ಮೂರುದಿನದಲ್ಲಿ 'ಭರ್ಜರಿ' 16 ಕೋಟಿ
ಭರ್ಜರಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದಾಗಿ ನಿರ್ಮಾಪಕ ಆರ್ ಶ್ರೀನಿವಾಸ್ ಹೇಳಿದ್ದಾರೆ. ಅವರು ಚಿತ್ರದ ಗೆಲುವಿನ ಖುಷಿಯನ್ನು ಹಂಚಿಕೊಳ್ಳಲು ಕರೆಯಲಾದ ಪ್ರೆಸ್ಮೀಟ್ ನಲ್ಲಿ ಮಾತನಾಡುತ್ತಿದ್ದರು.
'ಏಳುಕೋಟಿ ಜನ ಚಿತ್ರವನ್ನು ಬ್ಲಾಕ್ ಬಸ್ಟರ್ ಮಾಡಿದ್ದಾರೆ. ಸಮುದ್ರದ ಅಲೆಯಂತೆ ಗೆಲುವಿನ ಅಲೆ ಎದ್ದಿದೆ' ಎಂದರು. ವಿತರಕ ಭಾಷಾ ಮಾತನಾಡಿ, 'ಇಡೀ ಚಿತ್ರವನ್ನು ಧ್ರುವ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವುದು ಚಿತ್ರ ನೋಡಿದವರಿಗೂ ಗೊತ್ತಾಗುವಂತಿದೆ' ಎಂದು ಸಂತೃಪ್ತಿಯಿಂದ ಧ್ರುವನತ್ತ ದೃಷ್ಟಿಹರಿಸಿದರು. ಬೆಂಗಳೂರು, ಮೈಸೂರು ಮಾತ್ರವಲ್ಲ, ಉತ್ತರ ಕರ್ನಾಟಕ ಭಾಗಗಳಲ್ಲಿ ಕೂಡ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ದೊರಕಿದೆ. 211ಸೆಂಟರ್ಗಳಲ್ಲಿ ಸತತ ಮೂರು ದಿನ ನಿರಂತರವಾಗಿ ಹೌಸ್ ಫುಲ್ ಬೋರ್ಡ್ ಬಿದ್ದಿದೆ ಎಂದು ಅವರು ತಿಳಿಸಿದರು. ನಿರ್ದೇಶಕ ಚೇತನ್ ಪ್ರಕಾರ ಬಾಹುಬಲಿ ಬಳಿಕ ಉತ್ತರ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ಚಿತ್ರ ಇದಂತೆ.
ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಮಾತು
ನನ್ನ ಮೂರನೆಯ ಚಿತ್ರದ ಗೆಲುವನ್ನು ಪರಿಗಣಿಸಿ ಅಭಿಮಾನಿಗಳು "ಹ್ಯಾಟ್ರಿಕ್ ಹೀರೋ" ಎಂದು ಕರೆಯುತ್ತಿದ್ದಾರೆ. ಆದರೆ ನಾನು ಕೂಡ ಶಿವಣ್ಣನ ಅಪ್ಪಟ ಅಭಿಮಾನಿಯಾಗಿದ್ದುಕೊಂಡು ಅವರ ಬಿರುದನ್ನು ಬಯಸುವುದಿಲ್ಲ. ಬದಲಿಗೆ "ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್" ಎಂದು ನನ್ನನ್ನು ಕರೆಯಬಹುದು ಎಂದಿದ್ದಾರೆ. ಚಿತ್ರ ಈ ಮಟ್ಟಿಗೆ ಗೆಲುವು ಕಾಣಲು, ನಿರ್ದೇಶಕರ, ಕಲಾವಿದರ, ನಿರ್ಮಾಪಕರ, ತಂತ್ರಜ್ಞರ ಸಹಕಾರ ಮುಖ್ಯವಾಗಿತ್ತು. ಇದು ನೂರೊಂದು ವಿಘ್ನಗಳನ್ನು ದಾಟಿ ಬಂದ ಚಿತ್ರ. ಕನ್ನಡಿಗರೇ ನನಗೆ ದಾರಿ ತೋರಿಸಿದ್ದಾರೆ ಎಂದರು.
ಸಮಸ್ಯೆ ಮುಗಿದಿಲ್ಲ!
ಚಿತ್ರದಲ್ಲಿ ನಟಿಸಿದ ಉದಯ್, ಅನಿಲ್ ರನ್ನು ಕಳೆದುಕೊಂಡಿದ್ದೇವೆ. ವೈಯಕ್ತಿಕವಾಗಿ ಉದಯ್ ನನಗೆ ಆತ್ಮೀಯರಾಗಿದ್ದರು. ಅವರೆಲ್ಲರ ಪ್ರಯತ್ನದಿಂದ ಚಿತ್ರ ಚೆನ್ನಾಗಿ ಓಡುತ್ತಿದೆ. ಆದರೆ ಎರಡೇ ದಿನಕ್ಕೆ ಚಿತ್ರದ ಪೈರಸಿ ಬಿಡುಗಡೆಯಾಗಿದೆ. ಡಿಬೀಟ್ಸ್ ಕಡೆಯಿಂದ ಸಾವಿರಾರು ಪೈರಸಿ ಲಿಂಕ್ ಗಳನ್ನು ಪತ್ತೆ ಹಚ್ಚಲಾಗಿದೆ. ದಯವಿಟ್ಟು ಎಲ್ಲರೂ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಸಹಕರಿಸಿ ಎಂದರು ಧ್ರುವ ಸರ್ಜ. ಡಿಸ್ಟ್ರಿಬ್ಯೂಟರ್ ಗಳಲ್ಲೋರ್ವರಾದ ಸುಪ್ರೀತ್ ಮಾತನಾಡಿ ಇದೇ ರೀತಿಯ ಕಲೆಕ್ಷನ್ ಮುಂದುವರಿದರೆ ಮೊದಲ ವಾರದಲ್ಲೇ ಅಂದಾಜು 25 ಕೋಟಿ ಒಟ್ಟು ಕಲೆಕ್ಷನ್ ನಿರೀಕ್ಷಿಸಬಹುದು ಎಂದರು. ನಾಯಕಿ ರಚಿತಾ ರಾಮ್ ಪಾತ್ರವು ಪ್ರೇಕ್ಷಕರಿಗೆ ಇಷ್ಟವಾಗಿದ್ದು ಖುಷಿ ತಂದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮತ್ತೋರ್ವ ನಾಯಕಿ ವೈಶಾಲಿ ದೀಪಕ್ ಉಪಸ್ಥಿತರಿದ್ದರು. ಬಳಿಕ ಗೆಲುವಿನ ಕೇಕ್ ಕತ್ತರಿಸಿ ಸಂಭ್ರಮಾಚರಿಸಲಾಯಿತು.
ಧ್ರುವನ 'ಪೊಗರು'
ಧ್ರುವ ಮುಂದಿನ ಚಿತ್ರವಾಗಿ ನಂದಕಿಶೋರ್ ನಿರ್ದೇಶನದ 'ಪೊಗರು' ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಅಂದಹಾಗೆ ಈ ಚಿತ್ರಕ್ಕೆ ಹಿಂದೆ ಹಯಗ್ರೀವ ಎಂದು ಹೆಸರಿಡಲಾಗಿತ್ತು. ಈಗ ಪೊಗರು ಎಂದು ಬದಲಾಯಿಸಲಾಗಿದೆ.