ಅಲಕ್ಷಿತ ಸಮುದಾಯದ ವಚನಕಾರ್ತಿಯರು

Update: 2017-09-13 18:41 GMT

ಪ್ರೊ. ಎಚ್. ಲಿಂಗಪ್ಪನವರು ಬರೆದಿರುವ ‘ಅರಿವು ಮೀರಿದ ಘನ’ ಕೃತಿಯಲ್ಲಿ ಆಲಕ್ಷಿತ ತಳಸಮುದಾಯದ ಕ್ರಾಂತಿಕಾರಿ ವಚನಕಾರ್ತಿಯರನ್ನು ಗುರುತಿಸಿ ವೈಚಾರಿಕವಾಗಿ ವಿಶ್ಲೇಷಿಸಿದ್ದಾರೆ. ಒಟ್ಟು 16 ಜನ ಶರಣೆಯರ ವಚನಗಳನ್ನು ಕೂಡಿಸಿರುವ ಅವರು ವಚನಗಳ ಸರಳತೆ ಮತ್ತು ಅದರ ಒಳಧ್ವನಿಯಲ್ಲಿರುವ ಅಗಾಧತೆಯನ್ನು ಕಟ್ಟಿಕೊಡಲು ಯಶಸ್ವಿಯಾಗಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯತ್ನ, ಹಾಗೆಯೇ ವಿಶಿಷ್ಟ ಪ್ರಯತ್ನ. ಬೆನ್ನುಡಿಯಲ್ಲಿ ಹೇಳುವಂತೆ, ವಚನಗಳ ಮೂಲಕ ಲೇಖಕರು, ಶರಣ ಶರಣೆಯರ ಬದುಕಿನ ಹಂದರವನ್ನು ಚಿತ್ರಿಸುತ್ತಾ, ಸರ್ವೋದಯ ಸಮಾನತೆ ಭವಿಷ್ಯಕ್ಕಾಗಿ ನಮ್ಮಾಳಗೆ ರೂಢಿಸಿಕೊಳ್ಳಬೇಕಾದ ಜೀವದಯೆಯನ್ನು ಎತ್ತಿ ಹಿಡಿಯುತ್ತಾರೆ. ಹೇಗೆ ವೈದಿಕ ನೆಲೆಗಟ್ಟನ್ನೇ ಈ ವಚನಗಳು ಪ್ರಶ್ನಿಸುತ್ತವೆ ಎನ್ನುವುದನ್ನು ಅವರು ವಿವರಿಸುತ್ತಾರೆ. ಮೂಲೆಗುಂಪಾಗಿದ್ದ ಪ್ರತಿ ಸಂಸ್ಕೃತಿಯನ್ನು ಈ ಮೂಲಕ ಬಯಲಿಗೆಳೆದಿದ್ದಾರೆ. ಅಧ್ಯಯನಕಾರರಾಗಿ ಇನ್ನಷ್ಟು ವಿಶಾಲ ದಾರಿಯೊಂದನ್ನು ತೆರೆದುಕೊಟ್ಟಿದ್ದಾರೆ. ಸಾಧಾರಣವಾಗಿ ಈಗಾಗಲೇ ಜನಪ್ರಿಯವಾಗಿರುವ ಹೆಸರುಗಳನ್ನು ಪಕ್ಕಕ್ಕಿಟ್ಟು, ಪ್ರಜ್ಞಾಪೂರ್ವಕವಾಗಿ ಬದಿಗೆ ಸರಿದಿರುವ ಕೆಲವು ವಚನಕಾರ್ತಿಯರನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಆಲಕ್ಷಿತ ಸಮಾಜದ ಅನುಭಾವಿ ವಚನಕಾರ್ತಿಯರ ಪರಿಚಯ ಎನ್ನಬಹುದು. ದುಗ್ಗಳೆ, ಗೊಗ್ಗವ್ವೆ, ಬೊಂತಾದೇವಿ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಸೂಳೆ ಸಂಕವ್ವೆ, ಕಾಳವ್ವೆ, ಕೊಟ್ಟಣದ ಸೋಮಮ್ಮ, ಈಡಿಗರ ಅಕ್ಕಮ್ಮ...ಹೀಗೆ ನಮಗೆ ಅಪರಿಚಿತವಾಗಿರುವ ಹಲವು ಹೆಸರುಗಳು ಇಲ್ಲಿವೆ. ಈ ವಚನಕಾರ್ತಿಯರು ಮಾಡುತ್ತಿದ್ದ ಕಾಯಕಗಳು, ಅವರ ಬದುಕಿನ ಹಿನ್ನೆಲೆ, ವಚನ ಚಳವಳಿಯ ನಿಜವಾದ ಹಿರಿಮೆಯನ್ನು ಹೇಳುತ್ತದೆ.

ರಶ್ಮಿ ಪ್ರಕಾಶನ ಚಿತ್ರದುರ್ಗ ಇವರು ಹೊರತಂದಿರುವ ಕೃತಿಯ ಪುಟಗಳು 136. ಮುಖಬೆಲೆ 130 ರೂಪಾಯಿ. ಆಸಕ್ತರು 99459 98099 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News