ಅವರು ಆಧುನಿಕ ಅಕ್ಕಮಹಾದೇವಿಯನ್ನು ಕೊಂದರು...

Update: 2017-09-14 06:25 GMT

ಅಕ್ಕಮಹಾದೇವಿಯ ಹಾಗೆ ಆಧುನಿಕ ಅಕ್ಕ ಗೌರಿ ಕನ್ನಡನಾಡಿನಲ್ಲಿ ವಿರಮಿಸದ ಜೀವ. ಮಣ್ಣಿನಲ್ಲಿ ಮಲಗಿರುವ ಅವರ ಪರೋಪಕಾರ ಚೈತನ್ಯ ವಿರಮಿಸುವುದಿಲ್ಲ. ಆಕೆ ಮತ್ತೆ ಎದ್ದು ಬರುತ್ತಾರೆ ಅನ್ನಿಸುತ್ತದೆ ನನಗೆ. ಅಕ್ಕ ಗೌರಿ, ನಾನು ನಿನಗಾಗಿ ದುಃಖಿಸುತ್ತಿಲ್ಲ. ನಾನು ನಿನ್ನನ್ನು ಕೇವಲ ಪೂಜಿಸುತ್ತೇನೆ.

ಲಂಕೇಶ್ ಕುಟುಂಬದ ಅಕ್ಕ ಗೌರಿ, ನಾನು ನಿನಗಾಗಿ ದುಃಖಿಸುತ್ತಿಲ್ಲ. ನಾನು ನಿನ್ನನ್ನು ಪೂಜಿಸುತ್ತೇನೆ ಅಷ್ಟೆ.

2016ರ ಜುಲೈ ತಿಂಗಳ ಒಂದು ದಿನ ಬೆಳಗ್ಗೆ ಸುಮಾರು 9.30ಕ್ಕೆ ಅಜ್ಞಾತ ದೂರವಾಣಿ ಸಂಖ್ಯೆಯೊಂದರಿಂದ ನನಗೊಂದು ಕರೆ ಬಂತು. ಇನ್ನೊಂದು ಕೊನೆಯಲ್ಲಿ ಮೃದುವಾದ ಸಭ್ಯಧ್ವನಿಯೊಂದು ಕೇಳಿತು, ‘‘ನಾನು ಕಾಂಚ ಐಲಯ್ಯರೊಡನೆ ಮಾತಾಡಬಹುದೇ?’’

‘‘ಮಾತನಾಡುತ್ತಿದ್ದೇನೆ’’ ನಾನು ಉತ್ತರಿಸಿದೆ.

‘‘ಪ್ರೊಫೆಸರ್, ಇದು ಗೌರಿ ಲಂಕೇಶ್ ಬೆಂಗಳೂರಿನಿಂದ’’

ಅವರು ಹೇಳಿದರು. ನನಗೆ ಥ್ರಿಲ್ ಆಯಿತು.

‘‘ಬೆಂಗಳೂರ್ ಮಿರರ್‌ನಲ್ಲಿ ಪ್ರಕಟವಾದ, ನೀವು ಬರೆದ ನನ್ನ ಪುಸ್ತಕ ‘ವೈ ಐ ಆ್ಯಮ್ ನಾಟ್ ಎ ಹಿಂದೂ’ ವಿಮರ್ಶೆ ಓದಿದೆ’’ ನಾನು ಹೇಳಿದೆ.

‘‘ನಾನು ನಿಮ್ಮ ಬರವಣಿಗೆಯನ್ನು ಮೆಚ್ಚುತ್ತೇನೆ. ನನಗೆ ಅತ್ಯಂತ ಇಷ್ಟವಾದ ಪುಸ್ತಕ ‘ಬಫೆಲೋ ನ್ಯಾಶನಲಿಸಂ’. ನಾನು ಅದನ್ನು ಕನ್ನಡಕ್ಕೆ ಅನುವಾದಿಸಬೇಕೆಂದಿದ್ದೇನೆ.’’ ಅವರು ಹೇಳಿದರು.

‘‘ನೀವ್ಯಾಕೆ ಅದನ್ನು ಇಷ್ಟಪಡುತ್ತೀರಾ?’’ ನಾನು ಕೇಳಿದೆ.

‘‘ಏಕೆಂದರೆ ನಾನೇ ಸ್ವತಃ ಒಂದು ಬಫೆಲೊ’’ ಅವರು ಹೇಳಿದರು.

 ಆಮೇಲೆ ಬೆಂಗಳೂರಿನಲ್ಲಿ ಆಕಾರ್ ಪಟೇಲ್‌ರ ಮನೆಯಲ್ಲಿ ನಾವು ಭೇಟಿಯಾಗುವುದಿತ್ತು. ಆದರೆ ಯಾವುದೋ ಕಚೇರಿ ಕೆಲಸದಿಂದಾಗಿ ಅವರಿಗೆ ಬರಲಾಗಲಿಲ್ಲ. ಆಮೇಲೆ ಯಾವತ್ತೂ ನನಗೆ ಅವರ ಭೇಟಿಯಾಗಲಿಲ್ಲ.

  ‘ವೈ ಐ ಆ್ಯಮ್ ನಾಟ್ ಎ ಹಿಂದೂ’ 1996ರಲ್ಲಿ ಪ್ರಕಟವಾಯಿತು. 2016ರಲ್ಲಿ ಅವರು ಯಾಕೆ ಅದರ ವಿಮರ್ಶೆ ಬರೆದರೆಂಬುದು ಒಂದು ಪ್ರಶ್ನೆ. ಪ್ರಾಯಶಃ ಅವರು ದೇಶದಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ಹಿಂಸೆಯಿಂದ ಅಥವಾ ಕರ್ನಾಟಕದಲ್ಲಿ ಮತ್ತು ದೇಶದಲ್ಲಿದ್ದ ಹಿಂಸೆಯ ವಾತಾವರಣದಿಂದ ಚಿಂತಿತರಾಗಿದ್ದರು. ಅವರೇಕೆ ಚಿಂತಿತರಾಗಿದ್ದರೆಂದರೆ ಪ್ರತಿದಿನ ಅವರು ಆ ಹಿಂಸೆಯಿಂದ ಸುತ್ತುವರಿಯಲ್ಪಟ್ಟಿದ್ದರು.

ಲಂಕೇಶ್ ಎಂಬ ಅವರ ಕುಟುಂಬದ ಹೆಸರಿಗೆ ಒಂದು ಹೆಮ್ಮೆ ಇದೆ. ದಕ್ಷಿಣದ ಲಂಕೇಶ್ವರ ರಾವಣ ಮತ್ತು ಲಂಕೇಶ್ವರಿ ಮಂಡೋದರಿ. ಆದರೆ ಲಂಕೇಶನ ಕುಟುಂಬ ಪರಂಪರೆಯ ಮೊದಲ ಬಲಿಪಶು ಚೆಲುವೆ ಶೂರ್ಪನಖಿ.

(ವಿಚಾರವಾದಿಯಾದರೂ) ಗೌರಿಯವರದ್ದು ಒಂದು ಲಿಂಗಾಯತ ಕುಟುಂಬ. ಲಿಂಗಾಯತ ಪರಂಪರೆಯಲ್ಲಿ ಒಬ್ಬಳು 13ನೆ ಶತಮಾನದ ಅಕ್ಕಮಹಾದೇವಿ. ಆಕೆ ಕನ್ನಡನಾಡಿನ ಮೊತ್ತಮೊದಲ ಮಹಿಳಾವಾದಿ ಕೂಡ.

 ಕರ್ನಾಟಕದ ಹಿಂದುತ್ವ ಶಕ್ತಿಗಳು ಈಗ ಬಸವ ಧರ್ಮದ, ಬಸವಣ್ಣನ ಅನುಯಾಯಿಗಳು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮುಂದಿಟ್ಟಿರುವ ಬೇಡಿಕೆಯಿಂದ ಚಿಂತಾಕ್ರಾಂತವಾಗಿವೆ. ಧರ್ಮ ಮತ್ತು ಜಾತಿಯ ನೆಲೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕತ್ವ ಕೂಡಾ ಈ ವಿಷಯದಲ್ಲಿ ಒಮ್ಮತ ಹೊಂದಿಲ್ಲ.

ಗೌರಿ, ಪ್ರತ್ಯೇಕ ಲಿಂಗಾಯತ ಧರ್ಮ ಚಳುವಳಿಯನ್ನು ಬೆಂಬಲಿಸಿದ್ದರು. ಈಗ ಹೊಸದಾಗಿ ಹುಟ್ಟಿಕೊಂಡಿರುವ ಲಿಂಗಾಯತ ಧಾರ್ಮಿಕ ಚಳವಳಿ ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪನವರಿಗೆ, ಅವರೂ ಒಬ್ಬ ಲಿಂಗಾಯತರಾಗಿರುವುದರಿಂದ ಒಂದು ದೊಡ್ಡ ಚಿಂತೆಯಾಗಿದೆ. ಅವರು ಗೌರಿಯ ಅಂತ್ಯ ಸಂಸ್ಕಾರದ ವೇಳೆ ಅಲ್ಲಿದ್ದರು. ಆದರೆ ಈ ಬೇಡಿಕೆಯ ಬಗ್ಗೆ ಅತ್ಯಂತ ಹೆಚ್ಚು ಚಿಂತಿತರಾಗಿರುವವರು ಬಿಜೆಪಿ ಸಂಸದರಾದ ಅನಂತ ಕುಮಾರ್ ಮತ್ತು ಅನಂತ ಕುಮಾರ್ ಹೆಗಡೆ.

ಗೌರಿಯ ಮಾಜಿ ಪತಿ ಚಿದಾನಂದ ರಾಜ್‌ಘಟ್ಟ ಆಕೆಯನ್ನು ಒಬ್ಬ ಅದ್ಭುತ ಮಹಿಳೆ ಎಂದು ವರ್ಣಿಸಿದ್ದಾರೆ.

ಗೌರಿ ಲಂಕೇಶ್ ಎಲ್ಲ ಅನಾಥರ ಬಂಧುವಾಗಿದ್ದರು; ಆಕೆ ಅನೇಕ ಅನಾಥರಿಗೆ ಓರ್ವ ತಾಯಿಯಾಗಿದ್ದರು. ರಾಷ್ಟ್ರೀಯತೆ ಮತ್ತು ರಾಷ್ಟ್ರೀಯತೆ ವಿರೋಧಿಗಳ ಕುರಿತ ಸಂವಾದದಲ್ಲಿ ಒಳಗೊಂಡ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್‌ರಂತಹ ಯುವಕರಿಗಷ್ಟೇ ಅಲ್ಲ; ರಾಜ್‌ಘಟ್ಟ ಹೇಳಿದಂತೆ ಬದುಕು ಇಲ್ಲದ ಮತ್ತು ಮನೆಯಿಲ್ಲದ ಅನೇಕ ಆಶಾ ಮತ್ತು ಉಷಾರಿಗೆ ಆಕೆ ಬದುಕು ಕೊಟ್ಟಿದ್ದರು; ದಲಿತರ, ಒಬಿಸಿಗಳ ಮತ್ತು ಮಹಿಳೆಯರ ಚಳವಳಿಗಳಲ್ಲಿ ತೊಡಗಿದ್ದವರ ಗೆಳತಿಯಾಗಿದ್ದರು.

 ರಾಷ್ಟ್ರೀಯವಾದಿ ಸಂವಾದಗಳು ಬರುತ್ತವೆ, ಹೋಗುತ್ತವೆ. ಆದರೆ ಲಿಂಗಾಯತ ಧರ್ಮದ ಪ್ರಶ್ನೆ 750 ವರ್ಷಗಳಷ್ಟು ಹಿಂದಿನದು. ತನ್ನ ಸಮಕಾಲೀನ ಬ್ರಾಹ್ಮಣರಿಂದಾಗಿ ಬಸವಣ್ಣ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಅಕ್ಕಮಹಾದೇವಿ ಅವರ ಪ್ರಸಿದ್ಧ ವಚನವೊಂದರಲ್ಲಿ ತಾನು ಅರಿಷಡ್‌ವೈರಿಗಳನ್ನು ಗೆದ್ದು, ಕಾಯ, ಯೋಚನೆ ಮತ್ತು ವಚನದ ತ್ರಿಮೂರ್ತಿಯಾಗಿ ದ್ವಂದ್ವವನ್ನು ಮೀರಿ ಏಕವಾಗಿರುವುದು ನಿಮ್ಮೆಲ್ಲರ(ಶರಣರ)ಕೃಪೆಯಿಂದಾಗಿ ಎನ್ನುತ್ತಾಳೆ. ನಾನು ಇಲ್ಲಿ ನೆರೆದ ಬಸವಣ್ಣ ಮತ್ತು ಎಲ್ಲರಿಗೂ ವಂದಿಸುತ್ತೇನೆ ಎನ್ನುತ್ತಾಳೆ.

ಗೌರಿ ಕೂಡಾ ಬಸವಣ್ಣ ಮತ್ತು ಅಕ್ಕಮಹಾದೇವಿಗೆ ವಂದಿಸಿ, ತನ್ನ ಹಿರಿಯ ಅಕ್ಕನ ಪ್ರಪಂಚವನ್ನು ಜಯಿಸಿದ್ದಾರೆ. ಗುಂಡುಗಳಿಂದ ಛಿದ್ರವಾದ ಅವರ ದೇಹದ ಸುತ್ತ ನೆರೆದವರನ್ನು ವಂದಿಸಿದ್ದಾರೆ. ಆ ದೇಹ ಶಾಂತಿಯಲ್ಲಿ ವಿರಮಿಸಿಲ್ಲ. ವಿಚಾರಣೆ ನಡೆಯಲಿ, ನಡೆಯದೆ ಇರಲಿ.; ಕೊಲೆಗಡುಕರ ಬಂಧನವಾಗಲಿ, ಆಗದಿರಲಿ- ಆ ದೇಹ ಶಾಂತಿಯಲ್ಲಿ ವಿರಮಿಸುವುದಿಲ್ಲ.

ಆಧುನಿಕ ಅಕ್ಕ ಮಹಾದೇವಿಯಾಗಿರುವ ಗೌರಿ ಅವರ ಎಲ್ಲ ತೀವ್ರ ಭಾವನೆಗಳನ್ನು ಸೋಲಿಸಿ ಗೆದ್ದಿದ್ದಾರೆ- ತನ್ನ ಗಂಡನಿಂದ ವಿಚ್ಛೇದನ ಪಡೆದ ಬಳಿಕ, ಎಲ್ಲ ಬಡವರಿಗೆ, ಸ್ಪಶ್ಯರಿಗೆ, ಅಸ್ಪಶ್ಯರಿಗೆ ಹಾಲು ನೀಡಲು ಎಮ್ಮೆಯಾದಂದಿನಿಂದ ಗೆದ್ದಿದ್ದಾರೆ.

ಈಗ ಇರುವ ಪ್ರಶ್ನೆ ಲಿಂಗಾಯತರು ಮತ್ತು ಬಸವ ಹಾಗೂ ಅಕ್ಕ ಮಹಾದೇವಿ ಪ್ರೇಮಿಗಳು ಗೌರಿಯವರನ್ನು ನೆನಪು ಮಾಡಲು ಏನು ಮಾಡಬೇಕು?

ಗೌರಿ ತನ್ನೆಲ್ಲ ಶಕ್ತಿಯೊಂದಿಗೆ ಹಿಂಸೆಯನ್ನು ವಿರೋಧಿಸಿದರು. ಆದರೆ ಅವರ ಶತ್ರುಗಳ ಗುಂಡುಗಳು ಅವರಿಂದ ದೂರ ಉಳಿಯಲಿಲ್ಲ. ಆ ಹಿಂಸಾ ಪ್ರೇಮಿಗಳು ಆಕೆಯ ಸೋತ ದೇಹದೊಳಕ್ಕೆ ಗುಂಡುಗಳ ಮಳೆ ಸುರಿಸಿದರು. ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಸಮಾನತೆಗಾಗಿ ಆಕೆಯ ತುಡಿತವನ್ನು ನಕ್ಸಲೀಯರು ಅರ್ಥಮಾಡಿಕೊಂಡರೆಂದು ನನಗನ್ನಿಸುವುದಿಲ್ಲ. ಆದರೆ ಸಂಘಪರಿವಾರಕ್ಕೆ ಇದು ಚೆನ್ನಾಗಿ ಅರ್ಥವಾಗಿದೆ. ಕರ್ನಾಟಕಕ್ಕೆ ಹಾಗೂ ಇಡೀ ಭಾರತಕ್ಕೆ ಆಕೆಯ ಸಮಾನತೆಯ ತುಡಿತದ ಅರ್ಥಗಳೇನೆಂದು ಈ ಪರಿವಾರಕ್ಕೆ ಅರ್ಥವಾಗಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮದ ಅಂತಿಮ ಸ್ಪರ್ಶದಿಂದಾಗಿ ಅವರು ಈಗ ಏನಾಗಿದ್ದಾರೋ, ಅದು ಆದರು. ಗೌರಿ, ಅವರ ಲಿಂಗಾಯತ ಅಂತಿಮ ಸ್ಪರ್ಶದಿಂದ ಅವರು ಏನಾಗಿದ್ದಾರೋ ಅದೇ ಆಗಿ ಉಳಿಯುತ್ತಾರೆ.

ಹಿಂದೂ ಧರ್ಮದಿಂದ ಲಿಂಗಾಯತ ಧರ್ಮ ಪ್ರತ್ಯೇಕ ಎಂದು ಪುನಃ ಪುನಃ ಬರೆದದ್ದಕ್ಕಾಗಿ ಎಂ. ಎಂ. ಕಲಬುರ್ಗಿಯವರನ್ನು ಕೂಡ ಹತ್ಯೆ ಮಾಡಲಾಯಿತು. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮವಾಗಬೇಕೆಂಬ ಹೊಸ ಚಳವಳಿಯ ಹಿಂದೆ ಗೌರಿಯವರದ್ದೇ ಮುಖ್ಯ ಮಿದುಳು ಎಂದು ನನಗೆ ಹೇಳಲಾಗಿದೆ. ಆದ್ದರಿಂದ, ಬಹಳ ಬೇಗ ಅವರು ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು.

ಅಕ್ಕಮಹಾದೇವಿಯ ಹಾಗೆ ಆಧುನಿಕ ಅಕ್ಕ ಗೌರಿ ಕನ್ನಡನಾಡಿನಲ್ಲಿ ವಿರಮಿಸದ ಜೀವ. ಮಣ್ಣಿನಲ್ಲಿ ಮಲಗಿರುವ ಅವರ ಪರೋಪಕಾರ ಚೈತನ್ಯ ವಿರಮಿಸುವುದಿಲ್ಲ. ಆಕೆ ಮತ್ತೆ ಎದ್ದು ಬರುತ್ತಾರೆ ಅನ್ನಿಸುತ್ತದೆ ನನಗೆ. ಅಕ್ಕ ಗೌರಿ, ನಾನು ನಿನಗಾಗಿ ದುಃಖಿಸುತ್ತಿಲ್ಲ. ನಾನು ನಿನ್ನನ್ನು ಕೇವಲ ಪೂಜಿಸುತ್ತೇನೆ.

ಕೃಪೆ: thewire

Writer - ಕಾಂಚ ಐಲಯ್ಯ ಶೆಫರ್ಡ್

contributor

Editor - ಕಾಂಚ ಐಲಯ್ಯ ಶೆಫರ್ಡ್

contributor

Similar News

ಜಗದಗಲ
ಜಗ ದಗಲ