ಹ್ಯಾಪಿ ಜರ್ನಿ: ದೆವ್ವದ ಮನೆಗೊಂದು ನಗುವಿನ ಜರ್ನಿ
ಚಿತ್ರ: ಹ್ಯಾಪಿ ಜರ್ನಿ
ತಾರಾಗಣ: ಸೃಜನ್ ಲೋಕೇಶ್, ಅಮಿತಾ ಕುಲಾಲ್ , ಶಿವಧ್ವಜ್ ಶೆಟ್ಟಿ ಮತ್ತಿತರರು.
ನಿರ್ದೇಶಕ: ಶ್ಯಾಮ್ ಶಿವಮೊಗ್ಗ
ನಿರ್ಮಾಪಕಿ: ಕರೀಶ್ಮಾ ಆರ್ ಶೆಟ್ಟಿ
ಸಣ್ಣದೊಂದು ಗ್ಯಾಪ್ ಬಳಿಕ ಸೃಜನ್ ನಾಯಕರಾಗಿ ಮರಳಿರುವ ಚಿತ್ರ ಹ್ಯಾಪಿಜರ್ನಿ. ಈಜರ್ನಿಯ ಚಾಲಕರಾಗಿರುವವರು ಶಿವಮೊಗ್ಗದಿಂದ ಬಂದ ನವ ನಿರ್ದೇಶಕ ಶ್ಯಾಮ್.
ಮೂವರು ಹುಡುಗಿಯರು ಮತ್ತು ಮೂವರು ಹುಡುಗರ ಸ್ನೇಹ ತಂಡ. ಆ ಆರು ಮಂದಿ ಕೂಡ ಖಾಸಗಿ ಸಂಸ್ಥೆಯೊಂದರಲ್ಲಿ ಜೊತೆಯಾಗಿ ಕೆಲಸ ಮಾಡುತ್ತಾ ಆತ್ಮೀಯರಾಗಿರುತ್ತಾರೆ. ಅವರಲ್ಲಿ ಚೆಲುವೆಯಾದ ಶ್ರಾವಣಿಯನ್ನು ಮೂವರು ಹುಡುಗರ ನಡುವೆ ಸದೃಢವಾಗಿ ಕಾಣಿಸುವ ಹುಡುಗ ಆರ್ಯನ್ ಪ್ರೀತಿಸುತ್ತಿರುತ್ತಾನೆ. ಆದರೆ ಇದೇ ವೇಳೆ ಆರ್ಯನ ಸಿಡುಕು ಸ್ವಭಾವದ ಸ್ನೇಹಿತ ಕೂಡ ಶ್ರಾವಣಿಯ ಮೇಲೆ ಕಣ್ಣಿಟ್ಟಿರುತ್ತಾನೆ. ಆದರೆ ಶ್ರಾವಣಿಯ ಪ್ರೀತಿ ನಿಜಕ್ಕೂ ಯಾರ ಮೇಲಿರುತ್ತದೆ? ಶ್ರಾವಣಿ ಕೂಡ ಆರ್ಯನನ್ನು ಪ್ರೀತಿಸಿದರೂ ಚಿತ್ರದ ದ್ವಿತೀಯಾರ್ಧದಲ್ಲಿ ನಾಯಕ ದೆವ್ವವಾಗುವ ಪರಿಸ್ಥಿತಿ ಏಕೆ ಉಂಟಾಗುತ್ತದೆ ಎನ್ನುವುದನ್ನು ತಿಳಿಯಬೇಕಾದರೆ ಥಿಯೇಟರ್ ಗೆ ಹೋಗಬೇಕು.
ನಾಯಕ ಆರ್ಯನಾಗಿ ಸೃಜನ್ ಮುಗ್ದ ಪ್ರೇಮಿಯಾಗಿ ಮತ್ತು ದೆವ್ವವಾಗಿ ಎರಡು ಶೇಡ್ ನಲ್ಲಿ ಕಾಣಿಸಿದ್ದಾರೆ. ಸ್ಟಾರ್ ನಟರ ಅತಿಮಾನುಷ ಹೊಡೆದಾಟದ ಶೈಲಿ ಇಲ್ಲಿ ಇದ್ದರೂ ಸೃಜನ್ ದೆವ್ವವಾಗಿರುವ ಕಾರಣ ಅದಕ್ಕೊಂದು ಸಮರ್ಥನೆ ನೀಡಬಹುದಾಗಿದೆ. ನಾಯಕಿ ಶ್ರಾವಣಿಯಾಗಿ ಮತ್ತು ಫ್ಲ್ಯಾಶ್ ಬ್ಯಾಕ್ ಕತೆಯಲ್ಲಿ ಸ್ಮಿತಾಳಾಗಿ ನಟಿಸಿರುವ ಕರಾವಳಿಯ ಚೆಲುವೆ ಅಮಿತಾ ಕುಲಾಲ್ ಗೆ ಇದು ಎರಡನೇ ಚಿತ್ರ.
ಇತ್ತೀಚೆಗೆ ತೆರೆಕಂಡಿದ್ದ 'ಆ ಎರಡು ವರ್ಷಗಳು' ಎಂಬ ಆಕೆಯ ಪ್ರಥಮ ಚಿತ್ರಕ್ಕೆ ಹೋಲಿಸಿದರೆ ಇಲ್ಲಿ ನಟನೆಗೆ ಅವಕಾಶ ಕಡಿಮೆ. ನಾಯಕನ ಸ್ನೇಹಿತರಾಗಿ ನವೀನ್ ಡಿ ಪಡೀಲ್, ಕುರಿ ಪ್ರತಾಪ್ ಚಿತ್ರಕ್ಕೆ ನಗು ತುಂಬಿದ್ದಾರೆ. ಚಿತ್ರದಲ್ಲಿನ ಆಕರ್ಷಕ ಸಂಭಾಷಣೆಗಳೆಲ್ಲವೂ ಪಡೀಲ್ ರ ಪಾಲಾಗಿದೆ ಎಂದೇ ಹೇಳಬಹುದು. ನಾಯಕನ ತಂದೆಯಾಗಿ ರಮೇಶ್ ಭಟ್ ಎಂದಿನಂತೆ ಸೆಂಟಿಮೆಂಟ್ ನೀಡುವಲ್ಲಿ ಯಶಸ್ಸಾಗಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರತ್ಯಕ್ಷರಾಗುವ ಶಿವಧ್ವಜ್ ನಟನೆಯಲ್ಲಿ ಅನುಭವದ ಪಕ್ವತೆಯನ್ನು ಕಾಣಬಹುದಾಗಿದೆ. ಚಿತ್ರಕ್ಕೆ ಚಂದ್ರಕಾಂತ್ ನೀಡಿರುವ ಹಿನ್ನೆಲೆ ಸಂಗೀತ ಆಕರ್ಷಕ ಅಂಶಗಳಲ್ಲೊಂದು. ಚಿತ್ರದ ಆರಂಭ ತುಸು ತಾಳ್ಮೆ ಪರೀಕ್ಷಿಸಿದರೂ ಕೂಡ ಮಧ್ಯಂತರದ ಬಳಿಕ ದೆವ್ವದ ಆಗಮನದೊಂದಿಗೆ ಚಿತ್ರದಲ್ಲಿ ಆಸ್ವಾದನಾ ಮಟ್ಟ ಹೆಚ್ಚುತ್ತದೆ.