ಕಟ್ಟಡ ನಿರ್ಮಾಣ ರಂಗದಲ್ಲಿನ್ನು ತರಬೇತಿ ಪಡೆದ ಸಿಬ್ಬಂದಿ!
ಆ 22 ಮಂದಿ ಯುವಕರಿಗೆ ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ವ್ಯಾಪಾರ, ನಳ್ಳಿಗಳ ಜೋಡಣೆ(ಪ್ಲಂಬಿಂಗ್), ವಾಟರ್ ಪ್ರೂಫಿಂಗ್, ರಿಯಲ್ ಎಸ್ಟೇಟ್ ಮಾರಾಟಗಳು, ಕಾಂಕ್ರಿಟ್ ತಂತ್ರಜ್ಞಾನ, ಕ್ವಾಲಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಸೆಪ್ಟಂಬರ್ ತಿಂಗಳ 5ರಂದು ಬೆಂಗಳೂರಿನಲ್ಲಿ 22 ಮಂದಿ ವಿದ್ಯಾರ್ಥಿಗಳು ಕಟ್ಟಡ ನಿರ್ಮಾಣ ರಂಗದಲ್ಲಿ ತರಬೇತಿ ನೀಡುವ ಮೊತ್ತಮೊದಲ ತರಬೇತಿ ಕೇಂದ್ರದಿಂದ ಪದವಿ ಪಡೆದು ಹೊರಬಂದಾಗ, ಕಟ್ಟಡ ನಿರ್ಮಾಣರಂಗದಲ್ಲಿ ದುಡಿಯುವ ಮಂದಿಗೆ ಆ ರಂಗದಲ್ಲಿ ತರಬೇತಿ ನೀಡುವ, ಕೌಶಲ್ಯ ಪಡೆದ(ಸ್ಕಿಲ್ಡ್) ಕಾರ್ಮಿಕರನ್ನು ದೇಶಕ್ಕೆ ನೀಡುವ ಒಂದು ಪ್ರಯತ್ನ ಫಲಕಾರಿಯಾದಂತಾಯಿತು. ಆ 22 ಮಂದಿ ಯುವಕರಿಗೆ ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ವ್ಯಾಪಾರ, ನಳ್ಳಿಗಳ ಜೋಡಣೆ(ಪ್ಲಂಬಿಂಗ್), ವಾಟರ್ ಪ್ರೂಫಿಂಗ್, ರಿಯಲ್ ಎಸ್ಟೇಟ್ ಮಾರಾಟಗಳು, ಕಾಂಕ್ರಿಟ್ ತಂತ್ರಜ್ಞಾನ, ಕ್ವಾಲಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಈ ಸಮಾರಂಭ ಹಳೆಯ ವಿಮಾನ ನಿಲ್ದಾಣದ ಸಮೀಪ ಇರುವ ರುಸ್ತುಮ್‌ಜಿ ಪ್ರಿಸ್ಟೀಜ್ ವೊಕೇಶನಲ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್ ಸೆಂಟರ್‌ನಲ್ಲಿ ನಡೆಯಿತು.
ಮುಂಬೈಯ ರುಸ್ತುಮ್‌ಜಿ ಅಕಾಡಮಿ ಫಾರ್ ಗ್ಲೋಬಲ್ ಕೆರಿಯರ್ಸ್ ಮತ್ತು ಬೆಂಗಳೂರಿನ ಪ್ರಿಸ್ಟೀಜ್ ಗ್ರೂಪ್ ಜೊತೆಯಾಗಿ ಸ್ಥಾಪಿಸಿದ ಈ ತರಬೇತಿ ಕೇಂದ್ರವು, ಕಟ್ಟಡ ನಿರ್ಮಾಣ ಮತ್ತು ಇದಕ್ಕೆ ಸಂಬಂಧಿಸಿದ ಇತರ ರಂಗಗಳಿಗೆ ಬೇಕಾಗುವ ತರಬೇತಿ ಪಡೆದ ಮಾನವ ಶಕ್ತಿ(ಮ್ಯಾನ್‌ಪವರ್)ಯನ್ನು ಪೂರೈಸುವ ಉದ್ದೇಶ ಹೊಂದಿದ ಒಂದು ಸಂಸ್ಥೆಯಾಗಿದೆ.
ಎಲ್ಲರಿಗೂ ಅಗತ್ಯ
ಈ ಕೇಂದ್ರದ ಸ್ಥಾಪನೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ‘ಸ್ಕಿಲ್ ಇಂಡಿಯಾ ಮಿಶನ್’ನ ಪ್ರೇರಣೆ ಇದೆ ಎಂದಿದ್ದಾರೆ ಪ್ರಿಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಇರ್ಫಾನ್ ರಝಾಕ್.
ರುಸ್ತುಮ್‌ಜಿ ಪ್ರಿಸ್ಟೀಜ್ ತರಬೇತಿ ಕೇಂದ್ರಕ್ಕೆ ಮುಖ್ಯಸ್ಥ ನಿತೇಶ್ ಪೂರಿ ಯವರ ಪ್ರಕಾರ, ಕೇಂದ್ರದ ತರಬೇತಿಯ ಕೋರ್ಸುಗಳು ಮೂರು ಭಾಗಗಳಲ್ಲಿವೆ: ಥಿಯರಿ, ಪ್ರಾಕ್ಟಿಕಲ್ ಮತ್ತು ಫೀಲ್ಡ್ ಸಂದರ್ಶನಗಳು ಈ ಕೋರ್ಸಿಗೆ ಸೇರಲು ಶೈಕ್ಷಣಿಕ ಅರ್ಹತೆ, 10ನೆ ತರಗತಿಯಲ್ಲಿ ತೇರ್ಗಡೆ. ಪ್ರವೇಶ ಪರೀಕ್ಷೆ ಇಲ್ಲ; ಒಂದು ಮನೋಧರ್ಮ, ಆಸಕ್ತಿ(ಆಪ್ಟಿಟ್ಯೂಡ್) ಪರೀಕ್ಷೆ ಇರುತ್ತದೆ. ಆದರೆ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಈ ಅರ್ಹತೆಯೂ ಇರಲಿಲ್ಲ; ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದವರನ್ನೇ ವಿದ್ಯಾರ್ಥಿಗಳಾಗಿ ಪರಿಗಣಿಸಿ ಅವರಿಗೆ ತರಬೇತಿ ನೀಡಲಾಯಿತು. ಅವರ ಶುಲ್ಕವನ್ನು ಅವರನ್ನು ಸ್ಪಾನ್ಸರ್ ಮಾಡಿದ ಕಂಪೆನಿಗಳೇ ನೀಡಿದ್ದವು.
26,000 ಕೋಟಿ ರೂಪಾಯಿ ಮಂಜೂರು
ಇಷ್ಟರವರೆಗೆ ಮುಂಬೈಯಲ್ಲಿ ಅಕಾಡಮಿಯಿಂದ ಸುಮಾರು 25,000 ಮಂದಿ ತರಬೇತಿ ಪಡೆದು ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಗ್ಲೋಬಲ್ ಕೆರಿಯರ್ಸ್‌ನ ಉಪಾಧ್ಯಕ್ಷ ಕವಿ ಲೂತ್ತಾ ಹೇಳುವಂತೆ, ಅಕಾಡಮಿಯು ನಿರ್ದಿಷ್ಟ ವಿಷಯಗಳಲ್ಲಿ ಚಿಕ್ಕ ಚಿಕ್ಕ ಅವಧಿಯ ತರಬೇತಿ ಶಿಬಿರಗಳನ್ನು ನಡೆಸುತ್ತದೆ. ಉದಾಹರಣೆಗೆ, ಅಕಾಡಮಿಯು ಮುಂಬೈಯಲ್ಲಿ 4,000 ರೆಸ್ಟೋರೆಂಟ್‌ಗಳ ಸಿಬ್ಬಂದಿಗಾಗಿ ಹೌಸ್‌ಕೀಪಿಂಗ್‌ನಲ್ಲಿ ಮೂರು ದಿನಗಳ ಒಂದು ತರಬೇತಿ ಶಿಬಿರ ನಡೆಸಿತು. ಕೇಂದ್ರ ಸರಕಾರವು ವಿವಿಧ ಕೌಶಲ್ಯ ತರಬೇತಿಗಾಗಿ 26,000 ಕೋಟಿ ರೂ. ತೆಗೆದಿರಿಸಿದೆ.
ಸ್ಥಳೀಯ ಆವಶ್ಯಕತೆಗಳು
ಪ್ರಮಾಣಪತ್ರಗಳನ್ನು ವಿತರಿಸಿದ ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್‌ರವರು, ಸ್ಥಳೀಯ ಮಾರುಕಟ್ಟೆಯ ಅಗತ್ಯಗಳಿಗನುಗುಣವಾಗಿ ಕೌಶಲ್ಯಗಳನ್ನು ವಿನ್ಯಾಸಗೊಳಿಸಬೇಕು ಎಂದರು. ಈ ಅಗತ್ಯಗಳನ್ನು ನಿರ್ಧರಿಸುವುದಕ್ಕಾಗಿ ರಾಜ್ಯದಲ್ಲಿರುವ ಎಲ್ಲ ಐಟಿಐಗಳಿಗೆ ಸರಕಾರವು ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್ ಕಮಿಟಿಗಳನ್ನು ಸ್ಥಾಪಿಸಿದೆ.
ಕೌಶಲ್ಯದ ಕೊರತೆ ಎಷ್ಟಿದೆಯೆಂದರೆ, ಸಾಮಾನ್ಯವಾಗಿ 200 ಕಾರ್ಮಿಕರ, ಕೆಲಸಗಾರರ ಕೆಲಸವನ್ನು ಸೂಪರ್‌ವೈಸ್ ಮಾಡಲು ಎಂಟು ಮಂದಿ ಸೂಪರ್‌ವೈಸರ್‌ಗಳು ಬೇಕು. ಆದರೆ ಈಗ ಸೂಪರ್‌ವೈಸರ್‌ಗಳನ್ನು ಹಾಗೂ ಪ್ರಾಜೆಕ್ಟ್ ಮ್ಯಾನೇಜರ್‌ಗಳನ್ನು ತರಬೇತಿಗೊಳಿಸುವ ವ್ಯವಸ್ಥೆ ಇಲ್ಲ. ಅದೇ ರೀತಿಯಾಗಿ, ವಾಟರ್ ಪ್ರೂಫಿಂಗ್ ಮಾಡುವ ನಾಲ್ಕು ಅಥವಾ ಐದು ಭಿನ್ನ ಭಿನ್ನ ವಿಧಾನಗಳಿವೆ. ಆದರೆ ಇದನ್ನು ಮಾಡಬಲ್ಲ ತರಬೇತಿ ಪಡೆದ ಸಿಬ್ಬಂದಿ ಲಭ್ಯರಿಲ್ಲ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳುವಂತೆ, ಇದೀಗ ಕರ್ನಾಟಕ ಸರಕಾರವು ತರಬೇತಿಗಾಗಿ ಯುವಕ ಯುವತಿಯರನ್ನು ಕಳುಹಿಸಲು ಏಳು ದೇಶಗಳೊಂದಿಗೆ ತಿಳುವಳಿಕೆ ಪತ್ರ(ಎಂಒಯು)ಕ್ಕೆ ಸಹಿಹಾಕಿದೆ.
ಕೌಶಲ್ಯ ಕಂದಕವನ್ನು ತುಂಬಬೇಕಾದ ಕಾಲಬಂದಿದೆ.
ಪ್ರಿಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಇರ್ಫಾನ್ ರಝಾಕ್, ‘‘ವೃತ್ತಿ ಶಿಕ್ಷಣವು ಮುಂದಿನ ದೊಡ್ಡ ಕ್ರಾಂತಿ’’ ಎನ್ನುತ್ತಾರೆ. ಚೀನಾ, ಜರ್ಮನಿ, ಆಸ್ಟ್ರೇಲಿಯ ಇತ್ಯಾದಿ ದೇಶಗಳಲ್ಲಿ ಈಗಾಗಲೆ ಈ ಕ್ರಾಂತಿ ನಡೆದಿದೆ. ಭಾರತದಲ್ಲಿ ಈಗತಾನೆ ಆರಂಭವಾಗುತ್ತಿದೆ.
ಕಟ್ಟಡ ನಿರ್ಮಾಣರಂಗದಲ್ಲಿ ಯಾವ ಮಟ್ಟದ ಆವಶ್ಯಕತೆ ಇದೆ? ಎಂಬ ಪ್ರಶ್ನೆಗೆ ರಝಾಕ್ ಹೀಗೆ ಉತ್ತರಿಸುತ್ತಾರೆ:
‘‘2013-14ರ ಮಾನ ಸಂಪನ್ಮೂಲ ಮತ್ತು ಕೌಶಲ್ಯ ಆವಶ್ಯಕತೆ ಕುರಿತ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ವರದಿಯ ಪ್ರಕಾರ, 2022ರ ವೇಳೆಗೆ ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ರಂಗದಲ್ಲಿ ದುಡಿಯುವ ಶ್ರಮಶಕ್ತಿ (ವರ್ಕ್ ಫೋರ್ಸ್)76 ಮಿಲಿಯ ಆಗಲಿದೆ. ಇವರಲ್ಲಿ 15 ಮತ್ತು 65 ವರ್ಷದ ನಡುವಣ ವಯೋಮಾನದ ಶೇ. 97 ಕೆಲಸಗಾರರು, ಅವರು ಕೆಲಸ ಮಾಡಲು ಆರಂಭಿಸುವ ಮೊದಲು, ಯಾವುದೇ ತರಬೇತಿ ಪಡೆದಿರುವುದಿಲ್ಲ. ಅಲ್ಲದೆ, 2015ರಲ್ಲಿ ಹೌಸಿಂಗ್ ಡಾಟ್‌ಕಾಮ್ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಭಾರತದ ಶ್ರಮಶಕ್ತಿಯ ಶೇ. 4 ಮಾತ್ರ ತರಬೇತಿ ಪಡೆದ, ಸ್ಕಿಲ್ಡ್ ಸಿಬ್ಬಂದಿಯಾಗಿದ್ದಾರೆ. ಈ ಪ್ರತಿಶತ ದಕ್ಷಿಣಕೊರಿಯಾದಲ್ಲಿ ಶೇ. 96 ಜಪಾನ್‌ನಲ್ಲಿ ಶೇ. 80, ಜರ್ಮನಿಯಲ್ಲಿ ಶೇ. 74, ಬ್ರಿಟನ್‌ನಲ್ಲಿ ಶೇ. 68 ಮತ್ತು ಚೀನಾದಲ್ಲಿ ಶೇ. 45 ಇದೆ. ಒಂದು ಆರ್ಥಿಕ ಪವರ್‌ಹೌಸ್ ಆಗಲು ಬಯಸುವ ಭಾರತ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ.’’
ತರಬೇತಿಯ ಸದ್ಯದ ಮುಖ್ಯ ಕಾಳಜಿ
‘‘ತರಬೇತಿ ಕೇಂದ್ರದ ಮುಖ್ಯ ಕಾಳಜಿ, ಕೌಶಲ್ಯಗಳನ್ನು ಕಲಿಸುವ ಮೂಲಕ ಜನರಿಗೆ ತರಬೇತಿ ನೀಡುವುದು. ಉಚಿತ ಸೌಲಭ್ಯಗಳಿಂದ ಜನ ಸೋಮಾರಿಗಳಾಗುತ್ತಾರೆ. ಆದ್ದರಿಂದ ಸರಕಾರವು ಶಾಲೆಗಳಿಂದ ಹೊರಬರುವ ಯುವ ಜನತೆಗೆ ವೃತ್ತಿ ತರಬೇತಿ ನೀಡಬೇಕು. ನಮ್ಮ ಆವಶ್ಯಕತೆಗಿಂತ ಹೆಚ್ಚು ಮಂದಿಗೆ ತರಬೇತಿ ನೀಡಿದರೂ ಸಮಸ್ಯೆಯಿಲ್ಲ. ನಮ್ಮ ಸುತ್ತಮುತ್ತ ಇರುವ ದೇಶಗಳಲ್ಲಿ ಇಂತಹ ತರಬೇತಿ ಪಡೆದವರಿಗೆ ಅಪಾರ ಬೇಡಿಕೆಯಿದೆ.’’
‘‘ಸಬಲೀಕರಣದ ಉಪಕರಣಗಳಾಗಿ ಯುವಪಡೆಗೆ ಅಗತ್ಯವಿರುವ ಮೂರು ವಿಷಯಗಳೆಂದರೆ ಶಿಕ್ಷಣ, ನೌಕರಿ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲಕರವಾದ ಒಂದು ಪರಿಸರ. ಆದ್ದರಿಂದ ಇಂತಹ ತರಬೇತಿ ನೀಡುವ ಕೇಂದ್ರಗಳನ್ನು ಕೊಚ್ಚಿ, ಹೈದರಾಬಾದ್ ಮತ್ತು ಚೆನ್ನೈಯಲ್ಲಿ ಸ್ಥಾಪಿಸುವ ಯೋಚನೆ ಮತ್ತು ಯೋಜನೆ ಪ್ರಿಸ್ಟೀಜ್ ಗ್ರೂಪ್‌ಗೆ ಇದೆ’’ ಎನ್ನುತ್ತಾರೆ ಇರ್ಫಾನ್ ರಝಾಕ್.