ಮಾಗಡಿ ಸೀಮೆಯ ಇತಿಹಾಸ-ಸಂಸ್ಕೃತಿ

Update: 2017-09-02 15:29 GMT

ಇತ್ತೀಚಿನ ತಲೆಮಾರಿನ ವಿದ್ವಾಂಸರು ಸ್ಥಳೀಯ ನಾಯಕತ್ವ ಆರ್ಥಿಕ ನೆಲೆಗಟ್ಟು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂದರ್ಭಗಳಲ್ಲಿನ ವಿಚಾರಗಳನ್ನು ಎಚ್ಚರಿಕೆಯಿಂದ ಗಮನಿಸಿ ಜನಜೀವನದ ಎಲ್ಲಾ ಮಗ್ಗುಲುಗಳನ್ನು ಅಧ್ಯಯನ ವ್ಯಾಪ್ತಿಗೆ ಒಳಪಡಿಸುತ್ತಿರುವುದು ಸಂತೋಷದ ಸಂಗತಿ. ಇಂತಹ ಅಧ್ಯಯನಗಳ ಆಸಕ್ತಿಯಿಂದ ಮಾತ್ರ ಚರಿತ್ರೆ ವಸ್ತುನಿಷ್ಠವಾಗಿ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಇಂತಹ ಸಮಗ್ರ ದೃಷ್ಟಿಕೋನ ಮಾನವ ಜನಾಂಗಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಪ್ರಸ್ತುತ ಒತ್ತಡವೂ ಹೌದು. ಇಂತಹ ಜಾಡಿನಲ್ಲಿ ನಡೆದ ಅಧ್ಯಯನ ಅರ್ಥಪೂರ್ಣವೂ, ಪರಿಪೂರ್ಣವೂ, ನ್ಯಾಯ ಸಮ್ಮತವೂ ಎನಿಸುತ್ತದೆ.

ನಿತ್ಯಪರಿವರ್ತನಾಶೀಲ ಸಮಾಜದಲ್ಲಿ ಜನ ಸಾಮಾನ್ಯರ ಬದುಕನ್ನು ಕಡೆಗಣಿಸುವುದಾದರೆ ಚರಿತ್ರೆ ವಸ್ತುನಿಷ್ಠವಾಗಿರಲು ಸಾಧ್ಯವೇ? ಮಹತ್ವಪೂರ್ಣವಾದ ಕುತೂಹಲಕಾರಿ ಅಂಶಗಳು ದಾಖಲಾಗದಿದ್ದರೆ ನಾಗರಿಕತೆಯ ಸಮಗ್ರ ಚಿತ್ರಣವೆಲ್ಲಿ ದೊರೆಯುತ್ತದೆ. ಚರಿತ್ರೆಯ ಪರಿಪೂರ್ಣ ಅಧ್ಯಯನಕ್ಕೆ ಸಮಜಶಾಸ್ತ್ರ ಮತ್ತು ಮಾನವ ಶಾಸ್ತ್ರೀಯ ದೃಷ್ಟಿಕೋನ ಆವಶ್ಯಕ. ಹೀಗೆ ಅಂತರ ಶಿಸ್ತೀಯ ಅಧ್ಯಯನಕ್ಕೊಳಪಟ್ಟಿರುವ ಪ್ರಸ್ತುತ ಕೃತಿ ಒಂದು ಕಾಲಘಟ್ಟದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಜಾನಪದ, ಕಾನೂನು ಕಟ್ಟಳೆಗಳನ್ನು ಪರಿಚಯಿಸುತ್ತಾ ಇವುಗಳಿಂದ ಅರಳಿ, ರೂಪುಗೊಂಡ ಒಟ್ಟಾರೆ ಬದುಕನ್ನು ಪ್ರತಿಬಿಂಬಿಸುವ ಹೊಸತನ ಇಲ್ಲಿದೆ.

ಈ ದೃಷ್ಟಿಯಿಂದ ಡಾ. ಮುನಿರಾಜಪ್ಪ ಇವರ ಮಾಗಡಿಸೀಮೆ ಇತಿಹಾಸ ಸಂಸ್ಕೃತಿ ಎಂಬ ಸಂಶೋಧನಾ ಕೃತಿ ಮಹತ್ವವೆನಿಸುತ್ತದೆ. ಮಾಗಡಿ ಸೀಮೆಯಾದ್ಯಂತ ಸುತ್ತಾಡಿ ಕ್ಷೇತ್ರಾಧ್ಯಯನ ಮತ್ತು ಶಾಸನಾಧಾರಗಳಿಂದ ರಚನೆಯಾಗಿರುವುದು ಮತ್ತೊಂದು ವೈಶಿಷ್ಟ್ಯ. ಮಾಗಡಿ ಸೀಮೆಯ ಜನತೆಗೆ, ಚರಿತ್ರೆಯ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಕುರಿತ ಸಂಶೋಧಕರಿಗೆ ಹೆಚ್ಚು ಪ್ರಯೋಜನಕಾರಿ. ಮಾಗಡಿ ಸೀಮೆಯ ಚರಿತ್ರೆಯೊಂದಿಗೆ ಸುತ್ತಮುತ್ತಲಿನ ಕುಣಿಗಲ್, ನೆಲಮಂಗಲ, ರಾಮನಗರ ಮತ್ತು ಬೆಂಗಳೂರಿನ ಚರಿತ್ರೆ, ಸಂಸ್ಕೃತಿ ಮೇಲೂ ಬೆಳಕು ಚೆಲ್ಲುವ ಈ ಕೃತಿ ಮುಂದಿನ ಸಂಶೋಧನೆಗೆ ದಿಕ್ಸೂಚಿಯಂತಿದೆ. ಬೌದ್ಧ, ಜೈನ, ಶೈವ, ವೈಷ್ಣವ ಧರ್ಮಗಳ ಚಟುವಟಿಕೆಗಳು, ಧರ್ಮ ಮತ್ತು ಜಾತಿ ಸಂಘರ್ಷ ಹಾಗೂ ಸಮನ್ವಯದ ಮಹತ್ವ ಶಾಸನಾಧಾರಗಳಿಂದ ವಿಶ್ಲೇಷಣೆಗೊಳಪಟ್ಟಿವೆ. ರಾಜ್ಯಾಡಳಿತದ ಮೇಲಿನ ಜಾತಿಧರ್ಮಗಳ ಹಿಡಿತದ ಐತಿಹಾಸಿಕ ಅಧ್ಯಯನ, ಸಂಶೋಧನೆಯನ್ನು ಸಾರ್ಥಕಪಡಿಸಿದೆ. ಇವರಿಂದ ಇಂತಹ ಕೃತಿಗಳು ಇನ್ನಷ್ಟು ಬರಲಿ ಎಂದು ಆಶಿಸಿ ಹಾರೈಸೋಣ.

Writer - ಡಾ.ಎಂ. ಷಡಕ್ಷರಾರಾಧ್ಯ

contributor

Editor - ಡಾ.ಎಂ. ಷಡಕ್ಷರಾರಾಧ್ಯ

contributor

Similar News