ಆದಿಲಶಾಹಿ ಕಾಲವನ್ನು ಹೇಳುವ ಕೃತಿ

Update: 2017-08-22 18:46 GMT

 ಮಧ್ಯಯುಗೀನ ಭಾರತದ ಚರಿತ್ರೆಯಲ್ಲಿ ವಿಜಾಪುರದ ಆದಿಲಶಾಹಿಗಳ ಪಾತ್ರ ಬಹುಮುಖ್ಯವಾಗಿದೆ. ದಕ್ಷಿಣ ಭಾರತದ ಬಹುಪಾಲು ಪ್ರದೇಶವನ್ನು ಅವರು ವಿಜಾಪುರ ಕೇಂದ್ರದಿಂದ ಆಳಿದರು. ಇಂದಿನ ಅಖಂಡ ಕರ್ನಾಟಕವನ್ನು ಅವರು ಸುಮಾರು ಒಂದು ಶತಮಾನದಷ್ಟು ಕಾಲ ತಮ್ಮ ಅಂಕಿತದಲ್ಲಿ ಇಟ್ಟುಕೊಂಡಿದ್ದರು. ಆದುದರಿಂದಲೇ ಕರ್ನಾಟಕದ ಚರಿತ್ರೆ ಆದಿಲಶಾಹಿ ಚರಿತ್ರೆಯನ್ನು ಅಭ್ಯಸಿಸದೇ ಪೂರ್ತಿಯಾಗುವುದಿಲ್ಲ. ನಾಡಿನ ವಿಶ್ವವಿದ್ಯಾನಿಲಯಗಳು, ಭಾರತೀಯ ಇತಿಹಾಸ ಅನುಸಂಧಾನ ಇತ್ಯಾದಿ ಸಂಸ್ಥೆಗಳು ಇತಿಹಾಸದ ಕೆಲಸ ಮಾಡುತ್ತಿದ್ದರೂ ಬಿಜಾಪುರ ಇತಿಹಾಸದ ವಿಷಯದಲ್ಲಿ ಗಂಭೀರ ಅಧ್ಯಯನ ಮಾಡಿರುವುದು ಕಡಿಮೆ. ಅದರ ಮೂಲ ಆಕರಗಳು ಕನ್ನಡದಲ್ಲಿ ಸಾಕಷ್ಟು ದೊರಕದೇ ಇರುವುದು ಮತ್ತು ಪರ್ಶಿಯನ್, ದಖಣಿ ಭಾಷೆಗಳನ್ನು ಅವಲಂಬಿಸಬೇಕಾಗಿರುವುದರಿಂದಲೋ ಏನೋ ವಿವಿಗಳು ಈ ಬಗ್ಗೆ ನಿರ್ಲಕ್ಷವನ್ನು ತಾಳಿವೆ. ಈ ನಿಟ್ಟಿನಲ್ಲಿ ಬಿಎಲ್‌ಡಿಇ ಸಂಸ್ಥೆ ವಿಜಯಪುರ ಇದರ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಆದಿಲ ಶಾಹಿ ಸಾಹಿತ್ಯ ಸಂಪುಟಗಳನ್ನು ತರುವ ಮೂಲಕ, ಕರ್ನಾಟಕದ ಸುವರ್ಣಕಾಲವೊಂದರ ಕಡೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಒಂಬತ್ತನೆ ಸಂಪುಟವೇ ‘ಹಜ್ರತ್ ಖ್ವಾಜಿ ಮಹಮೂದ ಬಹರಿ ರಚಿಸಿದ ಊರುಸೇ-ಇರ್ಫಾನ್(ಮನ್‌ಲಗನ್) ಕೃತಿ. ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ ಅವರು ಈ ಕೃತಿಯನ್ನು ಕನ್ನಡಕ್ಕಿಳಿಸಿದ್ದಾರೆ. ಬಿಜಾಪುರ ಆದಿಲಶಾಹಿ ಕಾಲದಲ್ಲಿ ರಚಿತಗೊಂಡ ಎಲ್ಲ ಸಾಹಿತ್ಯವನ್ನು ಕನ್ನಡಕ್ಕೆ ತರುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಅದರ ಭಾಗವಾಗಿಯೇ, ಈ ಅನುವಾದ ಕೃತಿ ಪ್ರಕಟವಾಗಿದೆ.

ಖ್ವಾಜಾ ಮಹಮೂದ ಬಹರಿ 17ನೆಯ ಶತಮಾನದ ಉತ್ತರಾರ್ಧ, 18ನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿ ಬದುಕಿದ ಪ್ರಸಿದ್ಧ ಸೂಫಿ ಸಂತ. ‘ಊರುಸೇ ಇರ್ಫಾನ್’ ಎಂಬುದು ಬಹರಿಯ ಪರ್ಶಿಯನ್ ಕೃತಿ. ಇದು ಧಾರ್ಮಿಕ ಕೃತಿಯಾಗಿದ್ದರೂ ಇದರಲ್ಲಿ ಸಮಕಾಲೀನ ಚರಿತ್ರೆಯ ಅಂಶಗಳು ಅಡಕಗೊಂಡಿವೆ. ಕವಿ ಮೊದಲು ಇದನ್ನು ದಖಣಿ ಉರ್ದುವಿನಲ್ಲಿ ‘ಮನ್‌ಲಗನ್’ ಎಂಬ ಹೆಸರಿನಲ್ಲಿ ರಚಿಸಿದ್ದರಂತೆ. ಆನಂತರ ಅಂದಿನ ಜನರ ಆಗ್ರಹದ ಮೇರೆಗೆ ಮತ್ತೆ ಅದನ್ನೇ ಸ್ವತಂತ್ರವಾಗಿ ಪರ್ಶಿಯನ್ ಭಾಷೆಯಲ್ಲಿ ‘ಊರುಸೇ ಇರ್ಫಾನ್’ ಎಂಬ ತಲೆಬರಹದಲ್ಲಿ ಹೊಸದಾಗಿ ರಚಿಸಿದರು. ಪ್ರಸ್ತುತ ಅನುವಾದವು ಡಾ. ಮಹ್ಮದ್ ಅರೀಫುದ್ದೀನ್ ಶಾಹ ಫಾರೂಖಿ ಖಾದರಿ ಮುಲ್ತಾನಿ ಅವರ ಮುದ್ರಿತ ಕೃತಿಯನ್ನು ಆಧರಿಸಿದೆ. ಲೌಕಿಕತೆ ಮತ್ತು ಅಲೌಕಿಕತೆಯ ನಡುವೆ ಕವಿ ಇಲ್ಲಿ ಸೇತುವೆಯನ್ನು ಕಟ್ಟಿದ್ದಾರೆ. ಆದುದರಿಂದಲೇ ಅಧ್ಯಾತ್ಮದ ಉದ್ದೇಶದಿಂದ ರಚಿತವಾದ ಕೃತಿ ಇದಾಗಿದ್ದರೂ, ಲೌಕಿಕವಾದ ಮನುಷ್ಯನ ಪ್ರೇಮ, ವೈರಾಗ್ಯ, ಮಿತಿಗಳನ್ನೂ ಚರ್ಚಿಸುತ್ತದೆ. 352 ಪುಟಗಳ ಈ ಕೃತಿಯ ಮುಖಬೆಲೆ 200 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News