ದಿಲ್ಲಿ ದರ್ಬಾರ್

Update: 2017-08-19 18:47 GMT

ಮರಾಂಡಿ ಎಂಬ ಹೊಸ ಹೀರೊ
ಕಳೆದ ಗುರುವಾರ ರಾಜಧಾನಿಯಲ್ಲಿ ಸಂಭವಿಸಿದ ಬೆಳವಣಿಗೆಯಿಂದಾಗಿ ಸಂಯುಕ್ತ ಜನತಾದಳ ಮುಖಂಡ ಶರದ್ ಯಾದವ್ ವಿರೋಧಿ ಪಾಳಯದ ಹೊಸ ಹೀರೊ ಎನಿಸಿಕೊಂಡರು. ಆದರೆ ಇಡೀ ಪ್ರಹಸನದಲ್ಲಿ ಗಮನ ಸೆಳೆದದ್ದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ. 2006ರಲ್ಲಿ ಬಿಜೆಪಿ ತೊರೆದ ಪ್ರಬಲ ಬುಡಕಟ್ಟು ಜನಾಂಗದ ನಾಯಕರಾದ ಮರಾಂಡಿ, ಘರ್‌ವಾಪಸಿಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಸಾಂಝಿ ವಿರಾಸಟ್ ಬಚಾವೋ (ಸಂಯುಕ್ತ ಸಂಸ್ಕೃತಿ ಸಂರಕ್ಷಿಸಿ) ಎಂಬ ದಿಲ್ಲಿ ಸಭೆಯಲ್ಲಿ ಅವರು ಹಾಜರಾಗುವ ಮೂಲಕ ಗಮನ ಸೆಳೆದರು. ರಾಹುಲ್ ಗಾಂಧಿ, ಸೀತಾರಾಮ ಯೆಚೂರಿ ಮತ್ತಿತರರು ಇದರಲ್ಲಿ ಭಾಗವಹಿಸಿದ್ದರು. ಮರಾಂಡಿ ವಿರೋಧಿ ಪಾಳಯದಲ್ಲೇ ಉಳಿಯುವ ನಿರ್ಧಾರ ಕೈಗೊಂಡಂತಿದೆ. ಮರಾಂಡಿಯವರ ಜಾರ್ಖಂಡ್ ವಿಖಾಸ್ ಮೋರ್ಚಾ, ಆ ರಾಜ್ಯದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಶಕ್ತಿಯುತ ಪಕ್ಷವಾಗಿದೆ. ವೇದಿಕೆಯಲ್ಲಿದ್ದ ಪ್ರತಿಯೊಬ್ಬರೂ ಮರಾಂಡಿಯವರನ್ನು ಹೊಗಳಿದರು. ಆದರೆ ಮರಾಂಡಿ ವಿರೋಧಿ ಬಣದಲ್ಲೇ ಉಳಿಯುತ್ತಾರೆಯೇ ಅಥವಾ ಬಿಜೆಪಿ ಜತೆ ಡೀಲ್ ಕುದುರಿಸಿಕೊಂಡು ಘರ್‌ವಾಪಸಿಗೆ ಸಜ್ಜಾಗುತ್ತಾರೆಯೇ ಎಂದು ಕಾದುನೋಡಬೇಕಾಗಿದೆ.


ರಾಜ್ಯಸಭೆಯಲ್ಲಿ ಅಮಿತ್ ಶಾ

ಅಹ್ಮದ್ ಪಟೇಲ್ ರಾಜ್ಯಸಭೆ ಪ್ರವೇಶಿಸುವುದನ್ನು ತಡೆಯಲು ಅಮಿತ್ ಶಾ ವಿಫಲರಾಗಿರಬಹುದು. ಆದರೆ ಸ್ವತಃ ಅಮಿತ್ ಶಾ ರಾಜ್ಯಸಭೆ ಪ್ರವೇಶಿಸಿರುವುದು ಪಕ್ಷದ ಕೆಲವರಲ್ಲಿ ರೋಮಾಂಚನಕ್ಕೆ ಕಾರಣವಾಗಿದೆ. ಸದನದಲ್ಲಿ ಶಾ ಉಪಸ್ಥಿತಿ ವಿಶೇಷ ಗಾಂಭೀರ್ಯಕ್ಕೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ಪಕ್ಷದ ಮುಖಂಡರಲ್ಲಿದೆ. ಸಂಸತ್ತಿನಲ್ಲಿ ಲಯ ತಪ್ಪಿರುವ ಬಿಜೆಪಿ ಸದಸ್ಯರಲ್ಲಿ ಶಿಸ್ತು ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದು, ಶಾ ಅವರ ಗಮನಕ್ಕೆ ಬಾರದ ಹಲವು ಮಹತ್ವದ ಅಂಶಗಳು ಕೂಡಾ ಅವರ ಗಮನಕ್ಕೆ ಬರಲಿವೆ ಎಂದು ಹೇಳಲಾಗುತ್ತಿದೆ. ವಿಶ್ವ ಶಾ ಅವರನ್ನು ಕೇವಲ ಸಂಘಟಕ ಹಾಗೂ ತಂತ್ರಗಾರ ಎಂದಷ್ಟೇ ಗುರುತಿಸಿದ್ದು, ಆದರೆ ಇತಿಹಾಸ, ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿಗಳ ಬಗ್ಗೆಯೂ ಆಳವಾದ ಜ್ಞಾನವಿದೆ ಎನ್ನುವುದು ಇನ್ನೂ ಪರಿಚಯವಾಗಿಲ್ಲ ಎಂದು ಈ ನಾಯಕರು ಹೇಳಿಕೊಳ್ಳುತ್ತಾರೆ. ಒಂದು ವರದಿಯ ಪ್ರಕಾರ, ಶಾ ಅವರ ಉಪಸ್ಥಿತಿ ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎಂದರೆ, ವಿರೋಧ ಪಕ್ಷಗಳೂ ಸೇರಿದಂತೆ ಇಡೀ ಸದನ ಅವರು ಮಾತನಾಡುವುದನ್ನು ಗಮನವಿಟ್ಟು ಕೇಳುತ್ತದೆ.


ರಾಹುಲ್- ಪಟೇಲ್ ಭಾಯಿ ಭಾಯಿ ಅಲ್ಲ?!

ಕಾಂಗ್ರೆಸ್ ಬಗೆಗಿನ ವದಂತಿಗೆ ತಡೆ ಇಲ್ಲ. ಒಂದಲ್ಲ ಒಂದು ಪಿತೂರಿ ಸಿದ್ಧಾಂತಗಳು ಸುತ್ತುತ್ತಲೇ ಇವೆ. ಅಹ್ಮದ್ ಪಟೇಲ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ರಾಹುಲ್ ಗಾಂಧಿಯವರು ಬಹಿರಂಗವಾಗಿ ಅಭಿನಂದಿಸದ ಬಗ್ಗೆ ಇದೀಗ ಗುಲ್ಲೆದ್ದಿದೆ. ಇದು ತೀರಾ ಸಣ್ಣದಾಗಿ, ತಡವಾಗಿ ಬೆಳಕಿಗೆ ಬಂದಿದೆ. ಮಧ್ಯರಾತ್ರಿ ನಾಟಕದ ಬಳಿಕ, ರಾಹುಲ್‌ಗಾಂಧಿ ರಾಜಕೀಯ ವರ್ತುಲದಲ್ಲಿ ಎದ್ದಿದ್ದ ಚರ್ಚೆಯನ್ನು ಕಡೆಗಣಿಸಿದ್ದರು. ಕಾಂಗ್ರೆಸ್ ಮುಖಂಡರಿಂದ ಅಹ್ಮದ್ ಪಟೇಲ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿತ್ತು. ಅಹ್ಮದ್ ಪಟೇಲ್ ಅವರ ವಿಜಯ ಪಕ್ಷದ ನೈತಿಕತೆಗೆ ದೊಡ್ಡ ಸ್ಫೂರ್ತಿ ನೀಡುತ್ತದೆ ಎನ್ನುವುದು ಈ ಮುಖಂಡರ ಅಭಿಮತ. ಈ ಹಿನ್ನೆಲೆಯಲ್ಲಿ ರಾಹುಲ್ ಮೌನ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಪಕ್ಷದ ಒಂದು ಮೂಲದ ಪ್ರಕಾರ, ರಾಹುಲ್ ಗಾಂಧಿ ವೈಯಕ್ತಿಕವಾಗಿ ಅಹ್ಮದ್ ಪಟೇಲ್ ಅವರಿಗೆ ಅಭಿನಂದನೆ ಹೇಳಿದ್ದಾರೆ. ಆದರೆ ಸಾರ್ವಜನಿಕವಾಗಿ ಈ ಅಭಿನಂದನೆ ಸಲ್ಲಿಸಿದ್ದರೆ ಅದರ ಪರಿಣಾಮ ಹೆಚ್ಚುತ್ತಿತ್ತು ಎನ್ನುವುದು ಇತರ ಕೆಲವರ ನಂಬಿಕೆ. ಗುಜರಾತ್‌ನಲ್ಲಿ ಪಕ್ಷದಲ್ಲಿ ಉಂಟಾಗಿರುವ ಒಳಜಗಳದ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿತ್ತು ಎಂಬ ವಾದವನ್ನು ಈ ವರ್ಗದ ಜನ ಮುಂದಿಡುತ್ತಾರೆ. ರಾಹುಲ್ ಅವರ ನಿಕಟವರ್ತಿಗಳು ಅಹ್ಮದ್ ಪಟೇಲ್ ಅವರನ್ನು ಟ್ವೀಟ್ ಮಾಡಿ ಅಭಿನಂದಿಸಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿತ್ತು. ‘‘ಅಭಿನಂದನೆಗಳು ಅಹ್ಮದ್ ಭಾಯ್, ಇದೀಗ ಗುಜರಾತ್ ವಿಧಾನಸಭಾ ಚುನಾವಣೆಯನ್ನು ನಾವು ರಾಹುಲ್ ನಾಯಕತ್ವದಲ್ಲಿ ಗೆಲ್ಲಬಹುದು’’ ಎಂದು ಒಂದು ಟ್ವೀಟ್ ಬಣ್ಣಿಸಿದೆ. ಪಟೇಲ್ ಅವರ ಸ್ಥಾನವನ್ನು ಕಾಪಾಡಿದ್ದು ರಾಹುಲ್ ಎಂಬ ಅರ್ಥ ಬರುವ ಟ್ವೀಟ್ ಅದು. ಬಹುಶಃ ಆಂತರಿಕ ಜಗಳಕ್ಕೆ ಕೊನೆ ಇದ್ದಂತಿಲ್ಲ.


ಹೊಸ ತಂದೆ
ಗಾಯಕ, ನಟ, ರಾಜಕಾರಣಿ ಬಬುಲ್ ಸುಪ್ರಿಯೊ ಮತ್ತು ಪತ್ನಿ ರಚನಾ ಅವರು ನೈನಾ ಸುಪ್ರಿಯೊ ಹೆಸರಿನ ತಮ್ಮ ಮೊದಲ ಮಗುವನ್ನು ಇತ್ತೀಚೆಗೆ ಸ್ವಾಗತಿಸಿದ್ದಾರೆ. ಈ ಜೋಡಿ ಕಳೆದ ವರ್ಷದ ಆಗಸ್ಟ್ ನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಇವರ ಪ್ರೇಮಕಥನದ ಬಗ್ಗೆ ಸಾಕಷ್ಟು ಗುಲ್ಲೆಬ್ಬಿದ್ದಿತ್ತು. ಕೋಲ್ಕತಾದಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ಇಬ್ಬರ ಪ್ರೇಮಾಂಕುರವಾಗಿದ್ದು, ಸಮುದ್ರಮಟ್ಟಕ್ಕಿಂತ 35 ಸಾವಿರ ಅಡಿ ಎತ್ತರದಲ್ಲಿ ಇದು ಘಟಿಸಿತ್ತು ಎನ್ನಲಾಗಿದೆ. ಕಳೆದ ವರ್ಷದ ಆಗಸ್ಟ್ 9ರಂದು ಇವರ ವಿವಾಹವಾಗಿತ್ತು. ಬಬೂಲ್ ತಮ್ಮ ಮೊದಲ ಪತ್ನಿಯಿಂದ ಪಡೆದ ಮೊದಲ ಹೆಣ್ಣುಮಗುವಿನ ತಂದೆ ಕೂಡಾ. ಶರ್ಮಿಳಿಗೆ ಈಗ 18 ವರ್ಷ. ಆದರೆ ಸುಪ್ರಿಯೊ ತಮ್ಮ ಹೆಣ್ಣುಮಗುವಿನ ಜನನದ ಸಂಭ್ರಮ ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಚಂಡಿಗಢದಲ್ಲಿ ಮಹಿಳೆಯನ್ನು ಹಿಂಬಾಲಿಸಿದ ಪ್ರಕರಣದ ಸಂಬಂಧ ನಡೆಯುತ್ತಿದ್ದ ಟ್ವಿಟರ್ ಸಮರದಲ್ಲಿ ಅವರು ಬ್ಯುಸಿ ಇದ್ದರು. ಮಹಿಳೆಯನ್ನು ಅಡ್ಡಗಟ್ಟಿದ ಯುವಕರನ್ನು ಸಮರ್ಥಿಸುವ ಇವರ ಟ್ವೀಟ್ ವೈರಲ್ ಆಗಿತ್ತು. ಇದು ಅವರ ಕೊಳಕು ಬಾಯಿಯ ಪ್ರತಿಬಿಂಬ ಎಂಬ ಟೀಕೆ ವ್ಯಕ್ತವಾಗಿತ್ತು. ಆದರೆ ಅದು ಅಲ್ಪಾವಧಿಗೆ ಮಾತ್ರ. ಇದೀಗ ಮಗಳಿಗೆ ತಮ್ಮ ಅಮೂಲ್ಯ ಸಮಯವನ್ನು ನೀಡುತ್ತಿದ್ದಾರೆ.


ಒಗಟಾದ ಮಮತಾ
ಇತ್ತೀಚಿನ ನಗರ ಸ್ಥಳೀಯ ಸಂಸ್ಥೆಗಳ ವಿಜಯ ಮಮತಾ ಬ್ಯಾನರ್ಜಿಗೆ ಮತ್ತಷ್ಟು ಬಲ ನೀಡಿದೆ. ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಸಂಯುಕ್ತ ಸಂಸ್ಕೃತಿಯನ್ನು ಸಂರಕ್ಷಿಸಿ ಅಭಿಯಾನದಲ್ಲಿ ಬಹುತೇಕ ಎಲ್ಲ ವಿರೋಧಿ ಮುಖಂಡರು ಹಾಜರಿದ್ದರೂ, ಮಮತಾ ಹಾಜರಿರಲಿಲ್ಲ. ಆದರೆ ಅವರು ಪ್ರತಿನಿಧಿಯನ್ನು ಕಳುಹಿಸಿಕೊಟ್ಟಿದ್ದರು. ಅವರಿಗೆ ಅಲರ್ಜಿ ಆದದ್ದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರ ಉಪಸ್ಥಿತಿ. ಹಲವು ಮುಖಂಡರು ಅವರ ಪಕ್ಷದ ವಿಜಯವನ್ನು ಹೊಗಳಿದರು. ಪಶ್ಚಿಮ ಬಂಗಾಳದಲ್ಲಿ ಸ್ವಲ್ಪಮಟ್ಟಿಗೆ ನೆಲೆ ಕಂಡುಕೊಂಡಿದೆ ಎನ್ನಲಾದ ಬಿಜೆಪಿ ವಿನಾಶದ ಬಗ್ಗೆಯೂ ಮಾತನಾಡಿದರು. ಆದರೆ ಯಾರಿಗೂ ಉತ್ತರಿಸಲು ಸಾಧ್ಯವಾಗದ ಪ್ರಶ್ನೆ ಎಂದರೆ, ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಮುಖವಾಗುತ್ತಾರೆಯೇ ಎನ್ನುವುದು. ಕನಿಷ್ಠ ಕಾಂಗ್ರೆಸಿಗರಂತೂ ಇದಕ್ಕೆ ಉತ್ತರಿಸುವ ಸ್ಥಿತಿಯಲ್ಲಿಲ್ಲ. ತಮ್ಮ ರಾಜ್ಯದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಮಮತಾ ಬ್ಯಾನರ್ಜಿಯವರನ್ನು ವಿರೋಧ ಪಕ್ಷಗಳು ನಿರ್ಲಕ್ಷಿಸಲು ಸಾಧ್ಯವೇ? 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News