ನೆತ್ತರಲ್ಲಿ ಅದ್ದಿದ ಅಕ್ಷರಗಳು...

Update: 2017-09-07 18:43 GMT

‘ಗಲ್ಲು ಗಡಿಪಾರು-ವಿಶ್ವದ ನೂರು ಲೇಖಕರ ನೆತ್ತರ ಕಥೆ’ ಡಾ. ರಾಜಶೇಖರ ಮಠಪತಿ(ರಾಗಂ) ಅವರು ಬರೆದ ಜಗತ್ತಿನ ವಿವಾದಿತ ಬರಹಗಾರರ ವ್ಯಕ್ತಿ ಚಿತ್ರಣಗಳಿವೆ. ಲೇಖಕನ ಪಾಲಿಗೆ ಬರಹವೆನ್ನುವುದು ಅಗ್ನಿದಿವ್ಯ. ಕಳೆದ ಶತಮಾನದಲ್ಲಿ ರಾಜಕೀಯ ವಿಪ್ಲವಗಳ ನಡುವೆ ಬರಹಗಾರ ಪೆನ್ನೆತ್ತಿದೆನೆಂದರೆ ಒಂದೋ ಆತ ಮರಣದಂಡನೆಯನ್ನು ಎದುರಿಸಬೇಕು. ಅಥವಾ ಗಡಿಪಾರಾಗಲು ಸಿದ್ಧನಾಗಿರಬೇಕು. ಇಂತಹ ಅಗ್ನಿದಿವ್ಯಕ್ಕೆ ತಮ್ಮನ್ನು ಒಡ್ಡಿಕೊಂಡು ದುರಂತವನ್ನಪ್ಪಿಯೂ ಶಾಶ್ವತವಾಗಿ ಉಳಿದ ನೂರು ಲೇಖಕರ ಪರಿಚಯ ಈ ಕೃತಿಯಲ್ಲಿದೆ. ಇತಿಹಾಸದಲ್ಲಿ ಆಗಿ ಹೋದ ಲೇಖಕರಿಂದ ಹಿಡಿದು, ಇತ್ತೀಚಿನ ಲೇಖಕರವರೆಗಿರುವ ಬರಹಗಾರರ ಬದುಕು, ವ್ಯಕ್ತಿತ್ವಗಳನ್ನು ಈ ಕೃತಿಯಲ್ಲಿ ಕುತೂಹಲಕರವಾಗಿ ಚರ್ಚಿಸಲಾಗಿದೆ. ಲೇಖಕರು ಈ ಬರಹಗಳ ಕುರಿತಂತೆ ಹೇಳುವುದು ಹೀಗೆ ‘‘ಸಾವಿರಾರು ವರ್ಷಗಳಷ್ಟು ದೀರ್ಘವಾದ ನೂರು ದೇಶಗಳ ನೆತ್ತರದ ಪುಟಗಳ ಅವಲೋಕನವನ್ನು ನಾನಿಲ್ಲಿಗೆ ತಂದು ನಿಲ್ಲಿಸಿದ್ದೇನೆ. ಇತಿಹಾಸ ಸಾಕ್ಷಿಯಾಗಿರುವಂತೆ, ನಾಗರಿಕತೆ ಭೌತಿಕವಾಗಿ ನಿರಾಳವಾದಷ್ಟೂ ಆಳವಾಗಿರುತ್ತದೆ. ಅನಾಗರಿಕತೆಯು ಭಾವನಾತ್ಮಕ ನೆಲೆ. ಆದಾಗ್ಯೂ ಇದನ್ನು ಮೆಟ್ಟುತ್ತೇನೆ., ಮನುಷ್ಯ ಸಹ್ಯವಾದ ಒಂದು ನವ ಸಮಾಜವನ್ನು ತನ್ನ ಹೋರಾಟಗಳ ಮೂಲಕ ಕಟ್ಟುತ್ತೇನೆ ಎಂಬ ಹಠದ ಮುಷ್ಟಿಯನ್ನು ಜೀವನ ಶಕ್ತಿಗಳ ಹೋರಾಟದ ಪರಿ ನೋಡಿ ಅಚ್ಚರಿ ಪಡುವುದೊಂದನ್ನು ಹೊರತು ಪಡಿಸಿ ನಾನಿಲ್ಲಿ ಅಭಿಮಾನ ಪಡುವಂಥದ್ದು ಮತ್ತೇನೂ ಇಲ್ಲ. ಶುಷ್ಕವಾಗುತ್ತಲೇ ಸಾಗುತ್ತಿದೆ ಸುತ್ತಲಿನ ಪ್ರಪಂಚ. ಈ ನಿರ್ಜೀವ, ನಿರ್ವೀರ್ಯ ನಡಿಗೆಯ ನಮ್ಮ ಗುರಿಯಾವುದೋ, ಮುಂದಿನ ಅರ್ಥದ ಪರಿಯಾವುದೋ ನನಗೂ ಗೊತ್ತಿಲ್ಲ’’

ಸಂವೇದನಾ ರಹಿತವಾದ ವರ್ತಮಾನಗಳಿಗೆ ಸಂವಾದಿಯಾಗಿ ಇಲ್ಲಿ ಬೇರೆ ಬೇರೆ ಲೇಖಕರ ಮಾತು, ಬದುಕು, ಬರಹಗಳನ್ನು ನೀಡಲಾಗಿದೆ.‘ಇಸ್ಲಾಮ್ ಎಂಬುದು ಕುರುಡು ನಂಬಿಕೆಯಲ್ಲ, ಅದು ಅರ್ಥ. ಯಾವುದೇ ಪಾಪಿಯೊಬ್ಬ ಮುಸ್ಲಿಮ್ ಪದವನ್ನು ಭಯಾನಕವೆಂದು ಬಿಂಬಿಸಲು ಅನುಮತಿಸಬೇಡ. ಯಾಕೆಂದರೆ ಇಸ್ಲಾಮ್ ಎಂಬುದು ಕುಟುಂಬ’ ಎನ್ನುವ ರಶ್ದಿಯ ತೊಳಲಾಟ, ಸಾವು ಮತ್ತು ದುರಂತಗಳ ಪಲ್ಲಂಗದ ಮೇಲೆ ದಕ್ಕಿರುವ ಅನುಭವಗಳನ್ನಿಟ್ಟು ಬರೆಯುವ ಫ್ರಿದಾ ಕಾಹ್ಲೋವಾ, ಸಾವಿನ ನಿರೀಕ್ಷೆಯಲ್ಲೇ ಲೇಖನಿಯ ಆಶ್ರಯ ಪಡೆದ ಕಿಮ್ ಡೆ ಜೆಂಗ್, ಜೈಲಿನಲ್ಲಿ ಕುಳಿತು ಶಿಕ್ಷೆಯನ್ನು ಸಂಗೀತದಂತೆ ಆಚರಿಸುವ ಬಗ್ಗೆ ಬರೆದ ಜಾನ್ ಬನಿಯನ್, ಹೆಣ್ತನದ ತುಡಿತದೊಂದಿಗೆ ಬರೆದ ದಾರಾಶಿಕೋ, ತನ್ನ ತಾಯಿಯನ್ನು ಗ್ಯಾಸ್‌ಚೇಂಬರ್‌ಗೆ ತಳ್ಳಿರುವುದನ್ನು ಅಸಹಾಯಕನಾಗಿ ನೋಡಿದ ವಿಕ್ಟರ್ ಫ್ರಾಂಕಲ್, ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಾರ್ಟಿನ್ ಲೂಥರ್ ಕಿಂಗ್....ಹೀಗೆ ಇಲ್ಲಿ ನೂರು ವ್ಯಕ್ತಿಗಳು. ಬಹು ವ್ಯಕ್ತಿತ್ವಗಳು. ದೇಶ ವಿದೇಶಗಳ ಲೇಖಕರು ಇಲ್ಲಿ ಸಮಾಗಮವಾಗಿದ್ದಾರೂ ಅವರನ್ನು ಬರೆಸಿದ ಜೀವದ್ರವ್ಯ ಮಾತ್ರ ಒಂದೇ. ಕಣ್ವ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. 544 ಪುಟಗಳ ಈ ಕೃತಿಯ ಮುಖಬೆಲೆ 380 ರೂಪಾಯಿ. ಆಸಕ್ತರು 9242121461 ದೂರವಾಣಿಯನ್ನು ಸಂಪರ್ಕಿಸಬಹುದು.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News