರ್ಹ ಪ್ರಿಯಾಮಣಿ  ಮತ್ತು ಮುಸ್ತಫಾ ರಾಜ್..

ಎಂಬಲ್ಲಿಗೆ ಪತ್ರ ಕೊನೆಯಾಗುತ್ತದೆ. ಆದರೆ ಮಾಧ್ಯಮಗಳನ್ನು ದೂರವಿರಿಸಿರುವ ಮದುವೆಯಾದರೂ ಕೂಡ ತಾರೆಯರನ್ನು ಕರೆಯುವಲ್ಲಿ ಈಕೆ ಹಿಂದೆ ಬಿದ್ದಿಲ್ಲ. ಇಂಥ ಸಂದರ್ಭದಲ್ಲಿ ಬಹುಭಾಷಾ ತಾರೆಯಾದ ಪ್ರಿಯಾಮಣಿ ಮದುವೆಯನ್ನು ಕವರೇಜ್ ಮಾಡದೆ ನಮ್ಮ ವಾರ್ತಾ ವಾಹಿನಿಗಳು ಸುಮ್ಮನಿರುತ್ತವಾ ಎನ್ನುವುದು ಸದ್ಯದ ಪ್ರಶ್ನೆ 

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News