ಬ್ಲೂ ವೇಲ್ ಎಂಬ ಸಾವಿನ ಆಟ

Update: 2017-08-28 18:50 GMT

ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿರುವ ವಿಚಿತ್ರವಾದ ಮತ್ತು ವಿಕೃತವಾದ ಅಂತರ್ಜಾಲ ಆಟ ಬ್ಲೂವೇಲ್ ಅಥವಾ ನೀಲಿ ತಿಮಿಂಗಿಲ ಎಂದರೂ ಅತಿಶಯೋಕ್ತಿಯಲ್ಲ. ಹದಿಹರೆಯದ ವರನ್ನೇ ಗುರಿಯಾಗಿಸಿ ಆರಂಭಿಸಲಾದ ಈ ಆಟ ಯುವಕರನ್ನು ತನ್ನೆಡೆಗೆ ಸೆಳೆದುಕೊಂಡು ಅವರನ್ನು ಆತ್ಮಹತ್ಯೆಕೂಪಕ್ಕೆ ತಳ್ಳುವುದು ಬಹಳ ಆತಂಕಕಾರಿಯಾದ ವಿಚಾರ. ಕಳೆದೆರಡು ವರ್ಷಗಳಲ್ಲಿ ಸುಮಾರು 130ಕ್ಕೂ ಮಕ್ಕಳು ಈ ಆಟಕ್ಕೆ ಆಕರ್ಷಿತರಾಗಿ ಆತ್ಮಹತ್ಯೆಗೈದಿರುವುದು ಬಹಳ ವಿಷಾದಕಾರಿ ಬೆಳವಣಿಗೆ ಮೊದಲೇ ಫೇಸ್‌ಬುಕ್, ವಾಟ್ಸ್‌ಆ್ಯಪ್ ಇನ್‌ಸ್ಟಾ ಗ್ರಾಮ್‌ಗಳ ಮೋಹಕ್ಕೆ ಬಿದ್ದ ಹದಿಹರೆಯದ ಯುವಕ ಯುವತಿಯರು, ಇತ್ತೀಚೆಗೆ ಅಂತರ್ಜಾಲ ಕೊಂಡಿಯ ಮೂಲಕ ಈ ಆತ್ಮಹತ್ಯೆ ಆಟಕ್ಕೆ ಮುಗಿಬೀಳುವುದು ದುರದೃಷ್ಟಕರ.

ಏನಿದು ಬ್ಲೂವೇಲ್?

ಬ್ಲೂವೇಲ್ ಅಥವಾ ನೀಲಿ ತಿಮಿಂಗಿಲ ಎಂಬ ಮೀನು ಕಡಲ ಕಿನಾರೆಯಲ್ಲಿ ಸಮುದ್ರ ದಡಕ್ಕೆ ಬಂದು ನೀರಿಲ್ಲದೆ ನಿರ್ಜಲೀಕರಣದಿಂದ ಸಾಯುತ್ತದೆ ಮತ್ತು ತಮ್ಮ ದೇಹದ ಅತಿಯಾದ ತೂಕದಿಂದಲೇ ತನ್ನ ಸಾವಿಗೆ ತಾನೇ ಕಾರಣವಾಗುತ್ತದೆ. ಈ ರೀತಿ ತಮ್ಮ ಸಾವಿಗೆ ತಾವೇ ಕಾರಣವಾಗುವುದರಿಂದ ಬ್ಲೂ ವೇಲ್‌ಗಳು ಆತ್ಮಹತ್ಯೆಯನ್ನು ಪ್ರತಿನಿಧಿಸುತ್ತದೆ. ಈ ಕಾರಣದಿಂದಲೇ ಈ ಆಟಕ್ಕೆ ‘ಬ್ಲೂವೇಲ್ ಚಾಲೆಂಜ್’ ಎಂದು ಹೆಸರು ಬಂದಿದೆ.

ಬ್ಲೂವೇಲ್ ಚಾಲೆಂಜ್ ಬಗ್ಗೆ

2013ರಲ್ಲಿ ರಶ್ಯಾದ ಪಿಲಿಪ್ ಬುಡಕಿನ್ ಎಂಬಾತ ರಶ್ಯಾದ ವಿಶ್ವವಿದ್ಯಾ ನಿಲಯದಿಂದ ವಿಕೃತ ಮನಸ್ಸಿನ ವಿಚಿತ್ರ ಮನೋಧೋರಣೆಗಾಗಿ ಹೊರದಬ್ಬಲ್ಪಟ್ಟ ಒಬ್ಬ ಮನಃಶಾಸ್ತ್ರ ವಿಭಾಗದ ಮಾಜಿ ವಿದ್ಯಾರ್ಥಿ, 2013ರಲ್ಲಿ ಡೆತ್‌ಗ್ರೂಪ್ ಎಂಬ ಹೆಸರಿನಲ್ಲಿ ಅಸ್ತಿತ್ವವನ್ನು ಕಂಡುಕೊಂಡ. ‘‘ಯಾವುದೇ ಜೀವನ ಮೌಲ್ಯಗಳನ್ನು, ಗುರಿಗಳನ್ನು ಇಟ್ಟುಕೊಳ್ಳದೆ ಸಮಾಜಕ್ಕೆ ಹೊರೆಯಾಗುವ ಹದಿಹರೆಯದ ಯುವಕರನ್ನು ಆತ್ಮಹತ್ಯೆಯ ಕೂಪಕ್ಕೆ ದೂಡಿ ಸಮಾಜವನ್ನು ಸ್ವಚ್ಛಗೊಳಿಸುವುದಕ್ಕಾಗಿ ಈ ಆಟವನ್ನು ಜಾರಿಗೆ ತಂದಿರುತ್ತೇನೆ’’ ಎಂಬ ಸಮಜಾಯಿಷಿಯನ್ನು ಬುಡಕಿನ್ ಯಾವುದೇ ಮುಲ್ಲಾಜಿಲ್ಲದೆ ಒಪ್ಪಿಕೊಂಡಿದ್ದಾನೆ. ‘‘ಸಮಾಜಕ್ಕೆ ಉಪಯೋಗವಿಲ್ಲದ ಸಮಾಜಕ್ಕೆ ಹೊರೆಯಾಗುವ ಯುವಕರು ಬದುಕುವುದಕ್ಕಿಂತ ಸಾಯುವುದೇ ಲೇಸು ಎಂಬ ಸಿದ್ಧಾಂತದೊಂದಿಗೆ ಈ ಆಟವನ್ನು ಜಗತ್ತಿಗೆ ಪರಿಚಯಿಸಿದೆ’’ ಎಂದು ಬುಡಕಿನ್ ಹೆಮ್ಮೆಯಿಂದ ಹೇಳಿಕೊಂಡಿದ್ದ. 2015ರಲ್ಲಿ ಮೂರು ಬಲಿ ತೆಗೆದುಕೊಂಡ ಈ ಆಟ, 2016ರಲ್ಲಿ ರಶ್ಯಾದಲ್ಲಿ ಬಹಳ ಪ್ರಸಿದ್ಧವಾಯಿತು ಮತ್ತು 16 ಮಂದಿ ಬಾಲಕಿಯರ ಮರಣಕ್ಕೆ ಮುನ್ನುಡಿ ಬರೆದಿತ್ತು. ಸದ್ಯ ರಶ್ಯಾದ ಜೈಲಿನಲ್ಲಿರುವ ಬುಡಕಿನ್‌ನ ‘ನೀಲಿ ತಿಮಿಂಗಿಲ’, ಸುಮಾರು ಈ ವರೆಗೆ ವಿಶ್ವದಾದ್ಯಂತ 130 ಮಕ್ಕಳನ್ನು ಆಪೋಶನ ತೆಗೆದುಕೊಂಡಿರುವುದು ನಂಬಲೇ ಬೇಕಾದ ಕಟು ಸತ್ಯ.

‘ಬ್ಲೂ ವೇಲ್ ಎಂಬ ಅಂತರ್ಜಾಲ ಕೊಂಡಿ ಇರುವ ಆಪ್‌ನ್ನು ಡೌನ್‌ಲೋಡ್ ಮಾಡಿದ ಬಳಿಕ ಆ ವ್ಯಕ್ತಿಗೆ ಅನಾಮಿಕ ವ್ಯಕ್ತಿಯಿಂದ ಸೂಚನೆಗಳು ಬರುತ್ತಿರುತ್ತದೆ. ಈ ಆಟದಲ್ಲಿ ಸುಮಾರು 50 ಹಂತಗಳಿರುತ್ತದೆ. ಪ್ರತಿ ಹಂತದಲ್ಲೂ ವ್ಯಕ್ತಿ ತನ್ನನ್ನೇ ತಾನು ಹಿಂಸಿಸಿಕೊಳ್ಳುವುದು, ಆತನ ಸಹಿಷ್ಣು ಶಕ್ತಿಯನ್ನು ಅಳೆಯುವ ಕೆಲಸ, ಆತ ಆಟದ ಒಂದೊಂದೇ ಹಂತ ದಾಟುತ್ತಿದಂತೆಯೇ ನಡೆಯುತ್ತಿರುತ್ತದೆ. ಒಟ್ಟು 50 ಟಾಸ್ಕು ಇದರಲ್ಲಿದೆ. ಎಲ್ಲಾ ಟಾಸ್ಕ್ ಗಳನ್ನು ಯಶಸ್ವಿಯಾಗಿ ಮುಗಿಸಿದಲ್ಲಿ ಮುಂದಿನ ಚಾಲೆಂಜ್‌ಗಳನ್ನು ಹೇಳಲಾಗುತ್ತದೆ. ಒಂದು ಟಾಸ್ಕ್ ಗೆಲ್ಲಲಾಗದಿದ್ದರೆ ಆತ ಚಾಲೆಂಜ್ ಸೋತ ಹಾಗೆ. ತಾನು ಗೆದ್ದ ಚಾಲೆಂಜಿನ ಆಟದ ವೀಡಿಯೊವನ್ನು ಅನಾಮಿಕ ಅಡ್ಮಿನ್‌ಗೆ ಕಳುಹಿಸಿದ ಬಳಿಕವೇ ಮುಂದಿನ ಟಾಸ್ಕ್ ನೀಡಲಾಗುತ್ತದೆ.

ಏನಿದೆ ಈ ಟಾಸ್ಕ್ ಚಾಲೆಂಜ್‌ಗಳಲ್ಲಿ?

ಪ್ರತೀ ಹಂತದಲ್ಲಿ ಆಟಗಾರರನ್ನು ಸಾವಿನ ಮನೆಗೆ ಕಳುಹಿಸುವ ಈ ಆಟ, ಆಟಗಾರರು ಮತ್ತು ಅನಾಮಿಕ ಅಡ್ಮಿನ್‌ಗಳ ಸಂಬಂಧವನ್ನು ಆಧರಿಸಿದೆ. ಅತ್ಯಂತ ಕ್ರೂರವಾದ ಟಾಸ್ಕ್ ಗಳನ್ನು ನೀಡಲಾಗಿರುವ ಈ ಆಟದಲ್ಲಿ ಆಟಗಾರನ ತಾಳ್ಮೆ ಮತ್ತು ಸಹನೆಯನ್ನು ಪರೀಕ್ಷೀಸಲಾಗುತ್ತದೆ. ದಿನಕ್ಕೊಂದರಂತೆ ಚಾಲೆಂಜ್ ಇರುತ್ತದೆ. ಕೆಲವು ಚಾಲೆಂಜ್‌ಗಳು ಸ್ವಯಂ ಘಾಸಿಗೊಳಿಸುವುದಕ್ಕೆ ಸಂಬಂಧಿಸಿದರೆ ಇನ್ನು ಕೆಲವು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತವೆ. ಕೆಲವೊಂದು ಸವಾಲನ್ನು ಮುಂಗಡವಾಗಿ ನೀಡಿದರೆ ಮತ್ತೆ ಕೆಲವನ್ನು ಅಡ್ಮಿನ್ ಸವಾಲು ಪೂರ್ಣಗೊಳಿಸಿದ ದಿನದಂದೇ ನೀಡುತ್ತಾನೆ. ಕೊನೆಯ ಆಟ ಅಥವಾ ಸವಾಲು ಆತ್ಮಹತ್ಯೆ ಆಗಿರುತ್ತದೆ.

ಆರಂಭದ ಹಂತದಲ್ಲಿ ಅತೀ ಕಠಿಣ ಸವಾಲುಗಳು ಇರುವುದಿಲ್ಲ. ದಿನ ಕಳೆದಂತೆ ಸವಾಲುಗಳು ಕಷ್ಟಕರವಾಗುತ್ತಲೇ ಹೋಗುತ್ತವೆ. ದೇಹದ ಭಾಗಗಳನ್ನು ಚುಚ್ಚಿಕೊಳ್ಳುವುದು, ಗಲ್ಲಕ್ಕೆ ಸೂಜಿಯಿಂದ ಚುಚ್ಚಿಕೊಳ್ಳುವುದು, ದೇಹದಲ್ಲಿ ತೋಳಿನಲ್ಲಿ ನಿರ್ದಿಷ್ಟ ಹಚ್ಚೆ ಹಾಕಿಕೊಳ್ಳುವುದು ಮುಂತಾದ ಟಾಸ್ಕ್‌ಗಳನ್ನು ಆರಂಭದಲ್ಲಿ ನೀಡಲಾಗುತ್ತದೆ. ಕೆಲವೊಮ್ಮೆ ರಹಸ್ಯ ಸವಾಲುಗಳನ್ನು ನೀಡಲಾಗುತ್ತದೆ. ಜಗತ್ತಿನಲ್ಲಿಯೇ ಅತ್ಯಂತ ಖಾರವಾದ ಗೊಸ್ಟ್ ಪೆಪ್ಪರ್‌ಗಳನ್ನು ತಿನ್ನುವುದು, ದೇಹದ ಮೇಲೆ ಗಾಯ ಮಾಡಿ ಉಪ್ಪು ಸುರಿಯುವುದು, ಮೈ ಮೇಲೆ ಉಪ್ಪುಸವರಿಕೊಂಡು ತಕ್ಷಣವೇ ಐಸ್ ಹಾಕಿಕೊಳ್ಳುವುದು, ಎತ್ತರದ ಕಟ್ಟಡದಿಂದ ಜಿಗಿಯುವುದು ಇತ್ಯಾದಿ ವಿಚಿತ್ರವಾದ ಅನಾರೋಗ್ಯಕರವಾದ ಕಷ್ಟಕರವಾದ ಸವಾಲುಗಳನ್ನು ನೀಡಲಾಗುತ್ತದೆ. ಪ್ರತೀ ಹಂತದಲ್ಲಿ ಸವಾಲು ನಿರ್ವಹಿಸಿದ್ದಕ್ಕೆ ಪುರಾವೆಯಾಗಿ ಆಟಗಾರ ಫೋಟೊ ಅಥವಾ ವೀಡಿಯೊಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುತ್ತಾ ಹೋದಂತೆ ಅಡ್ಮಿನ್‌ಗೆ ತೃಪ್ತಿಯಾದಲ್ಲಿ, ಮುಂದಿನ ಆಟಕ್ಕೆ ರಹದಾರಿ ಸಿಗುತ್ತದೆ. ಎಲ್ಲ 49 ಹಂತ ದಾಟಿದಲ್ಲಿ ಕೊನೆಯಾಟ ಆತ್ಮಹತ್ಯೆ ಎಂಬ ಸಾವಿನೊಡನೆ ಸೆಣಸಾಡಿ ಗೆದ್ದು ಬಾ ಎಂದು ವಿಚಿತ್ರ ಚಾಲೆಂಜ್.

ಪೋಷಕರು ಏನು ಮಾಡಬೇಕು ?

ಹದಿಹರೆಯದ ಮಕ್ಕಳಿಗೆ ಅನಗತ್ಯವಾಗಿ ಬಳಸಲು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ನೀಡಬಾರದು ಮತ್ತು ಅಂತರ್ಜಾಲದ ಅನಿಯಮಿತ ಬಳಕೆಯನ್ನು ಕಡಿತಗೊಳಿಸಬೇಕು. ಅನಿವಾರ್ಯವಾಗಿ ಬಳಸಬೇಕಿದ್ದಲ್ಲಿ ಮಾತ್ರ ನೀಡತಕ್ಕದ್ದು. ಮಕ್ಕಳ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಆಗಾಗ ಪರಿಶೀಲಿಸಬೇಕು. ಯಾವುದೇ ರೀತಿಯ ಕೋಡ್‌ವರ್ಡ್, ಪಾಸ್‌ವರ್ಡ್ ಬಳಸದಂತೆ ನಿರ್ಬಂಧಿಸಬೇಕು.

ಮಕ್ಕಳನ್ನು ಪೋಷಕರು ಮತ್ತು ಹೆತ್ತವರು ಅನಗತ್ಯವಾಗಿ ನಿಂದಿಸಬಾರದು. ಎಲ್ಲರೆದುರು ನಿಂದಿಸಿ ಆತ್ಮಸ್ಥೈರ್ಯ ಕುಂದಿಸಿದಲ್ಲಿ ಮಕ್ಕಳು ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಮುಂದಾಗಬಹುದು. ಚಂಚಲ ಮನಸ್ಸಿನ ಮಕ್ಕಳು ಈ ರೀತಿಯ ವಿಕೃತ ಅಂತರ್ಜಾಲದ ಆತ್ಮಹತ್ಯೆ ಆಟಕ್ಕೆ ಮುಂದಾಗಬಹುದು.

ಮಕ್ಕಳ ಜ್ಞಾನಕ್ಕೆ ಮತ್ತು ಸಾಮರ್ಥ್ಯಕ್ಕೆ ಮಿಗಿಲಾದ ಫಲಿತಾಂಶವನ್ನು ನಿರೀಕ್ಷಿಸುವುದು ತಪ್ಪು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ. ಎಲ್ಲ ಮಕ್ಕಳೂ 100ರಲ್ಲಿ 100 ಅಂಕ ತೆಗೆಯಲು ಸಾಧ್ಯವಿಲ್ಲ ಎಂಬ ಅಂಶವನ್ನು ಹೆತ್ತವರು ಮನಗಾಣಬೇಕು. ಪ್ರತಿಯೊಂದು ಮಗುವು ಇನ್ನೊಂದು ಮಗುವಿಗಿಂತ ಭಿನ್ನ ಮತ್ತು ಮಕ್ಕಳನ್ನು ಹೋಲಿಕೆ ಮಾಡಲೇ ಬಾರದು.

ಎಲ್ಲರಂತೆ ಚುರುಕಾಗಿದ್ದ ಮಕ್ಕಳು ಏಕಾಂಗಿಯಾಗಿ ಕುಳಿತುಕೊಳ್ಳುವುದು, ಮಂಕಾಗುವುದು, ನಿದ್ರಾಹೀನತೆ ಇದ್ದಲ್ಲಿ ವೈದ್ಯರ ಸಲಹೆ ಅತೀ ಅಗತ್ಯ. ತಂದೆ ತಾಯಿಯಂದಿರು ಮಕ್ಕಳ ಮೇಲೆ ಸದಾ ನಿಗಾ ಇಡಬೇಕು. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಬೇಕು ಎಂದು ಮಕ್ಕಳಿಗೆ ತಿಳಿ ಹೇಳಬೇಕು ಮತ್ತು ಆತ್ಮವಿಶ್ವಾಸ ಬರುವಂತೆ ವರ್ತಿಸಬೇಕು.

ಮಕ್ಕಳು ಸಮಾಜದ ಆಸ್ತಿ. ಇತ್ತೀಚಿನ ಒತ್ತಡದ ಧಾವಂತದ ಬದುಕಿನಲ್ಲಿ ಹೆತ್ತವರಿಬ್ಬರೂ ಕೆಲಸಕ್ಕೆ ಹೋಗುತ್ತಾ ಮಕ್ಕಳನ್ನು ಕೆಲಸಗಾರರ ನಡುವೆ ಬಿಟ್ಟು ಟ್ಯೂಷನ್‌ಗೆ, ಕೋಚಿಂಗ್‌ಗೆ ಕಳುಹಿಸುತ್ತಾರೆ. ಮಕ್ಕಳ ಜೊತೆ ಕಾಲ ಕಳೆಯಲು ಯಾರೊಬ್ಬರಿಗೂ ಸಮಯವಿಲ್ಲ. ಮಕ್ಕಳು ಖುಷಿಯಾಗಿರಲಿ ಎಂದು ಮಕ್ಕಳಿಗೆ ಮೊಬೈಲ್, ಲ್ಯಾಪ್‌ಟಾಪ್ ಅನಿಯಮಿತ ಅಂತರ್ಜಾಲ ಬಳಕೆ ನೀಡುತ್ತಾರೆ. ಆರಂಭದಲ್ಲಿ ಹೊತ್ತು ಕಳೆಯಲು ಮತ್ತು ಮನಸ್ಸಿಗೆ ನೆಮ್ಮದಿ ಪಡೆಯಲು ಆ್ಯಂಗ್ರಿ ಬರ್ಡ್ಸ್, ಕ್ಯಾಂಡಿಕ್ರಶ್‌ಗಳಂತಹ ಆಟಕ್ಕೆ ಜೋತು ಬೀಳುತ್ತಾರೆ. ಕ್ರಮೇಣ ಈ ಆಟ ಬೋರಾಗಿರುತ್ತದೆ. ಸಾಕಷ್ಟು ಥ್ರಿಲ್ ಸಿಗುವ ಆಟಕ್ಕೆ ಮನ ಮುಂದಾಗುತ್ತದೆ. ಈ ಹಂತದಲ್ಲಿ ಹೆತ್ತವರು ಮಕ್ಕಳನ್ನು ಕಣ್ಣಿಗೆ ಎಣ್ಣೆ ಹಾಕಿ ಕಾಯಬೇಕಾದ ಅನಿವಾರ್ಯತೆ ಇದೆ. ಮಕ್ಕಳಿಗೆ ಮೊಬೈಲ್ ವ್ಯಸನದ ಗೀಳು ಬಿಡಿಸಿ, ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯಬೇಕಾದ ಅನಿವಾರ್ಯತೆಯೂ ಇದೆ. ಮಕ್ಕಳ ಜೊತೆ ಹೊರಾಂಗಣ ಆಟ, ಪಿಕ್‌ನಿಕ್, ಸಮುದ್ರ ವಿಹಾರ ಮುಂತಾದವುಗಳಿಗೆ ಕರೆದುಕೊಂಡು ಹೋಗಿ ಮಕ್ಕಳಿಗೆ ಮುದ ನೀಡಿ ಅವರನ್ನು ಕಾಪಿಟ್ಟುಕೊಳ್ಳಬೇಕಾದ ದೀಕ್ಷೆಯನ್ನು ಎಲ್ಲ ತಂದೆ ತಾಯಂದಿರು ಮಾಡಲೇ ಬೇಕು. ಇಲ್ಲವಾದಲ್ಲಿ ಚಂಚಲ ವಯಸ್ಸಿನ ಹದಿಹರೆಯದ ಮಕ್ಕಳು ಅಪಾಯಕಾರಿಯಾದ ಮತ್ತು ವಿಕೃತ ಮನಸ್ಸಿನ ಬ್ಲೂವೇಲ್‌ನಂತಹ ಆತ್ಮಹತ್ಯಾ ಕೂಪದ ಆಟಕ್ಕೆ ಬೀಳುವ ಎಲ್ಲ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಎಲ್ಲ ಹೆತ್ತವರೂ ತಮ್ಮ ಜವಾಬ್ದಾರಿ ಅರಿತು ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡಬೇಕು ಮತ್ತು ಮಕ್ಕಳಿಗೆ ಅಗತ್ಯವಾದ ಉಪಕರಣಗಳನ್ನು ಮಾತ್ರವೇ ನೀಡಬೇಕು. ಇಲ್ಲವಾದಲ್ಲಿ ಸಮಾಜಕ್ಕೆ ಆಸ್ತಿಯಾಗಬೇಕಾದ ಮಕ್ಕಳು ಸಮಾಜಕ್ಕೆ ಕಂಟಕವಾಗುವ ಸಾಧ್ಯತೆ ಖಂಡಿತಾ ಇದೆ. ಹಾಗಾದಲ್ಲಿ ಮಾತ್ರ ಸುಂದರ ಆರೋಗ್ಯದಂಥ ಸಮಾಜ ನಿರ್ಮಾಣವಾಗಬಹುದು.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News

ಜಗದಗಲ
ಜಗ ದಗಲ