ಜೋಸೆಫ್ ಕೊಯಲ್ಕಾ

Update: 2017-09-09 12:49 GMT

ಜೋಸೆಫ್ ಕೊಯಲ್ಕಾ ಜೆಕೊಸ್ಲವಾಕಿಯಾದ ಛಾಯಾಗ್ರಾಹಕ. 1960 ಹಾಗೂ 1970 ದಶಕಗಳಲ್ಲಿ ಯುರೋಪಿನ ರಾಜಕೀಯ ಹಾಗೂ ಸಾಮಾಜಿಕ ಬದುಕಿನ ದಟ್ಟ ಚಿತ್ರಣವನ್ನು ಜೋಸೆಫ್‌ನ ಫೋಟೊಗಳಲ್ಲಿ ನೋಡಬಹುದು. ಅವನ ‘ಜಿಪ್ಸೀಸ್’ ಹಾಗೂ ‘ಎಕ್ಸೈಲ್ಸ್’ ಚಿತ್ರಗಳು ಅಂದಿನ ವಾಸ್ತವದ ಕನ್ನಡಿಯಷ್ಟೇ ಅಲ್ಲದೆ, ಛಾಯಾಗ್ರಹಣದ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟವು. 1969ರಲ್ಲಿ ಮಿಲಿಟರಿ ಗುಂಪುಗಳು ಪೆರಗ್ವೇಯ ಮೇಲೆ ದಾಳಿ ಮಾಡಿದಾಗ, ಆದ ಅನಾಹುತಗಳನ್ನು ತನ್ನ ಫೋಟೊಗಳ ಮೂಲಕ ಜಗತ್ತಿಗೆ ತೋರಿಸಿದ. ಆಗ ಅವನ ಫೋಟೊಗಳನ್ನು ಯಾರಿಗೂ ತಿಳಿಯದ ಹಾಗೂ ಮಗ್ನಮ್ ಏಜೆನ್ಸಿಗೆ ಕಳುಹಿಸಿ, ಅನಾಮಿಕವಾಗಿ ಆ ಫೋಟೊಗಳನ್ನು ಪ್ರಕಟಿಸಲಾಯಿತು.

ಸದಾ ಸುತ್ತಾಡುತ್ತ, ಅಲೆಮಾರಿ ಜನಾಂಗಗಳ ಜೊತೆಗೆ ವಾಸಿಸುತ್ತ ಜೋಸೆಫ್ ತೆಗೆದಿರುವ ಚಿತ್ರಗಳು ನಮ್ಮನ್ನು ದಂಗುಬಡಿಸುತ್ತವೆ.

‘‘17 ವರ್ಷ ನಾನು ಯಾವುದೇ ಮನೆಗೆ ಬಾಡಿಗೆ ಕೊಡದೆ ಅಲೆಮಾರಿ ಜನರ ಜೊತೆಗೇ ಇದ್ದೆ. ಅವರೂ ಸಹ ನನ್ನನ್ನು ನೋಡಿ, ಇವರಿಗಿಂತ ನಾವೇ ವಾಸಿ, ನಮಗಿಂತ ಇವನೇ ಬಡವನಾಗಿದ್ದಾನೆ ಎಂದುಕೊಳ್ಳುತ್ತಿದ್ದರು. ಅವರು ಕ್ಯಾರಾವಾನ್ ಗಳಲ್ಲಿ ಇರುತ್ತಿದ್ದರು, ನಾನು ಹೊರಗೆ ಆಕಾಶದಡಿ ಮಲಗುತ್ತಿದ್ದೆ. ........ ನನ್ನ ಹತ್ತಿರ ಎರಡು ಶರ್ಟುಗಳಿದ್ದವು. ಒಂದನ್ನು ಹಾಕಿಕೊಂಡಿದ್ದರೆ, ಇನ್ನೊಂದನ್ನು ಒಗೆದು ಒಣ ಹಾಕಿರುತ್ತಿದ್ದೆ. ನನಗೇನು ಬೇಕೋ ಅದನ್ನು ಮಾತ್ರ ನಾನು ಇಟ್ಟುಕೊಂಡಿದ್ದೆ. ನನ್ನ ಕ್ಯಾಮರಾಗಳು, ಅದಕ್ಕೆ ಬೇಕಾದ ಫಿಲಂ, ನನ್ನ ಕನ್ನಡಕ.’’ - ಇದು ಜೋಸೆಫ್‌ನ ಜೀವನ ಶೈಲಿ.

   

- ಅವನೇ ಹೇಳುವಂತೆ, ಫೋಟೊ ತೆಗೆಯುವಾಗ ತುಂಬ ಯೋಚಿಸಬಾರದು, ನಮ್ಮ ಒಳನೋಟ ದಿಂದಷ್ಟೇ ಒಂದು ಚಿತ್ರ ಮೂಡಲು ಸಾಧ್ಯ ಅನ್ನುವುದನ್ನು ಹೀಗೆ ಹೇಳುತ್ತಾನೆ. ‘‘ನಾನು ಫೋಟೊ ತೆಗೆಯುವಾಗ ತುಂಬ ಯೋಚಿಸುವುದಿಲ್ಲ. ನಾನು ಹಾಗೂ ಆ ಕ್ಷಣಮಾತ್ರ ಅಲ್ಲಿ ಸಂಪೂರ್ಣವಾಗಿ ಇರುತ್ತೇವೆ. ನಾನೇನೂ ಯೋಚಿಸದೆಯೇ, ಫೋಟೊ ಉಂಟಾಗುತ್ತದೆ. ನಾನು ಯಾವ ದೊಡ್ಡ ಬುದ್ಧಿಜೀವಿ ಯಲ್ಲ, ತತ್ವಜ್ಞಾನಿಯಲ್ಲ, ನೋಡುವುದಷ್ಟೇ ನನ್ನ ಕೆಲಸ ಎನ್ನುತ್ತಾನೆ. ತನ್ನ ಚಿತ್ರಗಳ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡದ ಜೋಸೆಫ್ ನಾನೊಬ್ಬ ಫೋಟೊಗ್ರಾಫರ್ ಅಷ್ಟೆ. ನನಗೆ ಮಾತನಾಡಲು ಬಾರದು, ನನಗೆ ಮಾತನಾಡುವ ಆಸಕ್ತಿಯೂ ಇಲ್ಲ. ನನಗೇನಾದರೂ ಹೇಳಲು ಇದ್ದರೆ, ಅದು ನನ್ನ ಫೋಟೊಗಳು ಹೇಳುತ್ತವೆ. ನನಗೆ ಪದಗಳಲ್ಲಿ ಇಷ್ಟವಿಲ್ಲ. ಹೇಗೆ, ಯಾಕೆ ಪ್ರಶ್ನೆಗಳಿಗೆ ನನಗೆ ಉತ್ತರ ಹೇಳಲು ಸಾಧ್ಯವೇ ಇಲ್ಲ ಎನ್ನುತ್ತಾನೆ’’ ಜೋಸೆಫ್ ಕೊಯಲ್ಕಾ.

ಉಷಾ .ಬಿ.ಎನ್.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News