ರಾಜ್ಯಾದ್ಯಂತ 'ಮುಗುಳು ನಗೆ'

Update: 2017-08-30 13:36 GMT

ಬಹಳ ಪಾಸಿಟಿವ್ ಅನಿಸುವಂಥ ಹೆಸರು ಮುಗುಳುನಗೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯು ಬುಧವಾರ ಮುಂಜಾನೆ ನೆರವೇರಿತು.

ಭಟ್ಟರು ಬರಲಿಲ್ಲ

ಚಿತ್ರದ ನಾಯಕ ಗಣೇಶ್ ಮಾತನಾಡಿ, ಪತ್ರಿಕಾಗೋಷ್ಠಿಗೆ ನಿರ್ದೇಶಕ ಯೋಗರಾಜ ಭಟ್ಟರ ಅನುಪಸ್ಥಿತಿಗೆ ಕಾರಣವನ್ನು ವಿವರಿಸಿದರು. ಭಟ್ಟರು ಚಿತ್ರವನ್ನು ಯುಎಫ್ ಒ ಗೆ ಅಪ್ಲೋಡ್ ಮಾಡುವ ಪ್ರಕ್ರಿಯೆಯಲ್ಲಿ ಚೆನ್ನೈನಲ್ಲಿ ತೊಡಗಿಸಿಕೊಂಡ ಕಾರಣ ಹಾಜರಾಗಿಲ್ಲ ಎಂದು ಗಣೇಶ್ ಹೇಳಿದರು.

ದಶಕದ ಬಳಿಕ ಜೋಡಿ

ಚಿತ್ರಕ್ಕೆ ಸುಜ್ಞಾನ್ ಕ್ಯಾಮೆರಾ ವರ್ಕ್ ಮೊದಲ‌ ಆಕರ್ಷಣೆಯಾಗಿದೆ. ಅವರ ಕಣ್ಣಿನ  ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಆದರೆ 
'ದಶಕದ ಜೋಡಿಯ ಜಾದೂ'  ಎಂದು ಭಟ್ಟರು ಟ್ರೇಲರಲ್ಲಿ ಹಾಕಿರೋದನ್ನು ಕಂಡು ನನಗೂ ಆತಂಕ ಉಂಟಾಗಿದೆ. ಯಾಕೆಂದರೆ, 'ಮುಂಗಾರು ಮಳೆ' ಮತ್ತು 'ಗಾಳಿಪಟ' ಎರಡೂ ದೊಡ್ಡಮಟ್ಟದಲ್ಲಿ ಹೆಸರು ಮಾಡಿರುವಂಥ ಚಿತ್ರಗಳು. ಆ ನಿರೀಕ್ಷೆಯ ಮಟ್ಟವನ್ನು ತಲುಪಬೇಕು ಎನ್ನುವುದೇ ಆತಂಕ ತಂದ ವಿಚಾರ. ಆದರೆ ಅಷ್ಟೇ ಜವಾಬ್ದಾರಿಯುತವಾಗಿ ಚಿತ್ರ ತೆಗೆಯಲಾಗಿದೆ ಎಂಬ ಧೈರ್ಯವೂ ಇದೆ ಎಂದರು.

ನಿದ್ದೆಯಿಲ್ಲದ ರಾತ್ರಿಗಳು

ಸಾಮಾನ್ಯವಾಗಿ ನಾನು ರಾತ್ರಿ 9.30 ಆಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಬಿಡುತ್ತೇನೆ. ಆದರೆ ಸೋಮವಾರದಿಂದ ಪ್ರತಿರಾತ್ರಿ ಎರಡು ಗಂಟೆಯ ತನಕ ನಿದ್ದೆಯೇ ಸುಳಿಯುತ್ತಿಲ್ಲ. ಅದಕ್ಕೆ ಚಿತ್ರದ ಕುರಿತಾದ ಯೋಚನೆಯೇ ಕಾರಣ. ಆದರೆ ಹಾಡುಗಳು, ಟ್ರೇಲರನ್ನು ಜನ ಮೆಚ್ಚಿದ್ದಾರೆ ಎನ್ನುವುದು ತಿಳಿದು ಸಮಾಧಾನ ಮಾಡಿಕೊಂಡು ನಿದ್ದೆಗೆ ಜಾರುತ್ತೇನೆ ಎನ್ನುವುದು ಗಣೇಶನ ಮಾತು.

ಮನೆ ಮುಟ್ಟಿದ ಚಿತ್ರಕತೆ!

ನನಗೆ ಯಾವುದಾದರೂ ಸಿನಿಮಾದ ಸ್ಕ್ರಿಪ್ಟ್ ತುಂಬ ಇಷ್ಟವಾದರೆ, ಚಿತ್ರ ಮುಗಿದ ಬಳಿಕ ಅದನ್ನು ತಂದು ಮನೆಯಲ್ಲಿಡುತ್ತೇನೆ. ಉದಾಹರಣೆಗೆ ಮುಂಗಾರುಮಳೆ ಚಿತ್ರಕತೆಯ ಪುಸ್ತಕ ಈಗಲೂ ನನ್ನ ಮನೆಯಲ್ಲಿದೆ. ಅದು ತೆರೆಗೆ ಬರುವ ಮುನ್ನವೇ ಜನರ ಮನಸೆಳೆಯುವಂಥ ಎರಡು ಸನ್ನಿವೇಶಗಳನ್ನು ನಾನು ಗುರುತು ಹಾಕಿಕೊಂಡಿದ್ದೆ. ಒಂದು ಕುಡ್ಕೊಂಡು ಮಾತನಾಡುವ ಸನ್ನಿವೇಶ, ಮತ್ತೊಂದು ಮೊಲ ಸಾಯುವ ದೃಶ್ಯ.. ಇವೆರಡಕ್ಕೂ ಮಾರ್ಕ್ ಮಾಡಿಟ್ಟಿದ್ದೆ. ಅದೇ ರೀತಿ ಮುಗುಳು ನಗೆ ಚಿತ್ರದಲ್ಲಿ

ಎಂಟು ದೃಶ್ಯಗಳನ್ನು ಮಾರ್ಕ್ ಮಾಡಿದ್ದೇನೆ. ಚಿತ್ರದಲ್ಲಿ ಹ್ಯೂಮನ್ ಎಮೋಷನ್ಸ್ ಗೆ ಪ್ರಾಮುಖ್ಯತೆಯಿದೆ. ನಾನು ಹೇಗೆ ಪದೇ ಪದೇ ಚಿತ್ರಕತೆ ಓದುತ್ತಿದ್ದೇನೋ, ಜನ ಕೂಡ ಹಾಗೆಯೇ ಪದೇ ಪದೇ ಚಿತ್ರ ನೋಡಲು ಮುಂದಾಗುತ್ತಾರೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ಗೋಲ್ಡನ್ ಸ್ಟಾರ್.

ಇಬ್ಬರು ಲೂಸ್ ಗಳು!!

ಚಿತ್ರದಲ್ಲಿ ನಾಯಕಿಯರಾದ ಆಶಿಕಾ, ನಿಖಿತಾ, ಅಪೂರ್ವ ಸೇರಿದಂತೆ ರಂಗಾಯಣ ರಘು, ಅಚ್ಯುತ್ ಕುಮಾರ್ ಹೀಗೆ ಎಲ್ಲರೂ ಮನಸೆಳೆಯುವಂಥ ನಟನೆ ನೀಡಿದ್ದಾರೆ. ನಾನು ಚಿತ್ರೀಕರಣದ ವೇಳೆ ಒಮ್ಮೆ ಇದ್ದಂತೆ ಮತ್ತೊಮ್ಮೆ ಇರುತ್ತಿರಲಿಲ್ಲ. 'ದೊಡ್ಡ ಲೂಸು' ಮತ್ತು 'ಸಣ್ಣ ಲೂಸು' ಹೀಗೆ ಇಬ್ಬಿಬ್ಬರನ್ನು ಸಹಿಸಿಕೊಂಡು ಚಿತ್ರ ಮಾಡಿದ್ದಾರೆ ನಿರ್ಮಾಪಕರು. ಅವರಿಗೆ ವಂದನೆಗಳು ಎಂದರು.

ಮಹಿಳೆಯರಿಗೆ ವಿಶೇಷ ಪ್ರೀಮಿಯರ್ ಶೋ

ಬಳಿಕ ಮಾತನಾಡಿದ ನಿರ್ದೇಶಕ ಸಲಾಮ್ 'ಏಳಕ್ಕೆ ಏಳು ಹಾಡುಗಳೂ ಗೆದ್ದಿವೆ. ಚಿತ್ರದಲ್ಲಿ ಮಹಿಳೆಯರ ಮನಸೆಳೆಯುವಂಥ ಕತೆಯಿದೆ' ಎಂದರು. 'ನಾಲ್ವರು ನಾಯಕಿಯರು ಕೂಡ ಇರುವುದರಿಂದ ಗುರುವಾರ ಮಹಿಳೆಯರಿಗೆ ಮಾತ್ರ ವಿಶೇಷ ಪ್ರಿಮಿಯರ್ ಶೋ ಏರ್ಪಡಿಸಲಾಗುತ್ತಿದೆ' ಎಂದು ನಿರ್ಮಾಪಕರು ತಿಳಿಸಿದರು.

250 ಚಿತ್ರಮಂದಿರಗಳಲ್ಲಿ ಬಿಡುಗಡೆ

ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಹಿಸಿರುವ ಜಾಕ್ ಮಂಜು "ದೊಡ್ಡ ಮಟ್ಟದ ಬೇಡಿಕೆ ಬಂದಿದ್ದರೂ ಒಳ್ಳೆಯ ಚಿತ್ರಮಂದಿರಗಳನ್ನಷ್ಟೇ ಆಯ್ದುಕೊಂಡು‌ ಚಿತ್ರ ತೆರೆಕಾಣಿಸಲಾಗುತ್ತಿದೆ ಎಂದರು.ಅವುಗಳಲ್ಲಿ 200 ಸಿಂಗಲ್ ಸ್ಕ್ರೀನ್ ಮತ್ತು 50 ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ತೆರೆಕಾಣಿಸುವ ಯೋಜನೆ ಇದೆ" ಎಂದರು.

ವಿದೇಶದಲ್ಲಿ ಎರಡು ವಾರಗಳ ಬಳಿಕ

ಏಕಕಾಲದ ಬಿಡುಗಡೆಗೆ ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇದ್ದರೂ, ಅಲ್ಲಿಂದ ಬೇಗ ಪೈರಸಿಯಾಗುವ ಭಯವೂ ಇದೆ. ಮಾತ್ರವಲ್ಲ
ಅಲ್ಲಿನ ‌ವಿತರಕರ ನಿರೀಕ್ಷೆಯೂ ದೊಡ್ಡ ಮಟ್ಟದ್ದು.‌ 'ಒಂದು ಮೊಟ್ಟೆಯ ಕತೆ' ಚಿತ್ರವನ್ನು ಖುದ್ದಾಗಿ ವಿತರಿಸುವ ಮೂಲಕ ಪವನ್ ಕುಮಾರ್ ಅಲ್ಲಿನ ವಿತರಕರಿಗೆ ಬಿಸಿ ಮುಟ್ಟಿಸಿದ್ದಾರೆ. ಹೀಗಾಗಿ ಅವರು ಕೂಡ ಮುಗುಳುನಗೆ ಬೀರಲು ಮುಂದಾಗಿದ್ದಾರೆ ಎಂದರು. ಮುಂಬೈ, ಪೂನಾ, ಹೈದರಾಬಾದ್ ಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದ್ದು, ದುಬೈ , ಅಮೆರಿಕಾಗಳಲ್ಲಿ ಆನಂತರದ ವಾರಗಳಲ್ಲಿ ನಿರೀಕ್ಷಿಸಬಹುದಾಗಿದೆ.

ನಾಯಕಿಯರ ಮಾತು

ಚಿತ್ರದ ನಾಯಕಿಯರಲ್ಲೊಬ್ಬರಾದ ಆಶಿಕಾ ಮಾತನಾಡಿ, "ಕಾಲೇಜ್ ನಲ್ಲಿದ್ದಾಗ ನಾನು ಕೂಡ ಗಣೇಶ್ ಅವರ ಫ್ಯಾನಾಗಿದ್ದೆ. ಇದೀಗ ಅವರದೇ ಚಿತ್ರದಲ್ಲಿ 'ವೈಶಾಲಿ' ಎಂಬ ಇಂಜಿನಿಯರಿಂಗ್ ವಿಭಾಗದ ಫೈನಲಿಯರ್ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ" ಎಂದರು. "ಇದು ಲವ್ ಸ್ಟೋರಿ ಹೊಂದಿರುವ ಚಿತ್ರವಾದರೂ ಬೇರೆ ಬೇರೆ ಬ್ಯಾಕ್ ಡ್ರಾಪ್ ನಲ್ಲಿ ಪ್ರೇಮ ಮತ್ತು ಜೊತೆ ಜೊತೆಗೆ ಅಪ್ಪ ಅಮ್ಮ ಸೆಂಟಿಮೆಂಟ್ ದೃಶ್ಯಗಳಿವೆ. ನನ್ನ ಪಾತ್ರ ತುಂಬ ಡಿಫರೆಂಟಾಗಿದೆ. ಡಿಗ್ನಿಫೈಡ್ ಪಾತ್ರ" ಎಂದರು ಮತ್ತೋರ್ವ ನಾಯಕಿ ನಿಖಿತಾ ನಾರಾಯಣ್.

ಹೊಸಾನುಭವಿಗಳು

'ರಾಮಾ ರಾಮಾ ರೇ' ಎಂಬ ಪ್ರಥಮ ಚಿತ್ರದಲ್ಕೇ ಪ್ರೇಕ್ಷಕರ ಪ್ರೀತಿಗೊಳಗಾದ ನಟ ಧರ್ಮಣ್ಣ, ಆ ಚಿತ್ರದ ಬಳಿಕ ಬೇರೆ ತಂಡದೊಡನೆ ಸೇರಿ ಮಾಡಿದ ಮೊದಲ ಚಿತ್ರ ಇದು ಎಂದು ತಿಳಿಸಿದರು. ಚಿತ್ರದಲ್ಲಿ ಅವರದು ತೊದಲು ಮಾತನಾಡುವ ಪಾತ್ರವಂತೆ. 'ಬುಗುರಿ'ಯಲ್ಲಿ ಗಣೇಶ್ ಜೊತೆಗೆ ನಟಿಸಿದ್ದ ಪ್ರಸಾದ್, 'ದಿಲ್ ರಂಗೀಲ'ದಲ್ಲಿ ನಟಿಸಿದ್ದ ಸಾಗರ್ ಚಿತ್ರ ಬಿಡುಗಡೆಯ ಖುಷಿಯನ್ನು ಹಂಚಿಕೊಂಡರು.

ಚಿತ್ರದ ಟ್ರೇಲರ್ ಮತ್ತು ಕೆಲವು ಹಾಡುಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News