ಡೋಕಾಲಾ ಬಿಕ್ಕಟ್ಟು ಮತ್ತು ಬ್ರಿಕ್ಸ್ ಘೋಷಣೆಗಳ ಹಿಂದಿನ ಅಸಲಿಯತ್ತೇನು?

Update: 2017-09-16 18:16 GMT

ಗೋಬೆಲ್ಸ್ ಮಾದರಿಯಲ್ಲಿ ಕಾರ್ಯಾಚರಿಸುತ್ತಿರುವ ಮೋದಿ ಸರಕಾರದ (ಅಪ)ಪ್ರಚಾರ ಯಂತ್ರ ಅನೇಕ ಸ್ತುತಿಪಾಠಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಸತ್ಯಗಳು, ಅರ್ಧಸತ್ಯಗಳು, ಉತ್ಪ್ರೇಕ್ಷಿತ ವರದಿಗಳು ಮತ್ತು ಕೊಂಡಾಟಗಳನ್ನು ಜನರಿಗೆ ಉಣಬಡಿಸುತ್ತಿವೆ. ಕೃಷಿ ವಿಮೆ, ವಿದೇಶ ನೀತಿ, ನೋಟು ನಿಷೇಧ, ನಿರುದ್ಯೋಗ, ಬಂಡವಾಳ ಹೂಡಿಕೆ, ಜಿಎಸ್‌ಟಿ ಮುಂತಾದ ಹಲವು ರಂಗಗಳಲ್ಲಾಗಿರುವ ವೈಫಲ್ಯಗಳನ್ನು ಅರುಹುವ ವಾಸ್ತವಾಂಶಗಳನ್ನು ಅದು ಮುಚ್ಚಿಡುತ್ತಿದೆ. ಇಂತಹ ಅವಾಸ್ತವಿಕ ವರದಿಗಳ ಪಟ್ಟಿಗೆ ಇತ್ತೀಚಿನ ಎರಡು ಸೇರ್ಪಡೆಗಳೆಂದರೆ ಡೋಕಾಲಾ ಬಿಕ್ಕಟ್ಟು ಮತ್ತು ಬ್ರಿಕ್ಸ್ ಘೋಷಣೆ.

ಡೋಕಾಲಾ ಬಿಕ್ಕಟ್ಟು

ಜೂನ್ 16ರಂದು ಪ್ರಾರಂಭವಾದ ಚೀನಾ ಜೊತೆಗಿನ ಡೋಕಾಲಾ ಸಂಘರ್ಷ ಸುಮಾರು 70 ದಿನಗಳ ಕಾಲ ಮುಂದುವರಿದ ನಂತರ ಮೊನ್ನೆ ಆಗಸ್ಟ್ 28ರಂದು ಸುಖಾಂತ್ಯಗೊಂಡಾಗ ದೇಶದ ಪ್ರಜೆಗಳು ನಿರಾತಂಕವಾಗಿ, ನಿರಾಳವಾಗಿ ಉಸಿರಾಡತೊಡಗಿದರು. ಇತ್ತ ಭಟ್ಟಂಗಿ ಪತ್ರಿಕೆಗಳು ಮತ್ತು ಟಿವಿ ಚಾನಲ್‌ಗಳು ಇದನ್ನು ಭಾರತದ ಗೆಲುವೆಂದು ಸಾರಿ ವಾಸ್ತವಾಂಶಗಳನ್ನು ತಮ್ಮ ಓದುಗರಿಂದ ಮರೆಮಾಚಿವೆ. ಆದುದರಿಂದ ನಿಜಕ್ಕೂ ಬಿಕ್ಕಟ್ಟಿಗೆ ಕಾರಣವೇನು, ಅದು ಬಗೆಹರಿದುದು ಹೇಗೆ, ಏನೇನು ಒಪ್ಪಂದ ಏರ್ಪಟ್ಟಿತು ಎಂಬುದನ್ನು ಸಾಮಾನ್ಯ ಜನರು ತಿಳಿದುಕೊಳ್ಳುವ ಅಗತ್ಯವಿದೆ. ವಾಸ್ತವ ಏನೆಂದರೆ ಚೀನಾ ನಮ್ಮ ಐವತ್ತಾರಿಂಚಿನೆದೆಗೆ ಬೆದರಿ ಹಿಂದೆ ಸರಿದುದಲ್ಲ. ಸಂಘರ್ಷ ಇನ್ನಷ್ಟು ತೀವ್ರರೂಪಕ್ಕೆ ತಿರುಗಿ ಯುದ್ಧದಲ್ಲಿ ಪರ್ಯವಸಾನ ಆಗದಂತಿರಲು, ಸಾಮಾನ್ಯ ರಾಜತಾಂತ್ರಿಕ ಸಂಬಂಧಗಳು ಪುನಾರಂಭಗೊಳ್ಳಲು ಚೀನಾ ವಿಧಿಸಿದ ಷರತ್ತಿಗೆ ಒಪ್ಪಿದ ಭಾರತವೇ ಮೊದಲು ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ.

ಬಿಕ್ಕಟ್ಟಿನ ಹಿನ್ನೆಲೆ

ಚೀನಾ ಮತ್ತು ಭೂತಾನ್ ನಡುವಿನ ವಿವಾದಿತ ಪ್ರದೇಶವಾದ ಡೋಕಾಲಾ ಪೀಠಭೂಮಿ ತನಗೆ ಸೇರಿದ್ದೆಂಬುದು ಚೀನಾದ ವಾದ. ಇದೇ ಜೂನ್‌ನಲ್ಲಿ ಚೀನಾದ ಸೇನಾ ತುಕಡಿಯೊಂದು ವಿವಾದಿತ ಜಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ ಎಂಬ ಮಾಹಿತಿ ಬಂದಾಕ್ಷಣ ಭೂತಾನಗೆ ಬೆಂಬಲವಾಗಿ ನಿಂತ ಮೋದಿ ಸರಕಾರ ಹಿಂದೆಮುಂದೆ ನೋಡದೆ ಸುಮಾರು 350-400 ಭಾರತೀಯ ಸೈನಿಕರನ್ನು ಡೋಕಾಲಾಗೆ ಕಳುಹಿಸಿದೆ. ಈ ರೀತಿ ವಿವಾದವನ್ನು ಸೇನಾಬಲದ ಮೂಲಕ ಬಗೆಹರಿಸಲು ಪ್ರಯತ್ನಿಸಿದೆ. ಬಿಕ್ಕಟ್ಟಿನ ಪರಿಹಾರಕ್ಕಾಗಿ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸುವ ಬಗ್ಗೆ ಭೂತಾನ್ ಜೊತೆ ಚರ್ಚಿಸಲಾಗಿತ್ತೇ, ಇಲ್ಲವೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿಲ್ಲ. ಬದಲು ಭಾರತೀಯ ಸೈನಿಕರನ್ನು ನಿಯೋಜಿಸುವುದೇ ಏಕೈಕ ಆಯ್ಕೆ ಎಂಬಂತೆ ಬಿಂಬಿಸಲಾಯಿತು. ಇಲ್ಲಿ ದೊಡ್ಡ ವಿಪರ್ಯಾಸವೆಂದರೆ ನೆಹರೂ ಹೆಸರೆತ್ತಿದರೆ ಮೋರೆ ಸಿಂಡರಿಸುವ, ಭಾರತದ ಇತಿಹಾಸದಿಂದ ನೆಹರೂ ಹೆಸರನ್ನೆ ಅಳಿಸಲು ಹೊರಟಿರುವ ಮೋದಿ 1962ರ ಯುದ್ಧಕ್ಕೆ ದೇಶವನ್ನು ತಳ್ಳಿದ ನೆಹರೂರಂತೆಯೇ ವರ್ತಿಸಿರುವುದು! ಅಂದು ಸಂಘಿಗಳಂತೂ ಚೀನಾದೊಂದಿಗೆ ‘ಕದನವಿರಾಮ ಬೇಡವೇ ಬೇಡ, ಬೇಕೇ ಬೇಕು ಯುದ್ಧ’ ಎಂದು ಬೊಬ್ಬಿರಿದಿದ್ದರು!

ಇಂತಹ ಪರಿಸ್ಥಿತಿಯಲ್ಲಿ ಚೀನಾದ ಪ್ರತಿಕ್ರಿಯೆ ಸ್ವಾಭಾವಿಕವಾಗಿತ್ತು. ಡೋಕಾಲಾದಲ್ಲಿ ಭಾರತದ ಪಡೆಗಳು ತನ್ನ ಪ್ರದೇಶದೊಳಕ್ಕೆ ಅತಿಕ್ರಮಣ ಮಾಡಿವೆ ಎಂದು ಚೀನಾ ಆಪಾದಿಸಿತು. ಗಮನಾರ್ಹವಾಗಿ ಭಾರತ ತನ್ನ ಪಡೆಗಳು ವಿವಾದಿತ ಪ್ರದೇಶದಲ್ಲಿ ಇರುವುದನ್ನು ನಿರಾಕರಿಸಲಿಲ್ಲ. ಕೆಲವು ಹೊಗಳುಭಟ ಪತ್ರಿಕೆ, ಚಾನಲ್‌ಗಳಂತೂ ಇನ್ನೇನು ಭಾರತ ಚೀನಾ ಯುದ್ಧ ನಡೆದೇ ಹೋಗಲಿದೆ ಎಂಬಂತೆ ಬಿಂಬಿಸತೊಡಗಿದವು. ಅವುಗಳ ಸ್ವಘೋಷಿತ, ಆಸ್ಥಾನತಜ್ಞರು ಉಭಯ ದೇಶಗಳ ಬಲಾಬಲಗಳನ್ನು ಹೋಲಿಸುತ್ತಾ ಯುದ್ಧವೇ ಪರಿಹಾರ ಎಂದು ನಂಬಿಸಲು ಯತ್ನಿಸಿದರು. ಚರ್ಚೆ ಹೆಸರಿನಲ್ಲಿ ಆಗುವ ನಿಲುವು ಬಿತ್ತನೆ, ಗದ್ದಲ, ಕೆಸರೆರಚಾಟ ಕಾರ್ಯಕ್ರಮಗಳು ಎಡೆಬಿಡದೆ ನಡೆದವು! ಏತನ್ಮಧ್ಯೆ ಸುಮಾರು 70 ದಿನಗಳ ಸಂಘರ್ಷದ ಅವಧಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಪರಸ್ಪರ ಕಲ್ಲು ತೂರಾಟ ಮಾತ್ರ ಯಾಕೆ ಮಾಡಿದರು, ನಮ್ಮ ಸೇನೆ ಯಾಕೆ ಯಾವುದೇ ‘ಸರ್ಜಿಕಲ್ ದಾಳಿ’ ನಡೆಸಲಿಲ್ಲ ಎಂಬ ಪ್ರಶ್ನೆಯನ್ನು ಯಾವ ಭಕ್ತನೂ ಕೇಳದಿರುವುದು ಆಶ್ಚರ್ಯಕರವಾಗಿದೆ!

ನಿಜಕ್ಕೂ ನಡೆದುದೇನು?

ಭದ್ರತಾ ವ್ಯವಸ್ಥೆಯ ಕೆಲವು ಮೂಲಗಳ ಮೂಲಕ ತಿಳಿದುಬಂದಿರುವಂತೆ ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಚೀನೀಯರ ರಸ್ತೆ ಕಾಮಗಾರಿ ಕಾರಣವಲ್ಲ. ಅಲ್ಲಿ ರಸ್ತೆ ಈಗಾಗಲೇ ಇದೆ ಮತ್ತು ಅದು ಕನಿಷ್ಠ 12 ವರ್ಷಗಳಷ್ಟು ಹಳೆಯದು. ವಿವಾದಿತ ಪ್ರದೇಶದಲ್ಲಿ ಭಾರತೀಯ ಸೇನೆ ಲಾಗಾಯ್ತಿನಿಂದ ಗಸ್ತು ನಡೆಸುತ್ತಾ ಬಂದಿದೆ. ಅಲ್ಲಿ ಕೆಲವು ಸ್ವಸಹಾಯ ಬಂಕರುಗಳನ್ನು ನಿರ್ಮಿಸಿದೆ. ಆದರೆ ಈ ಬಂಕರುಗಳಲ್ಲಿ ಸೈನಿಕರು ಯಾವಾಗಲೂ ಇರುವುದಿಲ್ಲ. ಇವುಗಳ ಪೈಕಿ ಎರಡು ನಿರ್ದಿಷ್ಟ ಬಂಕರುಗಳು ತನ್ನದೆನ್ನಲಾದ ಗಡಿಯೊಳಗೆ ಇವೆ ಎಂದಿರುವ ಚೀನಾ ಮೊದಲಿನಿಂದಲೂ ಅವುಗಳ ನಿರ್ಮಾಣಕ್ಕೆ ಆಕ್ಷೇಪಿಸಿದೆ. ಚೀನೀ ಸೈನಿಕರು ಬುಲ್‌ಡೋಝರ್ ಬಳಸಿ ಆಗಾಗ ಅವುಗಳನ್ನು ನೆಲಸಮ ಮಾಡುತ್ತಿದ್ದರೆ ಭಾರತೀಯ ಸೇನೆ ಪುನಃ ಕಟ್ಟುತ್ತಿರುತ್ತದೆ. ಮೊನ್ನೆ ಜೂನ್‌ನಲ್ಲಿ ಭಾರತೀಯ ಸೈನಿಕರು ಇದೇ ಮೊದಲ ಬಾರಿಗೆ ಆ ಎರಡು ಬಂಕರುಗಳಿಗೆ ಪೇಂಟ್ ಬಳಿಯತೊಡಗಿದಾಗ ಚೀನೀಯರಿಗೆ ಸಂಶಯವಾಗತೊಡಗಿದೆ. ಭಾರತದ ಸೈನಿಕರು ಅಲ್ಲಿಂದ ಹೊರಟುಹೋದ ನಂತರ ಚೀನೀಯರು ಬುಲ್‌ಡೋಝರ್ ಬಳಸಿ ಬಂಕರುಗಳನ್ನು ಧ್ವಂಸಗೊಳಿಸಿದ್ದಾರೆ. ಈ ಸಮಾಚಾರ ದಿಲ್ಲಿ ವರೆಗೂ ತಲುಪಿ ಚೀನೀಯರು ಬುಲ್‌ಡೋಝರ್ ಬಳಸಿ ವಿವಾದಿತ ಜಾಗದಲ್ಲಿ ರಸ್ತೆ ನಿರ್ಮಿಸುತ್ತಿದ್ದಾರೆಂಬ ವದಂತಿ ಹಬ್ಬಿದೆ. ನಂತರ ಏನೆಲ್ಲ ವಿದ್ಯಮಾನಗಳು ನಡೆದವೆಂಬುದು ನಮಗೆ ಗೊತ್ತೇ ಇದೆ.

ಬಿಕ್ಕಟ್ಟು ಹೇಗೆ ಬಗೆಹರಿಯಿತು?

ನಿಜ ಸಂಗತಿ ಏನೆಂದರೆ ಯುದ್ಧ ತಪ್ಪಿಸಲು ಮತ್ತು ರಾಜತಾಂತ್ರಿಕ ಸಂಬಂಧ ಪುನಾರಂಭಿಸಲು ಚೀನಾ ವಿಧಿಸಿದ ಪೂರ್ವಭಾವಿ ಷರತ್ತುಗಳಿಗೆ ಭಾರತ ಒಪ್ಪಿದೆ. ಭಾರತದ ಒಪ್ಪಿಗೆಗೆ ಮತ್ತೂ ಒಂದು ಕಾರಣವೆಂದರೆ ಬ್ರಿಕ್ಸ್ (ಬ್ರೇಜಿಲ್, ರಷ್ಯಾ, ಇಂಡಿಯ, ಚೀನಾ, ದ. ಆಫ್ರಿಕಾ) ಶೃಂಗಸಭೆಯ ವೇಳೆ ಇಬ್ಬರೂ ಪ್ರಧಾನಮಂತ್ರಿಗಳ ವೈಯಕ್ತಿಕ ಭೇಟಿ ನಡೆಯಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಮೊದಲೆ ಗಡಿ ಸಂಘರ್ಷವನ್ನು ಕೊನೆಗಾಣಿಸುವ ಅನಿವಾರ್ಯತೆ. ಅದರಂತೆ ಸೈನಿಕರನ್ನು ವಾಪಸ್ ಕರೆದುಕೊಳ್ಳುವ ಘೋಷಣೆಯನ್ನು ಮೊದಲು ಮಾಡಿದ್ದೇ ಭಾರತ. ತದನಂತರ ಚೀನಾದ ಹೇಳಿಕೆ ಹೊರಬಿದ್ದಿದೆ. ಅಸಲಿಗೆ ಚೀನಾ ಕೇವಲ ಯುದ್ಧದ ಬೆದರಿಕೆಯನ್ನೊಡ್ಡಿ ರಾಜತಾಂತ್ರಿಕ ಪ್ರಕ್ರಿಯೆಗಳ ಮೂಲಕ ಭಾರತವನ್ನು ಸೋಲಿಸಿದೆ. ಪರಿಣಾಮವಾಗಿ ಆಗಸ್ಟ್ 28ರ ಪೂರ್ವಾಹ್ನ ಭಾರತೀಯ ಸೇನೆ ತನ್ನೆಲ್ಲಾ ಸೈನಿಕರು ಮತ್ತು ಯುದ್ಧ ಸಲಕರಣೆಗಳೊಂದಿಗೆ ಭಾರತದೊಳಕ್ಕೆ ಮರಳಿದರೆ ಚೀನಾದ ತುಕಡಿ ಅದೇ ದಿನ ಅಪರಾಹ್ನ ಹೋರಾಟದಿಂದ ಹಿಂದೆ ಸರಿದಿದೆೆ! ಚೀನಾದ ತುಕಡಿ 250 ಮೀಟರುಗಳಷ್ಟು ಹಿಂದಕ್ಕೆ ಸರಿದು ಜೂನ್ 16ಕ್ಕೆ ಮೊದಲು ಎಲ್ಲಿತ್ತೋ ಅಲ್ಲಿಗೆ ಮರಳಿದರೆ ಭಾರತೀಯ ಪಡೆಗಳು ವಿವಾದಿತ ಪ್ರದೇಶದಲ್ಲಿ ನಡೆಸುತ್ತಿದ್ದ ಗಸ್ತು ಕಾರ್ಯವನ್ನು ಸ್ಥಗಿತಗೊಳಿಸಬೇಕಾಯಿತು!

ಸಂಘರ್ಷ ಕೊನೆಗೊಂಡಾಗ ಹೆಚ್ಚಿನ ಮಾಧ್ಯಮಗಳು ಮೋದಿ ಸರಕಾರದ ಪ್ರಚಾರಯಂತ್ರ ಬಿತ್ತರಿಸಿದ ಮಾಹಿತಿಯನ್ನು ಹಾಗೇ ಯಥಾವತ್ತಾಗಿ ಪ್ರಕಟಿಸಿದವು. ಅದನ್ನು ಪ್ರಶ್ನಿಸುವ ಗೋಜಿಗೆ ಹೋಗದೆ ಮೋದಿ ಸರಕಾರದ ‘ವಿಜಯ’ವನ್ನು ಹಾಡಿ ಹೊಗಳಿದವು. ಇದು ಭಾರತದ ರಾಜತಾಂತ್ರಿಕ ಕಲೆಗೆ ಸಂದ ಜಯ, ಚೀನಾ ಮಣಿದು ಗೋಣು ಆಡಿಸಿತು ಎಂದು ಬಿಂಬಿಸಿದವು. ಚೀನಾದವರು ಇದನ್ನು ಗಮನಿಸದೇ ಇರುತ್ತಾರೆಯೆ! ಚೀನಾ ಸರಕಾರ ತಕ್ಷಣ ಪ್ರತಿಕ್ರಿಯಿಸಿ ಚೀನಾ ಯಾವುದೇ ರಿಯಾಯಿತಿಗಳಿಗೆ ಸಮ್ಮತಿಸಿಲ್ಲವೆಂದು ಸ್ಪಷ್ಟಪಡಿಸಿದೆ. ತನ್ನ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದಿರುವ ಚೀನಾ ಇದರರ್ಥ ಕಾಮಗಾರಿಯನ್ನು ಕೈಬಿಡಲಾಗಿದೆ ಎಂದಲ್ಲ, ಹವಾಮಾನ ಉತ್ತಮವಾದ ಬಳಿಕ ಮರಳಿ ಪ್ರಾರಂಭವಾಗಬಹುದು ಎಂದು ತಿಳಿಸಿದೆ. ಚೀನಾ ವಿದೇಶಾಂಗ ಕಚೇರಿಯ ಪ್ರತಿನಿಧಿಯ ಪ್ರಕಾರ ‘ಚೀನಾದ ಗಡಿ ಸಂರಕ್ಷಣಾ ಪಡೆಗಳು ಆ ಪ್ರದೇಶದಲ್ಲಿಯೇ ಇವೆ ಮತ್ತು ಗಸ್ತು ಕಾರ್ಯ ಮುಂದುವರಿಸಿವೆ’!

ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ಡೋಕಾಲಾ ಬಿಕ್ಕಟ್ಟಿನ ಅಂತ್ಯವನ್ನು ಸಾರುವ ತನ್ನ ಹೇಳಿಕೆಯಲ್ಲಿ ‘‘ನಮ್ಮೆರಡು ದೇಶಗಳ ನಡುವಿನ ಸಂಬಂಧಗಳ ಅಭಿವೃದ್ಧಿಯಾಗಬೇಕಿದ್ದರೆ ಮೊದಲು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಬೇಕೆಂಬ ನಂಬಿಕೆಯೆ ಭಾರತದ ನೀತಿಗೆ ಆಧಾರವಾಗಿದೆ. ಭಿನ್ನಾಭಿಪ್ರಾಯಗಳನ್ನು ಸಂಘರ್ಷವಾಗಿಸಲು ಬಿಡಬಾರದು’’ ಎಂದು ತಿಳಿಸಿದೆ. ಹಾಗಾದರೆ ಇಷ್ಟು ಬುದ್ಧಿ ಇದ್ದವರು ಮೊದಲೇ ಯಾಕೆ ರಾಜತಾಂತ್ರಿಕ ಮಾರ್ಗವನ್ನು ಬಳಸಲಿಲ್ಲ, ನೇರವಾಗಿ ಸೇನೆಯನ್ನು ಕಳುಹಿಸಿದ್ದೇಕೆ, ಆ ನಿರ್ಧಾರ ಯಾರದು, ಅದು ನಮ್ಮ ಐವತ್ತಾರಿಂಚಿನ ಛಾತಿಯನ್ನು ಭಕ್ತಜನರಿಗೂ ಸಾಮಾನ್ಯ ಜನರಿಗೂ ಪ್ರದರ್ಶಿಸುವ ಸಲುವಾಗಿತ್ತೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವವರಾರು?

ಬ್ರಿಕ್ಸ್ ಘೋಷಣೆ

ಸೆಪ್ಟಂಬರ್ 3-5, 2017ರ ಒಂಬತ್ತನೆ ಬ್ರಿಕ್ಸ್ ಶೃಂಗಸಭೆಯ ಘೋಷಣೆಯಲ್ಲಿ ಒಂದು ಪ್ಯಾರಾವನ್ನು ಭಯೋತ್ಪಾದನೆ ವಿಷಯಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ಪಾಕಿಸ್ತಾನಿ ನೆಲದಿಂದ ಕಾರ್ಯಾಚರಿಸುವ ಜೈಷೆ ಮುಹಮ್ಮದ್, ಲಷ್ಕರೆ ತಯ್ಯಿಬ ಸಂಘಟನೆಗಳನ್ನು ಭಯೋತ್ಪಾದಕ ಸಂಸ್ಥೆಗಳೆಂದು ನಿಸ್ಸಂದೇಹವಾಗಿ ಘೋಷಿಸಲಾಗಿದೆ. ಪರಿಣಾಮವಾಗಿ ಭಾರತ, ಚೀನಾ ನಡುವಿನ ಸಂಬಂಧಗಳಿಗೆ ಮುಳ್ಳಿನಂತಿದ್ದ ಅಂಶವೊಂದನ್ನು ತೆಗೆದುಹಾಕಿದಂತಾಗಿದೆ ಎಂದು ಮೋದಿ ಸರಕಾರದ ಪ್ರಚಾರಯಂತ್ರ ಹೇಳುತ್ತಿದೆ. ಮೋದಿ ಸರಕಾರದ ತುತ್ತೂರಿ ಮಾಧ್ಯಮಗಳಂತೂ ಬ್ರಿಕ್ಸ್ ಘೋಷಣೆ ಭಾರತಕ್ಕೆ ಸಂದ ಜಯ ಎಂದು ಬಿಂಬಿಸುತ್ತಿವೆ. ಬ್ರಿಕ್ಸ್ ಘೋಷಣೆಯನ್ನು ಪಾಕಿಸ್ತಾನದ ನೆಲದಲ್ಲಿರುವ ಗುಂಪುಗಳನ್ನು ರಕ್ಷಿಸುವ ಚೀನಾದ ನೀತಿಯಲ್ಲಿ ಪ್ರಮುಖ ಬದಲಾವಣೆ ಎಂದು ಹೊಗಳಲಾಗುತ್ತಿದೆ. ವಿಶ್ವ ಸಂಸ್ಥೆ ಮಸೂದ್ ಅಝರ್‌ನನ್ನು ಅಂತಾರಾಷ್ಟ್ರೀಯ ಉಗ್ರನೆಂದು ಘೋಷಿಸಲು ಭಾರತ ಮಾಡುತ್ತಿರುವ ಪ್ರಯತ್ನಗಳಿಗೆ ಇದು ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಚೀನಾ ಇದುವರೆಗೂ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂಬುದನ್ನು ನಾವು ಮರೆಯಬಾರದು. ಎರಡನೆಯದಾಗಿ ಚೀನಾ ಜೈಷೆ ಮುಹಮ್ಮದ್, ಲಷ್ಕರೆ ತಯ್ಯಿಬಗಳನ್ನು ಉಲ್ಲೇಖಿಸಿರುವುದು ಇದೇ ಮೊದಲ ಬಾರಿ ಅಲ್ಲ. ಮೂರನೆ ಅಂಶವೆಂದರೆ ಡಿಸೆಂಬರ್ 4, 2016ರಂದು ಅಮೃತಸರದಲ್ಲಿ ನಡೆದ ಆರನೆ ‘ಏಷಿಯಾದ ಹೃದಯ’ (Heart of Asia) ಸಮಾವೇಶದ ನಿರ್ಣಯದಲ್ಲಿ ಬಳಸಿದ ಭಾಷಾಶೈಲಿಯೂ ಬ್ರಿಕ್ಸ್ ಘೋಷಣೆಯ ಭಾಷಾಶೈಲಿಯೂ ಒಂದೇ ಆಗಿದೆ. ನಾಲ್ಕನೆಯದಾಗಿ, ಚೀನಾ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿ 16 ವರ್ಷಗಳು ಸಂದಿದ್ದರೆ ಲಷ್ಕರೆ ತಯ್ಯಿಬವನ್ನು ಹೆಸರಿಸಿ 10 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ! ವಿಷಯ ಅಲ್ಲಿಗೆ ನಿಂತಿದೆ, ಅದರಿಂದ ಒಂದು ಹೆಜ್ಜೆ ಕೂಡಾ ಮುಂದಕ್ಕೆ ಹೋಗಿಲ್ಲ!

ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ ಬ್ರಿಕ್ಸ್ ಘೋಷಣೆಯ ನಂತರ ಲಷ್ಕರ್, ಜೈಶ್ ಮತ್ತಿತರ ತೀವ್ರಗಾಮಿ ಗುಂಪುಗಳಲ್ಲಿ ಸದಸ್ಯರ ಸಂಖ್ಯೆ ಇಳಿಮುಖವಾಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗದು. ಜಮ್ಮು ಕಾಶ್ಮೀರದ ಉನ್ನತ ಪೊಲೀಸ್ ಅಧಿಕಾರಿಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬ್ರಿಕ್ಸ್ ಹೇಳಿಕೆಯಿಂದ ಕಾಶ್ಮೀರದ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಆಗದು ಎಂದು ಸೇನಾಧಿಕಾರಿಯೊಬ್ಬರು ಹೇಳುತ್ತಾರೆ. ಹೀಗಾಗಿ ಬ್ರಿಕ್ಸ್ ಘೋಷಣೆಯ ಉದ್ದೇಶ ಡೋಕಾಲಾ ಘಟನೆಯಲ್ಲಿ ಹಿಂದೆ ಸರಿಯಬೇಕಾಗಿ ಬಂದ ಭಾರತವನ್ನು ಸಮಾಧಾನಪಡಿಸುವುದಾಗಿತ್ತು ಎಂಬ ವರ್ತಮಾನವನ್ನು ತಳ್ಳಿಹಾಕಲು ಬರುವುದಿಲ್ಲ. ವಾಸ್ತವಾಂಶ ಹೀಗಿರುವಾಗ ಬ್ರಿಕ್ಸ್ ಘೋಷಣೆ ನಮ್ಮ ‘ಜಯ’ ಹೇಗಾಗುತ್ತದೆ?

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ