ಗೌರಿ ಲಂಕೇಶ್ ಯಾರಿಗೆ ಬೇಡವಾಗಿದ್ದರು?

Update: 2017-09-09 12:27 GMT

ಗೌರಿಯವರ ಸಾರ್ವಜನಿಕ ಜೀವನದ ಹೋರಾಟ, ಆಶಯಗಳು ಕೇವಲ ಫ್ಯಾಶಿಸ್ಟರಿಗೆ ಮಾತ್ರವಲ್ಲ ಇತರ ರಾಜಕೀಯ ಪಕ್ಷಗಳಿಗೆ, ಪೊಲೀಸರಿಗೆ ಒಟ್ಟಾರೆ ವ್ಯವಸ್ಥೆಗೇ ಅಸಹನೀಯವಾಗಿತ್ತು. ಅದನ್ನೀಗ ನಿವಾರಿಸಿಕೊಳ್ಳಲಾಗಿದೆ.

ಗೌರಿ ಲಂಕೇಶ್ ಹತ್ಯೆ ಕುರಿತಂತೆ ಎರಡು ಮುಖ್ಯ ತರ್ಕಗಳನ್ನು ಈಗ ಚರ್ಚಿಸ ಲಾಗುತ್ತಿದೆ. ಒಂದು ವೈದಿಕಶಾಹಿ ಭಯೋತ್ಪಾದಕರ ಕೈವಾಡದ್ದು. ಇನ್ನೊಂದು ಎಡಪಂಥೀಯ ಮಾವೋವಾದಿ ಸಂಘಟನೆಯ ಪಾತ್ರ ಇದ್ದರೂ ಇರಬಹುದಾ ಎಂಬ ಬಗ್ಗೆ. ಈ ಸಾಧ್ಯತೆಗಳನ್ನು ಚರ್ಚಿಸು ವಾಗ ಕರ್ನಾಟಕದ ಪೊಲೀಸರು ಹಾಗೂ ಆಳುವ ಕಾಂಗ್ರೆಸ್ ಸರಕಾರದ ನಡವಳಿಕೆಗಳನ್ನೂ ವಿಶ್ಲೇಷಿಸಬೇಕಾಗುತ್ತದೆ. ಮೊದಲನೆಯದಾಗಿ ಮಾವೋವಾದಿ ಸಂಘಟನೆಯ ಪಾತ್ರದ ಸಾಧ್ಯತೆಗಳನ್ನೇ ಪರಿಶೀಲಿಸೋಣ.

 ಬಹುತೇಕರಿಗೆ ತಿಳಿದಿರುವಂತೆ ಕರ್ನಾಟಕದ ಮಾವೋವಾದಿ ಹೋರಾಟವು 2007ರ ವೇಳೆಗೆ ಅಧಿಕೃತವಾಗಿ ಇಬ್ಭಾಗವಾಯಿತು. ಸಶಸ್ತ್ರ ಹೋರಾಟವನ್ನು ಮೊದಲ ಆದ್ಯತೆಯಾಗಿಸಬೇಕು ಎಂಬ ನಿಲುವಿನ ಮಾತೃ ಪಕ್ಷ ಹಾಗೂ ಸಮೂಹಾಧಾರಿತ ಹೋರಾಟ ನಡೆಸಬೇಕೆಂಬ ಭಿನ್ನಮತೀಯರ ನಿಲುವುಗಳು ಅದರ ವಿಭಜನೆಗೆ ಕಾರಣವಾಗಿದ್ದವು. ಇದರೊಂದಿಗೆ ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ಬೆಳೆದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ವಿಭಜನೆಯನ್ನು ಅನಿವಾರ್ಯವಾಗಿಸಿದವೆಂದು ನಂತರದಲ್ಲಿ ಮುಖ್ಯವಾಹಿನಿಗೆ ಬಂದ ಭಿನ್ನಮತೀಯ ಬಣದ ಪ್ರಮುಖ ನೂರ್ ಶ್ರೀಧರ್ ಈಗಾಗಲೇ ಹೇಳಿದ್ದಾರೆ.

ಈ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಾಗಲಿ ಅಥವಾ ಒಡಕಿನಲ್ಲಿ ಗೌರಿ ಲಂಕೇಶ ರಿಗೆ ಸಂಬಂಧವೇ ಇಲ್ಲ. ನಕ್ಸಲರ ಪಕ್ಷದ ಆಂತರಿಕ ವಿದ್ಯಮಾನ ಅದಾಗಿತ್ತು. ಅಷ್ಟಲ್ಲದೆ ಭಾರತದಾದ್ಯಂತ ನಕ್ಸಲರ ವಿಭಜಿತ ಡಜನ್‌ಗಟ್ಟಲೆ ಬಣಗಳಿವೆ. ಹಾಗೆ ವಿಭಜನೆಗೊಳ್ಳುವ ಪ್ರತೀ ಬಣವು ತನ್ನದೇ ವಿಭಿನ್ನ ತರ್ಕ ಸಿದ್ಧಾಂತಗಳನ್ನು ಪ್ರತಿಪಾದಿಸುವುದು ಒಂದು ಮಾಮೂಲು ಸಂಗತಿಯಾಗಿದೆ.

ಮಾವೋವಾದಿ ಮೂಲ ಪಕ್ಷವು ಅನ್ಯ ಬಣಗಳೊಂದಿಗೆ ವಿಲೀನಗೊಳ್ಳುವುದು ಹಾಗೂ ಜೊತೆಗಿದ್ದವರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ದೂರ ಹೋಗಿ ತಮ್ಮದೇ ಪ್ರತ್ಯೇಕ ಬಣ ರಚಿಸಿಕೊಳ್ಳುವುದು ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಹಾಗೆ ಭಿನ್ನಮತೀಯರಾಗುವವರಲ್ಲಿ ಕೆಲವರು ಹೋರಾಟವನ್ನೇ ಕೈಬಿಡುವ, ಭೂಗತರಾಗಿಯೇ ಹೋರಾಟ ಮುಂದುವರಿೆಸುವ ಅಥವಾ ಮುಖ್ಯವಾಹಿನಿಗೆ ಮರಳುವ ವಿದ್ಯಮಾನಗಳೂ ನಡೆಯುತ್ತಿವೆ.

 2007ರಲ್ಲಿ ಕರ್ನಾಟಕದಲ್ಲಿ ಮಾವೋವಾದಿ ಪಕ್ಷ ವಿಭಜನೆಯಾದ ನಂತರ ಅದರ ಮುಖಂಡರಾಗಿದ್ದ ಇಬ್ಬರು ಪ್ರಮುಖ ನಾಯಕರು ಏಕಾಏಕಿಯೇನೂ ಮುಖ್ಯವಾಹಿನಿಗೆ ಬರಲಿಲ್ಲ. ತಮ್ಮ ವಿರುದ್ಧ ಕೇಸ್‌ಗಳಿದ್ದ ಕಾರಣ ಭೂಗತರಾ ಗಿಯೇ ಇದ್ದರು. ಆಗ ಕರ್ನಾಟಕದಲ್ಲಿ ಬಿಜೆಪಿ ಸರಕಾರವಿತ್ತು. 2012ರ ಮೇ ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗ ವಿಭಜಿತ ಬಣದ ನಕ್ಸಲರು ಮುಖ್ಯವಾಹಿನಿಗೆ ಬರುವ ವಿಚಾರ ಚಾಲನೆ ಪಡೆದುಕೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ 2014ರ ಡಿಸೆಂಬರ್‌ನಲ್ಲಿ ಇವರು ಸರಕಾರವು ರೂಪಿಸಿದ್ದ ನಿಯಮಾನುಸಾರ ಮುಖ್ಯವಾಹಿನಿಗೆ ಮರಳಿದರು.

ಗೌರಿ ಲಂಕೇಶ್ ಈ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಸರಕಾರವು ಗೌರಿ, ಎಚ್.ಎಸ್. ದೊರೆಸ್ವಾಮಿ ಹಾಗೂ ಎ.ಕೆ. ಸುಬ್ಬಯ್ಯನವರಿದ್ದ ಅಧಿಕೃತ ಸಮಿತಿಯೊಂದನ್ನೇ ರಚಿಸಿ ಅದಕ್ಕೆ ಶಾಸನಾತ್ಮಕ ಸ್ಥಾನಮಾನ ನೀಡಿತು. ಇದಾದ ನಂತರ 2016ರ ನವೆಂಬರ್‌ನಲ್ಲಿ ನಿಲಗುಳಿ ಪದ್ಮನಾಭ, ಭಾರತಿ, ರಿಝ್ವಾನಾ ಬೇಗಂ, ರಾಜು ಮುಖ್ಯವಾಹಿನಿಗೆ ಮರಳಿದರು. 2017ರ ಜೂನ್‌ನಲ್ಲಿ ಕನ್ಯಾ ಕುಮಾರಿ, ಚಿನ್ನಮ್ಮ ಹಾಗೂ ಶಿವು ಚಿಕ್ಕಮಗಳೂರಿನ ಜಿಲ್ಲಾಡಳಿತದೆದುರು ಶರಣಾದರು.

ಈ ಎಲ್ಲಾ ಪ್ರಕ್ರಿಯೆಗಳಲ್ಲೂ ಗೌರಿಯವರೂ ಸೇರಿದಂತೆ ಸಮಿತಿಯ ಪಾತ್ರವಿತ್ತು. ಗಮನಿಸಬೇಕಾದ ವಿಚಾರವೇನೆಂದರೆ ಹೀಗೆ ಮುಖ್ಯವಾಹಿನಿಗೆ ಬಂದ ಯಾರೂ ಸಹ ಕಾಡಿನೊಳಗೆ ಮಾವೋವಾದಿ ಗುಂಪಿನೊಳಗಿದ್ದು ಅಲ್ಲಿಂದಲೇ ನೇರವಾಗಿ ಬಂದವರಾಗಿರಲಿಲ್ಲ. ಬೇರೆ ಬೇರೆ ಕಾಲಘಟ್ಟಗಳಲ್ಲಿ ತಾವು ಈ ಹಿಂದೆಯೇ ಅಲ್ಲಿಂದ ಹೊರಬಂದಿದ್ದಾಗಿ ಅವರೆಲ್ಲಾ ಹೇಳಿ ಕೊಂಡರು. ಅವರೆಲ್ಲಾ ಸಮಾಜದ ಮುಖ್ಯವಾಹಿನಿಯಲ್ಲೇ ಇದ್ದರು. ಆದರೆ ತಮ್ಮ ಮೇಲಿದ್ದ ಕೇಸುಗಳ ಕಾರಣದಿಂದಾಗಿ ತಲೆಮರೆಸಿಕೊಂಡಿದ್ದರು.

ಹೀಗಿರುವಾಗ ಸೈದ್ಧಾಂತಿಕ ಭಿನ್ನಾಭಿಪ್ರಾಯ ಅಥವಾ ವ್ಯಕ್ತಿಗತ ಕಾರಣಗ ಳಿಂದಾಗಿ ತಮ್ಮಿಂದಿಗೆ ಇರದೇ ಇದ್ದ ಕಾರ್ಯಕರ್ತರು ಮುಖ್ಯವಾಹಿನಿಗೆ ಮರಳಿದರೆ ಮೂಲ ನಕ್ಸಲರೇಕೆ ಗೌರಿ ಲಂಕೇಶ್ ವಿರುದ್ಧ ದ್ವೇಷ ಸಾಧಿಸುತ್ತಾರೆ? ಶಾಂತಿಗಾಗಿ ನಾಗರಿಕರ ವೇದಿಕೆಯು ಸರಕಾರ ಹಾಗೂ ಮುಖ್ಯವಾಹಿನಿಗೆ ಬರಲುಬಯಸಿದ್ದ ನಕ್ಸಲರ ನಡುವೆ ಒಂದು ಸೇತುವೆಯಾಗಿ ಕೆಲಸ ಮಾಡಿದ್ದರಷ್ಟೇ ವಿನಃ ವಿಭಿನ್ನ ಬಣಗಳ ನಡುವೆ ಒಡಕು ತರುವ ಕೆಲಸ ಮಾಡಿರಲಿಲ್ಲ. ಭಾರತದ ನಕ್ಸಲರ ಹೋರಾಟದ ಇತಿಹಾಸ ಅಧ್ಯಯನ ಮಾಡಿದರೆ ಅವರು ನಡೆಸುವ ಯಾವುದೇ ಕಾರ್ಯಾಚರಣೆಯನ್ನು ತಾವೇ ಮಾಡಿದ್ದು ಎಂದು ಪ್ರತಿಪಾದಿಸುವ ನಿಲುವು ಕಾಣುತ್ತದೆ.

ಗೌರಿ ಲಂಕೇಶರ ಹತ್ಯೆ ನಡೆಸಿರುವವರು ಈ ಪರಿಸ್ಥಿತಿಯನ್ನು ತಮ್ಮ ಅನುಕೂ ಲಕ್ಕೆ ಬಳಸಿಕೊಂಡು ನಕ್ಸಲರ ಮೇಲೆ ಆರೋಪ ಹೊರಿಸಿ ತನಿಖೆಯ ಜಾಡು ತಪ್ಪಿಸುವ ಯೋಚನೆ ಹೊಂದಿದ್ದಾರೆಂಬುದು ಮೇಲ್ನೋಟಕ್ಕೆ ಕಾಣುವಂತಿದೆ.

ಗೌರಿ ಲಂಕೇಶ್ ತಮ್ಮ ಸಾರ್ವಜನಿಕ ಬದುಕಿನ ಉದ್ದಕ್ಕೂ ದನಿ ಎತ್ತಿ ಹೋರಾಡಿದ್ದು ಹಿಂದೂ ಕೋಮುವಾದಿ ಫ್ಯಾಶಿಸ್ಟರ ವಿರುದ್ಧ. ಲಂಕೇಶ್ ವಾರ ಪತ್ರಿಕೆಯ ಪ್ರತೀ ಸಂಚಿಕೆಯಲ್ಲೂ ಹಿಂದೂ ಫ್ಯಾಶಿಸ್ಟರ ಮುಖವಾಡ ಕಳಚುವ ಹಾಗೂ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಹಾಗೂ ಸೆಕುಲರಿಸಂನ ಆಶಯಗಳ ಪರವಾಗಿರುವ ಬರಹಗಳಿರುತ್ತಿದ್ದವು.

ಕರ್ನಾಟಕದಲ್ಲಿ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ಕೇವಲ ಬಿಜೆಪಿಯಲ್ಲದ ಒಂದು ಸರಕಾರವೇ ವಿನಃ ಸಂವಿಧಾನಾತ್ಮಕ ಆಶಯಗಳಾದ ಪ್ರಜಾಪ್ರಭುತ್ವ ಹಾಗೂ ಸೆಕ್ಯುಲರಿಸಂಅನ್ನು ಬಲಪಡಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡಲಿಲ್ಲ. ಬಿಜೆಪಿಯನ್ನಾಗಲಿ ಅಥವಾ ಸಂಘ ಪರಿವಾರವನ್ನಾಗಲಿ ಸೈದ್ಧಾಂತಿಕವಾಗಿ ಎದುರಿಸುವ ಇಚ್ಛಾಶಕ್ತಿಯನ್ನು ಕಾಂಗ್ರೆಸ್ ಪ್ರದರ್ಶಿಸಲಿಲ್ಲ. ಕರ್ನಾಟಕದಲ್ಲಿ ಹಿಂದೂ ಫ್ಯಾಶಿಸ್ಟರಿಗೆ ನಿಜವಾದ ಪ್ರತಿರೋಧ ಒಡ್ಡುತ್ತಿರುವವರು ಪ್ರಗತಿಪರರು, ಗಾಂಧಿ-ಮಾರ್ಕ್ಸ್ - ಲೋಹಿಯಾ-ಅಂಬೇಡ್ಕರ್ ಹಾಗೂ ಬುದ್ಧ- ಬಸವರ ಆಶಯಗಳಿಂದ ಪ್ರೇರೇಪಿತರಾದವರು, ದಲಿತ, ರೈತ, ಎಡಪಂಥೀಯ ಹಾಗೂ ಮಹಿಳಾ ಹೋರಾಟಗಳು.

ಗೌರಿ ಲಂಕೇಶ್ ಇವೆಲ್ಲದರೊಂದಿಗೆ ನಿತ್ಯ ಒಡನಾಟ ಹೊಂದಿದ್ದರು. ಸ್ವತಃ ತಾವೇ ಸಕ್ರಿಯವಾಗಿ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು. ಲಂಕೇಶ್ ವಾರಪತ್ರಿಕೆ ಇವೆಲ್ಲಾ ಆಶಯಗಳಿಗೆ ಅಗ್ನಿ, ಸಂವಾದ, ಹೊಸತು, ವಾರ್ತಾಭಾರತಿ ಪತ್ರಿಕೆಗಳಂತೆ ಒಂದು ಪ್ರಭಲ ವೇದಿಕೆಯಾಗಿತ್ತು.

ಹಿಂದೂ ಫ್ಯಾಶಿಸ್ಟರನ್ನು ವಿರೋಧಿಸುವ ಅನೇಕ ಹೋರಾಟಗಳು ಹಾಗೂ ನಾಯಕರಿರುವಾಗ ಗೌರಿ ಲಂಕೇಶರನ್ನೇ ಗುರಿ ಮಾಡಿಕೊಂಡಿ ರುವ ಹಿಂದೆ ಈ ಕೊಲೆಯನ್ನು ಯೋಚಿಸಿದವರಿಗೆ ಹಲವು ಕಾರಣಗಳಿರಬಹುದು.

ಸಂಚಿಗೆ ಸುಲಭವಾಗಿ ಬಲಿಯಾಗುವ ಹಾಗೂ ಹೆಚ್ಚಿನ ಪರಿಣಾಮ ಬೀರಬಲ್ಲ ವ್ಯಕ್ತಿ ಗೌರಿ ಆಗಿರುತ್ತಾರೆಂಬ ತರ್ಕ ಅಲ್ಲಿದ್ದಿರಬಹುದು.

ಪ್ರಗತಿಪರರಲ್ಲಿ, ಸೆಕ್ಯುಲರ್‌ವಾದಿಗಳಲ್ಲಿ ಸಾವಿನ ಭೀತಿ ಹುಟ್ಟಿಸುವುದು, ಲಂಕೇಶ್ ವಾರಪತ್ರಿಕೆಯ ಬಾಯನ್ನು ಶಾಶ್ವತವಾಗಿ ಮುಚ್ಚಿಸುವುದು ಆ ಮೂಲಕ ಕರ್ನಾಟಕದಲ್ಲಿ ಸದೃಢಗೊಳ್ಳುತ್ತಿರುವ ಫ್ಯಾಶಿಸ್ಟ್ ವಿರೋಧಿ ಜನಾಭಿಪ್ರಾಯಕ್ಕೆ ತಡೆಯೊಡ್ಡುವುದೇ ಹಂತಕರ ಗುರಿಯಾಗಿದ್ದಿರಬೇಕು.

ಈ ಹತ್ಯೆಗೆ ಅಖಿಲ ಭಾರತ ಮಟ್ಟದ ಇನ್ನೊಂದು ಸಾಧ್ಯತೆಯೂ ಇದ್ದಿರಬಹುದು. ಕರ್ನಾಟಕದಲ್ಲಿ ಫ್ಯಾಶಿಸಂ ವಿರುದ್ಧ ನಿರ್ಣಾಯಕ ವಲ್ಲದಿದ್ದರೂ ಅತೀ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಗೌರಿ ಲಂಕೇಶ್ ಇತ್ತೀಚಿನ ವರ್ಷಗಳಲ್ಲಿ ಭಾರತದ ಇನ್ನಿತರ ರಾಜ್ಯಗಳಲ್ಲಿ ಸ್ಫೋಟಿಸುತ್ತಿರುವ ಫ್ಯಾಶಿಸ್ಟ್ ವಿರೋಧಿ ಹೋರಾಟಗಳೊಂದಿಗೆ ಒಡನಾಡುತ್ತಿದ್ದರು. ಗುಜರಾತ್‌ನ ಜಿಗ್ನೇಶ್ ಮೇವಾನಿ, ದಿಲ್ಲಿಯ ಎಡಪಂಥೀಯ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್, ಕೋಮುವಾದಿ ವಿರೋಧದ ಗಟ್ಟಿದನಿ ತೀಸ್ತಾ ಸೆಟಲ್‌ವಾಡ್, ಉತ್ತರಪ್ರದೇಶದ ಯುವ ಮಿಲಿಟೆಂಟ್ ದಲಿತ ನಾಯಕ ಆಝಾದ್ ಚಂದ್ರಶೇಖರ್‌ರವರ ಹೋರಾಟಗಳು ಹಾಗೂ ಸಂಘಟನಾತ್ಮಕ ಚಟುವಟಿಕೆಗಳು ಫ್ಯಾಶಿಸ್ಟರಲ್ಲಿ ಅಸಹನೆ ಉಂಟುಮಾಡಿವೆ.

ಈ ಹೋರಾಟಗಳಿಗೆ ಹಾಗೂ ನಾಯಕರಿಗೆ ಕರ್ನಾಟಕದ ಪ್ರಗತಿಪರ ರೊಂದಿಗೆ ಒಡನಾಟಗಳಿವೆ. ಗೌರಿ ಲಂಕೇಶ್ ಸಹ ಅದರ ಭಾಗವಾಗಿದ್ದರು.

ಈ ಒಡನಾಟಗಳು ಮುಂದಿನ ದಿನಗಳಲ್ಲಿ ಅಖಿಲ ಭಾರತ ಮಟ್ಟದ ಒಂದು ಬೃಹತ್ ಸಂಯೋಜಿತ ವೇದಿಕೆಯಾಗಿ ಹಾಗೂ ಪ್ರತಿರೋಧವಾಗಿ ರೂಪುತಳೆಯುವ ಎಲ್ಲಾ ಸಾಧ್ಯತೆಗಳಿದ್ದವು. ಗೌರಿ ಲಂಕೇಶರಿಗೆ ಆ ಪ್ರಕ್ರಿಯೆ ಯಲ್ಲೂ ನಿಸ್ಸಂಶಯವಾಗಿ ಒಂದು ಪಾತ್ರವಿರುತ್ತಿತ್ತು.

ಕೋಮುವಾದದ ವಿಚಾರ ಬಂದಾಗ ಹಿಂದೂ ಫ್ಯಾಶಿಸ್ಟರಿಗೆ, ಮಾನವ ಹಕ್ಕುಗಳ ವಿಚಾರವಿದ್ದಾಗ ಪೊಲೀಸರಿಗೆ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಆಳುವ ಸರಕಾರಗಳಿಗೆ ಗೌರಿ ಅಪಥ್ಯವಾಗುತ್ತಿದ್ದರು. ಗೌರಿ ಪ್ರಜಾಪ್ರಭುತ್ವದ ನಿಜ ಮೌಲ್ಯಗಳನ್ನು ಆಶಿಸುವವರ ಗಟ್ಟಿದನಿಯಾಗಿ ಆಳುವವರಿಗೆ ಕಿರಿಕಿರಿ ಉಂಟುಮಾಡಿದ್ದಿರಬೇಕು. ಏಕೆಂದರೆ ಹತ್ಯೆಗೂ ಮುನ್ನ ಅನೇಕ ಸಂದರ್ಭಗಳಲ್ಲಿ ಗೌರಿ ಲಂಕೇಶರ ಮೇಲೆ ದಾಳಿ ಮಾಡಿದ, ಬೆದರಿಸಿದ ಘಟನೆಗಳಾಗಿದ್ದವು. ಆದರೆ ಯಾವಾಗಲೂ ಗೌರಿಯವರನ್ನು ದಾಳಿಕೋರರಿಂದ ರಕ್ಷಿಸುವ ಇರಾದೆಯನ್ನು ಸರಕಾರವಾಗಲಿ, ಪೊಲೀಸರಾಗಲೀ ತೋರಲಿಲ್ಲ.

ಕರ್ನಾಟಕ ಪೊಲೀಸರಿಗೆ ಸಂಘ ಪರಿವಾರದ ಭಯೋತ್ಪಾದಕ ಕೃತ್ಯಗಳು ಒಂದು ಗಂಭೀರ ಬೆಳವಣಿಗೆ ಎಂದು ಅನಿಸಿದಂತೆ ಕಾಣುತ್ತಿಲ್ಲ.

ಗಿರೀಶ್ ಮಟ್ಟೆಣ್ಣನವರ್ ಶಾಸಕರ ಭವನದಲ್ಲಿ ಸ್ಫೋಟಕ ಇರಿಸಿದ ಘಟನೆ. 2007ರಲ್ಲಿ ಹುಬ್ಬಳ್ಳಿ ಕೋರ್ಟ್‌ನಲ್ಲಿ ಭಜರಂಗ ದಳದವರು ಬಾಂಬ್ ಸ್ಫೋಟಿಸಿದ್ದು, ಅಭಿನವ ಭಾರತ್‌ನ ಕರ್ನಲ್ ಪುರೋಹಿತರಿದ್ದ ಹುಬ್ಬಳ್ಳಿ ಸಂಪರ್ಕಗಳ ಆಳವಾದ ತನಿಖೆ ಆಗಲಿಲ್ಲ. ತೀರಾ ಇತ್ತೀಚೆಗೆ ಕೊಡಗಿನಲ್ಲಿ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಮುಸ್ಲಿಂ ಯುವಕನೊಬ್ಬನನ್ನು ಸಂಘ ಪರಿವಾರಿಗಳು ಗುಂಡಿಟ್ಟು ಕೊಂದರೆಂದು ಪೊಲೀಸರು ಬಂಧಿಸಿದ್ದರು. ಆದರೆ ಆರೋಪಿಗಳು ನಿರ್ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಅಂದರೆ ದುರ್ಬಲ ರೀತಿಯ ತನಿಖೆಯನ್ನು ಪೊಲೀಸರು ನಡೆಸಿದ್ದರಾ?

ಗೌರಿಯವರ ಸಾರ್ವಜನಿಕ ಜೀವನದ ಹೋರಾಟ, ಆಶಯಗಳು ಕೇವಲ ಫ್ಯಾಶಿಸ್ಟರಿಗೆ ಮಾತ್ರವಲ್ಲ ಇತರ ರಾಜಕೀಯ ಪಕ್ಷಗಳಿಗೆ, ಪೊಲೀಸರಿಗೆ ಒಟ್ಟಾರೆ ವ್ಯವಸ್ಥೆಗೇ ಅಸಹನೀಯವಾಗಿತ್ತು.

ಅದನ್ನೀಗ ನಿವಾರಿಸಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿದೆ.

ಚುನಾವಣಾ ಕಣದಲ್ಲಿ ಹಣಬಲ-ತೋಳ್ಬಲ-ಜಾತಿಬಲವನ್ನು ಬಳಸಿ ಸೆಣೆಸಾಡಲು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ತಮ್ಮ ಶಕ್ತ್ಯಾನುಸಾರ ತಯಾ ರಾಗುತ್ತವೆ. ಅದು ನಿಶ್ಚಿತ. ಆದರೆ ಬರಲಿರುವ ಚುನಾವಣೆಯಲ್ಲಿ ಪ್ರಜಾಪ್ರ ಭುತ್ವ- ಸರ್ವಾಧಿಕಾರ, ಸೆಕ್ಯುಲರಿಸಂ-ಕೋಮುವಾದ, ಸಾಮಾಜಿಕ ನ್ಯಾಯ- ಸಾಮಾಜಿಕ ತಾರತಮ್ಯ, ಬಹು ಸಂಸ್ಕೃತಿ, ಭಾಷೆ -ಏಕ ಸಂಸ್ಕೃತಿ, ಭಾಷೆಗಳ ಮೌಲ್ಯಗಳ ನಡುವಿನ ಹೋರಾಟವಾಗುವುದು ಫ್ಯಾಶಿಸ್ಟರಿಗೆ ಅಪಥ್ಯ.

ನಮ್ಮ ಕರ್ನಾಟಕದಲ್ಲಿ ಈ ಪರ-ವಿರುದ್ಧದ ಮೌಲ್ಯಗಳನ್ನು ಮುಖಾಮುಖಿಯಾಗಿಸುತ್ತಿರುವವರು, ಅಜೆಂಡಾ ಆಗಬೇಕೆನ್ನುವವರಲ್ಲಿ ಪ್ರಗತಿಪರರದೇ ಬಹು ದೊಡ್ಡ ದನಿಯಾಗಿವೆ. ಅದೊಂದು ಆಂದೋಲನವೂ ಆಗುವ ಸೂಚನೆಗಳೂ ಕಾಣುತ್ತಿದ್ದವು. ಗೌರಿ ಲಂಕೇಶ್ ಈ ಎಲ್ಲ ಆಶಯಗಳಿಗೂ ಒಂದು ವ್ಯಕ್ತಿಯಾಗಿ ಹಾಗೂ ಪತ್ರಿಕೆಯಾಗಿ ಒತ್ತಾಸೆಯಾಗಿದ್ದರು. ಫ್ಯಾಸಿಸ್ಟರಿಗೆ ಇದು ಬೇಡವಾಗಿತ್ತೆಂಬುದು ಖಚಿತ.

ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಮುಖೇಡಿ ಸರಕಾರವಾಗಿದೆ. ಫ್ಯಾಶಿಸ್ಟರ ವಿರುದ್ಧ ಹೋರಾಡುವ ಜವಾಬ್ದಾರಿಯನ್ನೆಲ್ಲಾ ಅದು ಸೆಕ್ಯುಲರ್‌ವಾದಿಗಳ ಹೆಗಲಿಗೆ ಹೊರಿಸಿ ತಾನು ನಿಷ್ಕ್ರಿಯವಾಗಿದೆ. ಅವರ ಮಂತ್ರಿ, ಶಾಸಕರುಗಳು, ನಾಯಕ-ಕಾರ್ಯಕರ್ತರು, ಪಕ್ಷದ ವಿದ್ಯಾರ್ಥಿ ವಿಭಾಗ, ಕಾರ್ಮಿಕ, ಮಹಿಳಾ ಅಲ್ಪಸಂಖ್ಯಾತ ಘಟಕಗಳಲ್ಲಿ ಯಾರೂ ಫ್ಯಾಶಿಸ್ಟರ ವಿರುದ್ಧ ಹೋರಾಡಿದ್ದನ್ನು ನಾವು ನೋಡಲಿಲ್ಲ. ಜಾತ್ಯತೀತ ಜನತಾ ದಳದ ಧೋರಣೆಯು ಕಾಂಗ್ರೆಸ್‌ನವರಷ್ಟೇ ಅವಕಾಶವಾದಿ ಹಾಗೂ ಅಪಾಯಕಾರಿಯಾಗಿದೆ.

ಇವೆರಡೂ ರಾಜಕೀಯ ಪಕ್ಷಗಳು ಕನಿಷ್ಠಪಕ್ಷ ತಮ್ಮ ರಾಜಕೀಯ ಭವಿಷ್ಯಕ್ಕಾಗಿಯಾದರೂ ಫ್ಯಾಶಿಸ್ಟರ ವಿರುದ್ಧ ದನಿ ಎತ್ತುತ್ತಾ ಬಂದಿದ್ದರೆ ಗೌರಿ ಲಂಕೇಶರೊಬ್ಬರನ್ನೇ ಗುರಿಯಾಗಿಸಿ ಬಲಿ ತೆಗೆದುಕೊಳ್ಳುವ ಅನಿವಾರ್ಯತೆ ಫ್ಯಾಶಿಸ್ಟ್ ಕೊಲೆಗಡುಕರಿಗೆ ಬರುತ್ತಿರಲಿಲ್ಲ. ವಿರೋಧಿಸುವ ಸಾವಿರಾರು ದನಿಗಳು ಕರ್ನಾಟಕದ ಮೂಲೆ ಮೂಲೆಗಳಿಂದ ಕೇಳಿ ಬರಲು ಶುರುವಾಗಿದ್ದರೆ, ಆ ಮೂಲಕ ಜನಜಾಗೃತಿ ಉಂಟು ಮಾಡುವ ಪ್ರಯತ್ನಗಳಿಗೆ ಫ್ಯಾಶಿಸ್ಟ್ ಅಲ್ಲದ ಎಲ್ಲರೂ ಕೈ ಜೋಡಿಸದಿದ್ದರೆ ಗೌರಿ ಲಂಕೇಶರನ್ನು ಸಿಂಗಲ್ ಔಟ್ ಮಾಡಿ ಕೊಲ್ಲುವ ಸಂದರ್ಭ ಉಂಟಾಗುತ್ತಿರಲಿಲ್ಲ.

ಗೌರಿ ಲಂಕೇಶ ತಾವು ನಂಬಿದ್ದನ್ನೇ ಮಾಡಿದರು. ಕರ್ನಾಟಕದ ಜನ ಜಾತಿ-ಧರ್ಮಗಳ ದ್ವೇಷವಿರದೆ, ಪರಸ್ಪರ ಪ್ರೀತಿಯಿಂದ ಬದುಕುವ ಕನಸನ್ನು, ಕೆಟ್ಟದ್ದನ್ನು ವಿರೋಧಿಸುವ ದೃಢನಿರ್ಧಾರವನ್ನು ಹೊಂದಿದ್ದರು.

ನನ್ನೆಲ್ಲಾ ಕಣ್ಣೀರು, ಸಂಕಟಗಳನ್ನು ಎದೆಯಲ್ಲಿ ಮುಚ್ಚಿಟ್ಟುಕೊಂಡೇ ಗೌರಿಯ ಬದುಕಿನ ಕೊನೆಯ ಕ್ಷಣಗಳನ್ನು ನೆನೆದರೆ ಹೃದಯ ಬಿರಿಯುತ್ತದೆ.

‘I cannot Take physical pain’ ಗೌರಿ ಎಂದು ಹೇಳುತ್ತಿದ್ದರು.

ತಾನು ಪ್ರಜ್ಞೆ ಕಳೆದುಕೊಳ್ಳುತ್ತಿರುವ, ಉಸಿರು ನಿಲ್ಲುವ ಅಂತಿಮ ಕ್ಷಣಗಳಲ್ಲೂ, ಕಣ್ಣಿನ ರೆಪ್ಪೆಗಳು ಈಗ ನಾವುಳಿದಿರುವ ಕನ್ನಡನಾಡಿನ ತೆರೆಯೆಳೆಯುತ್ತಿದ್ದಾಗಲೂ ಬಹುಶಃ ಗೌರಿ...

ತನ್ನನ್ನೇಕೆ ಕೊಲ್ಲಲಾಗುತ್ತಿದೆ ಎಂಬು ದನ್ನು ಗ್ರಹಿಸಿರುತ್ತಾರೆ. ತನ್ನ ಹೋರಾಟದ ಸಂಗಾತಿಗಳನ್ನು, ನೆನೆದಿರುತ್ತಾರೆ.

ಹೆಮ್ಮೆ, ಸಾರ್ಥಕತೆಯ ಧೀರೋದ್ದಾತ್ತ ಭಾವನೆಯೊಂದಿಗೆ ಪ್ರಾಣ ತೆತ್ತಿರುತ್ತಾರೆ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News