ದಣಿವಿಲ್ಲದ ಹೋರಾಟಗಾರ ದೊರೆಸ್ವಾಮಿ ಕುರಿತಂತೆ
ನಾಡಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿವಿಧ ಜನಪರ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಾವು ನೋಡುತ್ತಿರುವುದು ಈ ನಾಡಿನ ಹಿರಿಯ ಜೀವ ಎಚ್. ಎಸ್. ದೊರೆಸ್ವಾಮಿ. ಯಾವುದೇ ಯುವ ಜೀವಗಳನ್ನು ನಾಚಿಸುವಂತೆ, ಬೇರೆ ಬೇರೆ ಸಾಮಾಜಿಕ ಚಳವಳಿಗಳಲ್ಲಿ ಇನ್ನೂ ತೊಡಗಿಸಿಕೊಂಡಿದ್ದಾರೆ ದೊರೆಸ್ವಾಮಿ. ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡಿರುವ ಈ ಜೀವದ ಪಾಲಿಗೆ ನಾಡಿನ ಸ್ವಾತಂತ್ರ ಇನ್ನೂ ಪೂರ್ಣಗೊಂಡಿಲ್ಲ. ಆ ಕಾರಣಕ್ಕಾಗಿ ಭೂಮಿಗಾಗಿ, ಆದಿವಾಸಿಗಳಿಗಾಗಿ ಸದಾ ಮಿಡಿಯುತ್ತಾ, ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಹೋರಾಟ, ಬದುಕಿನ ಕುರಿತಂತೆ ಕೆ. ಎಸ್. ನಾಗರಾಜ್ ಅವರು ‘ದಣಿವಿಲ್ಲದ ಹೋರಾಟಗಾರ-ಎಚ್. ಎಸ್. ದೊರೆಸ್ವಾಮಿ’ ಕೃತಿಯನ್ನು ಬರೆದಿದ್ದಾರೆ. 1918ರ ಎಪ್ರಿಲ್ 10ರಂದು ಬೆಂಗಳೂರಿನಲ್ಲಿ ಹಾರೋಹಳ್ಳಿ ಶ್ರೀನಿವಾಸಯ್ಯರ್ ದೊರೆಸ್ವಾಮಿ ಜನಿಸಿದ್ದಾರೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಜೈಲುವಾಸವನ್ನು ಇವರು ಅನುಭವಿಸಿದ್ದಾರೆ. 1942ರ ಕ್ವಿಟ್ ಇಂಡಿಯಾ ಚಳವಳಿಯಿಂದ ಆರಂಭಿಸಿದ ಹೋರಾಟಕ್ಕೆ ಇನ್ನೂ ವಿಶ್ರಾಂತಿ ಸಿಕ್ಕಿಲ್ಲ ಎನ್ನುವುದನ್ನು ಈ ಕೃತಿ ಸರಳವಾಗಿ ಸಂಕ್ಷಿಪ್ತವಾಗಿ ಹೇಳುತ್ತದೆ. ವಿನೋಬಾ ಭಾವೆಯವರ ಭೂ ದಾನ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ ಮಾತೃಭಾಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ನಡೆದ ವಿವಿಧ ಚಳವಳಿಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಆದುದರಿಂದಲೇ, ದೊರೆಸ್ವಾಮಿಯ ಹೋರಾಟವನ್ನು ಸ್ವಾತಂತ್ರ ಪೂರ್ವ ಮತ್ತು ಆನಂತರ ಎಂದು ಗುರುತಿಸಬಹುದು. ಬಹುಶಃ ಸ್ವಾತಂತ್ರ ಪೂರ್ವದ ಚಳವಳಿಯಲ್ಲಿ ಗುರುತಿಸಿಕೊಂಡವರ ಕುರಿತಂತೆ ನಮಗೊಂದು ರೋಚಕ ಕಲ್ಪನೆಯಿರುತ್ತದೆ ಮತ್ತು ಅದನ್ನು ನಾವು ಸಿದ್ಧ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಆದರೆ ಅದೇ ವ್ಯಕ್ತಿ ಸದ್ಯದ ಸಂದರ್ಭದ ರಾಜಕೀಯ, ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಾಗ ಅಷ್ಟೇ ಸಹಜವಾಗಿ ನಾವು ಸ್ವೀಕರಿಸುವುದಿಲ್ಲ. ಆದುದರಿಂದಲೇ, ಸ್ವಾತಂತ್ರಾಪೂರ್ವದ ದೊರೆಸ್ವಾಮಿಗಿಂತ ಆನಂತರದ ದೊರೆಸ್ವಾಮಿಯವರ ವ್ಯಕ್ತಿತ್ವ ಇಷ್ಟವಾಗುತ್ತದೆ. ಇತ್ತೀಚೆಗೆ ನಡೆದ ಅಣ್ಣಾ ಹಝಾರೆಯವರ ಹೋರಾಟದಲ್ಲೂ ಕರ್ನಾಟಕದಿಂದ ದೊರೆಸ್ವಾಮಿ ಗುರುತಿಸಿಕೊಂಡಿದ್ದರು. ತೀರಾ ನಿನ್ನೆ ಮೊನ್ನೆಯಂತೆ ನಡೆದಿರುವ, ಭೂಹಕ್ಕಿನ ಹೋರಾಟಗಳಲ್ಲೂ ಇವರ ಪಾತ್ರ ಅಪರಿಮಿತವಾದುದು. ಇಲ್ಲಿ ದೊರೆಸ್ವಾಮಿಯವರ ವಿವಿಧ ಹಂತದ ಬದುಕು, ಹೋರಾಟವನ್ನು ಸರಳ ಭಾಷೆಯಲ್ಲಿ ನಾಗರಾಜ್ ನಿರೂಪಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಹೊರತಂದಿರುವ ಈ ಕೃತಿಯ ಮುಖಬೆಲೆ 100 ರೂಪಾಯಿ.