ಗೃಹಸಾಲಗಳಲ್ಲಿ ವಿವಿಧ ಆಯ್ಕೆಗಳು

Update: 2017-09-18 18:25 GMT

ಸರಕಾರಿ ಸ್ವಾಮ್ಯದ ಅಥವಾ ಖಾಸಗಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಿವಿಧ ಬಗೆಯ ಗೃಹಸಾಲಗಳನ್ನು ನೀಡುತ್ತಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಯಾವುದು ಸೂಕ್ತ ಎನ್ನುವುದನ್ನು ತಿಳಿದುಕೊಳ್ಳಲು ಈ ಸಾಲಗಳ ಬಗ್ಗೆ ಮಾಹಿತಿಯು ಅಗತ್ಯ.

ನಿವೇಶನ ಖರೀದಿ ಸಾಲ

ಮನೆ ನಿರ್ಮಾಣ ಮಾಡಲು ಗ್ರಾಹಕರು ನಿವೇಶನವನ್ನು ಖರೀದಿಸಲು ಬಯಸಿದ್ದರೆ ಅದಕ್ಕಾಗಿ ಬ್ಯಾಂಕುಗಳು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಿವೇಶನ ಖರೀದಿ ಸಾಲವನ್ನು ನೀಡುತ್ತವೆ. ಸಾಮಾನ್ಯವಾಗಿ ನಿವೇಶನದ ವೌಲ್ಯದ ಶೇ.80-85ರಷ್ಟು ಮೊತ್ತ ಸಾಲವಾಗಿ ದೊರೆಯುತ್ತದೆ.

ಗೃಹ ಖರೀದಿ ಸಾಲ

ಗೃಹ ಖರೀದಿ ಸಾಲವನ್ನು ಆಸ್ತಿ ಖರೀದಿಗೆ ಬಳಸಬಹುದು. ಮನೆಯ ಮಾರುಕಟ್ಟೆ ವೌಲ್ಯದ ಶೇ.80-85ರಷ್ಟು ಮೊತ್ತವನ್ನು ಸಾಲವಾಗಿ ಪಡೆಯಬಹುದಾಗಿದೆ. ಈ ಸಾಲದ ಮೇಲೆ ನಿಗದಿತ, ಚರ ಅಥವಾ ಮಿಶ್ರ ದರಗಳ ಬಡ್ಡಿಯನ್ನು ವಿಧಿಸಲಾಗುತ್ತದೆ.

ಗೃಹ ನಿರ್ಮಾಣ ಸಾಲ

ಗ್ರಾಹಕರು ತಮ್ಮ ಸ್ವಂತ ಅಥವಾ ಜಂಟಿ ಒಡೆತನದ ನಿವೇಶನದಲ್ಲಿ ಮನೆಯನ್ನು ನಿರ್ಮಿಸಲು ಬಯಸಿದರೆ ಅದಕ್ಕಾಗಿ ಗೃಹ ನಿರ್ಮಾಣ ಸಾಲವನ್ನು ಪಡೆಯಬಹುದಾಗಿದೆ. ಈ ಸಾಲದ ಅರ್ಜಿ ಮತ್ತು ಮಂಜೂರಾತಿ ಪ್ರಕ್ರಿಯೆಯು ಸಾಮಾನ್ಯವಾಗಿ ಲಭ್ಯವಿರುವ ಗೃಹಸಾಲಕ್ಕೆ ಹೋಲಿಸಿದರೆ ಕೊಂಚ ಭಿನ್ನವಾಗಿರುತ್ತದೆ. ನಿವೇಶನವು ಸಾಲಕ್ಕೆ ಅರ್ಜಿ ಸಲ್ಲಿಸಿದ ದಿನಾಂಕಕ್ಕಿಂತ ಹಿಂದಿನ ಒಂದು ವರ್ಷದೊಳಗೆ ಖರೀದಿಸಿದ್ದಾಗಿರಬೇಕು. ಅರ್ಜಿದಾರರು ಮನೆ ನಿರ್ಮಾಣಕ್ಕೆ ತಗಲುವ ಅಂದಾಜು ವೆಚ್ಚದ ವಿವರಗಳನ್ನು ಸಲ್ಲಿಸಬೇಕು. ಸಾಲದ ಮೊತ್ತವು ನಿವೇಶನದ ವೌಲ್ಯವನ್ನು ಒಳಗೊಂಡಿರದಿದ್ದರೆ ಮನೆ ನಿರ್ಮಾಣದ ಅಂದಾಜು ವೆಚ್ಚವನ್ನು ಮಾತ್ರ ಪರಿಗಣಿಸಲಾಗುತ್ತದೆ.

ಗೃಹ ವಿಸ್ತರಣೆ ಸಾಲ 

ತಮ್ಮ ಈಗಿರುವ ಮನೆಯನ್ನು ವಿಸ್ತರಿಸಲು ಬಯಸುವವರು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಗೃಹ ಸುಧಾರಣೆ ಸಾಲ

ಸ್ವಂತ ಮನೆಯನ್ನು ಹೊಂದಿದ್ದು, ಅದರ ನವೀಕರಣಕ್ಕಾಗಿ ಹಣದ ಅಗತ್ಯವಿರುವವರು ಈ ಸಾಲವನ್ನು ಉಪಯೋಗಿಸಿಕೊಳ್ಳಬಹುದು.ಹಾಲಿ ಮನೆಯ ದುರಸ್ತಿ, ಬಣ್ಣ, ಬೋರವೆಲ್ ನಿರ್ಮಾಣ, ವಾಟರ್‌ಪ್ರೂಫಿಂಗ್, ವಿದ್ಯುತ್ ವೈರಿಂಗ್ ಇತ್ಯಾದಿಗಳು ನವೀಕರಣದಲ್ಲಿ ಒಳಗೊಂಡಿರುತ್ತವೆ.

ಎನ್ನಾರೈ ಗೃಹಸಾಲ

ಇದು ಭಾರತದಲ್ಲಿ ಮನೆಗಳನ್ನು ಖರೀದಿಸಲು ಬಯಸುವ ಅನಿವಾಸಿ ಭಾರತೀಯರಿಗೆ ಹಣಕಾಸು ನೆರವನ್ನು ಒದಗಿಸಲು ವಿಶೇಷವಾಗಿ ರೂಪಿಸಲಾಗಿರುವ ಗೃಹಸಾಲವಾಗಿದೆ. ಈ ಸಾಲವು ಸಾಮಾನ್ಯ ಗೃಹಸಾಲದ ಸ್ವರೂಪವನ್ನೇ ಹೊಂದಿದೆಯಾದರೂ ಅರ್ಜಿಯ ಸಂಸ್ಕರಣೆ ಕೊಂಚ ಸಂಕೀರ್ಣವಾಗಿದೆ.

ಮನೆ ಬದಲಾವಣೆ ಸಾಲ

ಈಗಾಗಲೇ ಗೃಹ ಸಾಲವನ್ನು ಪಡೆದಿರುವವರು ಬೇರೆ ಮನೆಗೆ ಸ್ಥಳಾಂತರಗೊಳ್ಳಲು ಬಯಸಿದರೆ ಈ ಸಾಲವನ್ನು ಪಡೆಯಬಹುದಾಗಿದೆ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ