ನಿತೀಶ್, ಸುಶೀಲ್ ಗೆ ಸೃಜನ್ ಹಗರಣದ ಉರುಳು
ಈ ಹಗರಣದ ತನಿಖೆಗೆ ಪ್ರತಿಪಕ್ಷಗಳು ಪಟ್ಟುಹಿಡಿದಿವೆ. ಸರಕಾರದ ನಿಧಿಯನ್ನು ಬಳಸಿಕೊಂಡು ಈ ಎನ್‌ಜಿಒ ಸಂಸ್ಥೆಯು ಅಧಿಕ ಬಡ್ಡಿದರದಲ್ಲಿ ಸಾಲವನ್ನು ನೀಡಿ ಲಾಭ ಮಾಡಿಕೊಳ್ಳುತ್ತಿತ್ತು. ಈ ಹಗರಣದ ಕಬಂಧಬಾಹುಗಳು ಬಾಗಲ್ಪುರದಾಚೆಗೆ ಅಂದರೆ ಬಿಹಾರದ ಇತರ ಜಿಲ್ಲೆಗಳಿಗೂ ಚಾಚಿಕೊಂಡಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.
ಸೃಜನ್ ಹಗರಣದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನೇರವಾಗಿ ಶಾಮೀಲಾಗಿದ್ದಾರೆಂದು ಪ್ರತಿಪಕ್ಷಗಳು ಆರೋಪಿಸಿರುವುದು ಹೊಸದಾಗಿ ರಚನೆಯಾದ ಬಿಜೆಪಿ-ನಿತೀಶ್ ಮೈತ್ರಿಕೂಟ ಸರಕಾರವನ್ನು ಮುಜುಗರದಲ್ಲಿ ಸಿಲುಕಿಸಿದೆ. ಬಿಹಾರದ ಬಾಗಲ್‌ಪುರ ಜಿಲ್ಲೆಯ ‘ಸೃಜನ್ ಮಹಿಳಾ ವಿಕಾಸ ಸಹಯೋಗ ಸಮಿತಿ’ ಎಂಬ ಎನ್‌ಜಿಒ ಸಂಸ್ಥೆಯ ಖಾತೆಗೆ ಸರಕಾರದ ನಿಧಿಗಳು ಅಕ್ರಮವಾಗಿ ವರ್ಗಾವಣೆಯಾದ ಈ ಹಗರಣದ ತನಿಖೆಗೆ ಪ್ರತಿಪಕ್ಷಗಳು ಪಟ್ಟುಹಿಡಿದಿವೆ. ಸರಕಾರದ ನಿಧಿಯನ್ನು ಬಳಸಿಕೊಂಡು ಈ ಎನ್‌ಜಿಒ ಸಂಸ್ಥೆಯು ಅಧಿಕ ಬಡ್ಡಿದರದಲ್ಲಿ ಸಾಲವನ್ನು ನೀಡಿ ಲಾಭ ಮಾಡಿಕೊಳ್ಳುತ್ತಿತ್ತು. ಈ ಹಗರಣದ ಕಬಂಧಬಾಹುಗಳು ಬಾಗಲ್ಪುರದಾಚೆಗೆ ಅಂದರೆ ಬಿಹಾರದ ಇತರ ಜಿಲ್ಲೆಗಳಿಗೂ ಚಾಚಿಕೊಂಡಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.
2007ರಿಂದ 2014ರ ಅವಧಿಯಲ್ಲಿ ಎನ್‌ಜಿಒ ಸಂಸ್ಥೆಯು ಈ ವಂಚನೆಯ ಜಾಲವನ್ನು ನಡೆಸಿಕೊಂಡು ಬಂದಿತ್ತು. ಕಳೆದ ಫೆಬ್ರವರಿಯಲ್ಲಿ ಸಂಸ್ಥೆಯ ಸಂಸ್ಥಾಪಕಿ ಮನೋರಮಾ ದೇವಿ ನಿಧನದ ಬಳಿಕ ಅದರ ಚಟುವಟಿಕೆಗಳಿಗೆ ಧಕ್ಕೆಯಾಗಿತ್ತು. ಹಗರಣಕ್ಕೆ ಸಂಬಂಧಿಸಿ ಆಕೆಯ ಪುತ್ರ ಅಮಿತ್ ಕುಮಾರ್ ಹಾಗೂ ಸೊಸೆ ಪ್ರಿಯಾ ಕುಮಾರ್ ಅವರನ್ನು ಬಂಧಿಸಲಾಗಿತ್ತು.
ಬೃಹತ್ ಹಗರಣ
500 ಕೋಟಿ ರೂ.ಗೂ ಅಧಿಕ ಮೊತ್ತದ ಹಗರಣ ಇದಾಗಿದೆಯೆಂದು ಹಲವಾರು ವರದಿಗಳು ತಿಳಿಸಿವೆ. ಐಎಎನ್‌ಎಸ್ ಸುದ್ದಿಸಂಸ್ಥೆಯು ಈ ಹಗರಣದಲ್ಲಿ 1 ಸಾವಿರ ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆಯಾಗಿದೆಯೆಂದು ಹೇಳಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಇದೊಂದು 700 ಕೋಟಿ ರೂ.ಗೂ ಅಧಿಕ ಮೊತ್ತದ ಹಗರಣವೆಂದು ಆಗಸ್ಟ್ 15ರಂದು ಪ್ರಕಟವಾದ ತನ್ನ ವರದಿಯಲ್ಲಿ ತಿಳಿಸಿದೆ.
ಹಗರಣದ ಕಾರ್ಯವಿಧಾನ
ಆಗಸ್ಟ್ 14ರಂದು ಪ್ರಕಟವಾದ ವರದಿಯೊಂದರಲ್ಲಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯು, ಹಗರಣದಲ್ಲಿ ಶಾಮೀ ಲಾದವರ ಕಾರ್ಯತಂತ್ರವನ್ನು ಅನಾವರಣಗೊಳಿಸಿದೆ. ಈ ವರದಿಯ ಪ್ರಕಾರ, ಸೃಜನ್ ಎನ್‌ಜಿಒ ಸಂಸ್ಥೆಯು ಬ್ಯಾಂಕ್ ಅಧಿಕಾರಿಗಳು ಹಾಗೂ ಖಜಾನೆ ಅಧಿಕಾರಿಗಳ ಜೊತೆ ಕೈಜೋಡಿಸಿ ರಹಸ್ಯವಾಗಿ ಸರಕಾರಿ ನಿಧಿಗಳನ್ನು ತನ್ನ ಖಾತೆಗೆ ಬರುವಂತೆ ಮಾಡುತ್ತಿತ್ತು ಹಾಗೂ ಪ್ರಧಾನ ಮೊತ್ತದ ಮೇಲೆ ಬಡ್ಡಿಯನ್ನು ಸಂಪಾದಿಸುತ್ತಿತ್ತು. ಇದಕ್ಕಾಗಿ ಎನ್‌ಜಿಒ ಸಂಸ್ಥೆಯು ಜಿಲ್ಲಾ ಖಜಾನೆಗಳು ವಿವಿಧ ಸರಕಾರಿ ಇಲಾಖೆಗಳಿಗೆ ಬಿಡುಗಡೆಗೊಳಿಸುವ ಚೆಕ್‌ಗಳ ಹಿಂಬದಿಯಲ್ಲಿ ತನ್ನ ಖಾತೆ ಸಂಖ್ಯೆಯನ್ನು ಬರೆಯುವಂತೆ ಮಾಡುತ್ತಿತ್ತು. ತಾನು ಸಿಕ್ಕಿಬೀಳುವುದರಿಂದ ತಪ್ಪಿಸಿಕೊಳ್ಳಲು ಹಗರಣದ ರೂವಾರಿಗಳು ನಕಲಿ ಇ-ಸ್ಟೇಟ್‌ಮೆಂಟ್‌ನ್ನು ತಯಾರಿಸುವ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿತ್ತು. ಈ ನಕಲಿ ಇ-ಸ್ಟೇಟ್‌ಮೆಂಟ್‌ಗಳನ್ನು ಅದು ನಿಯಮಿತವಾಗಿ ಆಯಾ ಸರಕಾರಿ ಇಲಾಖೆಗಳಿಗೆ ಕಳುಹಿಸಿಕೊಡುತ್ತಿತ್ತು.
ಇದಲ್ಲದೆ, ಈ ಹಣದಿಂದ ಎನ್‌ಜಿಒ ಜನರಿಗೆ ಅತ್ಯಧಿಕ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತಿತ್ತು. ಎನ್‌ಜಿಒ ಸಂಸ್ಥೆಯು 2007-14ರಲ್ಲಿ ನಕಲಿ ಪಾಸ್‌ಪುಸ್ತಕಗಳನ್ನು ತಯಾರಿಸಿದ್ದು, ಆ ಮೂಲಕ ಸರಕಾರದ ಲೆಕ್ಕಪತ್ರ ಪರಿಶೋಧನೆಯಿಂದ ತಪ್ಪಿಸಿಕೊಂಡಿತ್ತು. ಸಂಸ್ಥೆಯು ನಕಲಿ ಬ್ಯಾಂಕಿಂಗ್ ಸಾಫ್ಟ್ ವೇರ್‌ನ ಕಾರ್ಯನಿರ್ವಹಣೆಗೆ ಬಳಸುತ್ತಿದ್ದ ಲ್ಯಾಪ್‌ಟಾಪ್, ಪ್ರಿಂಟರ್, ಪೆನ್‌ಡ್ರೈವ್‌ಗಳು ಹಾಗೂ ನಕಲಿ ಬ್ಯಾಂಕ್ ಇ-ಸ್ಟೇಟ್‌ಮೆಂಟ್ ಪ್ರತಿಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈತನಕ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳಲ್ಲೊಬ್ಬನ ಬಳಿಯಿದ್ದ ಲ್ಯಾಪ್‌ಟಾಪ್‌ನ್ನು ಅಧಿಕಾರಿಗಳು ವಶಪಡಿಸಿಕೊಂಡ ಬಳಿಕ ಹಗರಣವು ಬಯಲಿಗೆ ಬಂದಿತ್ತು.
ಯಾರ ಗಮನಕ್ಕೂ ಬಾರದೆ ಎನ್‌ಜಿಒ ಸಂಸ್ಥೆಯು ತನ್ನ ವಂಚನೆಯನ್ನು ಹೇಗೆ ನಡೆಸಲು ಸಾಧ್ಯವಾಯಿತೆಂಬ ಬಗ್ಗೆ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಯಾರೂ ಕೂಡಾ ಕೇಳದಿದ್ದರೂ, ನಕಲಿ ಇ-ಸ್ಟೇಟ್‌ಮೆಂಟ್‌ಗಳು ಬರುತ್ತಿದ್ದ ಹೊರತಾಗಿಯೂ ಸರಕಾರಿ ಅಧಿಕಾರಿಗಳು ಆ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿದ್ದರು. ಇ-ಸ್ಟೇಟ್‌ಮೆಂಟ್‌ಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಸಹಿ ಇಲ್ಲದಿದ್ದರೂ, ಸರಕಾರಿ ಇಲಾಖೆಗಳಿಗೆ ಸಂದೇಹ ಬಾರದಿರುವುದು ಅಚ್ಚರಿಕರವೆಂದು ಬಿಹಾರದ ಮುಖ್ಯಕಾರ್ಯದರ್ಶಿ ಅಂಜನಿ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಹಗರಣದಲ್ಲಿ ಕೆಲವು ಸರಕಾರಿ ಅಧಿಕಾರಿಗಳು ಕೂಡಾ ಶಾಮೀಲಾಗಿದ್ದಾರೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಪ್ರಕಾರ, ಸರಕಾರಿ ನಿಧಿಗಳನ್ನು ನೇರವಾಗಿ ಇಂಡಿಯನ್ ಬ್ಯಾಂಕ್‌ನ ಬಾಗಲ್‌ಪುರ ಶಾಖೆ ಹಾಗೂ ಬ್ಯಾಂಕ್ ಬರೋಡಾದ ಕೆಲವು ಶಾಖೆಗಳಲ್ಲಿರುವ ಸೃಜನ್ ಎನ್‌ಜಿಒ ಸಂಸ್ಥೆಯ ಖಾತೆಗಳಿಗೆ ವರ್ಗಾಯಿಸಲ್ಪಟ್ಟಿತ್ತು.
ಈ ಸಂಸ್ಥೆಯು ಸರಕಾರಿ ಹಣವನ್ನು ತನ್ನ ಖಾತೆಗಳಿಗೆ ವರ್ಗಾಯಿಸಲು ನಡೆಸುತ್ತಿದ್ದ ಕಾರ್ಯತಂತ್ರವನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೀಗೆ ವಿವರಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಒಬ್ಬರು ಬ್ಯಾಂಕ್‌ಗೆ ಖಜಾನೆಯಿಂದ ಹಣದ ವರ್ಗಾವಣೆಗೆ ಸಂಬಂಧಿಸಿದ ಚೆಕ್‌ನ್ನು ನೀಡುತ್ತಾರೆ. ಅವರ ಕಚೇರಿಯ ಸಿಬ್ಬಂದಿಯೊಬ್ಬನನ್ನು ಬಳಸಿಕೊಂಡು ಚೆಕ್‌ನ ಹಿಂಭಾಗದಲ್ಲಿ ಎನ್‌ಜಿಒ ಖಾತೆಗೆ ಹಣವನ್ನು ಠೇವಣಿ ಇಡಬೇಕೆಂಬ ಸೂಚನೆಯೊಂದಿಗೆ ನಕಲಿ ಸಹಿ ಹಾಕಿಸಲಾಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟರು ಹೊಸ ಚೆಕ್ ನೀಡಿದಾಗ, ಹಣವನ್ನು ನೇರವಾಗಿ ಸೃಜನ್‌ನ ಖಾತೆಯಿಂದ ಜಿಲ್ಲಾಡಳಿತದ ಖಾತೆಗೆ ಕಳುಹಿಸಲಾಗುತ್ತದೆ. ಆದುದರಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಾರಿಗೊಳಿಸಿದ ಚೆಕ್ ಬೌನ್ಸ್ ಆಗುತ್ತಿರಲಿಲ್ಲ. ಹೀಗಾಗಿ ಇಲ್ಲಿ ವಂಚನೆ ನಡೆಯುತ್ತಿರುವುದು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಅಲ್ಲದೆ ಎನ್‌ಜಿಒ ಸಂಸ್ಥೆಯು ನಕಲಿ ಇ-ಸ್ಟೇಟ್‌ಮೆಂಟ್‌ಗಳನ್ನು ಮುದ್ರಿಸಿ, ಅಗತ್ಯಬಿದ್ದಾಗಲೆಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಒದಗಿಸುತ್ತಿತ್ತು.
ನಿತೀಶ್‌ಕುಮಾರ್ ಹಾಗೂ ಸುಶೀಲ್ ಮೋದಿ ಶಾಮೀಲು?
2005ರಿಂದೀಚೆಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಸುಶೀಲ್ ಮೋದಿ ರಾಜ್ಯದ ಹಣಕಾಸು ಸಚಿವರಾಗಿದ್ದಾಗ ಬಹುತೇಕ ಸಮಯದಲ್ಲಿ ಈ ವಂಚನೆ ಹಗರಣ ನಡೆದಿದೆ. ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಅವರು ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದರು ಹಾಗೂ ಸುಶೀಲ್ ಮೋದಿಯ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ನ್ಯಾಯವಾದಿ ಮಣಿಭೂಷಣ್ ಪ್ರತಾಪ್ ಸೇನ್‌ಗಾರ್ ಎಂಬವರು ಪಾಟ್ನಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಒಂದು ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹಗರಣ ಇದಾಗಿದ್ದು, ಹಲವಾರು ಉನ್ನತ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಸೆಂಗಾರ್ ಆಪಾದಿಸಿದ್ದರು.
ಆರ್‌ಜೆಡಿ ನಾಯಕ ಲಾಲುಪ್ರಸಾದ್ ಅವರು ಇತ್ತೀಚೆಗೆ ಸೃಜನ್ ಹಗರಣದಲ್ಲಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ನಾಯಕರಾದ ಸುಶೀಲ್ ಮೋದಿ, ಶಾನವಾಝ್ ಹುಸೈನ್, ಗಿರಿರಾಜ್ ಕಿಶೋರ್, ನಿಶಿಕಾಂತ್ ದುಬೆ ಹಾಗೂ ವಿಪಿನ್ ಬಿಹಾರಿ ಶಾಮೀಲಾಗಿದ್ದಾರೆಂದು ಆರೋಪಿಸಿದ್ದಾರೆ. ಸೃಜನ್ ಹಗರಣದಿಂದ ಪಾರಾಗುವ ಉದ್ದೇಶದಿಂದಲೇ ನಿತೀಶ್ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆಂದು ಲಾಲು ದೂರಿದ್ದಾರೆ.