ಆಲೋಚನಾ ವಿಧಾನ

Update: 2017-09-09 18:29 GMT

ಭಾಗ-4

ಪೋಷಕರ ದೊಡ್ಡ ತಮಾಷೆಯ ವಿಷಯವೆಂದರೆ, ತಮ್ಮ ಮುಂದೆ ಇನ್ನಾರಾದರೂ ಅವರ ಮಕ್ಕಳನ್ನು ಬೈದರೆ, ಅಥವಾ ದಂಡಿಸಿದರೆ, ಹೋಗಲಿ ಬಿಡಿ ಪರವಾಗಿಲ್ಲ. ಮುಂದೆ ತಿಳಿದು ಕೊಳ್ಳುತ್ತಾನೆ. ತಿದ್ದಿಕೊಳ್ಳುತ್ತಾನೆ. ಚಿಕ್ಕವನಲ್ಲವಾ, ದೊಡ್ಡವನಾದಂತೆಲ್ಲಾ ಸರಿ ಹೋಗುತ್ತಾನೆ ಎಂದು ಹೇಳುತ್ತಾರೆ. ಆದರೆ ತಮ್ಮದೇ ಮಕ್ಕಳ ವಿಷಯದಲ್ಲಿ ಅವರು ಕಠಿಣವಾಗಿ ನಡೆದುಕೊಳ್ಳುತ್ತಾರೆ. ಬೇರೆಯವರ ಮಕ್ಕಳ ವಿಷಯದಲ್ಲಿ ಅವರು ಹಾಗೆ ಹೇಳುವುದಕ್ಕ್ಕೆ ಕಾರಣ ಅದು ಅವರ ನಿಜವಾದ ಧೋರಣೆ ಎಂದಲ್ಲ. ಬೇರೆಯವರ ಮಕ್ಕಳನ್ನು ಬೈದು ನಾವ್ಯಾಕೆ ಕೆಟ್ಟವರಾಗಬೇಕು ಎಂದು ಅಷ್ಟೇ.

ಮಕ್ಕಳ ಗತಿ ಮತ್ತು ಮತಿ

ಮುಖ್ಯವಾಗಿ ಶಿಕ್ಷಕರು ಮತ್ತು ಪೋಷಕರು ತಿಳಿಯಬೇಕಾಗಿ ರುವುದೇ ಮಕ್ಕಳು ತಮ್ಮದೇ ಆದಂತಹ ರೀತಿಯಲ್ಲಿ ಮತ್ತು ತಮ್ಮದೇ ಆದ ವೇಗದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆಂಬುದು. ಅಷ್ಟೇ ಅಲ್ಲದೇ ಇದ್ದಕ್ಕಿದ್ದಂತೆ ಒಂದು ಗಳಿಗೆಯಲ್ಲಿ ಅವರಿಗೇನೋ ಹೊಳೆದುಬಿಡುವುದು, ಜ್ಞಾನೋದಯವಾದಂತೆ. ಅದನ್ನು ಅವರು ಪ್ರಯೋಗಿಸಲು ಹಾತೊರೆಯುವರು. ಹಾಗೆ ಮಾಡಲು ಬಿಡಬೇಕು. ಮೊದಲಿಗೆ ಅವರು ವೈಫಲ್ಯವನ್ನು ಕಂಡರೂ ಅದು ಅವರಿಗೇ ಹೊಳೆದ ಜ್ಞಾನವಾದ್ದರಿಂದ ಮತ್ತೆ ಮತ್ತೆ ಅದನ್ನು ಸಫಲಗೊಳಿಸಿಕೊಳ್ಳಲು ಯತ್ನಿಸುವರು. ಹಾಗೆಯೇ ವಿಜ್ಞಾನಿಗಳು, ವಿಶಿಷ್ಟ ಜ್ಞಾನಿಗಳೂ ಜಗತ್ತಿನ ಕಾಣಿಕೆಯಾಗಿ ಸಲ್ಲುವುದು.

ಅವರು ಮೊದಲೆರಡು ಪ್ರಯತ್ನಗಳಲ್ಲಿ ಯಶಸ್ಸನ್ನು ಕಾಣದೇ ಹೋದಾಗ ನಂಗೊತ್ತಿತ್ತು ಇದು ಹಿಂಗೇ ಆಗೋದು ಅಂತ. ಸುಮ್ಮನೆ ಟೈಮು ವೇಸ್ಟ್ ಮಾಡಿದೆ. ಅದರ ಬದಲು ಇನ್ನೇನಾದರೂ ಮಾಡಬಹುದಿತ್ತು ಎಂದು ಪೋಷಕರು ಹೇಳುವ ಮೂಲಕ ಅದರ ಸಂಶೋಧನೆಯ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವ ಅವಕಾಶ ಕೊಡುವ ಬದಲು ತಣ್ಣೀರೆರಚಿಬಿಡುತ್ತಾರೆ. ಅಲ್ಲಿಗೆ ಮಗುವು ಅಸಹಾಯಕವೂ ಮತ್ತು ಪರಾವಲಂಬಿಯೂ ಆದ್ದರಿಂದ ತನ್ನನ್ನು ಸೀಮಿತಗೊಳಿಸಿಕೊಳ್ಳುತ್ತದೆ ಅಥವಾ ನಿಲ್ಲಿಸಿಯೇ ಬಿಡುತ್ತದೆ. ಆದ್ದರಿಂದ ಪೋಷಕರು ಮುಖ್ಯವಾಗಿ ತಮ್ಮ ನಕಾರಾತ್ಮಕ ಹೊಡೆತಗಳನ್ನು ಕೊಡುವ ಬದಲು ಬರಿದೇ ಕಾಯಬೇಕು. ಕಾಯಲೇ ಬೇಕು. ಒಂದು ವೇಳೆ ಅವರೇ ಆ ಪ್ರಯೋಗವನ್ನು ಹಿಂದೊಮ್ಮೆ ಮಾಡಿದ್ದರೆ, ಅದರ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕೇ ಹೊರತು, ನಿನಗೂ ಇದೇ ಪ್ರತಿಪಲ ಸಿಗುತ್ತದೆ ಎಂದು ನಿಶ್ಚಿತವಾಗಿ ಹೇಳಬಾರದು.ಈ ವಿಷಯದಲ್ಲಿ ಎಡಿಸನ್‌ನ ತಾಯಿ ಸದಾ ಸ್ಮರಣೀಯಳು.

ನಿಮ್ಮ ಮಗ ದಡ್ಡ ಮತ್ತು ಅವನಿಗೆ ಕಲಿಯುವ ಸಾಮರ್ಥ್ಯವಿಲ್ಲ ಎಂದ ಶಿಕ್ಷಕಿಯೊಂದಿಗೆ ಜಗಳವಾಡುವ ಥಾಮಸ್ ಆಲ್ವಾ ಎಡಿಸನ್‌ನ ತಾಯಿ, ನನ್ನ ಮಗನಿಗೆ ಕಲಿಸಲು ನಿನಗೆ ಸಾಮರ್ಥ್ಯವಿಲ್ಲ ಎಂದವಳೇ ತನ್ನ ಮಗನೊಂದಿಗೆ ಶಾಲೆಯನ್ನು ಧಿಕ್ಕರಿಸಿದಳು. ಆ ತಾಯಿಯ ಆತ್ಮವಿಶ್ವಾಸ ಆ ಮಗುವಿಗೆ ಇನ್ನೆಷ್ಟು ಸ್ಥೈರ್ಯ ತುಂಬಿರಬೇಡ? ಮೊದಲು ಮಗುವನ್ನು ನಂಬಿ. ಅದು ನಿಮ್ಮ ನಂಬಿಕೆಗೆ ದ್ರೋಹ ಮಾಡುವುದಿಲ್ಲ. ಆದರೆ ಸಾಮಾನ್ಯವಾಗಿ ಪೋಷಕರು ಮೊದಲಿನಿಂದಲೂ ಬೇರೆಯವರ ಮಾತಿನಿಂದಲೇ ತಮ್ಮ ಮಕ್ಕಳನ್ನು ಅಳೆಯುವರು. ಬೇರೆಯವರ ಪುರಸ್ಕಾರ ಅಥವಾ ತಿರಸ್ಕಾರವೇ ತಮ್ಮ ಮಕ್ಕಳ ಯೋಗ್ಯತೆಯ ಮಾನದಂಡವನ್ನಾಗಿಸಿಕೊಳ್ಳುವರು.

ನಾಲ್ಕು ಜನ ಮೆಚ್ಚುವಂತೆ

ನಾಲ್ಕು ಜನ ಮೆಚ್ಚುವಂತೆ ನಡೆದುಕೊಳ್ಳಬೇಕು ಎಂಬ ಧೋರಣೆಯೇ ಜನಪದದಲ್ಲಿ ಹಾಸುಹೊಕ್ಕಾಗಿದೆ. ನಾಲ್ಕು ಜನರಿಗೆ ಒಳ್ಳೆಯದಾಗುವಂತೆ ನಡೆದು ಕೊಳ್ಳಬೇಕು ಅದರಿಂದ ಅವರು ಪ್ರಶಂಸಿಸುವ ರೂಪದಲ್ಲಿ ಆಶೀರ್ವಾದಿಸುತ್ತಾರೆ, ಸಾಂಗತ್ಯವನ್ನು ಬಯಸುತ್ತಾರೆ ಎಂಬುದೇ ಅದರ ಮೂಲ ರೂಪವಾಗಿದ್ದರೂ, ಅದು ಬರಿಯ ವಾಚ್ಯಾರ್ಥಕ್ಕೇ ಸೀಮಿತವಾಗಿ ಎಲ್ಲದಕ್ಕೂ ಜನರ ಮಾತುಗಳಲ್ಲೇ ಮಗುವನ್ನು ಅಳೆಯಲು ತೊಡಗುತ್ತಾರೆ. ಅಲ್ಲೇ ಅದರ ನಿಜವಾದ ವ್ಯಕ್ತಿತ್ವ ಮತ್ತು ಸಾಮರ್ಥ್ಯ ವಿಕಾಸವಾಗದೇ ಮುರುಟಿ ಹೋಗುವುದು. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ತನ್ನ ಸಾಮರ್ಥ್ಯ ಮತ್ತು ಆಲೋಚನಾ ವಿಧಾನವನ್ನು ತಾನೇ ಕಾರ್ಯರೂಪಕ್ಕೆ ತರದೇ ಹೋಗುವುದು. ಒರೆಗೆ ಹಚ್ಚಿ ಅದರ ಸಾಧಕ ಬಾಧಕಗಳನ್ನು ಅರಿಯಲಾಗದೇ ಹೋಗುವುದು.

ಪೋಷಕರ ಇನ್ನೊಂದು ದೊಡ್ಡ ತಮಾಷೆಯ ವಿಷಯವೆಂದರೆ, ತಮ್ಮ ಮುಂದೆ ಇನ್ನಾರಾದರೂ ಅವರ ಮಕ್ಕಳನ್ನು ಬೈದರೆ, ಅಥವಾ ದಂಡಿಸಿದರೆ, ಹೋಗಲಿ ಬಿಡಿ ಪರವಾಗಿಲ್ಲ. ಮುಂದೆ ತಿಳಿದುಕೊಳ್ಳುತ್ತಾನೆ. ತಿದ್ದುಕೊಳ್ಳುತ್ತಾನೆ. ಚಿಕ್ಕವನಲ್ಲವಾ, ದೊಡ್ಡವನಾದಂತೆಲ್ಲಾ ಸರಿ ಹೋಗುತ್ತಾನೆ ಎಂದು ಹೇಳುತ್ತಾರೆ. ಆದರೆ ತಮ್ಮದೇ ಮಕ್ಕಳ ವಿಷಯದಲ್ಲಿ ಅವರು ಕಠಿಣವಾಗಿ ನಡೆದುಕೊಳ್ಳುತ್ತಾರೆ. ಬೇರೆಯವರ ಮಕ್ಕಳ ವಿಷಯದಲ್ಲಿ ಅವರು ಹಾಗೆ ಹೇಳುವುದಕ್ಕೂ ಕಾರಣ ಅದು ಅವರ ನಿಜವಾದ ಧೋರಣೆ ಎಂದಲ್ಲ. ಬೇರೆಯವರ ಮಕ್ಕಳನ್ನು ಬೈದು ನಾವ್ಯಾಕೆ ಕೆಟ್ಟವರಾಬೇಕು ಎಂದು ಅಷ್ಟೇ ಇರುವುದು.

ಮುಂದೆ ಸರಿಹೋಗುವುದು ಎಂಬ ಮಿಥ್

ಒಬ್ಬರು ತಂದೆ ಅಥವಾ ತಾಯಿ ಇನ್ನೊಬ್ಬ ತಂದೆ ಅಥವಾ ತಾಯಿಗೆ ಸಮಾಧಾನಿಸುವುದೇನೆಂದರೆ, ಮುಂದೆ ಸರಿಹೋಗುತ್ತಾನೆ ಬಿಡಿ.

ಇದೊಂದು ಶುದ್ಧಾಂಗ ಸುಳ್ಳು. ಸರಿಯಾಗಿ ಮಗುವು ಓದುತ್ತಿರಲಿಲ್ಲ, ವರ್ತಿ ಸುತ್ತಿಲ್ಲ ಎಂದರೂ ಈಗ ಚಿಕ್ಕ ವಯಸ್ಸು. ಆದ್ದರಿಂದ ಹೀಗೆ, ಮುಂದೆ ಸರಿಯಾಗಿ ಕಲಿಯುತ್ತಾನೆ, ಸರಿ ಹೋಗುತ್ತಾನೆ ಎಂದು ಭರವಸೆಯನ್ನು ಕೊಡುತ್ತಾರೆ. ಮುಂದೆ ಸರಿ ಹೋಗುವುದು ಎನ್ನುವುದು ಒಂದು ದೊಡ್ಡ ಮಿಥ್. ಆ ದೋಷ ಅಥವಾ ನಕಾರಾತ್ಮಕ ವಿಷಯವೇನಿದೆಯೋ ಅದು ಸಕಾರಾತ್ಮಕವಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ತೀರಾ ಕಡಿಮೆ. ಆಗಲೇ, ಅದನ್ನು ಸರಿಪಡಿಸುವ ಪ್ರಕ್ರಿಯೆಗೆ ತೊಡಗಬೇಕು.

ಇದೇ ಕಾರಣದಿಂದಲೇ ಮಕ್ಕಳ ಸಣ್ಣದಾಗಲಿ, ದೊಡ್ಡದಾಗಲಿ ಗುಣದೋಷ ಗಳನ್ನು ಅಲ್ಲಿಂದಲೇ ಗಮನಿಸಿ, ಮಗುವಿನ ಗಮನಕ್ಕೂ ತರಬೇಕು. ಸರಿಪಡಿಸುವ ಪ್ರಕ್ರಿಯೆ ಆಗ್ಗಿಂದಾಲೇ ಪ್ರಾರಂಭವಾಗಬೇಕು.

ಅನೌಪಚಾರಿಕ ಶಿಕ್ಷಣ ಕುಟುಂಬದಲ್ಲಿ

ಕೆಲವರ ಮನೆಯಲ್ಲಿ ಪೋಷಕರಿಗೆ ಸಂಬಂಧಪಟ್ಟಂತೆ ಯಾರಾದರೂ ಬಂದರೆ ಮಕ್ಕಳು ಟಿವಿ ನೋಡುವುದನ್ನು ಮುಂದುವರಿಸುವುದೋ ಅಥವಾ ಎದ್ದು ಒಳಗೆ ಹೋಗಿಬಿಡುವುದೋ ಮಾಡುವ ಬದಲು ಅಲ್ಲಿಯೇ ಕೂರಿಸಿಕೊಂಡು ಪರಸ್ಪರ ಮಾತಾಡುವ ರೀತಿ ಮತ್ತು ನೀತಿಗನ್ನು ಗ್ರಹಿಸುವಂತೆ ಮಾಡಬೇಕು.

ಒಂದು ವೇಳೆ ವ್ಯಕ್ತಿಗತವಾಗಿ ಮಾತಾಡುವಂತಿದ್ದರೆ ಮಾತ್ರ ತಾವು ಪ್ರತ್ಯೇಕವಾಗಿ ಮಾತಾಡಬೇಕು ಎಂದು ಹೇಳಿಯೇ ಅವರನ್ನು ಕಳುಹಿಸಬೇಕು. ಇದರಿಂದ ಇತರರ ಖಾಸಗಿತನಕ್ಕೂ ಬೆಲೆ ಕೊಡುವುದನ್ನೂ ಕಲಿಯುತ್ತಾರೆ.

ಅಂತೆಯೇ ಇನ್ನೊಂದು ವಿಷಯವನ್ನು ಗಮನಿಸಬೇಕಾಗಿರುವುದೆಂದರೆ, ಇನ್ನೊಬ್ಬರ ಖಾಸಗಿತನದಲ್ಲಿ ಕುತೂಹಲವನ್ನು ತಳೆದು, ಹೊರಗೆ ದೂರಾಗಿ ರುವಂತೆ ನಟಿಸುತ್ತಾ, ಅಂತರಂಗದಲ್ಲಿ ತಿಳಿಯುವ ಆಸೆಯಿಂದ ಕದ್ದು ಪ್ರಯತ್ನವನ್ನು ಮಾಡದಿರುವಂತಹ ನಿಲುವು ಮತ್ತು ನಿರಾಸಕ್ತಿಯನ್ನು ಹೊಂದುವಂತೆ ಮಾಡುವುದು.

ಇದೇನೇ ಇರಲಿ, ಶಾಲೆಯಲ್ಲಿ ನಮಗೆ ಸಮರ್ಪಕವಾಗಿ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕೊಡಿಸಲಾಗುತ್ತಿಲ್ಲ ಎಂದರೆ, ನಾವು ಥಾಮಸ್ ಆಲ್ವಾ ಎಡಿಸನ್‌ನ ತಾಯಿಯ ರೀತಿಯಲ್ಲಿ ದಿಟ್ಟ ನಿರ್ಧಾರವನ್ನು ತೆಗೆದು ಕೊಳ್ಳಬೇಕು. ಇದು ಮಗುವನ್ನು ವಿಶ್ವಾಸಿಸುವುದು ಮಾತ್ರವಲ್ಲ, ಆತ್ಮ ವಿಶ್ವಾಸವೂ ಇದ್ದರೆ ಮಾತ್ರ ಇದು ಸಾಧ್ಯವಾ ಗುವುದು. ಶಾಲೆಯಿಲ್ಲದೆಯೇ ಮಗುವಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾನ್ಯ ಮಾಡುವಂತಹ ಶಿಕ್ಷಣವನ್ನು ಮನೆಯಲ್ಲಿಯೇ ಕೊಡಲು ಸಾಧ್ಯ. ಇದು ಬರೀ ಹೋಂ ಸ್ಕೂಲಿಂಗ್ ಅಲ್ಲ. ಹಾಗಾದರೆ ಮತ್ತೇನು? ಮುಂದೆ ನೋಡೋಣ.

 ಚಿಂತನಾಕರಣಗಳು

ಆಲೋಚನೆಯನ್ನು ಒರೆಗೆ ಹಚ್ಚುವ ಕೆಲವು ವಿಧಾನಗಳು.

    1.ವಸ್ತುವನ್ನು ನೇರವಾಗಿ ತೋರಿಸದೇ ಅದರ ಆಕಾರವನ್ನು ಮಾತ್ರ ತೋರಿಸಿ ಅದೇನೆಂು ಸಣ್ಣ ಮಕ್ಕಳಿಗೆ ಕೇಳುವುದು.

    2.ವಿಷಯಗಳನ್ನು ಮುಂದಿಟ್ಟು ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಕೇಳುವುದು. ತಪ್ಪೆಂದರೆ ಸರಿ ಯಾವುದು ಎಂದೂ, ಸರಿಯೆಂದರೆ, ಇದು ಯಾವ ರೀತಿಯಲ್ಲಿ ತಪ್ಪಾಗಿ ಅಭಿವ್ಯಕ್ತವಾಗಬಹುದು ಎಂದು ವಿವರಣೆಗಳನ್ನು ಕೇಳುವುದು.

    3.ತಾವೇ ಸುಡೊಕು ಅಥವಾ ಪದಬಂಧಗಳನ್ನು ಮಾಡುತ್ತಾ ತಾವೇ ಆಲೋಚನೆ ಮಾಡುವುದು. ತಮ್ಮ ಕೈಯಾರೆ ರೇಖೆಗಳನ್ನು ಬಿಡಿಸುತ್ತಾ ದೊಡ್ಡವರಿಗೆ ಒಗಟುಗಳನ್ನು ಕೇಳಲು ಪ್ರೇರೇಪಿಸುವುದು.

    4.ಇದೇನಿರಬಹುದು, ಹೇಗೇಕಿರಬಹುದು. ಇದು ಹೇಗಾಗಿರಬಹುದು ಎಂದು ಸಂಭವನೀಯ ವಿಷಯಗಳನ್ನು ಆಲೋಚಿಸಲು ಹೇಳುವುದು.

    5.ಮಕ್ಕಳ ಶಬ್ದ ಭಂಡಾರ ಅದೆಷ್ಟೇ ಇರಲಿ. ಅವುಗಳನ್ನು ಉಪಯೋಗಿಸಿಕೊಂಡು ದಿನಕ್ಕೆ ಐದರಿಂದ ಹತ್ತಾದರೂ ಹೊಸ ವಾಕ್ಯಗಳನ್ನು ಮಾಡುವಂತೆ ಪ್ರೇರೇಪಿಸುವುದು.

    6.ಒಂದೇ ವಾಕ್ಯವನ್ನು ಬೇರೆ ಬೇರೆ ರೀತಿಯಲ್ಲಿ ಅದೇ ಅರ್ಥ ಬರುವಂತೆ ರಚಿಸಲು ಪ್ರೇರೇಪಿಸುವುದು. ಸಾಮಾನ್ಯವಾಗಿ ತಮಗೆ ಪರಿಚಿತವಾದ ರೀತಿಯಲ್ಲಿ ಹೇಳಿ ಮುಂದೆ ಗೊತ್ತಾಗುತ್ತಿಲ್ಲ ಎಂದು ಮಕ್ಕಳು ಸುಮ್ಮನಾಗಿಬಿಡುತ್ತಾರೆ. ಆದರೆ ಅದು ಸುಲಭ ಮಾರ್ಗವನ್ನು ಆಯ್ದುಕೊಂಡ ಕಾರಣದ ವರ್ತನೆ ಅದು. ಆದ್ದರಿಂದ ತಪ್ಪಾದರೂ ಸರಿಯೇ ಬೇರೆ ರೀತಿಯಲ್ಲಿ ಹೇಳು ಎಂದು ಪ್ರೇರೇಪಿಸುವುದು.

    7.ಕ್ಲಿಷ್ಟವಾದಂತಹ ಗುರಿಗಳನ್ನು ಸರಳವಾಗಿ ಹಂತ ಹಂತವಾಗಿ ಸಾಧಿಸುವಂತಹ ಕೆಲವು ಉದಾಹರಣೆಗಳನ್ನು ಕೊಡುವುದು. ಹಾಗೆಯೇ ಮತ್ತೊಂದು ಕ್ಲಿಷ್ಟವಾದ ಗುರಿಯನ್ನು ಸರಳ ಹಂತಗಳಿಂದ ತಲುಪುವ ಉಪಾಯಗಳನ್ನು ಅರೇ ಯೋಚಿಸುವಂತೆ ಮಾಡುವುದು.

    8.ತಮಗಾಗಿರುವ ಅನುಭವಗಳನ್ನು ಲಭ್ಯವಿರುವ ಎಲ್ಲಾ ಬಗೆಯ ವಿವರಗಳಿಂದ ಹೇಳಲು ಪ್ರೋತ್ಸಾಹಿಸುವುದು. ಉದಾಹರಣೆಗೆ ಅಂಗಡಿಗೆ ಹೋಗಿ ಸಾಮಾನು ತರುವಾಗ ದಾರಿ, ಅಂಗಡಿಯಲ್ಲಿರುವ ಜನರು, ಕೊಂಡುಕೊಳ್ಳಲು ಬರುವವರು, ಕೊಂಡುಕೊಳ್ಳದೇ ಹಾಗೇ ಹೋಗುವವರು, ತಾವು ಕೊಂಡಿರುವ ವಸ್ತುಗಳು, ತಾವು ಕೊಳ್ಳದಿರುವ ಆದರೆ ತಮ್ಮ ಗಮನ ಸೆಳೆದ ವಸ್ತುಗಳು, ಅಂಗಡಿಯವನ ವರ್ತನೆ, ನಮ್ಮ ಮುಂದೆ ಬಿಲ್ ಹಾಕಿಸಿಕೊಳ್ಳುವವರ ಕಡೆಗೆ ಗಮನ; ಹೀಗೆ ಹಲವು ವಿವರಗಳನ್ನು ಗುರುತಿಸಲು ಪ್ರೋತ್ಸಾಹಿಸುವುದು.

    9.ಸರಳವಾಗಿ ಹೇಳಿದಂತಹ ವಿಷಯವನ್ನು ಸಂಕೀರ್ಣವಾಗಿ ಹೇಳಲು ಪ್ರಯತ್ನಿಸುವುದು, ಹಾಗೆಯೇ ಸಂಕೀರ್ಣವಾಗಿರುವ ವಿಷಯವನ್ನು ಸರಳವಾಗಿ ಹೇಳಲು ಪ್ರಯತ್ನಿಸುವುದು.

    10.ಭಾಷೆ ಮಾತ್ರವಲ್ಲದೇ ಚಿತ್ರಗಳು, ಸಂಜ್ಞೆಗಳು ಮತ್ತು ಭಾವಗಳ ಮೂಲಕ ವಿಷಯವನ್ನು ತಿಳಿಸುವ ಪ್ರಯತ್ನವನ್ನು ಮಾಡಿಸುವುದು.

    11.ಹೊರಗೆ ಹೋಗುವಾಗ ಅವರೇ ತಮ್ಮ ಬಟ್ಟೆಯನ್ನು ಅಥವಾ ಪಾದರೆಯನ್ನು ಆಯ್ಕೆ ಮಾಡಿಕೊಳ್ಳುವುದು.

    12.ತಮ್ಮ ವಸ್ತುಗಳನ್ನು ಕೊಂಡುಕೊಳ್ಳುವಾಗ ವಿವಿಧ ಋತುಮಾನಕ್ಕನುಗುಣವಾಗಿ ತಾವೇ ವಸ್ತುಳನ್ನು ಆಯ್ಕೆ ಮಾಡಿಕೊಳ್ಳುವುದು.

    13.ಮನೆಯ ವಿಳಾಸ, ಟೆಲಿಫೋನ್ ನಂಬರ್, ಮನೆಯವರ ಬಗ್ಗೆ ಸಣ್ಣದಾಗಿಯಾದರೂ ಪರಿಚಯ ನೀಡುವಷ್ಟು ವಿವರಣೆ ಇತ್ಯಾದಿಗಳನ್ನು ಅವರಿಗೆ ಕಲಿಸುವುದು.

ಪ್ರಾಥಮಿಕ ಶಾಲೆಗೆ ಹೋಗುವಂತಹ ಮಕ್ಕಳಲ್ಲಿ ಇದೆಲ್ಲವನ್ನೂ ರೂಢಿಗೊಳಿಸಬೇಕು. ಅವರು ಮುಂದೆ ಎಂದೋ ದೊಡ್ಡವರಾದ ಮೇಲೆ ಮಾಡುತ್ತಾರೆ ಎಂಬ ಭ್ರಮೆ ಮಾತ್ರ ಬೇಡ. ಅದು ಆಗುವುದಿಲ್ಲ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News