ತ್ರಿಶೂಲವನ್ನು ನಾಲಗೆಗೆ ಚುಚ್ಚಿಸಿಕೊಳ್ಳುವ ಹಿಂದಿನ ತಂತ್ರ
ಭಾಗ 14
ವಿಜ್ಞಾನದ ಸತ್ಯಗಳು, ಕೌತುಕಗಳು ಎಂದಿಗೂ ವಿಸ್ಮಯ ಹಾಗೂ ಅಗಾಧ. ಅದರ ಆಳವನ್ನು ಅಗೆಯುತ್ತಾ ಹೋದಂತೆ ಅದು ತನ್ನ ಹೊಸತಾದ ಲೋಕವನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ಹೊನ್ನು, ವಜ್ರ, ಕಬ್ಬಿಣದ ಅದಿರು ಮೊದಲಾದ ಖನಿಜ ಸಂಪತ್ತುಗಳನ್ನು ಭೂಮಿಯಿಂದ ಅಗೆದಂತೆ ಅದು ಬರಿದಾಗುತ್ತಾ ಹೋಗುತ್ತದೆ. ಭೂಮಿಯ ಒಡಲನ್ನೇ ಬರಿದು ಮಾಡುತ್ತದೆ. ನಮ್ಮ ನೆಲೆಯನ್ನೇ ಕಸಿದುಕೊಳ್ಳುತ್ತದೆ ಎಂಬ ಮಾತಿದೆ.
ನಕಲಿ ದೇವಮಾನವರ ಪವಾಡಗಳ ರಹಸ್ಯವನ್ನು ಬಯಲಿಗೆಳೆಯುವ ನಮ್ಮ ಚಟುವಟಿಕೆಗಳು ಮುಂದಿವರಿದಿತ್ತು. ಸಾರ್ವಜನಿಕವಾಗಿ ಬಹಳಷ್ಟು ಜಾಗೃತಿಯೂ ಮೂಡಲಾರಂಭಿಸಿತ್ತು. ಜನರಲ್ಲಿ ಪ್ರಶ್ನಿಸುವ ಜತೆಗೆ ಅವಲೋಕಿಸುವ, ಸತ್ಯವನ್ನು ಅರಿಯುವ ಮನೋಸ್ಥೈರ್ಯವನ್ನು ತುಂಬುವ ಪ್ರಯತ್ನವನ್ನು ಕರ್ನಾಟಕ ಮಾತ್ರವಲ್ಲದೆ, ಭಾರತದ ಹಲವು ಕಡೆಗಳಲ್ಲಿ ನಾವು ಮಾಡಲಾರಂಭಿಸಿದೆವು. ನನಗಂತೂ ಈ ಪವಾಡ ರಹಸ್ಯ ಬಯಲಿನ ಕಾರ್ಯಕ್ರಮಗಳು ನನ್ನ ಜೀವನದ ಪ್ರಮುಖ ಉದ್ದೇಶವಾಗಿಯೇ ಮಾರ್ಪಟ್ಟಿತ್ತು.
ಮುಂದಿನ ಪ್ರಾತ್ಯಕ್ಷಿಕೆ ತ್ರಿಶೂಲದ ಚೂಪಾದ ತುದಿಯಿಂದ ನಾಲಗೆಯನ್ನು ಕುಯ್ದುಕೊಳ್ಳುವುದು. ಇದನ್ನು ಕೇಳುವಾಗಲೇ ಮೈ ಝುಮ್ಮೆನ್ನುತ್ತದೆ. ರಕ್ತ ಕುದಿಯುತ್ತದೆ. ಇನ್ನು ಕಣ್ಣೆದುರು ನೋಡುವಾಗ ಸ್ಥಿತಿ ಹೇಗಿರಬೇಡ ಅಲ್ವಾ? ಯಾವ ರೀತಿಯಲ್ಲೆಲ್ಲಾ ನೋಡುಗರನ್ನು ನಂಬಿಕೆಯ ಹೆಸರಿನಲ್ಲಿ ಮೋಸ ಮಾಡಲಾಗುತ್ತದೆ ಎಂಬುದರ ಪರಮಾವಧಿ ಅಂತಾನೇ ಇದನ್ನು ಬಣ್ಣಿಸಬಹುದು. ನಾವು ಈ ಪ್ರಾತ್ಯಕ್ಷಿಕೆ ಮಾಡಲು ಹೊರಟಾಗ ಪ್ರೇಕ್ಷಕರು ದಂಗಾಗಿದ್ದರು. ಪ್ರಾತ್ಯಕ್ಷಿಕೆ ನೀಡುತ್ತಿದ್ದಾತ ಒಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದು ತನ್ನ ಬಾಯಿಯನ್ನು ತೆರೆದು ಕ್ಷಣಾರ್ಧದಲ್ಲಿ ತ್ರಿಶೂಲದಿಂದ ತನ್ನ ನಾಲಗೆಯನ್ನು ಚುಚ್ಚಿಸಿಕೊಂಡಿದ್ದನ್ನು ತೋರಿಸಿ ಬಿಟ್ಟ. ಪ್ರೇಕ್ಷಕರು ಗಾಬರಿಗೆ ಬೀಳದಂತೆ ಈ ತಂತ್ರದ ಹಿಂದಿರುವ ಸತ್ಯವನ್ನೂ ಪ್ರೇಕ್ಷಕರ ಮುಂದಿಡಲಾಯಿತು. ಬಹುತೇಕವಾಗಿ ಇಂತಹ ಟ್ರಿಕ್ಸ್‌ಗಳನ್ನು ಬಳಸುವ ತ್ರಿಶೂಲಗಳು ‘ಯು’ ಆಕಾರದ ಬೆಂಡನ್ನು ಹೊಂದಿರುತ್ತವೆ. ಇಂತಹ ತ್ರಿಶೂಲದಿಂದ ಚುಚ್ಚುವ ನಾಟಕ ಮಾಡಿದಾಗ ತ್ರಿಶೂಲದ ಮೊಣಚು ಬೆಂಡ್ ಆಗಿ ನಾಲಗೆ ಕೆಳಗ್ಗೆ ಬಾಗುತ್ತವೆ. ಎದುರಿಗೆ ನೋಡುವವನ ಕಣ್ಣಿಗೆ ಅದು ಚುಚ್ಚಿದಂತೆ ಭಾಸವಾಗುತ್ತದೆ. ಇಂತಹ ಟ್ರಿಕ್‌ಗಳನ್ನು ಬಳಸುವವರಲ್ಲಿ ಕೆಲವರು ಗಟ್ಟಿಗರಿರುತ್ತಾರೆ. ಅವರು ತಮ್ಮ ಅಂಗೈಯಲ್ಲಿ ಹಿಡಿದುಕೊಂಡಿರುವ ನಿಂಬೆ ಹಣ್ಣಿಗೆ ಸೂಜಿಗಳನ್ನು ಚುಚ್ಚಿಕೊಂಡಿದ್ದು, ತ್ರಿಶೂಲವನ್ನು ನಾಲಗೆಗೆ ಚುಚ್ಚುವುದನ್ನು ತೋರಿಸುವ ವೇಳೆ ನಿಂಬೆಗೆ ಮೊದಲೇ ಚುಚ್ಚಲಾಗಿರುವ ಸೂಜಿಯಿಂದ ನಾಲಗೆಗೆ ಚುಚ್ಚಿಸಿಕೊಂಡು ನೋವನ್ನು ಸಹಿಸಿಕೊಂಡು ಮಹಾತ್ಮನೆಂಬ ಸೋಗನ್ನು ಪ್ರದರ್ಶಿಸುತ್ತಾರೆ.
ಇದನ್ನು ಕೆಲವರನ್ನು ಅತಿಮಾನುಷ ದೈವಿಕ ಶಕ್ತಿ ಎಂದು ಕರೆಯಲಾಗುತ್ತದೆ. ಕರ್ನಾಟಕ ಮತ್ತು ಇತರ ಹೊರ ರಾಜ್ಯಗಳಲ್ಲೂ ಇಂತಹ ಪದ್ಧತಿಗಳು ನಡೆಯುತ್ತಿರುತ್ತವೆ. ಮೊಣಚುಗಳುಳ್ಳ ಸಂಕೋಲೆಗಳಿಂದ ದೇಹವನ್ನು ಚುಚ್ಚಿಸಿಕೊಳ್ಳುವ ‘ಸೇವೆ’ ರೂಪದ ಅತಿಮಾನುಷ ಶಕ್ತಿಗಳೂ ಪ್ರಚಲಿತದಲ್ಲಿವೆ. ಇಂತಹ ಅತಿಮಾನುಷ ಶಕ್ತಿಯ ಹಿಂದಿರುವ ಸತ್ಯವನ್ನೂ ವಿಚಾರವಾದಿಗಳು ಬಯಲುಗೊಳಿಸಿದ್ದಾರೆ. ಮಂಗಳೂರಿನ ಪ್ರಮುಖ ನಗರದಲ್ಲಿ ಭಾರೀ ಅಂಬಾಸಿಡರ್ ಕಾರನ್ನು ಎಳೆಯುವ ಮೂಲಕ ತಮ್ಮ ಶಕ್ತಿ ಪ್ರದರ್ಶವನ್ನೂ ವಿಚಾರವಾದಿಗಳು ಮಾಡಿದ್ದಾರೆ.
ಮುಂದಿನ ನಮ್ಮ ಪವಾಡದ ವಸ್ತು ಕರೆನ್ಸಿ ನೋಟನ್ನು ಉರಿಸಿ ಮತ್ತೆ ಸೃಷ್ಟಿಸುವುದು. ಒಂದು ರೂಪಾಯಿಯ ನೋಟನ್ನು ಎಲ್ಲರೆದುರು ಪ್ರದರ್ಶಿಸಲಾಯಿತು. ಅದು ನೈಜವಾದ ನೋಟು ಎಂಬುದನ್ನೂ ಖಾತರಿಪಡಿಸಲಾಯಿತು. ಮಾತ್ರವಲ್ಲದೆ ಪ್ರೇಕ್ಷಕರಿಗೆ ಕರೆನ್ಸಿಯ ಸೀರಿಯಲ್ ನಂಬರ್ ಕೂಡಾ ಬರೆದಿಡಲು ತಿಳಿಸಲಾಯಿತು. ಬಳಿಕ ಆ ನೋಟನ್ನು ಹೊತ್ತಿ ಉರಿಸಲಾಯಿತು. ಅದರ ಬೂದಿಯನ್ನು ನೀರಿರುವ ಮಡಕೆಯೊಂದಕ್ಕೆ ಹಾಕಲಾಯಿತು. ಆ ಸಣ್ಣದಾದ ಮಡಕೆಯೊಳಗಿನಿಂದ ಉರಿಸಲಾಗಿದ್ದ ನೋಟಿಗೆ ಮರು ಜೀವ ನೀಡಿ ಹೊರ ತೆಗೆಯಲಾಯಿತು. ಕಣ್ಣೆದುರೇ ನಡೆದ ಮಾಯಾ ತಂತ್ರ. ನೋಟಿನ ಸೀರಿಯಲ್ ನಂಬರ್ ತಿಳಿಸಲಾಯಿತು. ಎಲ್ಲವೂ ಸರಿ. ಹೊತ್ತಿ ಉರಿದು ಬೂದಿಯಾಗಿದ್ದ ನೋಟು ಮರು ಜೀವ ಪಡೆದಿತ್ತು. ಆದರೆ ಅಂದು ಪ್ರೇಕ್ಷಕರಿಗೆ ಈ ತಂತ್ರಗಾರಿಕೆಯ ಹಿಂದಿರುವ ಸತ್ಯವನ್ನು ತಿಳಿಸಲಿಲ್ಲ. ಒಬ್ಬ ಪವಾಡ ಪುರುಷ ಮಾಡುವ ಗಿಲಿಗಿಲಿ ತಂತ್ರಗಾರಿಕೆಯನ್ನು ಒಬ್ಬ ಸಾಮಾನ್ಯ ವಿಜ್ಞಾನಿ, ವಿಚಾರವಾದಿ ಮಾಡಬಲ್ಲನಾಗಿದ್ದರೆ, ಅದರ ಹಿಂದಿರುವುದು ವಿಜ್ಞಾನವೇ ಹೊರತು ವಿಸ್ಮಯವಲ್ಲ. ಈ ವಿಸ್ಮಯಕ್ಕೆ ನಂಬಿಕೆಯ ಹೆಸರು ನೀಡಿ ಮೋಸ ಮಾಡುವವರನ್ನು ಬಯಲು ಮಾಡಲು ಜನರೇ ಮುಂದಾಗಬೇಕು. ಅದಕ್ಕಾಗಿ ಅಂದು ಆ ಪ್ರಾತ್ಯಕ್ಷಿಕೆಯಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ‘ನೀವೂ ಬುದ್ಧಿವಂತರಾಗಿ, ಇಂತಹ ಪವಾಡ ಮಾಡುವವರ ರಹಸ್ಯವನ್ನು ಪತ್ತೆಹಚ್ಚಿ ಮೋಸಗಾರರ ಕುತಂತ್ರವನ್ನು ಬಯಲಿಗೆಳೆಯಿರಿ’ ಎಂದು ಸಲಹೆ ನೀಡಲಾಯಿತು.
ಈ ಸಲಹೆಯಿಂದ ಸಾಕಷ್ಟು ಮಂದಿ ಪ್ರೇರೇಪಣೆಗೊಂಡು ಸಾಕಷ್ಟು ಇಂತಹ ವಂಚನೆ ಜಾಲಗಳಿಂದ ದೂರವಿದ್ದು ಜಾಗೃತರಾಗಿದ್ದಾರೆ. ನಮಗೆ ಬೇಕಿರುವುದು ಅಷ್ಟೆ. ಅಷ್ಟೇ ಅಲ್ಲ, ದೇವರ ಫೋಟೋಗಳಿಂದ ವಿಭೂತಿ ಬರುವುದರ ಹಿಂದಿರುವ ಸತ್ಯವನ್ನೂ ವಿಚಾರವಾದಿಗಳ ತಂಡ ಪ್ರೇಕ್ಷಕರೆದುರು ತೆರೆದಿಟ್ಟಿದೆ. ಅಲ್ಯೂಮಿನಿಯಂ ಹಾಳೆಯಲ್ಲಿ ಮರ್ಕ್ಯೂರಿ ಕ್ಲೋರೈಡ್ ಲೇಪಿಸಿದಾಗ ವಿಭೂತಿ ರೂಪದಲ್ಲಿ ಹೊರಬರುವ ಸತ್ಯವನ್ನು ಜನ ದೈವಿಕ ಶಕ್ತಿಯಿಂದ ಫೋಟೋದಿಂದ ವಿಭೂತಿ ಬರುವುದೆಂದೇ ತಿಳಿದು ಮೋಸ ಹೋಗುತ್ತಿದ್ದರು. ಈ ದೈವಿಕ ಶಕ್ತಿಗಳು ಅದೆಷ್ಟು ರೂಪ ಪಡೆಯುತ್ತವೆಯೆಂದರೆ, ಕೆಲವರು ಇದರಿಂದ ಆ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿ ಖುಷಿ ಪಟ್ಟರೆ ಮತ್ತೆ ಕೆಲವರು ಇಂತಹ ಘಟನೆಗಳಿಂದ ತಮ್ಮ ಕುಟುಂಬವೇ ಸರ್ವನಾಶವಾಯಿತು ಎಂದು ಹಲುಬುವವರೂ ಇರುತ್ತಾರೆ. ಇದನ್ನು ಆ ರೀತಿಯಾಗಿ ನಂಬಿಸುವವರೂ ಇರುತ್ತಾರೆ ಎಂಬುದು ಬೇರೆ ಮಾತು. ಇರಲಿ, ವಿಜ್ಞಾನದ ಸತ್ಯಗಳು, ಕೌತುಕಗಳು ಎಂದಿಗೂ ವಿಸ್ಮಯ ಹಾಗೂ ಅಗಾಧ. ಅದರ ಆಳವನ್ನು ಅಗೆಯುತ್ತಾ ಹೋದಂತೆ ಅದು ತನ್ನ ಹೊಸತಾದ ಲೋಕವನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ಹೊನ್ನು, ವಜ್ರ, ಕಬ್ಬಿಣದ ಅದಿರು ಮೊದಲಾದ ಖನಿಜ ಸಂಪತ್ತುಗಳನ್ನು ಭೂಮಿಯಿಂದ ಅಗೆದಂತೆ ಅದು ಬರಿದಾಗುತ್ತಾ ಹೋಗುತ್ತದೆ. ಭೂಮಿಯ ಒಡಲನ್ನೇ ಬರಿದು ಮಾಡುತ್ತದೆ. ನಮ್ಮ ನೆಲೆಯನ್ನೇ ಕಸಿದುಕೊಳ್ಳುತ್ತದೆ ಎಂಬ ಮಾತಿದೆ. ಆದರೆ ವಿಜ್ಞಾನದ ಕೌತುಕಗಳು ಹಾಗಲ್ಲ. ಅದು ಬಗೆದಷ್ಟು ಮೊಗೆಯುತ್ತದೆ. ಮೊಗೆದಷ್ಟು ಹೊಸ ಹೊಸ ವಿಚಾರಗಳು ತರ್ಕಕ್ಕೆ ನಮ್ಮೆದುರು ಸಿದ್ಧಗೊಳ್ಳುತ್ತವೆ. ಈ ವಿಚಾರಗಳ ತರ್ಕದಿಂದಲೇ ವಿಚಾರವಾದಿಗಳಾದವರು, ವಿಜ್ಞಾನದ ಕೌತುಕಗಳನ್ನೇ ತಮ್ಮ ಬಂಡವಾಳವಾಗಿಸಿ ಮೋಸ ಮಾಡುವವರ ಕೆಂಗಣ್ಣಿಗೆ ಗುರಿಯಾಗುತ್ತಾರೆ.
ಮುಂದುವರಿಯುವುದು