ತಾಯಿ ಕಣ್ಣಿನ ನೋಟ-ಕಾಲಜ್ಞಾನಿಯ ಬೆಡಗು
ಕರ್ನಾಟಕ ಸಾಹಿತ್ಯ ಅಕಾಡಮಿ ಇವರು ಹೊರತಂದಿರುವ ‘ಸಣ್ಣ ಕತೆ-2015’ ಕೃತಿಯನ್ನು ವಿನಯಾ ಒಕ್ಕುಂದ ಸಂಪಾದಿಸಿದ್ದಾರೆ. 2015ರ ವರ್ಷದಲ್ಲಿ ಹೊರಬಂದಿರುವ ಬೇರೆ ಬೇರೆ ಸಂದರ್ಭದ ಸಣ್ಣ ಕತೆಗಳನ್ನು ಇಲ್ಲಿ ಒಟ್ಟು ಸೇರಿಸುವ ಪ್ರಯತ್ನ ನಡೆದಿದೆ. ವಿವಿಧ ಸಮುದಾಯ, ಸಂಸ್ಕೃತಿ, ರಾಜಕೀಯ ಸಂದರ್ಭಗಳನ್ನು, ಆಯಾ ಕಾಲಘಟ್ಟದ ತಲ್ಲಣಗಳನ್ನು ಪ್ರತಿಬಿಂಬಿಸುವ ಪ್ರಯತ್ನ ಈ ಕತೆಗಳಲ್ಲಿ ನಾವು ಕಾಣಬಹುದಾಗಿದೆ. 20 ಪುಟಗಳ ಕತೆಗಳಿಂದ ಹಿಡಿದು ನಾಲ್ಕು ಸಾಲುಗಳಲ್ಲಿ ಮುಗಿಯುವ ಕತೆಗಳವರೆಗೆ ಬೇರೆ ಬೇರೆ ರೀತಿಯ ಓದಿನ ಅನುಭವವನ್ನು ಈ ಕೃತಿ ನಮಗೆ ನೀಡುತ್ತದೆ. ಸಂಪಾದಕಿ ಹೇಳುವಂತೆ, ಒಂದು ವರ್ಷದ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸಣ್ಣ ಕತೆಗಳ ಮರು ಓದು ಇದು. ತನ್ನ ದೇಶ ಕಾಲ ಸಂದರ್ಭಗಳ ನುಡಿ ರೂಪಕವಾಗಿದೆ ಈ ಕತೆಗಳು. ಸಾಹಿತ್ಯ ಮತ್ತು ಸಮಾಜದಲ್ಲಿ ಸಂಭವಿಸುತ್ತಿರುವ ಪಲ್ಲಟ ಪ್ರಕ್ರಿಯೆಯ ನಾಡಿ ಶೋಧ ನೆಯ ಗುಣ ಇವುಗಳಲ್ಲಿದೆ. ತಾಯಿ ಕಣ್ಣಿನ ನೋಟ ಮತ್ತು ಕಾಲಜ್ಞಾನಿಯ ನುಡಿ ಬೆಡಗು ಇಲ್ಲಿಯ ಯಶಸ್ವೀ ಕಥೆಗಳ ಲಕ್ಷಣವಾಗಿದೆ. ಇಲ್ಲಿಯ ಕಥೆಗಳ ಮುಖ್ಯಧಾರೆಯಿರುವುದು ಜಾಗತೀಕರಣದ ಮುಕ್ತ ಮಾರುಕಟ್ಟೆಯು ಜನಬದುಕನ್ನು ತಲ್ಲಣಗೊಳಿಸಿರುವ ಬಗೆಯನ್ನು ಅನ್ವೇಷಿಸಿಕೊಳ್ಳುವಲ್ಲಿ. ಜನ ಬದುಕಿನಲ್ಲಿ ಅನಗತ್ಯ ನೆಮ್ಮದಿ ಹಾಳುಗೆಡಹುವ ಜ್ಯೋತಿಷ್ಯ ವಾಸ್ತುಗಳಂತಹ ವೌಢ್ಯಗಳನ್ನು ಊರೆಂಬೋ ಊರಿನ ಸಾಮಾಜಿಕ ಆರ್ಥಿಕ ರಚನೆಗಳೇ ಬುಡಕಡಿದು ಬದುಕಿನ ತ್ರಾಣವೇ ಲೂಟಿಯಾಗಿರುವುದನ್ನು ಇಲ್ಲಿನ ಕಥೆಗಳು ಹೇಳುತ್ತವೆ.
ಇಲ್ಲಿ ಸುಮಾರು 32 ಕಥೆಗಳಿವೆ. ಅನುಪಮಾ ಪ್ರಸಾದ್, ಸಿದ್ದನಗೌಡ ಪಾಟೀಲ, ಅಬ್ಬಾಸ್ ಮೇಲಿನ ಮನಿ, ಎಚ್. ನಾಗವೇಣಿ, ಉಮಾರಾವ್, ಟಿ. ಎಸ್. ಗೊರವರ, ಎಸ್. ಗಂಗಾಧರಯ್ಯ, ನಾಗರಾಜ ವಸ್ತಾರೆ, ವೈದೇಹಿ, ನಾ. ಡಿಸೋಜ, ಜೋಗಿ, ವಸುಧೇಂದ್ರ, ಫಕೀರ್ ಮಹಮದ್ ಕಟ್ಪಾಡಿ, ಬಿ. ಎಂ. ಬಶೀರ್, ಸುನಂದಾ ಪ್ರಕಾಶ ಕಡಮೆ ಹೀಗೆ ಹಲವು ಹಿರಿ ಕಿರಿಯ ಕಥೆಗಾರರ ಸಂಗಮ ಇದು. ಕಥೆ ಹೇಳುವ ರೀತಿಯಿಂದ ಹಿಡಿದು, ಕತೆಯ ವಸ್ತುವನ್ನು ಗ್ರಹಿಸುವ ರೀತಿಯವರೆಗೆ ವಿವಿಧ ಪ್ರಯೋಗಗಳನ್ನು ಇಲ್ಲಿ ಕಾಣಬಹುದು. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕತೆಗಳು ಇವಾಗಿರುವುದರಿಂದ ಅವುಗಳಿಗೆ ತನ್ನದೇ ಮಿತಿಗಳೂ ಇವೆ ಎನ್ನುವುದನ್ನು ಗುರುತಿಸಬೇಕಾಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಕತೆಗಳು ನಾಡಿನ ಕಥೆಗಾರರನ್ನು ಸಂಪೂರ್ಣ ಪ್ರತಿನಿಧಿಸುವುದಿಲ್ಲ. ಹಾಗೆಯೇ ವಸ್ತು ಆಯ್ಕೆಯ ಸಂದರ್ಭಗಳಲ್ಲೂ ಪತ್ರಿಕೆಗಳು ತಮ್ಮದೇ ಆದ ಕೆಲವು ಒಲವು, ನಿಲುವುಗಳನ್ನು ಇಟ್ಟುಕೊಂಡಿರುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿಯೂ ಕೆಲವು ಕತೆಗಾರರನ್ನು ಸಂಪರ್ಕಿಸಿ ಕತೆಗಳನ್ನು ಸಂಗ್ರಹಿಸುವ ಅಗತ್ಯವಿತ್ತು ಎನ್ನಿಸುತ್ತದೆ. 398 ಪುಟಗಳ ಕೃತಿಯ ಮುಖಬೆಲೆ 300 ರೂಪಾಯಿ.