ಪಾದ್ರಿ ಹಾಗೂ ಸಾಹಸಿ ಫೆರಾರ್ ಮಾಂಚೋ

Update: 2017-09-02 13:56 GMT

ದೀನ ದಲಿತರ ಒಳಿತಿಗಾಗಿ ಕೆಲಸ ಮಾಡಿದವರು ನಮ್ಮಲ್ಲಿ ಅನೇಕರಿದ್ದಾರೆ.

ನೆರೆಯ ಆಂಧ್ರಪ್ರದೇಶದ ಅನಂತಪುರದ ಪಾದ್ರಿ ಫೆರಾರ್ ಮಾಂಚೊ ಅಂತಹವರಲ್ಲಿ ಒಬ್ಬರಾಗಿದ್ದರು. ಮೂಲತಃ ಸ್ಪೈಯೆನ್ ದೇಶದವರಾಗಿದ್ದ ಫೆರಾರ್ ಮಾರ್ಕ್ಸ್ ವಾದಿ ರಾಜಕೀಯ ಚಿಂತನೆಗಳಿಂದ ಪ್ರೇರಣೆ ಪಡೆದಿದ್ದರು. ಸ್ಪೈಯೆನ್ ಅಂತರ್ಯುದ್ಧದಲ್ಲಿ ಭಾಗಿಯಾಗಿ ನಂತರ ಕೆಲಕಾಲ ಸೆರೆವಾಸವನ್ನು ಅನುಭವಿಸಿ ಕೊನೆಗೆ ಜೆಸ್ಯೂವಿಟ್ ಮತಪ್ರಚಾರಕರಾಗಿ ಕೆಲಸ ಮಾಡಲು 1952ರಲ್ಲಿ ಭಾರತಕ್ಕೆ ಬಂದರು. ಆಂಧ್ರದ ರಾಯಲ ಸೀಮಾದಲ್ಲಿ ಫೆರಾರ್ ಅದೆಂಥಾ ಅದ್ಭುತ ರಚನಾತ್ಮಕ ಕೆಲಸ ಮಾಡಿದರೆಂದರೆ ಜನರನ್ನು ಉತ್ತೇಜಿಸಿ ಅನಂತಪುರಂ ಸೇರಿದಂತೆ ರಾಯಲ ಸೀಮಾದ್ಯಂತ ಸುಮಾರು ಮೂರು ಸಾವಿರ ಬಾವಿಗಳನ್ನು ತೆಗೆಸಿದರು. ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮಳೆ ನೀರಿನ ಸಂಗ್ರಹ ಹಾಗೂ ಸ್ವಲ್ಪ ಮಟ್ಟಿಗೆ ಕೃಷಿ ಚಟುವಟಿಕೆಗಳಿಗೂ ಇದು ನೆರವಾಯಿತು.

ದಲಿತ ಸಮುದಾಯಗಳ ನಡುವೆ ಹೆಚ್ಚು ಕೆಲಸ ಮಾಡಿದ ಫೆರಾರ್ ಫೌಂಡೇಶನ್ ಬಾವಿಗಳನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ಮೂರು ಆಸ್ಪತ್ರೆ, ಒಂದು ಏಡ್ಸ್ ಚಿಕಿತ್ಸಾ ಕೇಂದ್ರ, ಒಂದು ಕುಟುಂಬ ಯೋಜನಾ ಕೇಂದ್ರಕ್ಕೆ ಧನ ಸಹಾಯ ನೀಡುತ್ತಿತ್ತು. ಹದಿನಾಲ್ಕು ಗ್ರಾಮೀಣ ಆರೋಗ್ಯ ಕೇಂದ್ರಗಳು, ಸಾವಿರದ ಏಳುನೂರು ಶಾಲೆಗಳು, ಮೂವತ್ತು ಸಾವಿರ ಮನೆಗಳಿಗೆ ಒಂದಲ್ಲ ಒಂದು ರೀತಿ ಸಹಾಯ ಒದಗಿಸುತ್ತಿತ್ತು. ಫೆರಾರ್ ತಮ್ಮ ಜೀವಿತಾವಧಿಯಲ್ಲಿ ಒಟ್ಟು ಮೂವತ್ತು ಲಕ್ಷ ಸಸಿಗಳನ್ನು ನೆಟ್ಟು ಬರಪೀಡಿತ ರಾಯಲ ಸೀಮಾದಲ್ಲಿ ಹಸಿರು ಚಿಗುರಿಸಲು ಯತ್ನಿಸಿದ್ದರು. ಒಟ್ಟು ಇಪ್ಪತ್ತೈದು ಲಕ್ಷ ಜನರ ಬದುಕಿನಲ್ಲಿ ಪರಿಣಾಮಕಾರಿ ಬದಲಾವಣೆ ತಂದವರೆಂಬ ಖ್ಯಾತಿ ಅವರಿಗಿತ್ತು.

ಫೆರಾರ್ 2009ರಲ್ಲಿ ಅನಂತಪುರದಲ್ಲೇ ನಿಧನರಾದರು. ಅವರು ಸ್ಥಾಪಿಸಿದ ವಿನ್ಸೆಂಟ್ ಫೆರಾರ್ ಫೌಂಡೇಶನ್‌ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬಹುದೆಂದು ಸ್ವತಂತ್ರ ಸಾಮಾಜಿಕ ಗುಂಪೊಂದು 2010ರಲ್ಲಿ ಶಿಫಾರಸು ಮಾಡಿತ್ತು.

ವಿನ್ಸೆಂಟ್ ಫೆರಾರ್‌ರ ಬದುಕು ಕೊಡುಗೆಗಳ ಬಗ್ಗೆ ರಾಯಲ ಸೀಮಾ ಜನತೆ ಅದೆಷ್ಟು ಕೃತಜ್ಞತಾ ಭಾವನೆ ಹೊಂದಿದ್ದರೆಂದರೆ ಕಂಬದೂರು ಕುಂದುರ್ಚಿ ಬಳಿ ಫೆರಾರ್ ಹೆಸರಿನಲ್ಲಿ ಒಂದು ಕ್ರೈಸ್ತ ದೇವಾಲಯವನ್ನೇ ನಿರ್ಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News