‘ಅಮೃತ’ರಿಗೊಲಿದ ಭಾಷಾ ಸಮ್ಮಾನ್

Update: 2017-09-15 18:36 GMT

1985ರಿಂದ ಆರಂಭಿಸಿ, 2013ರ ವರೆಗಿನ 29 ವರ್ಷಗಳಲ್ಲಿ ಒಟ್ಟು 32 ಪ್ರಶಸ್ತಿಗಳು ಅವರನ್ನಲಂಕರಿಸಿವೆ. ಕೆಲವನ್ನಷ್ಟೇ ಇಲ್ಲಿ ಹೆಸರಿಸುವುದಾದರೆ, ಮಣಿಪಾಲ ಅಕಾಡಮಿಯ ಫೆಲೋಶಿಪ್, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ, ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ, ತುಳು ಅಕಾಡಮಿ, ಕರ್ನಾಟಕ ರಾಜ್ಯೋತ್ಸವ , ಆಕಾಶವಾಣಿ, ಆಳ್ವಾಸ್ ನುಡಿಸಿರಿ, ಕರ್ನಾಟಕ ಶ್ರೀ, ಸಂಸ್ಕಾರ ಭಾರತಿ ಪ್ರಶಸ್ತಿ, ಕು.ಶಿ. ಹರಿದಾಸ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಕುಕ್ಕಿಲ, ಕರ್ಕಿ, ನಿರಂಜನ, ವಿಶು ಕುಮಾರ್ ಪ್ರಶಸ್ತಿ, ಡಾ. ಕಾರಂತ ಗೌರವ ಪುರಸ್ಕಾರ, ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್, ಎಮಿನೆಂಟ್ ಅಲೋಶಿಯನ್ ಹಾಗೂ ಇನ್ನೂ ಹಲವು ಪ್ರಶಸ್ತಿಗಳಿಂದ ಅವರು ಅಲಂಕೃತರಾಗಿದ್ದಾರೆ ಇದೀಗ ಕೇಂದ್ರ ಸಾಹಿತ್ಯ ಅಕಾಡಮಿ, ಭಾಷಾ ಸಮ್ಮಾನ್ ಪ್ರಶಸ್ತಿಯನ್ನಿತ್ತು ಗೌರವಿಸಿದೆ.

ಮೃತ ಸೋಮೇಶ್ವರರ ನುಡಿಯನ್ನು ನಾನು ಪ್ರಥಮ ಬಾರಿಗೆ ಆಲಿಸಿದ್ದು, ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ಮುಂಬೈಯ ವೈ.ಎಮ್.ಬಿ.ಎ. ವಾರ್ಷಿಕ ಸಮಾರಂಭದಲ್ಲಿ. ಅಂದು ಅತಿಥಿಯಾಗಿ ಆಗಮಿಸಿ ಸಭೆಯನ್ನುದ್ದೇಶಿಸಿ ಸುಲಲಿತವಾಗಿ, ಮನಃಸ್ಪರ್ಶಿಯಾಗಿ, ಮೆಲುಮಾತಿನಲ್ಲಿ ಮಾತನಾಡಿದ ವಾಗ್ಝರಿಗೆ, ಅವರ ಉದಾತ್ತ ವಿಚಾರಗಳಿಗೆ ನಾನು ಅಂದೇ ಮಾರು ಹೋಗಿದ್ದೆ. ಹಿರಿಜೀವ ಅಮೃತ ಸೋಮೇಶ್ವರರು ಮೆಲು ಮಾತಿನ ಸಹೃದಯಿ! ಜಾನಪದ, ಯಕ್ಷಗಾನ, ಕಥೆ, ಕವನ, ವಿನೋದ ಬರಹ, ವಿಮರ್ಶೆ, ಸಂಶೋಧನೆ, ವೈಚಾರಿಕ ಲೇಖನಗಳಿಂದ ನಮ್ಮ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಸಿರಿವಂತರಾಗಿಸಿದ ಅಮೃತ ಚೇತನ! ಅಪೂರ್ವ ಕಲಾನಿಧಿ!

ವಿದ್ವಜ್ಜನಪ್ರಿಯರಾದ ಸುಜ್ಞಾನಿ!

ಸೋಮೇಶ್ವರದ ಅಡ್ಕ ಪ್ರದೇಶದ ಮನೆಯಲ್ಲಿ 1935ರ ಸೆಪ್ಟಂಬರ್ 22ರಂದು ಅಮೃತರ ಜನನ. ತಂದೆ ಚಿರಿಯಂಡ; ತಾಯಿ ಅಮಣಿ. ವರ್ಷದ ಮಗುವಾಗಿದ್ದಾಗ, ಆಡುತ್ತಾ ಬಂದು, ಕುದಿವ ಎಣ್ಣೆಯ ಭಾಂಡಲಿಗೆ ಬಿದ್ದು, ಮೈಯೆಲ್ಲ ಬೆಂದು ಹೋದ ದಾರುಣಾವಸ್ಥೆಯಲ್ಲಿದ್ದ ಮಗು ಉಳಿದು ಕೊಂಡಿದ್ದು, ಸೋದರತ್ತೆಯ ಮುಚ್ಚಟೆಯ ಆರೈಕೆಯಿಂದ; ಊರ ನಾಟಿವೈದ್ಯರಾದ ಬಾಬು ಪಂಡಿತರ ಔಷಧೋಪಚಾರದಿಂದ. ಮತ್ತೆ ಮುಂಡಿಯ ಎಲೆಯ ಮೇಲೆ ಮಗುವನ್ನು ಮಲಗಿಸಿ ತಿಂಗಳುಗಟ್ಟಲೆ ಆರೈಕೆ ಮಾಡಿ, ಮಗು ಉಳಿದು ಕೊಂಡಿದ್ದು, ಮುಂದೆ ಬಾಳಲ್ಲಿ ಈ ಔನ್ನತ್ಯ, ಯಶಸ್ಸು, ಸತ್ಕೀರ್ತಿಯೆಡೆಗೆ ಸಾಗಲೆಂದೇ, ಅಲ್ಲವೇ?

ಮುಂಬೈಯಲ್ಲಿ ಜರ್ಮನ್ ಕಂಪೆನಿ ಯೊಂದರಲ್ಲಿ ಜರ್ಮನ್ ಅಧಿಕಾರಿಯ ವಾಹನ ಚಾಲಕರಾಗಿದ್ದ ತಂದೆಯವರ ಜೊತೆಗೆ, ಪ್ರಾರ್ಥನಾ ಸಮಾಜ ವಠಾರದಲ್ಲಿ ಶೈಶವದ ನಾಲ್ಕು ವರ್ಷಗಳನ್ನು ಕಳೆದು, ಐದು ವರ್ಷವಾದಾಗ ಊರಿಗೆ ಮರಳಿತು ಆ ಸಂಸಾರ; ಅಕ್ಕ ಕಮಲಾ ಹಾಗೂ ತಮ್ಮ ಅಮೃತ, ಮನೆಯ ಸನಿಹದ ಸ್ಟೆಲ್ಲಾ ಮೇರೀಸ್ ಶಾಲೆ ಸೇರಿಕೊಂಡರು. ಆನಂದಾಶ್ರಮ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನೂ ಮುಗಿಸಿದ ಅಮೃತರು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜ್‌ನಲ್ಲಿ, ಬಿಎ ಮುಗಿಸಿ ಪದವಿ ಪಡೆದರು. ಹಾಗೂ ಕನ್ನಡದಲ್ಲಿ ಸರ್ವಪ್ರಥಮರಾಗಿ ಸುವರ್ಣ ಪದಕ ಗಳಿಸಿದರು. ಪದವಿ ತರಗತಿಯಲ್ಲಿದ್ದಾಗಲೇ ಅವರ ‘ಎಲೆಗಿಳಿ’ ಕಥಾಸಂಕಲನ ಪ್ರಕಟವಾಯಿತು. ಅಲ್ಲಿ ಗುರುಗಳಾಗಿದ್ದ ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರು, ಬಿವಿ ಕೆದಿಲಾಯರು, ಸೇಡಿಯಾಪು ಕೃಷ್ಣ ಭಟ್ಟರು ಅವರ ಮೇಲೆ ಬೀರಿದ ಪ್ರಭಾವ ಬಹಳ. ಉದ್ಯೋಗಾ ರ್ಥಿಯಾಗಿ ಅಲ್ಲೇ ಟ್ಯೂಟರ್ ಆಗಿ ನಿಯುಕ್ತರಾದ ಅಮೃತರು ಏಳು ವರ್ಷಗಳನ್ನು ಅದೇ ವೃತ್ತಿಯಲ್ಲಿ ಅಲ್ಲಿ ಕಳೆದರು. ಕಾಲೇಜಿನ ಗ್ರಂಥ ಭಂಡಾರದ ಪ್ರಯೋಜನವನ್ನೂ ಚೆನ್ನಾಗಿಯೇ ಪಡೆದು ಕೊಂಡರು. 1956ರಲ್ಲಿ ಅವರ ಪ್ರಥಮ ಕವನ ಸಂಕಲನ ‘ವನಮಾಲೆ’ ಪ್ರಕಟವಾಯ್ತು 1961ರಲ್ಲಿ ಅವರ ತುಳು ಪಾಡ್ದನದ ಕಥೆಗಳು ಹಸ್ತಪ್ರತಿಗೆ ನವಸಾಕ್ಷರರಿಗೆ ಸಾಹಿತ್ಯ ಮಾಲಿಕೆಯಡಿ ಕೇಂದ್ರ ವಿದ್ಯಾಖಾತೆಯ ಬಹುಮಾನ ಲಭಿಸಿತು 1961ರ ನವೆಂಬರ್‌ನಲ್ಲಿ ಉಚ್ಚಿಲದ ನರ್ಮದಾ ಅವರು ಅಮೃತರ ಬಾಳ ಸಂಗಾತಿಯಾಗಿ ಬಂದರು. ಪುತ್ತೂರಲ್ಲಿ ಕಾಲೇಜ್ ಅಧ್ಯಾಪಕನಾಗಿದ್ದ ತನಗೆ, ವಾರಾಂತ್ಯದ ಒಂದು ದಿನ ಮಾತ್ರ ಮಂಗಳೂರಲ್ಲಿ ಶಿಕ್ಷಕಿಯಾಗಿದ್ದ ಪತ್ನಿ ದರ್ಶನವಾಗುತ್ತಿದ್ದರಿಂದ ಆ ದಿನಗಳ ತಮ್ಮ ದಾಂಪತ್ಯವನ್ನು ‘ಸತೀಸಪ್ತಮಿ’ ಎಂದು ತಮಾಷೆಯಾಗಿ ಅಮೃತರು ಕರೆದು ಕೊಂಡಿದ್ದಾರೆ ಕಾಲೇಜುಗಳಲ್ಲಿ ಟ್ಯೂಟರ್ ಪದವಿಯೇ ರದ್ದು ಗೊಳಿಸಲ್ಪಟ್ಟಾಗ, ಪುತ್ತೂರಿನ ಸೈಂಟ್ ಫಿಲೊಮಿನಾ ಕಾಲೇಜ್‌ನಲ್ಲಿ ಉಪನ್ಯಾಸಕ ಹುದ್ದೆ ಅವರಿಗೆ ದೊರಕಿತು. ಅಲ್ಲಿದ್ದ ಎರಡು ವರ್ಷಗಳ ಅವಧಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಪರೀಕ್ಷೆಗಾಗಿ ತಯಾರಿ ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂದೆ ವಿವೇಕಾನಂದ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯ ವರೆಗೆ ಸೇವೆ ಸಲ್ಲಿಸಿದರು. ತಮ್ಮ ಆಸಕ್ತಿಯ ವಿಷಯವಾದ ಯಕ್ಷಗಾನದ ವಿಚಾರದಲ್ಲಿ ಚಿಂತನೆ, ಪ್ರಯೋಗ, ಪ್ರದರ್ಶನ ಮಾಡಲು ವಿಫುಲ ಅವಕಾಶ ಅವರಿಗಲ್ಲಿ ಪ್ರಾಪ್ತವಾಯಿತು. ಇಲ್ಲಿದ್ದಾಗ ಕಾಲೇಜ್ ವಾರ್ಷಿಕೋತ್ಸವಕ್ಕಾಗಿ ತುಳು ನಾಟಕಗಳನ್ನೂ ಬರೆದ ಅಮೃತರು, ಪ್ರಾಂಶುಪಾಲರ ಪ್ರೋತ್ಸಾಹದಿಂದ ಡಾ. ತಾಳ್ತಜೆ ವಸಂತ ಕುಮಾರರೊಡನೆ, ಇಲ್ಲಿ ಕನ್ನಡ ಸಂಘವನ್ನೂ ಆರಂಭಿಸಿದರು. ವಿದ್ಯಾರ್ಥಿಗಳ ಕಥಾಸಂಕಲನ, ಕವನ ಸಂಕಲನಗಳನ್ನು ಪ್ರಕಟಿಸಿದ ಕನ್ನಡ ಸಂಘದಿಂದ ಅಮೃತರ ಲೇಖನ ಸಂಕಲನ ‘ಅವಿಲು’ ಕೂಡ ಬೆಳಕು ಕಂಡಿತು. ಸಂಘದಿಂದ ನಡೆದ ಪಂಜೆ ಶತಮಾನೋತ್ಸವ, ಗೋವಿಂದ ಪೈ ಶತಮಾನ ಸಂಸ್ಮರಣೆ, ಸೇಡಿಯಾಪು, ಬಡೆಕ್ಕಿಲ, ಪರಮೇಶ್ವರ ಭಟ್ಟರಂತಹವರಿಗೆ ಸಂದ ಸನ್ಮಾನ ಸಮಾರಂಭಗಳನ್ನು ಅಮೃತರು ಸ್ಮರಿಸಿಕೊಂಡಿದ್ದಾರೆ. ತಮ್ಮ ಬರವಣಿಗೆಯ ಬಹುಪಾಲು ಇದೇ ಅವಧಿಯಲ್ಲಿ ಹೊರ ಬಂದಿತೆಂದೂ ಅವರಂದಿದ್ದಾರೆ. ನಿವೃತ್ತಿಯ ಬಳಿಕ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯತ್ವ, ಮಂಗಳೂರು ವಿಶ್ವವಿದ್ಯಾನಿಲಯದ ಅಕಡಮಿಕ್ ಕೌನ್ಸಿಲ್‌ನ ಸದಸ್ಯತ್ವ ಅವರನ್ನು ಅರಸಿ ಬಂದವು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕನಾಗಿ ಬರುವಂತೆ ಕರೆಯೂ ಬಂದಿತು. ಕೆಲ ಕಾಲ ತುಳು ಅಕಾಡಮಿಯ ಸದಸ್ಯನಾಗಿಯೂ ಅವರು ಹೊಣೆ ನಿರ್ವಹಿಸಿದ್ದಾರೆೆ. ಅಮೃತ ರಚನೆಗಳು ವೈವಿಧ್ಯಮಯವಾಗಿ ಸಂಖ್ಯಾ ಬಾಹುಳ್ಯದಲ್ಲೂ ಅಪಾರವಾಗಿವೆ. ನಾಲ್ಕು ಕಥಾ ಸಂಗ್ರಹಗಳು, ನಾಲ್ಕು ಕವನ ಸಂಗ್ರಹಗಳು, ಕಾದಂಬರಿ, ರೇಡಿಯೋ ರೂಪಕ, ನಾಟಕ, ನೃತ್ಯರೂಪಕಗಳು, ವ್ಯಕ್ತಿಚಿತ್ರ, ಸಂಪಾದಿತ ಕೃತಿಗಳು, ಯಕ್ಷಗಾನ ಕೃತಿ ಸಂಪುಟದಲ್ಲಿ ಅಡಕವಾಗಿರುವ ಹಲವು ಪ್ರಸಂಗಗಳು ಹಾಗೂ ಇತರ ಬಿಡಿ ಪ್ರಸಂಗಗಳು, ತುಳು ಪಾಡ್ದನದ ಕಥೆಗಳು, ತುಳು ಜಾನಪದ ಸಂಬಂಧಿತ ಅಧ್ಯಯನ, ಸಂಶೋಧನೆಯ ಕೃತಿಗಳು, ವಿವಿಧ ಗ್ರಂಥಾಂತರ್ಗತ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಾಹಿತ್ಯ ಸಂಬಂಧ ಲೇಖನಗಳು, ಯಕ್ಷಗಾನ ವಿಚಾರ, ವಿಮರ್ಶೆ ಕೃತಿಗಳು ಹಾಗೂ ಲೇಖನಗಳು, ತುಳು ಕವನ ಸಂಗ್ರಹಗಳು, ಅನುವಾದಿತ ಕಾವ್ಯ, ತುಳು ನಾಟಕಗಳು, ಅನುವಾದಿತ ತುಳು ನಾಟಕಗಳು, ನೃತ್ಯರೂಪಕಗಳು ಹಾಗೂ ರೇಡಿಯೊ ರೂಪಕಗಳು, ತುಳು, ಕನ್ನಡ ಧ್ವನಿ ಸುರುಳಿಗಳು - ಹೀಗೆ ಅಮೃತ ಸಾಹಿತ್ಯ ವಿಫುಲವಾಗಿ ಬೆಳೆದಿದೆ.

ನಾಡು, ನುಡಿಗಾಗಿ, ಕಲೆ, ಸಂಸ್ಕೃತಿಗಾಗಿ ಅಮೃತರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಹಾಗೂ ಅವರ ಕೃತಿಗಳಿಗಾಗಿ ಅವರಿಗೆ ಸಂದಿರುವ ಪ್ರಶಸ್ತಿ, ಗೌರವಗಳು ಹಲವು. ಅವರ ತುಳು ಪಾಡ್ದನ ಕಥೆಗಳಿಗೆ ಕೇಂದ್ರ ವಿದ್ಯಾ ಇಲಾಖೆಯಿಂದ, ಯಕ್ಷಗಾನ ಕೃತಿ ಸಂಪುಟಕ್ಕೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ‘ತುಳುನಾಡ ಕಲ್ಕುಡೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ, ‘ಭಗವತೀ ಆರಾಧನೆ’ಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ಮತ್ತು ‘ಅಪಾರ್ಥಿನೀ’ ಕೃತಿಗೆ ಆರ್ಯಭಟ ಪ್ರಶಸ್ತಿ ಸಂಸ್ಥೆಯಿಂದ ಪುಸ್ತಕ ಪುರಸ್ಕಾರ ಸಂದಿದೆ.

1985ರಿಂದ ಆರಂಭಿಸಿ, 2013ರ ವರೆಗಿನ 29 ವರ್ಷಗಳಲ್ಲಿ ಒಟ್ಟು 32 ಪ್ರಶಸ್ತಿಗಳು ಅವರನ್ನಲಂಕರಿಸಿವೆ. ಕೆಲವನ್ನಷ್ಟೇ ಇಲ್ಲಿ ಹೆಸರಿಸುವುದಾದರೆ, ಮಣಿಪಾಲ ಅಕಾಡಮಿಯ ಫೆಲೋಶಿಪ್, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ, ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ, ತುಳು ಅಕಾಡಮಿ, ಕರ್ನಾಟಕ ರಾಜ್ಯೋತ್ಸವ , ಆಕಾಶವಾಣಿ, ಆಳ್ವಾಸ್ ನುಡಿಸಿರಿ, ಕರ್ನಾಟಕ ಶ್ರೀ, ಸಂಸ್ಕಾರ ಭಾರತಿ ಪ್ರಶಸ್ತಿ, ಕು.ಶಿ.ಹರಿದಾಸ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಕುಕ್ಕಿಲ, ಕರ್ಕಿ, ನಿರಂಜನ, ವಿಶು ಕುಮಾರ್ ಪ್ರಶಸ್ತಿ, ಡಾ. ಕಾರಂತ ಗೌರವ ಪುರಸ್ಕಾರ, ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್, ಎಮಿನೆಂಟ್ ಅಲೋಶಿಯನ್ ಹಾಗೂ ಇನ್ನೂ ಹಲವು ಪ್ರಶಸ್ತಿಗಳಿಂದ ಅವರು ಅಲಂಕೃತರಾಗಿದ್ದಾರೆ

ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಸಮ್ಮೇಳನ, ಮುಂಬೈ ಯಕ್ಷಗಾನ ಸಮ್ಮೇಳನ, ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭ, ಹಾಗೂ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರ ಪಾಲಿಗೆ ಸಂದಿದೆ ಬಹರೈನ್ ಕನ್ನಡ ಸಂಘ, ದುಬೈ ತುಳು ಕೂಟ ಸೇರಿದಂತೆ ಹಲವಾರು ಸಂಘ, ಸಂಸ್ಥೆಗಳು ಅವರನ್ನು ಸನ್ಮಾನಿಸಿ ಕೃತಾರ್ಥವಾಗಿವೆ.

ಸಾರ್ಥಕ ಬದುಕಿನಿಂದ ಜ್ಞಾನಜ್ಯೋತಿಯನ್ನು ಬೆಳಗಿದ ಅಮೃತ ಸೋಮೇಶ್ವರರನ್ನು ಕೇಂದ್ರ ಸಾಹಿತ್ಯ ಅಕಾಡಮಿ, ಇದೀಗ ಭಾಷಾ ಸಮ್ಮಾನ್ ಪ್ರಶಸ್ತಿಯನ್ನಿತ್ತು ಗೌರವಿಸಿದೆ.

Writer - ಶ್ಯಾಮಲಾ ಮಾಧವ

contributor

Editor - ಶ್ಯಾಮಲಾ ಮಾಧವ

contributor

Similar News

ಜಗದಗಲ
ಜಗ ದಗಲ