ಐ ಫೋನ್ xನ ತಯಾರಿಕೆ ವೆಚ್ಚವೆಷ್ಟು ಗೊತ್ತೇ?

Update: 2017-09-22 07:05 GMT

ಐ ಫೋನ್‌ನ 10ನೇ ವಾರ್ಷಿಕೋತ್ಸವದ ಆವೃತ್ತಿಯಾಗಿ ಆ್ಯಪಲ್ ಇತ್ತೀಚಿಗೆ ಬಿಡುಗಡೆಗೊಳಿಸಿರುವ ಐ ಫೋನ್ x ವೈರ್‌ಲೆಸ್ ಚಾರ್ಜಿಂಗ್ ಮತ್ತು ಆಗ್ಮಂಟೆಡ್ ರಿಯಾಲ್ಟಿ(ಎಆರ್)ಯೊಂದಿಗೆ ಬಂದಿರುವ ಮೊದಲ ಫೋನ್ ಅಂತೂ ಅಲ್ಲ. ಬದಲಿಗೆ ಅದು ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಲಭ್ಯವಿರುವ ತಂತ್ರಜ್ಞಾನಗಳ ಸುಧಾರಿತ ಆವೃತ್ತಿಯಾಗಿದೆ. ಹೊಸದೆಂದರೆ ಅದರ ನೂತನ ಡಿಸ್‌ಪ್ಲೇ ಫೋನಿನ ಅಂಚಿನವರೆಗೂ ಹರಡಿಕೊಳ್ಳುತ್ತದೆ. ಆದರೂ ಅದಕ್ಕೆ ಹೋಲಿಕೆಯಾಗಬಲ್ಲ ಬೇರೆ ಮೊಬೈಲ್‌ಫೋನ್ ಸದ್ಯಕ್ಕಂತೂ ಇಲ್ಲ. ಆದರೆ ಇದೆಲ್ಲದಕ್ಕೂ ಬೆಲೆಯಿದೆ,ಅದೂ ದುಬಾರಿ ಬೆಲೆ!

ಆ್ಯಪಲ್ ತನ್ನ ಐ ಫೋನ್ xಗೆ ಭಾರತದ ಮಾರುಕಟ್ಟೆಯಲ್ಲಿ 89,000 ರೂ.ಗಳಿಂದ 1,02,000 ರೂ.ವರೆಗೆ ಬೆಲೆಯನ್ನು ನಿಗದಿಗೊಳಿಸಿದೆ. ಇದು ದುಬಾರಿಯಂತೂ ಹೌದು. ಈ ಬೆಲೆಯ ತರ್ಕಬದ್ಧತೆಯನ್ನು ತಿಳಿದುಕೊಳ್ಳಲು ಚೀನಿ ಮೊಬೈಲ್ ಪೋನ್ ಉದ್ಯಮವು ಐ ಫೋನ್x ನ ತಯಾರಿಕೆಗೆ ಬಳಕೆಯಾಗಿರುವ ಬಿಡಿಭಾಗಗಳ ಒಟ್ಟು ವೆಚ್ಚವನ್ನು ಅಂದಾಜಿಸಿದ್ದು, ಆ್ಯಪಲ್ ಈ ಫೋನಿನ ಮೇಲೆ ಅತಿ ಹೆಚ್ಚು ಲಾಭಾಂಶವನ್ನು ಇಟ್ಟುಕೊಂಡಿದೆ ಎನ್ನುವುದನ್ನು ಬೆಟ್ಟು ಮಾಡಿದೆ.

ಇಲ್ಲಿ ತೋರಿಸಲಾಗಿರುವ ವೆಚ್ಚ ಕೇವಲ ಅಂದಾಜು ಎನ್ನುವದನ್ನು ಗಮನಿಸಬೇಕು. ಆ್ಯಪಲ್‌ನ ಐ ಫೋನ್ xನ ತಯಾರಿಕೆ ವೆಚ್ಚ ಇನ್ನಷ್ಟು ಹೆಚ್ಚಿರಬಹುದು ಮತ್ತು ಇದೇ ಕಾರಣದಿಂದ ಅದು ದುಬಾರಿ ಬೆಲೆಯನ್ನು ನಿಗದಿಗೊಳಿಸಿರಬಹುದು.

ಆ್ಯಪಲ್‌ಗೆ ಸೂಪರ್ ರೆಟಿನಾ ಡಿಸ್‌ಪ್ಲೇ ಅನ್ನು ಸ್ಯಾಮ್ಸಂಗ್ ಪೂರೈಸಿದ್ದು, ಇದಕ್ಕೆ ಸುಮಾರು 80 ಡಾ.ವೆಚ್ಚವಾಗಿರಬಹುದು. ಆ್ಯಪಲ್‌ನ ಹೊಸ ಎ11 ಬಯೊನಿಲ್ ಚಿಪ್‌ಸೆಟ್ ಎ10 ಪ್ರಾಸೆಸರ್‌ಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ವೆಚ್ಚದ್ದಾಗಿರಬಹುದು.

ಆ್ಯಪಲ್ ಬಳಸಿರುವ ಚಿಪ್‌ಸೆಟ್‌ಗೆ 26 ಡಾ. ಮತ್ತು ಕ್ವಾಲ್‌ಕಾಮ್ ಮೊಡೆಮ್‌ಗೆ 18 ಡಾ.ವೆಚ್ಚವಾಗಿರಬಹುದು ಎನ್ನುತ್ತದೆ ಚೀನಿ ಮೊಬೈಲ್ ಫೋನ್ ಉದ್ಯಮ. 3D-ಫೇಸಿಂಗ್ ಸೆನ್ಸರ್‌ಗೆ 25 ಡಾ. ಮತ್ತು ತೋಷಿಬಾ ಪೂರೈಸಿರುವ ಎನ್‌ಎಎನ್‌ಡಿ ಮೆಮರಿಗೆ 45 ಡಾ.ವೆಚ್ಚವಾಗಿರಬಹುದು.

ಎಲ್ಲ ಬಿಡಿಭಾಗಗಳ ವೆಚ್ಚವನ್ನು ಲೆಕ್ಕ ಹಾಕಿದರೆ ಐ ಫೋನ್ xನ ಕನಿಷ್ಠ ತಯಾರಿಕೆ ವೆಚ್ಚ 412 ಡಾ.(26,445 ರೂ.) ಆಗುತ್ತದೆ ಮತ್ತು ಇದು ಅದರ 89,000 ರೂ.ಮಾರಾಟ ಬೆಲೆಯ ಹತ್ತಿರಕ್ಕೂ ಬರುವುದಿಲ್ಲ.

ಇಷ್ಟೊಂದು ಭಾರೀ ಅಂತರವೇಕೆ?

ಐ ಫೋನ್ xನ ದುಬಾರಿ ಬೆಲೆಯಲ್ಲಿ ಇತರ ವೆಚ್ಚಗಳ ಪಾಲೂ ಇದೆ. ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಮತ್ತು ಇತರ ಯಾವುದೇ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಅತ್ಯುತ್ತಮವಾದ ಏಆರ್ ವೈಶಿಷ್ಟವನ್ನು ನೀಡಲು ಆ್ಯಪಲ್ ಭಾರೀ ಹೂಡಿಕೆಯನ್ನು ಮಾಡಿದೆ. ಈ ಫೋನ್‌ಗೆ ನಾವು ತೆರುವ ಬೆಲೆಯಲ್ಲಿ ಬಹಳಷ್ಟು ಹಣ ಮಾರ್ಕೆಟಿಂಗ್, ಜಾಹೀರಾತು ಮತ್ತು ಇತರ ವೆಚ್ಚಗಳಿಗೆ ಹೋಗುತ್ತದೆ. ಇವೆಲ್ಲವುಗಳನ್ನು ಪರಿಗಣಿಸಿದರೆ ಐ ಫೋನ್ xನ ಮೇಲೆ ಆ್ಯಪಲ್‌ನ ಲಾಭಾಂಶ ನಿಜಕ್ಕೂ ನಾವು ಊಹಿಸಿರುವುದಕ್ಕಿಂತ ಕಡಿಮೆ ಇರಬಹುದು ಎಂದು ಅನ್ನಿಸುವುದು ಸುಳ್ಳಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News