ಭಾರತೀಯ ಭಾಷಾ ಸಾಹಿತ್ಯಗಳ ವರ್ಗಸೆಲೆ
‘ಭಾರತೀಯ ಭಾಷಾ ಸಾಹಿತ್ಯಗಳ ವರ್ಗ ಸೆಲೆ’ ಮಾರ್ಕ್ಸ್‌ವಾದಿ ಸಾಹಿತ್ಯ ವಿಮರ್ಶಾ ಸಂಕಲನವಾಗಿದೆ. ಪ್ರೊ. ಬಿ. ಗಂಗಾಧರ ಮೂರ್ತಿ ಈ ಕೃತಿಯನ್ನು ಸಂಪಾದಿಸಿದ್ದಾರೆ. 1979ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಮಂಡಿಸಲಾದ ವಿಚಾರಗಳ ಸಂಗ್ರಹ ಇದು. ರಾಷ್ಟ್ರಮಟ್ಟದ ಎಡಪಂಥೀಯ ಚಿಂತಕರು ಇಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಇದರ ಮೊದಲ ಪ್ರಕಟನೆಯ ವರ್ಷವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ‘ಭಾರತೀಯ ಭಾಷಾ ಸಾಹಿತ್ಯದ ವರ್ಗ ಸೆಲೆ’ ಭಾರತೀಯ ಭಾಷೆಗಳ ಸಾಹಿತ್ಯ ಕುರಿತಂತೆ ಕನ್ನಡದಲ್ಲಿ ಪ್ರಕಟವಾದ ಮೊದಲ ಮಾರ್ಕ್ಸ್‌ವಾದಿ ಅನ್ವಯಿಕ ಸಾಹಿತ್ಯ ವಿಮರ್ಶೆಗಳ ಸಂಕಲನವೆನಿಸುತ್ತದೆ. ಅದುವರೆಗೆ ಮಾರ್ಕ್ಸ್‌ವಾದಿ ಸಾಹಿತ್ಯ, ಮಾರ್ಕ್ಸ್‌ವಾದಿ ವಿಮರ್ಶೆ ಎನ್ನುವ ಮಾತುಗಳು ಚರ್ಚೆಯ ವಿಷಯವಾಗಿ ಕನ್ನಡ ಸಾಹಿತ್ಯಕ ವಲಯಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಹೊರತು ಅವನ್ನು ಸಾಹಿತ್ಯ ಕೃತಿಗಳ ಸಂದರ್ಭದಲ್ಲಿ ಪರಿಭಾವಿಸುವ ಒಂದು ಮಾದರಿಯಾಗಿ ರೂಪಿಸುವ ಪ್ರಯತ್ನ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಕೃತಿಯ ಮಹತ್ವವನ್ನು ಮನಗಂಡು ಲಡಾಯಿ ಪ್ರಕಾಶ ಇದನ್ನು ಮತ್ತೆ ಪ್ರಕಟಿಸಿದೆ. ಬರಗೂರು ರಾಮಚಂದ್ರಪ್ಪ, ಕೆ. ಕುಟುಂಬರಾವ್, ಡಾ. ಕೆ. ಕೈಲಾಸಪತಿ, ಚಿತ್ರಲೇಖ ವೌನಗುರು, ಪಿ. ಗೋವಿಂದ ಪಿಳ್ಳೈ, ಸುಧೀರ್ ಬೇಡೇಕರ್, ಸುದೀಶ್ ಪಚೌರಿ, ಅವಂತಿ ಕುಮಾರ್ ದವೆ, ಸುಧಾಕರ್ ಜೋಷಿ, ಅನಿಲ್ ಬಾಂದೇಕರ್, ಸುತೀಂದರ್ ಸಿಂಗ್ ನೂರ್, ಡಾ. ಮುಹಮ್ಮದ್ ಹಸನ್, ಮೋದಿಲಾಲ್ ಸಾಕಿ, ಬಿ. ಗಂಗಾಧರ ಮೂರ್ತಿ, ಕೆ. ಪಿ. ವಾಸುದೇವನ್ ಅವರು ವಿವಿಧ ವಿಷಯಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಹೊಸಗನ್ನಡ ಸಾಹಿತ್ಯದ ವರ್ಗ ಸ್ವಭಾವ, ತೆಲುಗು ಸಾಹಿತ್ಯದಲ್ಲಿ ವರ್ಗಸೃಷ್ಟಿ, ಆಧುನಿಕ ತಮಿಳು ಸಾಹಿತ್ಯದ ವರ್ಗ ತಳಪಾಯ, ಮಲಯಾಳಂ ಪ್ರಗತಿಶೀಲ ಸಾಹಿತ್ಯದ ಪುನಶ್ಚೇತನ, ಮರಾಠಿ ಸಾಹಿತ್ಯದ ಸಾಮಾಜಿಕ ಸ್ತರಗಳು, ಸಮಕಾಲೀನ ಹಿಂದಿ ಸಾಹಿತ್ಯದ ಆಯಾಮಗಳು, ಗುಜರಾತಿ ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ, ಸಮಕಾಲೀನ ಮರಾಠಿ ಸಾಹಿತ್ಯದಲ್ಲಿ ಅಸ್ಮಿತೆಯ ಪ್ರಶ್ನೆ, ಆಧುನಿಕ ಪಂಜಾಬಿ ಸಾಹಿತ್ಯದ ವರ್ಗಸೆಲೆ ಮತ್ತು ಸಮಸ್ಯೆಗಳು, ಉರ್ದು ಸಾಹಿತ್ಯದ ವರ್ಗನೆಲೆ, ಕಾಶ್ಮೀರಿ ಸಾಹಿತ್ಯದಲ್ಲಿ ಜನಪರ ಕಾಳಜಿ, ಮಾರ್ಕ್ಸ್‌ವಾದಿ ವಿಮರ್ಶೆಯ ಕೆಲವು ಸಮಸ್ಯೆಗಳು ಹೀಗೆ ಭಾಷೆ ಮತ್ತು ಸಾಹಿತ್ಯವನ್ನು ನೆಪವಾಗಿಟ್ಟುಕೊಂಡು, ದೇಶದ ವಿವಿಧ ಭಾಗಗಳಲ್ಲಿ ಹರಡಿಕೊಂಡಿರುವ ವರ್ಗ ಸಂಘರ್ಷವನ್ನು ಚರ್ಚಿಸಲಾಗಿದೆ.
ಒಟ್ಟು ಪುಟಗಳು 160. ಮುಖಬೆಲೆ 110 ರೂಪಾಯಿ.