ಚಂಪಾವೃಕ್ಷದ ‘ಮತ್ತೊಂದು ಎಲೆ’

Update: 2017-08-19 12:22 GMT

ಚಂಪಾ ಎಂದೇ ಪ್ರಖ್ಯಾತರಾಗಿರುವ ಮತ್ತು ಈಗಾಗಲೇ ಕನ್ನಡದ ಹಿರಿಯ ಕವಿ-ನಾಟಕಕಾರರ ಸಾಲಿನಲ್ಲಿದ್ದಾರೆ ಚಂದ್ರಶೇಖರ ಪಾಟೀಲರು. ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯೊಂದಿಗೆ ಕಳೆದ ಸುಮಾರು ಐದು ದಶಕಗಳಿಂದ ತೊಡಗಿಸಿಕೊಂಡಿರುವ ಚಂಪಾ ಕನ್ನಡದ, ಕರ್ನಾಟಕದ ಮೂಲೆಮೂಲೆಗಳಲ್ಲಿ ಪರಿಚಿತರು. ಕನ್ನಡ ಪರ ಬಹುತೇಕ ಎಲ್ಲಾ ಚಳವಳಿಗಳಲ್ಲಿ ಅವರು ಭಾಗವಹಿಸಿದವರು. ವಯಸ್ಸನ್ನು ನಾಚಿಸುವ ಕ್ರಿಯಾಶೀಲ ಸೃಜನಶೀಲ ವ್ಯಕ್ತಿ.

ಈ ಎಲ್ಲ ಸಾಮಾಜಿಕ, ಬಹಿರಂಗಗಳ ಗದ್ದಲಗಳ ನಡುವೆ ಚಂಪಾ ಅವರ ಹೊಸ ಕವನ ಸಂಕಲನ ‘ಮತ್ತೊಂದು ಎಲೆ’ ಪ್ರಕಟವಾಗಿದೆ. ತನ್ನ ಮೊದಲ ಪ್ರೀತಿ ಕಾವ್ಯವೇ ಎಂದು ಚಂಪಾ ಹೇಳಿದ್ದಾರೆ. ಪ್ರಾಯಃ ಅವರಿಗೆ ಈ ಪ್ರೀತಿಯ ಅಭಿವ್ಯಕ್ತಿಗೆ ಬಿಡುವು ಕಡಿಮೆಯಾದದ್ದು ಅವರ ಮತ್ತು ಅವರ ಓದುಗರ ದುರದೃಷ್ಟವಾಗಿದೆ.

‘ಶಾಲ್ಮಲಾ’ದಂತಹ ಸುಂದರ ಕವಿತೆಯ ಕವಿಯನ್ನು ನಾವಿಲ್ಲಿ ಕಾಣಲಾರೆವಾದರೂ ಕಾವ್ಯದ ಹೊಳಪು ಅನೇಕ ಕವಿತೆಗಳಲ್ಲಿ ಕಾಣುತ್ತದೆ. ಆದರೆ ಎಲ್ಲಾ ರೀತಿಯ ಕವಿತೆಗಳನ್ನೊಳಗೊಂಡ ಈ ಸಂಕಲನದಲ್ಲಿರುವ ‘ದುರಂತ ಮೂರ್ತಿ’, ‘ಪಕ್ಷಾಂತರಿಗಳ ಸಮೂಹ ಗಾನ’ ಮುಂತಾದ ಕವಿತೆಗಳು ಅತೀ ಹುಡುಗುತನದಿಂದ, ಗುಡುಗುತನದಿಂದ ಗಂಭೀರವಾದ ಕಾವ್ಯಪಾತ್ರದ ಶೋಧನೆಗೆ ಅಡ್ಡಿಯಾದಂತಿವೆ. ‘ಕರ್ಣಾಟ-ಭಾರತ-ಮಂಜರಿ: 2009’ರಂತಹ ಚುಟುಕು ಮತ್ತು ಕುಟುಕು ಕವಿತೆಗಳು ಇಲ್ಲಿ ಹಲವಿವೆ. ಇವೆಲ್ಲ ಕಾವ್ಯದ ಪ್ರೀತಿಯಿಂದ ಹುಟ್ಟಿಕೊಳ್ಳದೆ ಒತ್ತಾಯಕ್ಕೆ ಅರಳಿ ಬಿದ್ದ ಹಗುರು ಹೂಗಳಂತಿವೆ. ಆದರೂ ಇಲ್ಲಿ ಕೆಲವು ಕವಿತೆಗಳಲ್ಲಿ ಕವಿ ಚಂಪಾ, ‘ಶಾಲ್ಮಲಾ’ದ ಚಂಪಾ ಕಾಣಿಸುತ್ತಾರೆ. ಅರ್ಥದ ಆಕಾಶವನ್ನು ಹಿಡಿಯುವಲ್ಲಿ ಅವರ ಸಾಫಲ್ಯವನ್ನು ಕಾಣಿಸುವ ಕವಿತೆಗಳು ಕೆಲವಾದರೂ ಇವೆ ಎಂಬುದಕ್ಕಾಗಿ ಈ ಕವಿತಾ ಸಂಕಲನವು ಅವರ ಕಾವ್ಯದ ಮುಂದುವರಿಕೆಯಾಗಿದೆ.

ಶೀರ್ಷಿಕೆಯ ಕವಿತೆ ‘ಮತ್ತೊಂದು ಎಲೆ’ ಹೀಗಿದೆ: ಮತ್ತೊಂದು ಎಲೆ

ಉದುರಿತು

ಉದುರುವ ಮುನ್ನ

ಹೆದರಲಿಲ್ಲ ಮುದುರಲಿಲ್ಲ

ಉದುರುತ್ತೇನೆ ಅಂತ ಒದರಲೂ ಇಲ್ಲ

ಹಾಗೇ ಉದುರಿತು ಮರಮರ ಮರುಗಿತು ಮರ

ಕಣ್ಣಿಂದ ಹನಿ ಉದುರಿತು ಹೇಳಿತು ಎಲೆ: ಎಲೆ ತಾಯೆ ನಿನ್ನ ಹಸಿ ಹೊತ್ತು ಮತ್ತೆ ಮಣ್ಣಿಗೆ ಇಳಿದು

ನಿನ್ನ ಮಡಿಲಿಗೆ ಮತ್ತೆ ತುತ್ತಾಗುವೆ ನಿನ್ನಿಂದ ಬೇರಾದರೂ ಮತ್ತೆ ನಿನ್ನ ಬೇರಾಗುವೆ.

ಬೇರಾಗುವ ಅರ್ಥ ಬಹಳಷ್ಟಿದೆ. ‘ಬಯಲು ಸೀಮೆ ಹೊಳೆ’, ‘ಒಂದು ಹಸಿ ಹಸಿ ಪ್ರಶ್ನೆ’, ನಿನ್ನ ನನ್ನ ಪಾಲು’, ‘ಮತ್ತಾವ ಬಾಗಿಲು’ ಚಂಪಾ ಗಂಭೀರವಾಗಿ ಕವಿತೆಯನ್ನು ಅಪ್ಪಿಕೊಳ್ಳಬಲ್ಲರು ಎಂಬುದಕ್ಕೆ ಸಾಕ್ಷಿ. ‘ಮತ್ತಾವ ಬಾಗಿಲು’ ಕವಿತೆಯ ಕೊನೆಯ ಸಾಲು ಹೇಳುವಂತೆ ‘ಮುಗಿಲಿಗೆ ಬಾಗಿಲೇ ಇಲ್ಲ’. ಚಂಪಾ ಕಾವ್ಯವೂ ಅಷ್ಟೇ: ಸದಾ ಎಲ್ಲ ದಿಕ್ಕಿಗೂ ತೆರೆದಿರುತ್ತದೆ. ಕವಿತೆಗಳ ದಿಡ್ಡಿ ಬಾಗಿಲನ್ನು ತೆರೆದು ವಾಚಕ ಕಾವ್ಯದ ಬೆಳಕನ್ನು ಕಾಣಬೇಕು.

ಓದಿಸಿಕೊಂಡು ಹೋಗುವ ಈ ಕವಿತಾ ಸಂಕಲನದ ಹೆಚ್ಚಿನ ಪುಟಗಳು ಕಚಕುಳಿಯನ್ನಿಡುವ ರೀತಿಯವು. ಕೆಲವು ಮಾತ್ರ ಪುಟ ಬಂಗಾರದಂತಹವು.

ಮತ್ತೊಂದು ಎಲೆಯ ಬೇರುಗಳ ಮೂಲಕ ಚಂಪಾರಿಂದ ಮಹತ್ವದ ಕಾವ್ಯವನ್ನು ನಾವು ಮತ್ತೆ ನಿರೀಕ್ಷಿಸಬಹುದೇ? 

ನಾನು ಓದಿದ ಪುಸ್ತಕ

ಬಾಲಸುಬ್ರಮಣ್ಯ ಕಂಜರ್ಪಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News