ನಮ್ಮ ಕನಸಿನ ಕರ್ನಾಟಕ ಏನಾಯಿತು?
ಕೋ. ಚೆನ್ನಬಸಪ್ಪ ಅವರು ಕರ್ನಾಟಕದ ಆತ್ಮಸಾಕ್ಷಿ. ‘ನಮ್ಮ ಕನಸಿನ ಕರ್ನಾಟಕ ಏನಾಯಿತು?’ ಅವರು ಬರೆದಿರುವ ಪತ್ರರೂಪದ ಕೃತಿ. ಕನ್ನಡ ನಾಡಿನ ರಾಜಕೀಯ, ಸಾಮಾಜಿಕ ಬೆಳವಣಿಗೆಗಳನ್ನು, ವರ್ತಮಾನದ ಕೆಲವು ದುರಂತಗಳನ್ನು ಕಂಡು ಅದನ್ನು ನೊಂದು ದಾಖಲಿಸಿರುವ ಒಡಲಾಳದ ಧ್ವನಿ. ಬಾಳ ಸಂಜೆಯಲ್ಲಿರುವ ಕೋಚೆಯ ವರು ದೇಶದ ಸ್ವಾತಂತ್ರಕ್ಕಾಗಿ, ಕರ್ನಾಟಕದ ಏಕೀಕರಣಕ್ಕಾಗಿ ದುಡಿದವರು. ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವವರು. ನಾಡು ನುಡಿಗಾಗಿ ಹೋರಾಡಿದವರು. ಈ ಕಾರಣಕ್ಕಾಗಿಯೇ ಕರ್ನಾಟಕದ ಕುರಿತಂತೆ ಅವರ ಮಾತುಗಳಿಗೆ ವಿಶೇಷ ತೂಕವಿದೆ.
ಈ ಕೃತಿಯಲ್ಲಿ ಅನುಸರಿಸಿದ ರಚನಾತಂತ್ರ ವೈಶಿಷ್ಟಪೂರ್ಣವಾಗಿದೆ. ಮುಖ್ಯವಾಗಿ ಪತ್ರರೂಪದಲ್ಲಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಸರಕಾರಗಳಿಗೆ, ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಬರೆದಿರುವ ಪತ್ರಗಳು ಇಲ್ಲಿವೆ. ವರ್ತಮಾನದ ಕರ್ನಾಟಕದ ದುರಂತಗಳನ್ನು ಬೆಟ್ಟು ಮಾಡುತ್ತಾ, ಹೇಗೆ ಇದನ್ನು ಸರಿಪಡಿಸಬಹುದು ಎನ್ನುವುದರ ಕುರಿತಂತೆ ಅವರು ಮಾರ್ಗದರ್ಶನಗಳನ್ನು ನೀಡುವ ಪ್ರಯತ್ನವನ್ನೂ ಮಾಡುತ್ತಾರೆ. ಪತ್ರ ಖಾಸಗಿಯಾದುದು. ಅದನ್ನು ಕದ್ದು ಓದಬಾರದು ಎನ್ನುವ ನಿಯಮವಿದೆ. ಆದರೆ ಈ ಪತ್ರ ಸಾರ್ವತ್ರಿಕವಾದುದು.
ಒಂದು ನಿರ್ದಿಷ್ಟ ವಿಷಯವನ್ನಿಟ್ಟು ಬರೆದ ಪತ್ರಗಳೂ ಬೇರೆ ಬೇರೆ ಆಯಾಮಗಳ ಮೂಲಕ ಓದುಗರನ್ನು ತಟ್ಟುತ್ತದೆ. ಅದರ ಹಿಂದಿರುವ ಕನ್ನಡದ ಕುರಿತ ಕಳಕಳಿ ದೊಡ್ಡದು. ಆದುದರಿಂದ ಕೆಲವು ಪತ್ರಗಳೂ ನಮ್ಮಿಳಗೆ ಹಿರಿದಾದ ಚಿಂತನೆಯನ್ನು ಬಿತ್ತುತ್ತವೆ. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಂಪಿ ಪ್ರಸಾರಾಂಗ ವಿಜ್ಞಾನ ವಿಭಾಗದ ವಿಜ್ಞಾನ ಸಂಗತಿ ಪತ್ರಿಕೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ...ಹೀಗೆ ಬೇರೆ ಬೇರೆ ಸಾಹಿತ್ಯಕ ನೆಲೆಗಳಿರುವ ಸಂಸ್ಥೆಗಳಿಗೂ ಅವರು ಬರೆದಿರುವ ಪತ್ರಗಳಿವೆ. ಜೊತೆಗೆ ಕೆಲವು ಕನ್ನಡ ವಿಷಯಗಳಿಗೆ ಸಂಬಂಧಿಸಿಯೂ ಅವರು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಟಿಪ್ಪಣಿಗಳಂತಿರುವ, ಕಿರುಲೇಖನಗಳಂತಿರುವ ಈ ಬರಹಗಳು ನಮ್ಮಾಳಗೆ ಬೀರುವ ಪರಿಣಾಮ ದೊಡ್ಡದು. ಹಲವು ಮಿತಿಗಳ ನಡುವೆಯೂ ಇದೊಂದು ವಿಭಿನ್ನ ಪ್ರಯತ್ನವಾಗಿದೆ. ಶ್ರೀ ಅರವಿಂದ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 78. ಮುಖಬೆಲೆ 60 ರೂಪಾಯಿ. ಆಸಕ್ತರು 26757159 ದೂರವಾಣಿಯನ್ನು ಸಂಪರ್ಕಿಸಬಹುದು.