ಇಂದ್ರಸಭಾ- ಪ್ರೇಮದ ಹಂಬಲಿಕೆ

Update: 2017-08-17 19:16 GMT

 ಸೈಯದ್ ಆಗಾ ಹಸನ್ ಅಮಾನತ್ ಲಖನವಿ ಉರ್ದು ನಾಟಕ ಕ್ಷೇತ್ರದಲ್ಲಿ ದೊಡ್ಡ ಹೆಸರು. ಕ್ರಿ. ಶ. 1815ರಂದು ಲಖನೋದಲ್ಲಿ ಇವರು ಹುಟ್ಟಿದರು. ಹದಿಹರೆಯದಲ್ಲಿ ಪಾರ್ಶ್ವವಾಯುವಿಗೆ ಒಳಗಾದ ಈ ಲೇಖಕ ಯೌವನದ ಬಹುಭಾಗವನ್ನು ಅತ್ಯಂತ ನೋವಿನಿಂದ ಕಳೆಯಬೇಕಾಯಿತು. ಮಾತನಾಡುವ ಶಕ್ತಿಯನ್ನೂ ಇವರು ಕಳೆದುಕೊಂಡಿದ್ದರು. ಬದುಕಿನ ಬಹುಮುಖ್ಯ ಭಾಗವನ್ನು ಮನೆಯೊಳಗೇ ಕಳೆಯಬೇಕಾದ ಸ್ಥಿತಿ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ, ಮನೆಯೊಳಗಿನ ಸಾಹಿತ್ಯಕ ವಾತಾವರಣ ಅವರನ್ನು ಕೈ ಹಿಡಿದು ನಡೆಸಿತು. ಓದು ಅವರ ಸಂಗಾತಿಯಾಯಿತು. ಉರ್ದು, ಹಿಂದಿ, ಫಾರಸಿ, ಸಂಸ್ಕೃತ ಭಾಷೆಗಳ ಅಧ್ಯಯನ ಮಾಡಿದರು. ಎಲ್ಲ ಧರ್ಮಶಾಸ್ತ್ರಗಳನ್ನೂ ತನ್ನದಾಗಿಸಿಕೊಂಡರು.

ಆದರೆ ಬರವಣಿಗೆಗೆ ಪೂರಕವಾದ ದೈಹಿಕ ಶಕ್ತಿ ಅವರಿಗಿರಲಿಲ್ಲ. ವಿಶೇಷವೆಂದರೆ ಅವರೆಲ್ಲ ಅಸಹಾಯಕತೆಯಿಂದ ಹೊರಬಂದ ಏಕೈಕ ಕೃತಿ ‘ಇಂದ್ರಸಭಾ’ ಎಂಬ ಉರ್ದು ನಾಟಕ. ನಲವತ್ತಮೂರು ವರ್ಷ ಬದುಕಿದ್ದ ಅವರು ಈ ಏಕೈಕ ನಾಟಕದಿಂದಲೇ ಜನಮಾನಸದಲ್ಲಿ ಉಳಿದು ಬಿಟ್ಟರು.‘ಇಂದ್ರಸಭಾ’ ಉರ್ದು ಭಾಷೆಯ ಮೊತ್ತ ಮೊದಲ ಗೀತ ನಾಟಕ ಕೃತಿ ಎಂದೂ ಹೆಸರಾಯಿತು. ಲೇಖಕ ಸಯ್ಯದ್ ಆಗಾ ಹಸನ್ ಅವರು ಅಂದಿನ ಅವಧ್ ದೊರೆ ವಾಜೀದ್ ಅಲಿ ಶಾಹನ ಅಪೇಕ್ಷೆಯ ಮೇರೆಗೆ ಬರೆದುಕೊಟ್ಟರು ಎಂಬ ಪ್ರತೀತಿಯೂ ಇದೆ. ಶುದ್ಧ ಉರ್ದು ಭಾಷೆಯಲ್ಲಿರುವ ಈ ಕೃತಿಯಲ್ಲಿ ಕೆಲವಡೆ ಅವಧ್ ಹಾಗೂ ಲಕ್ನೋವಿನ ಸ್ಥಳೀಯ ಹಿಂದಿ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಕುವೆಂಪು ಭಾಷಾ ಪ್ರಾಧಿಕಾರ ಇವರ ವತಿಯಿಂದ ಹಮ್ಮಿಕೊಳ್ಳಲಾದ ಭಾರತೀಯ ಭಾಷಾ ನಾಟಕ ಮಾಲಿಕೆಯ ಭಾಗವಾಗಿ ಈ ಕೃತಿಯನ್ನು ಉರ್ದುವಿನಿಂದ ಕನ್ನಡಕ್ಕೆ ಇಳಿಸಲಾಗಿದೆ.

ಲೇಖಕರಾದ ಬೋಡೆ ರಿಯಾಝ್ ಅಹಮದ್, ಚಿದಾನಂದ ಸಾಲಿ, ವಿಕ್ರಮ ವಿಸಾಜಿ ಅವರು ಜೊತೆಗೆ ಈ ನಾಟಕವನ್ನು ಕನ್ನಡಕ್ಕಿಳಿಸಿದ್ದಾರೆ. ಈ ನಾಟಕವು ಉರ್ದು ಭಾಷೆಯ ವಿಭಿನ್ನ ಕಾವ್ಯ ಪ್ರಕಾರಗಳಾದ ಗಝಲ್, ನಜ್ಮ್, ನಸ್ರ್, ಮಸ್ನವಿ ಮತ್ತು ಹಿಂದಿ ಭಾಷೆಯ ಠುಮ್ರಿ, ಛಂದ್, ಗೀತ್ ಮೊದಲಾದ ರೂಪಗಳಲ್ಲಿದೆ. ನಾಟಕದ ವಸ್ತು ಪ್ರೇಮ. ಪ್ರೇಮಕ್ಕಾಗಿ ಹಂಬಲಿಸುವ, ಚಟಪಡಿಸುವ, ದುರಂತ ತಂದುಕೊಳ್ಳುವ ಮತ್ತು ಕೊನೆಯಲ್ಲಿ ಸುಖಾಂತ್ಯ ಕಾಣುವ ನಾಟಕವಿದು. ದೇವಲೋಕದ ಅಪ್ಸರೆ ಮತ್ತು ಭೂಲೋಕದ ನರಮನುಷ್ಯನ ನಡುವಿನ ಪ್ರೇಮ ತಿಕ್ಕಾಟದ ಕಥಾನಕವಿದು. ಹಿಂದೂ-ಮುಸ್ಲಿಮ್ ಪಾತ್ರಗಳೆರಡೂ ತಮ್ಮ ಧಾರ್ಮಿಕ ಆವರಣ ಕಳೆದುಕೊಂಡು ಅಪ್ಪಟ ಪ್ರೇಮಭಾಷೆಯಲ್ಲಿ ಮಿಲನಗೊಳ್ಳುವ ವಿಶಿಷ್ಟ ಕುತೂಹಲಕಾರಿ ಕಥನವನ್ನು ಈ ನಾಟಕ ಹೊಂದಿದೆ. ಕೃತಿಯ ಮುಖಬೆಲೆ 50 ರೂಪಾಯಿ. ಆಸಕ್ತರು 080- 23183311-12 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News