ದಾನ ಮಾಡಿಕೊಡಲು ಹೆಣ್ಣು ವಸ್ತುವಲ್ಲ...

Update: 2017-09-02 14:44 GMT

ನಮ್ಮ ಕುಟುಂಬವೊಂದು ರಾಷ್ಟ್ರೀಯ ಸಮಗ್ರತೆಗೆ ಉದಾಹರಣೆಯೆಂದೇ ಹೇಳಬಹುದು. ನನ್ನ ತಮ್ಮಂದಿರು ಅಂತರ್ಜಾತಿ ವಿವಾಹವಾದವರು. ನನ್ನ ತಮ್ಮ ಡಾ. ರಾಜೇಂದ್ರ ನಾಯಕ್ ಆತ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ. ಆತನ ಪತ್ನಿ ಡಾ. ವೀಣಾ ನಾಯಕ್. ಆತನ ಮಕ್ಕಳೂ ವಿವಿಧ ರಾಜ್ಯಗಳಿಂದ ತಮ್ಮ ಸಂಗಾತಿಗಳನ್ನು ಆಯ್ದುಕೊಳ್ಳುವ ಮೂಲಕ ರಾಷ್ಟ್ರೀಯ ಸಮಗ್ರತೆಯನ್ನು ಕುಟುಂಬದೊಳಗೆ ಸೃಷ್ಟಿಸಿದ್ದಾರೆ.

ನಾವು ಮದುವೆ ಮಾಡಿಸಿದ ಮತ್ತೊಂದು ಅಂತರ್ಜಾತಿ ವಿವಾಹ ಪ್ರಕರಣ ಅತ್ಯಂತ ಕುತೂಹಲಕಾರಿಯಾದದ್ದು. ಯುವತಿ ಮೀನುಗಾರ ಸಮುದಾಯಕ್ಕೆ ಸೇರಿದ್ದರೆ, ಯುವಕ ಆಚಾರ್ಯ ಸಮುದಾಯದವ. ಅವರಿಬ್ಬರಿಗೂ ಪ್ರೀತಿ ಉಂಟಾಗಿ, ಅವರು ಮದುವೆಗೆ ಮುಂದಾಗಿದ್ದರು. ಈ ಸಂದರ್ಭ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ನಾವು ಆ ಪ್ರೇಮ ಹಕ್ಕಿಗಳಿಗೆ ವಿವಾಹಕ್ಕೆ ಮುಂದಾಗಿದ್ದರಿಂದ ಆಕೆಯನ್ನು ನಾವು ಗುಪ್ತ ಸ್ಥಳದಲ್ಲಿ ಇರಿಸಿದ್ದೆವು. ಆಕೆಯನ್ನು ಹುಡುಕಿಕೊಂಡು ಏಳೆಂಟು ಮಂದಿ ಅವರ ಕುಟುಂಬದವರು ಬಂದಿದ್ದರು. ಅವರೆಲ್ಲರೂ ನಮ್ಮನ್ನು ಬೆದರಿಸಲು ಬಂದಂತಿತ್ತು. ಆ ಸಂದರ್ಭ ನಾವು ನಮ್ಮ ಕಡೆಯಿಂದ ಜನರನ್ನು ಒಟ್ಟುಗೂಡಿಸಬೇಕಾಯಿತು. ನಮ್ಮ ಕಡೆಯಿಂದ ಸುಮಾರು 40 ಮಂದಿ ಒಟ್ಟಾಗಿದ್ದರು. ಯುವತಿಯ ಮನೆಯವರನ್ನು ಮಾತನಾಡಿಸಲು ಕರೆಸಿದೆವು. ಅಷ್ಟರಲ್ಲಿ ಸ್ಥಳೀಯವಾಗಿ ಅವರ ಜತೆ ಬಂದಿದ್ದ ಯುವಕನೊಬ್ಬ ನನ್ನ ಪರಿಚಯಸ್ಥನಾಗಿದ್ದ. ಆತ ನನ್ನಲ್ಲಿ ಬಂದು ‘ನರೇಂದ್ರಣ್ಣ ದಾದಾಂಡಲ ಸೆಟ್ಟಿಂಗ್ ಮಲ್ಪುಲೆ’ (ಏನಾದರೂ ಸೆಟ್ಟಿಂಗ್ ಮಾಡಿ) ಎಂದು ನನ್ನಲ್ಲಿ ಕೇಳಿಕೊಂಡ. ನಾವು ಆಯ್ತು ಎಂದು ಹೇಳಿ ಹುಡುಗಿಯನ್ನು ಕರೆಸಿಕೊಂಡೆವು. ಅವರಲ್ಲಿ ನಾನು ಇಷ್ಟೇ ಹೇಳಿದ್ದು. ‘‘ಈಗ ಆ ಹುಡುಗಿ ಬಂದಿದ್ದಾಳೆ. ಹುಡುಗನೂ ಇದ್ದಾನೆ. ಏನು ಮಾತನಾಡುತ್ತೀರಿ’’ ಮಾತನಾಡಿ ಎಂದು. ಯುವತಿಯ ಮನೆಯ ಕಡೆಯಿಂದ ಬಂದಿದ್ದ ತಂಡದಲ್ಲಿ ಹುಡುಗಿಯ ಬಾವ ಇದ್ದ. ಆತನನ್ನು ನೋಡಿದೊಡನೆಯೇ ಯುವತಿ ಬಾವಾ ಎಂದು ಅಳಲಾರಂಭಿಸಿದಳು. ಆತನೂ ಆಕೆಯನ್ನು ಅಪ್ಪಿಕೊಂಡು ಅತ್ತುಬಿಟ್ಟ. ಅಷ್ಟರಲ್ಲಿ ಎಲ್ಲವೂ ಕೊನೆಯಾಗಿತ್ತು. ಮದುವೆಗೆ ಅವರು ಸಮ್ಮತಿ ನೀಡಿಯೇ ಬಿಟ್ಟರು. ಯುವಕನಿಗೆ ಯಾರೂ ಇಲ್ಲ ಎಂದು ತಿಳಿದು ಹೊಡೆದು ಬಡಿಯಲು ಬಂದಿದ್ದವರು ಇಲ್ಲಿ ಹುಡುಗನ ಬೆಂಗಾವಲಿಗಿದ್ದ ಜನರನ್ನು ಕಂಡು ತಣ್ಣಗಾಗಿದ್ದರು. ಅವನಿಗೆ ಬೆಂಬಲ ಎಷ್ಟು ಎಂದು ಗೊತ್ತಾದಾಗ, ಅವರು ಮೆತ್ತಗಾಗಿ ತಮ್ಮ ಹುಡುಗಿಯ ಮನದಾಸೆ ನೆರವೇರಿಸಲು ಮುಂದಾಗಿದ್ದರು.

ಇಂತಹ ಹಲವಾರು ಪ್ರಕರಣಗಳನ್ನು ನಾವು ಸಮರ್ಥವಾಗಿ ನಿಭಾಯಿಸಿ, ಎರಡು ಮನಸ್ಸುಗಳನ್ನು ಒಂದಾಗಿಸುವ ಕೆಲಸ ಮಾಡಿದ್ದೇವೆ. ಈ ಮೂಲಕ ಕೇವಲ ಮನಸ್ಸುಗಳು ಮಾತ್ರವಲ್ಲ, ಎರಡು ಸಮುದಾಯಗಳು, ಎರಡು ವಿಭಿನ್ನ ಕುಟುಂಬಗಳ ನಡುವೆ ಸಾಮರಸ್ಯಕ್ಕೂ ಕಾರಣವಾಗಿದೆ ಎಂಬುದು ನನ್ನ ಅನಿಸಿಕೆ. ಆ ಬಗ್ಗೆ ನನಗೆ ಆತ್ಮ ತೃಪ್ತಿಯೂ ಇದೆ. ಇಲ್ಲೇ ನಗರದ ಮಾಲ್ ಒಂದರಲ್ಲಿ ನೌಕರಿಯಲ್ಲಿದ್ದ ಯುವತಿಗೆ ದಲಿತ ಯುವಕನ ಜತೆ ಪ್ರೇಮಾಂಕುರಗೊಂಡಿತ್ತು. ಆದರೆ ಆ ಮಾಲ್‌ನ ಮೇಲುಸ್ತುವಾರಿ ನೋಡುತ್ತಿದ್ದ ಯುವಕನೊಬ್ಬನ ಸಮುದಾಯಕ್ಕೆ ಆ ಹುಡುಗಿ ಸೇರಿದವಳಾಗಿದ್ದಳು. ಆತನಿಗೆ ಈ ಯುವತಿ ಪ್ರೇಮ ವಿಷಯ ತಿಳಿದು ಆತ ಯುವತಿಯ ಪ್ರಮಾಣ ಪತ್ರಗಳನ್ನೇ ತೆಗೆದಿರಿಸಿಕೊಂಡಿದ್ದು. ವಿವಾಹವಾಗದಂತೆ ನೋಡಿಕೊಳ್ಳುವುದು ಅವನ ಉದ್ದೇಶವಾಗಿತ್ತು. ಬಳಿಕ ನಾವು ಪೊಲೀಸರ ನೆರವು ಪಡೆದು ಆಕೆಯ ಪ್ರಮಾಣ ಪತ್ರಗಳನ್ನು ಪಡೆದು ಆಕೆ ಪ್ರೇಮಿಸಿದ್ದ ಯುವಕನ ಜತೆ ವಿವಾಹ ಮಾಡಿಸಿದೆವು.

ಇಂತಹ ಅದೆಷ್ಟು ಮದುವೆಗಳನ್ನು ನಮ್ಮ ತಂಡದಿಂದ ಮಾಡಿಸಿದ್ದೇವೆಂಬ ಬಗ್ಗೆ ನಮಗೆ ಅರಿವಿಲ್ಲ. ಸಮಾಜದಲ್ಲಿ ಸಾಮರಸ್ಯಕ್ಕೆ ಅಂತರ್ಜಾತಿ ವಿವಾಹಗಳು ಗಟ್ಟಿ ತಳಹದಿ ಎಂಬ ಆಶಯದೊಂದಿಗೆ ಇಂತಹ ವಿವಾಹಗಳಿಗೆ ನಾವು ಬೆಂಬಲ ನೀಡಿದ್ದೇವೆ, ಪ್ರೋತ್ಸಾಹಿಸಿದ್ದೇವೆ.

   

 ಹಾಗೆ ನೋಡಿದರೆ, ನಮ್ಮ ಕುಟುಂಬವೊಂದು ರಾಷ್ಟ್ರೀಯ ಸಮಗ್ರತೆಗೆ ಉದಾಹರಣೆಯೆಂದೇ ಹೇಳಬಹುದು. ನನ್ನ ತಮ್ಮಂದಿರು ಅಂತರ್ಜಾತಿ ವಿವಾಹವಾದವರು. ನನ್ನ ತಮ್ಮ ಡಾ. ರಾಜೇಂದ್ರ ನಾಯಕ್ ಆತ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ. ಆತನ ಪತ್ನಿ ಡಾ. ವೀಣಾ ನಾಯಕ್. ಆತನ ಮಕ್ಕಳೂ ವಿವಿಧ ರಾಜ್ಯಗಳಿಂದ ತಮ್ಮ ಸಂಗಾತಿಗಳನ್ನು ಆಯ್ದುಕೊಳ್ಳುವ ಮೂಲಕ ರಾಷ್ಟ್ರೀಯ ಸಮಗ್ರತೆಯನ್ನು ಕುಟುಂಬದೊಳಗೆ ಸೃಷ್ಟಿಸಿದ್ದಾರೆ. ನನ್ನ ತಮ್ಮನ ಪತ್ನಿ ಬಿಹಾರ ಮೂಲದವರು. ತಮ್ಮನ ಮಗ ವಿಭೋರ್ ಪಂಜಾಬಿ ಹುಡುಗಿ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ತಮ್ಮನ ಮಗಳು ಶೃಂಕಲಾ ಎಂಬಿಎ ಮಾಡುತ್ತಿದ್ದು, ಒಡಿಶಾದ ಹುಡುಗಿಯನ್ನು ಮೆಚ್ಚಿಕೊಂಡಿದ್ದಾರೆ.

ನನ್ನ ಪತ್ನಿಯ ತಂಗಿಯ ದೊಡ್ಡ ಮಗಳು ಪ್ರಜ್ಞಾ, ಸುನಿಲ್ ನಾಯಕ್‌ನನ್ನು ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ. ಆ ಮದುವೆಗೆ ನಾವಿದ್ದಿದು ಆರು ಮಂದಿ. ಅಂತರ್ಜಾತಿ ವಿವಾಹಗಳು ಜಾತಿ ಜಾತಿಗಳ ನಡುವಿನ ತಾರತಮ್ಯ, ಭೇದಭಾವವನ್ನು ಹೊಡೆದೋಡಿಸುವಲ್ಲಿ ಸಹಕರಿಸಿದರೆ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿನ ಸಂಬಂಧಗಳ ಬೆಸೆಯುವಿಕೆ ಮೂಢನಂಬಿಕೆಗಳನ್ನು ದೂರತಳ್ಳುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಕಟ್ಟಳೆಗಳಿರುವುದಿಲ್ಲ. ಇದರಿಂದಾಗಿ ಶೋಷಣೆಯೂ ಇರುವುದಿಲ್ಲ. ವಿವಾಹ ಸಮಾರಂಭದ ನೆಪದಲ್ಲಿ ಲಕ್ಷಾಂತರ ರೂ.ಗಳ ದುಂದುವೆಚ್ಚದ ಪ್ರಮೇಯವೂ ಇರುವುದಿಲ್ಲ.

ನನ್ನ ಇನ್ನೋರ್ವ ಸಹೋದರ ಸುರೇಂದ್ರ ಕೂಡಾ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಮಾಡಿಕೊಂಡಿದ್ದಾನೆ. ಪ್ರಜ್ಞಾಳ ತಂಗಿ ಪ್ರನೀತಾ ಮದುವೆ ಇತ್ತೀಚೆಗಷ್ಟೇ ವಿಶೇಷ ರೀತಿಯಲ್ಲಿ ನೆರವೇರಿತು.

ಆಕೆ ಇಷ್ಟಪಟ್ಟ ಹುಡುಗ 2013ನೆ ಸಾಲಿನ ಮಿಸ್ಟರ್ ಕರ್ನಾಟಕ ಸ್ಪರ್ಧೆಯ ವಿಜೇತ ಸೌಜನ್ ಶೆಟ್ಟಿ. ಕಳೆದ ನವೆಂಬರ್‌ನಲ್ಲಿ ಆಕೆ ತಾನು ಪ್ರೀತಿಸಿದ ಹುಡುಗನನ್ನು ನನ್ನ ಬಳಿ ಕರೆ ತಂದಿದ್ದಳು. ‘‘ಏ ಶಾದಿ ಕಭೀ ನಹೀ ಹೋಗಿ. ಬ್ರಾಹ್ಮಣ್ ಕಿ ಲಡ್‌ಕೀ ಕೇ ಸಾಥ್ ತುಮ್ಹಾರಿ ಶಾದಿ ಕಭೀ ನಹೀ ಹೋ ಸಕ್ತೀ’’ ಎಂದು ಹೇಳಿದೆ. ಆತನ ಮುಖ ಸಂಪೂರ್ಣ ಕಳೆಗುಂದಿ ಹೋಗಿತ್ತು. ಇನ್ನೇನು ಆತನ ಕಣ್ಣಾಲಿಗಳು ನೀರಿನಿಂದ ತುಂಬಲಾರಂಭಿಸಿತ್ತು. ನಾನು ತಕ್ಷಣ ಸಾವರಿಸಿಕೊಂಡು, ‘‘ಇದು ಫಿಲ್ಮ್ ಡಯಲಾಗ್ ಮಾರಾಯ. ನನಗೆ ನನ್ನ ಜೀವನದಲ್ಲಿ ಯಾರಾದರೊಬ್ಬರ ಬಳಿ ಇದನ್ನು ಹೇಳಬೇಕೆಂದಿತ್ತು. ಅದನ್ನು ನಿನ್ನಲ್ಲಿ ಹೇಳಿಕೊಂಡೆ. ಈಗ ನಾನು ಡಯಲಾಗ್ ಹೊಡೆದಾಯಿತು. ಇನ್ನು ನೀನು ಪ್ರನೀತಾಳನ್ನು ವಿವಾಹವಾಗಬಹುದು’’ ಎಂದಾಗ ಆತ ಖುಷಿಯಿಂದ ನನ್ನನ್ನು ಬಿಗಿದಪ್ಪಿದ್ದ. ಆ ಕ್ಷಣ ನನ್ನ ಪಾಲಿಗೂ ಒಂದು ರೀತಿಯ ಅವಿಸ್ಮರಣೀಯ ಘಟನೆಯಾಗಿದೆ. ಏಳು ಮಂದಿಯ ಉಪಸ್ಥಿತಿಯಲ್ಲಿ ಆ ವಿವಾಹ ನೆರವೇರಿತ್ತು.

ಪ್ರನೀತಾಳ ತಾಯಿ ಅವರಿಬ್ಬರ ಮಕ್ಕಳನ್ನು ನಮ್ಮ ಸುಪರ್ದಿಗೆ ಒಪ್ಪಿಸಿದ್ದರು. ಅವರಿಗೆ ಬೇಕಾದಷ್ಟು ಕಲಿಸುವುದು ನಮ್ಮ ಜವಾಬ್ದಾರಿ. ಅವರ ವಿವಾಹ ಮಾತ್ರ ಅವರ ಜವಾಬ್ಧಾರಿ ಎಂದು ನಾನು ಹೇಳಿಕೊಂಡಿದ್ದೆ. ಅದರಂತೆ ಪ್ರನೀತಾ ತಾನು ಮೆಚ್ಚಿದ ಹುಡುಗನ ಬಗ್ಗೆ ನನಗೆ ತಿಳಿಸಿ ಕನ್ಯಾದಾನ ಮಾಡಬೇಕೆಂದೂ ಕೇಳಿಕೊಂಡಿದ್ದಳು. ಆದರೆ ನಾನು ಮಾತ್ರ ಸಂಪ್ರದಾಯ ಬೇಕಾದರೆ ನೀನು ವಿವಾಹವಾಗು. ಆದರೆ ನಾನು ಕನ್ಯಾದಾನವೆಂಬ ಕಟ್ಟಳೆಯನ್ನು ನೆರವೇರಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದೆ.

 ‘‘ನಿನ್ನನ್ನು ದಾನ ಮಾಡಿಕೊಡಲು ನೀನೇನು ವಸ್ತುವಲ್ಲ. ನೀನು ಮನುಷ್ಯಳು. ನಿನಗೆ ನಿನ್ನದೇ ಆದ ಘನತೆ ಗೌರವ ಇದೆ’’ ಎಂದು ನಾನು ಸೂಕ್ಷ್ಮವಾಗಿ ಪ್ರನೀತಾಗೆ ತಿಳಿ ಹೇಳಿದ್ದೆ. ಕೊನೆಗೆ ಅವರಿಬ್ಬರಿಗೂ ಮನವರಿಕೆಯಾಗಿ ಯಾವುದೇ ಒತ್ತಡವಿಲ್ಲದೆ, ಆಕೆ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಒಪ್ಪಿಕೊಂಡರು. ಹಾಗಾಗಿ ಇತ್ತೀಚೆಗಷ್ಟೆ ಅವರಿಬ್ಬರು ಪರಸ್ಪರ ಸಂಗಾತಿಗಳಾಗಿ ಕಾನೂನು ಬದ್ಧವಾಗಿ ಮೊಹರು ಹಾಕಿಸಿಕೊಂಡಿದ್ದಾರೆ.

ಮುಂದುವರಿಯುವುದು

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News