ಲಿಂಗಾಯತ ಧರ್ಮದ ವಾಸ್ತವ ನೆಲೆಗಳು....

Update: 2017-08-23 18:38 GMT

ವಚನಸಾಹಿತ್ಯದ ಕುರಿತಂತೆ ಅಪಾರ ಅಧ್ಯಯನ ಮಾಡಿರುವ ರಂಜಾನ್ ದರ್ಗಾ ಅವರ ಇನ್ನೊಂದು ಪ್ರಮುಖ ಕಿರು ಕೃತಿ ‘ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?’’.ಲಡಾಯಿ ಪ್ರಕಾಶನ ಹೊರತರುತ್ತಿರುವ ಲಿಂಗಾಯತ ದರ್ಶನ ಮಾಲೆ ಕೃತಿಯ ಮೂರನೆ ಪ್ರಕಟನೆಯಾಗಿ ಈ ಹೊತ್ತಗೆ ಹೊರ ಬಂದಿದೆ. ಲಿಂಗಾಯತ ಧರ್ಮದ ಒಳಗಿನ ತತ್ವ ಸಾರ, ಹಿಂದೂ ಧರ್ಮಕ್ಕಿಂತ ಅದು ಹೇಗೆ ಭಿನ್ನ, ಲಿಂಗಾಯತ ಮತ್ತು ವೀರಶೈವ ಧರ್ಮಕ್ಕಿರುವ ವ್ಯತ್ಯಾಸ, ಶರಣರು ಹೇಗೆ ಚಳವಳಿಯೊಂದನ್ನು ಧರ್ಮದ ರೂಪದಲ್ಲಿ ಹುಟ್ಟು ಹಾಕಿ ಬೆಳೆಸಿದರು ಎನ್ನುವ ಅಂಶವನ್ನು ಈ ಕೃತಿ ಹೇಳುತ್ತದೆ. ವೀರಶೈವ ಧರ್ಮ ಸ್ಥಾಪಕರು ರೇಣುಕಾದಿ ಪಂಚಾಚಾರ್ಯರು ಮತ್ತು ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥ ಎನ್ನುವುದನ್ನು ಲೇಖಕರು ಈ ಕೃತಿಯ ಮೂಲಕವೂ ಪ್ರತಿಪಾದಿಸುತ್ತಾರೆ. ಅದೇ ರೀತಿ ಬಸವಣ್ಣನವರು ಲಿಂಗಾಯತ ಧರ್ಮಸ್ಥಾಪಕರು ಎಂದು ಅಭಿಪ್ರಾಯಪಡುತ್ತಾರೆ. 770 ಅಮರಗಣಂಗಳು ಲಿಂಗಾಯತ ಧರ್ಮದ ನಾಯಕರು. ವಚನಗಳೇ ಲಿಂಗಾಯತ ಧರ್ಮಗ್ರಂಥ. ಅನುಭಾವವೇ ಲಿಂಗಾಯತ ದರ್ಶನ. ಲಿಂಗಾಂಗ ಸಾಮರಸ್ಯವೇ ಲಿಂಗಾಯತರ ಜೀವನ್ಮುಕ್ತಿ ಎನ್ನುವ ಅಂಶವನ್ನು ಈ ಕೃತಿ ಎತ್ತಿ ಹಿಡಿಯುತ್ತದೆ. ವೀರಶೈವ ಧರ್ಮ ಕಾಲ್ಪನಿಕ ಅಂದರೆ ಪುರಾಣ ಇತಿಹಾಸಗಳ ನಡುವಿನ ಗೊಂದಲಗಳಲ್ಲಿ ದಾರಿಕಾಣದೆ ಒದ್ದಾಡುತ್ತದೆಯಾದರೆ, ಲಿಂಗಾಯತ ಧರ್ಮದ ಹಾದಿ ಸ್ಪಷ್ಟವಿದೆ. ಅದು ಇತಿಹಾಸದೊಂದಿಗೆ ಸ್ಪಷ್ಟ ಸಂಬಂಧವನ್ನು ಹೊಂದಿದೆ. ಪುರಾಣಗಳನ್ನು, ಕಾಲ್ಪನಿಕ ಕತೆ ಕಂತೆಗಳನ್ನು ನಿರಾಕರಿಸುವ ಮೂಲಕವೇ ಲಿಂಗಾಯತ ಧರ್ಮ ಹುಟ್ಟಿದೆ. ಆದುದರಿಂದ ವೀರಶೈವಕ್ಕೂ ಲಿಂಗಾಯತಕ್ಕೂ ಇರುವ ವ್ಯತ್ಯಾಸ ಸ್ಪಷ್ಟವಾಗುತ್ತದೆ ಎನ್ನುವುದನ್ನು ಈ ಕೃತಿ ಉದಾಹರಣೆಗಳ ಸಹಿತ ಹೇಳುತ್ತದೆ. ಹೀಗೆ 12ನೆ ಶತಮಾನದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಲಿಂಗಾಯತ ಧರ್ಮದ ವಿರುದ್ಧ ಕತ್ತಿ ಮಸೆದರೋ ಅದೇ ಶಕ್ತಿಗಳು ಇಂದು ಬೇರೆ ಬೇರೆ ವೈದಿಕ ಮತ್ತು ರಾಜಕೀಯ ಶಕ್ತಿಗಳಾಗಿ ಲಿಂಗಾಯತ ಧರ್ಮವನ್ನು ಹಾದಿ ತಪ್ಪಿಸಿದ್ದಾರೆ ಎನ್ನುವ ಅಂಶವನ್ನು ಈ ಕೃತಿ ಹೊರಗೆಡಹುತ್ತದೆ. ಲಿಂಗಾಯತರು ತಮ್ಮದೇ ಸ್ವತಂತ್ರ ಧರ್ಮದ ಬೇಡಿಕೆಯನ್ನು ಮುಂದಿಡುವ ವರ್ತಮಾನದ ಅಗತ್ಯವನ್ನೂ ಈ ಕೃತಿ ಚರ್ಚಿಸುತ್ತದೆ. ಕೃತಿಯ ಮುಖಬೆಲೆ 30 ರೂಪಾಯಿ. ಆಸಕ್ತರು 92424 70384 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News