ಮೌನದಲ್ಲೂ ಮೋದಿಗೆ ಸಚಿವರ ಸಾಥ್ !

Update: 2017-09-02 18:51 GMT

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಪ್ರತಿಯೊಂದೂ ವ್ಯವಸ್ಥಿತ ಅಥವಾ ಪೂರ್ವಯೋಜಿತ ಎನ್ನುವುದನ್ನು ಇತ್ತೀಚಿನ ರಾಮ್‌ರಹೀಂ ಸಿಂಗ್ ಪ್ರಕರಣ ದೃಢಪಡಿಸಿತು. ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್‌ರಹೀಮ್ ಸಿಂಗ್‌ನನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಘೋಷಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದ ಸುದ್ದಿ ಸುದ್ದಿವಾಹಿನಿಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿತ್ತು. ಸಾಮಾನ್ಯವಾಗಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ವಾಚಾಳಿ ಸಚಿವರು, ಸಂಶಯಾಸ್ಪದವಾಗಿ ಟ್ವಿಟ್ಟರ್‌ನಿಂದ ದೂರ ಉಳಿದಿದ್ದರು. ಅರಾಜಕತೆ ತಾಂಡವವಾಡುತ್ತಿದ್ದ ಅಷ್ಟೂ ಹೊತ್ತು ಸರಕಾರದ ಎಲ್ಲರೂ ಇದಕ್ಕೆ ಕಿವುಡಾಗಿದ್ದರು. ಇಂಥ ಪರಿಸ್ಥಿತಿಯಲ್ಲಿ ತಾಳಿದ್ದ ದಿವ್ಯಮೌನ ಅವರ ನಾಯಕತ್ವದ ಮೇಲೆ ಪ್ರತಿಫಲನಗೊಳ್ಳುತ್ತದೆ ಎಂಬ ಕಾರಣಕ್ಕೆ ನರೇಂದ್ರ ಮೋದಿ ಕ್ರಮೇಣ ಮೌನ ಮುರಿದರು; ಆದರೆ ಹಿಂಸಾಚಾರ ಕೊನೆಗೊಂಡ ಬಳಿಕ. ಅವರು ಮಾತನಾಡಿದ ಬಳಿಕ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮತಿ ಇರಾನಿ ಕಾರ್ಯಾಚರಣೆಗೆ ಇಳಿದರು. ವಾಸ್ತವವಾಗಿ ಹಿಂಸಾಚಾರದುದ್ದಕ್ಕೂ ದಿವ್ಯ ಮೌನ ತಾಳಿದ್ದ ಸಚಿವೆ, ವೀಕ್ಷಕರಲ್ಲಿ ಭೀತಿ ಹುಟ್ಟಿಸುವಂಥ ಪ್ರಸಾರಕ್ಕೆ ಕಡಿವಾಣ ಹಾಕಿಕೊಳ್ಳುವಂತೆ ಸುದ್ದಿವಾಹಿನಿಗಳಿಗೆ ಮನವಿ ಮಾಡಿದರು. ಆದರೆ ವಾಸ್ತವವಾಗಿ ಭೀತಿ ಇದ್ದ ಅವಧಿಯಲ್ಲಿ ಮೋದಿ ಸಂಪುಟದ ದೃಷ್ಟಿ ಪಿಎಂಒ ಕಚೇರಿಯತ್ತ ನೆಟ್ಟಿತ್ತು.

 ಸಿಬಲ್ ಯು-ಟರ್ನ್

ಕಣ್ಣು ತೆರೆಯುವುದರೊಳಗೆ ಯು-ಟರ್ನ್ ತೆಗೆದುಕೊಳ್ಳುವುದರಲ್ಲಿ ವಕೀಲರು ನಿಸ್ಸೀಮರು. ಕಪಿಲ್ ಸಿಬಲ್ ಅವರ ಇಂಥ ಗುಣ ಇತ್ತೀಚೆಗೆ ತ್ರಿವಳಿ ತಲಾಖ್ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ವೇಳೆ ಜಗಜ್ಜಾಹೀರಾಯಿತು. ಕೇಂದ್ರದ ಮಾಜಿ ಕಾನೂನು ಸಚಿವರಾದ ಸಿಬಲ್, ಈ ಪ್ರಕರಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅನ್ನು ಪ್ರತಿನಿಧಿಸಿದ್ದರು. ಪ್ರಕರಣದ ವಾದ-ಪ್ರತಿವಾದದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವವರೆಗೂ, ತ್ರಿವಳಿ ತಲಾಖ್ ಸಮರ್ಥಿಸಿಕೊಂಡಿದ್ದರು. ತ್ರಿವಳಿ ತಲಾಖ್ ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಘೋಷಿಸಿತು. ಸಿಬಲ್ ಅವರು ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಸಂದೇಶ ಮಾಧ್ಯಮಗಳಿಗೆ ರವಾನೆಯಾಯಿತು. ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುವ ಮೂಲಕ ಮಾಧ್ಯಮದವರನ್ನು ಸಿಬಲ್ ದಂಗುಬಡಿಸಿದರು. ಅಷ್ಟು ಮಾತ್ರವಲ್ಲದೆ ಈ ಅನಿಷ್ಟ ಪದ್ಧತಿಯನ್ನು ತಳ್ಳಿಹಾಕಿದ್ದಕ್ಕಾಗಿ ಸುಪ್ರೀಂಕೋರ್ಟ್‌ಗೆ ಅಭಿನಂದನೆ ಸಲ್ಲಿಸುವುದಾಗಿ ಘೋಷಿಸಿದರು. ಇಂಥ ದಿಢೀರ್ ನಿಲುವು ಬದಲಾವಣೆಯಿಂದ ಅಲ್ಪಸಂಖ್ಯಾತ ಸಮುದಾಯದ ಹಲವು ಮಂದಿ ಧಾರ್ಮಿಕ ಮುಖಂಡರು ಆಘಾತಗೊಂಡರು. ಇಂಥ ಧಾರ್ಮಿಕ ನಂಬಿಕೆಯನ್ನು ಸಂವಿಧಾನಾತ್ಮಕ ನೈತಿಕತೆಯ ಆಧಾರದಲ್ಲಿ ಪರಿಶೀಲಿಸಲಾಗದು ಎಂದು ವಾದಿಸುವ ಹಂತಕ್ಕೆ ಸಿಬಲ್ ಹೋಗಿದ್ದರು. ಸಿಬಲ್ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುವ ಮೂಲಕ, ಖಾಸಗಿತನ ಮೂಲಭೂತ ಹಕ್ಕು ಎಂದು ಘೋಷಿಸಿದ ಪ್ರಕರಣದಲ್ಲಿ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪ್ರೇರಣೆ ನೀಡಿದರು ಎಂದೂ ಕೆಲವರು ಕಿಚಾಯಿಸಿದರು. ಈ ಪ್ರಕರಣದಲ್ಲಿ ಸರಕಾರ ಖಾಸಗಿತನದ ಹಕ್ಕನ್ನು ನ್ಯಾಯಾಲಯದಲ್ಲಿ ವಿರೋಧಿಸಿದ್ದರೆ, ಸಚಿವ ಪ್ರಸಾದ್ ಅವರು, ಸರಕಾರ ಖಾಸಗಿತನದ ಹಕ್ಕಿಗೆ ಪರವಾಗಿದೆ ಎಂದು ಬಣ್ಣಿಸಿದ್ದರು.

ಮುಕುಲ್ ರಾಯ್ ನಿರ್ಗಮನ?

ಬಿಜೆಪಿ ಖಚಿತವಾಗಿ ಪಶ್ಚಿಮ ಬಂಗಾಳದ ಬಗ್ಗೆ ಬೃಹತ್ ಯೋಜನೆ ಹಾಕಿಕೊಂಡಿದೆ ಹಾಗೂ ಮಮತಾ ಬ್ಯಾನರ್ಜಿ ಅದಕ್ಕೆ ಸಹಿ ಹಾಕುವಂತೆ ಕಾಣುತ್ತಿದೆ. ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿರುವ ರಾಯ್‌ಗೆ ಇತ್ತೀಚೆಗೆ ಆಘಾತ ಕಾದಿತ್ತು. ಸಂಸದೀಯ ಸ್ಥಾಯಿ ಸಮಿತಿಯಿಂದ ಹೊರಬರುವಂತೆ ಅವರಿಗೆ ದೀದಿ ನೀಡಿದ ಸೂಚನೆಯನ್ನು ಅವರು ಮರುಮಾತಿಲ್ಲದೆ ಪಾಲಿಸಿದರು. ಆದರೆ 2019ರ ಲೋಕಸಭಾ ಚುನಾವಣೆ ವೇಳೆ ಅವರು ದೀದಿ ಹಡಗಿನಿಂದ ಹೊರಕ್ಕೆ ಹಾರುತ್ತಾರೆ ಎಂಬ ವದಂತಿ ಬಲವಾಗಿ ಹಬ್ಬಿದೆ. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಅವರ ಹೆಸರು ಕಾಣಿಸಿಕೊಂಡ ತಕ್ಷಣ ಹಾಗೂ ಕುಖ್ಯಾತ ನಾರದ ರಹಸ್ಯ ಟೇಪ್‌ನಲ್ಲಿ ಅವರು ಕಾಣಿಸಿಕೊಂಡಾಗಿನಿಂದ, ಸಿಬಿಐ ಹಾಗೂ ಇತರ ಕೇಂದ್ರೀಯ ತನಿಖಾ ಸಂಸ್ಥೆಗಳು, ಇದರಲ್ಲಿ ಶಾಮೀಲಾದ ತೃಣಮೂಲ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರುತ್ತಿವೆ. ಪಕ್ಷದ ಹಲವು ಮಂದಿ ಭ್ರಷ್ಟರೆನಿಸಿಕೊಂಡ ಸಂಸದರು ಹಾಗೂ ಶಾಸಕರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಬಿಜೆಪಿ ಜತೆ ಸಖ್ಯ ಬೆಳೆಸಿಕೊಳ್ಳುತ್ತಾರೆ ಎಂಬ ಭೀತಿ ದೀದಿಯನ್ನು ಕಾಡುತ್ತಿದೆ. ಮುಂದಿನ 2019 ಬಹುಶಃ ಸಾಮೂಹಿಕ ನಿರ್ಗಮನಕ್ಕೆ ಸಾಕ್ಷಿಯಾಗಬಹುದು. ಇದಕ್ಕೆ ರಾಯ್ ನೇತೃತ್ವ ವಹಿಸಬಹುದು ಎಂದು ಆಂತರಿಕ ವಲಯದ ಮೂಲಗಳು ಹೇಳುತ್ತವೆ. ಮುಕುಲ್, ಬಂಗಾಳವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಮಾಸ್ಟರ್ ತಂತ್ರಗಾರ. ಮಮತಾ ವಿರುದ್ಧದ ಹೋರಾಟಕ್ಕೆ ಅವರು ಆಸ್ತಿಯಾಗಬಲ್ಲರು ಎಂಬ ನಂಬಿಕೆ ಬಿಜೆಪಿಯಲ್ಲಿದೆ.

ಬಡಾಯಿಗಿಂತ ವಿವೇಕ ಮೇಲು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದೆ ಮೇಲ್ಮನೆಯ ಸದಸ್ಯರಾಗುವ ಬಗ್ಗೆ ಬಿಜೆಪಿ ನಿರ್ಧಾರ ಕೈಗೊಂಡಿದೆ. ಆದಿತ್ಯನಾಥ್ ಅವರು ವಿಧಾನಸಭಾ ಚುನಾವಣೆ ಎದುರಿಸಲು ಉತ್ಸುಕರಾಗಿದ್ದರೂ, ರಾಜಕೀಯವಾಗಿ ವಿವೇಕಯುತ ನಿರ್ಧಾರ ಕೈಗೊಳ್ಳುವಂತೆ ಹಾಗೂ ಅನಗತ್ಯವಾಗಿ ಚುನಾವಣೆ ಹೇರದಂತೆ ಪಕ್ಷ ಅವರಿಗೆ ಸೂಚನೆ ನೀಡಿದೆ ಎಂದು ಪಕ್ಷದ ಒಳಗಿನವರು ಹೇಳುತ್ತಾರೆ. ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಐದು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ, ಒಂದು ಸ್ಥಾನವನ್ನು ಸೋತರೂ ಅದು 2019ರ ಲೋಕಸಭೆ ಚುನಾವಣೆಗೆ ಮುನ್ನ ಪಕ್ಷದ ಸ್ಥೈರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಭೀತಿ ಬಿಜೆಪಿಯಲ್ಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಪ್ರಭಾವಿ ಮುಖಂಡರಾದ ಆದಿತ್ಯನಾಥ್ ಅವರಂಥ ಸದಸ್ಯರು ಕೂಡಾ ಪಕ್ಷದ ಚಿಂತನೆಯಂತೆಯೇ ನಡೆಯಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಂತಿದೆ.

ಮತ್ತೆ ಗೈರು ಸಂಸ್ಕೃತಿ

ಕೇಂದ್ರದ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷಗಳಿಗೆ ತನ್ನ ಮೇಲೆರಗುವ ಅವಕಾಶ ಕಲ್ಪಿಸಿಕೊಟ್ಟಾಗಲೆಲ್ಲ ರಾಹುಲ್‌ಗಾಂಧಿ ದೇಶದಿಂದ ಹೊರಗಿರುತ್ತಾರೆ. ಬಹುಶಃ ಇದು ಕಾಂಗ್ರೆಸ್ ಪಕ್ಷಕ್ಕೆ ಶಾಪ. ನೋಟು ರದ್ದತಿ, ರೈತರ ಪ್ರತಿಭಟನೆ ಹೀಗೆ ಹಲವು ಸಂದರ್ಭಗಳಲ್ಲಿ ಪರಿಸ್ಥಿತಿಯ ಲಾಭ ಪಡೆಯುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದ್ದಾಗಲೆಲ್ಲ ರಾಹುಲ್ ವಿದೇಶ ಯಾತ್ರೆ ಕೈಗೊಳ್ಳುತ್ತಿದ್ದಾರೆ. ವಾಸ್ತವವಾಗಿ ಅದು ಆಗಬಾರದು. ಇದೀಗ ನೋಟು ರದ್ದತಿಯ ವೈಫಲ್ಯ ಜಗಜ್ಜಾಹೀರಾಗಿದೆ ಹಾಗೂ ಪರಿಣಾಮವಾಗಿ, ಜಿಡಿಪಿಯ ಕುಸಿತ ಎದ್ದುಕಾಣುತ್ತಿದೆ. ಆದರೆ ಗಾಂಧಿಯನ್ನು ಈಗ ಹುಡುಕಬೇಕಾಗಿದೆ. ಅವರು ನಾರ್ವೆ ಪ್ರವಾಸದಲ್ಲಿರುವುದನ್ನು ದಿಲ್ಲಿಯಲ್ಲಿರುವ ಅವರ ಪಕ್ಷದ ಮುಖಂಡರೇ ಅರ್ಥ ಮಾಡಿಕೊಳ್ಳುವ ಅಥವಾ ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದಾದ ತಕ್ಷಣ ಅವರು ಮತ್ತೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಬಹುಶಃ ಬಿಜೆಪಿ ದೇಶಕ್ಕೆ ಮತ್ತೆ ಕೆಟ್ಟ ಸುದ್ದಿ ನೀಡುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಪಕ್ಷದ ಮುಖಂಡರು ಈ ಲಾಭ ಎತ್ತುವ ಸ್ಥಿತಿಯಲ್ಲಿಲ್ಲ. ಕೆಲ ಮಂದಿಗೆ ಸಂದರ್ಭದ ಲಾಭ ಪಡೆಯುವ ಕಲೆ ಗೊತ್ತಿಲ್ಲ. ರಾಹುಲ್‌ಗಾಂಧಿಯವರಂತೂ ನಿಶ್ಚಿತವಾಗಿ ಇಂಥ ಲಾಭ ಪಡೆಯಲಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News